Bihar Election ground report by Raghav Sharma Nidle: ಬಿಹಾರಿಗರನ್ನು ಹೊಸ ಚಿಂತನೆಗೆ ಪ್ರೇರೇಪಿಸಿದ ಪ್ರಶಾಂತ್
ನೀರು, ರಸ್ತೆ, ಶಿಕ್ಷಣ, ಉದ್ಯೋಗ, ವಲಸೆಗೆ ಕಡಿವಾಣ, ಆರೋಗ್ಯ ಇವು ನಮ್ಮ ಮೂಲಭೂತ ಹಕ್ಕುಗಳು ಮತ್ತು ಅದನ್ನು ನಾವು ಪಡೆಯಲೇಬೇಕು ಎಂಬ ಜಾಗೃತ ಮಾನಸಿಕತೆಯನ್ನು ಮುಖ್ಯವಾಗಿ ಬಿಹಾರದ ಯುವಕರಲ್ಲಿ ಬಿಟ್ಟಿರುವುದು ಪ್ರಶಾಂತ್ ಕಿಶೋರ್ ಸಾಧನೆ. ಜಾತಿಗಳ ಸಂಕೋಲೆಯಿಂದ ಹೊರಬಂದು ಯೋಚಿಸಬೇಕು ಹಾಗೂ ನಮ್ಮ ಮಕ್ಕಳ ಭದ್ರ ಭವಿಷ್ಯಕ್ಕಾಗಿ ಬದಲಾವಣೆಗೆ ತೆರೆದುಕೊಳ್ಳಬೇಕು ಎಂಬ ಚಿಂತನೆ-ಚರ್ಚೆಗಳು ಬಿಹಾರ ಜನರ ಮಧ್ಯೆ ನಡೆದಿರುವುದು ಹೊಸ ಬೆಳವಣಿಗೆ.
-
ಈ ಚುನಾವಣೆಯಲ್ಲಿ ಜನ ಸುರಾಜ್ ಪಕ್ಷ ಎಷ್ಟು ಸೀಟುಗಳನ್ನು ಗೆಲ್ಲುತ್ತದೆ ಎಂಬ ಬಗ್ಗೆ ಖಚಿತತೆ ಇಲ್ಲ. ಆದರೆ, ಜೆಡಿಯು, ಆರ್‌ಜೆಡಿ, ಬಿಜೆಪಿ, ಕಾಂಗ್ರೆಸ್ ಹೊರತುಪಡಿಸಿ ಹೊಸ ರಾಜಕೀಯ ಶಕ್ತಿಯೊಂದರ ಬಗ್ಗೆ ‘ಪೊಲಿಟಿಕಲಿ ಸ್ಮಾರ್ಟ್’ ಆಗಿರುವ ಬಿಹಾರಿಗ ರಲ್ಲಿ ಚಿಂತನೆ ಹುಟ್ಟುಹಾಕಿದ್ದು ಪ್ರಶಾಂತ್ ಕಿಶೋರ್ ಸಾಧನೆಯೇ ಸರಿ.
ಮುಜಫರಪುರ ಜಿಲ್ಲೆಯಿಂದ ಹೊರಟು ಗೋಪಾಲ್ ಗಂಜ್ ಜಿಲ್ಲೆ ತಲುಪುವ ವೇಳೆ ಬರೌಲಿ ವಿಧಾನಸಭೆಯ ದೇವಾಪುರ ಎಂಬಲ್ಲಿ ನಾಲ್ಕೈದು ಮಂದಿ ಭೂಮಿಹಾರ್ ಸಮುದಾಯದ (ಮೇಲ್ಜಾತಿ) ಯುವಕರು ಜೆಡಿಯು ಅಭ್ಯರ್ಥಿಯ ಸಭೆಗೆ ತೆರಳುತ್ತಿದ್ದರು. ಅವರೊಂದಿಗೆ ಕ್ಷೇತ್ರದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾಗ, ಚರ್ಚೆ ಜನ ಸುರಾಜ್ ಪಕ್ಷದ ಕಡೆ ಹೊರಳಿತು. ಆ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ (ಪಿಕೆ) ಭಾಷಣ, ಪ್ರಸ್ತಾಪಿಸುವ ವಿಚಾರಗಳು ಮನ ತಟ್ಟುತ್ತವೆ.
ನಮ್ಮ ಬಗ್ಗೆ ಅವರಿಗೆ ಅಪಾರ ಕಾಳಜಿ ಇದೆ ಎಂಬುದನ್ನು ಒಪ್ಪಿಕೊಂಡರು. ಬಿಹಾರದ ಭವಿಷ್ಯದ ನಾಯಕ ಎಂದು ಬಣ್ಣಿಸಿದ ಯುವಕರಾದ ವಿಕ್ಕಿ ಕುಮಾರ್ ಸಿಂಗ್, ಶಿವಂ ಕುಮಾರ್ ಸಿಂಗ್, ಅಮಿತ್ ಕುಮಾರ್ ಸಿಂಗ್, ಗೌತಮ್ ಕುಮಾರ್ ಸಿಂಗ್, ನಾವು ಪ್ರಧಾನಿ ಮೋದಿ ಅವರ ಅಭಿಮಾನಿಗಳು ಕೂಡ ಹೌದು. ನಮಗೆ ಕೇಂದ್ರದಲ್ಲಿ ಸರ್ಕಾರ ಸುರಕ್ಷಿತ ವಾಗಿರಬೇಕು. ಹಾಗಾಗಿ ಈ ಬಾರಿ ಇಲ್ಲಿ ಜೆಡಿಯು ಅಭ್ಯರ್ಥಿಗೇ ಮತ ಹಾಕುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: Bihar Election ground report by Raghav Sharma Nidle: ಬಿಹಾರ ಚುನಾವಣಾ ಸಮರಕಣದಲ್ಲಿ ಜಾತಿಗಣಿತದ ತಕಧಿಮಿತ
ಈ ಯುವಕರಿಗೆ ಪ್ರಶಾಂತ್ ಕಿಶೋರ್ ಮತ್ತು ನರೇಂದ್ರ ಮೋದಿ ಇಬ್ಬರೂ ಇಷ್ಟ. ಬಿಹಾರದಲ್ಲಿ ಇಂಡಿ ಒಕ್ಕೂಟದ ಸರ್ಕಾರದ ಬಂದರೆ ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಬುಡ ಅಲುಗಾಡಲಿದೆ ಎಂಬ ಭಯ ಅವರದ್ದು. ಹೀಗಾಗಿ ಬಿಹಾರದಲ್ಲಿ ನಿತೀಶ್-ಮೋದಿ ಸರ್ಕಾರ ಬರುವಂತೆ ಕೇಂದ್ರವನ್ನು ಭದ್ರಗೊಳಿಸಿ, ಕೇಂದ್ರದಲ್ಲಿ ಮೋದಿ ಅವರನ್ನು ಉಳಿಸಿಕೊಳ್ಳುವುದು ಅವರ ಕಾಳಜಿಯಾಗಿತ್ತು.
ಪ್ರಶಾಂತ್ ಕಿಶೋರ್ ಬಿಹಾರದಲ್ಲಿ ಭವಿಷ್ಯ ರೂಪಿಸಿಕೊಳ್ಳಬಹುದು ಮತ್ತು ಮುಂದಿನ ೫ ವರ್ಷ ರಾಜಕೀಯ ಅನುಭವಕ್ಕಾಗಿ ಮೀಸಲಿಡಬಹುದು. ಮುಂದೆ ನಾವೇ ಅವರಿಗೆ ವೋಟ್ ಹಾಕುತ್ತೇವೆ ಎನ್ನುವುದು ಈ ಯುವಕರ ಅಭಿಪ್ರಾಯವಾಗಿತ್ತು.ಗೋಪಾಲ್‌ಗಂಜ್ ಜಿಲ್ಲೆ ದಾಟಿದ ನಂತರ ಸಿಕ್ಕ ಸಿವಾನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಚಹಾ ಕುಡಿಯುತ್ತಿದ್ದಾಗ ಶಿಕ್ಷಿತ, ಮಧ್ಯ ವಯಸ್ಸಿನ ಮನೋಹರ್ ಕುಮಾರ್ ಎಂಬವರು ಬೈಕಿನಲ್ಲಿ ಬಂದು ಪಕೋಡಾ ಆರ್ಡರ್ ಮಾಡಿದರು. ಅವರೊಂದಿಗೆ ಮಾತು ಶುರು ಮಾಡಿದಾಗ, ಬಿಹಾರ ರಾಜಕೀಯ ಚಿತ್ರಣದ ಬಗ್ಗೆ ವಿವರಿಸುತ್ತಾ, ತಾವು ಜನ ಸುರಾಜ್ ಬಗ್ಗೆ ಆಕರ್ಷಿತ ರಾಗಿರುವುದಾಗಿ ತಿಳಿಸಿದರು.
ಬಿಹಾರಕ್ಕೆ ಮೊದಲ ಬಾರಿಗೆ ವಿದೇಶದಲ್ಲಿ ಕೆಲಸ ಮಾಡಿರುವ, ದೇಶದ ರಾಜಕೀಯ-ಸಾಮಾಜಿಕ ವ್ಯವಸ್ಥೆಗಳನ್ನು ಆಳವಾಗಿ ತಿಳಿದುಕೊಂಡಿರುವ, ರಾಜ್ಯದ ಜ್ವಲಂತ ಸಮಸ್ಯೆ ಗಳಿಗೆ ಪರಿಹಾರ ಸೂಚಿಸುತ್ತಿರುವ, ಬಿಹಾರಿ ಮಕ್ಕಳ ಭವಿಷ್ಯದ ಬಗ್ಗೆ ಗಾಢವಾಗಿ ಆಲೋಚಿಸುತ್ತಿರುವ ಪ್ರಾಮಾಣಿಕ ಶಿಕ್ಷಿತ ವ್ಯಕ್ತಿ ನನ್ನ ಮುಂದೆ ಬಂದು ನಿಂತಾಗ ನಾನು ಅವರನ್ನು ಸ್ವೀಕರಿಸದೇ ಇರಲು ಆಗುತ್ತದೆಯೇ? ನಾನೊಬ್ಬ ಶಿಕ್ಷಿತ ವ್ಯಕ್ತಿಯಾಗಿ, ಇನ್ನೂ ಜಾತಿ ಆಧಾರದಲ್ಲಿ ಮತ ಹಾಕುವುದು ಸರಿಯೇ ಎಂದು ಆಲೋಚಿಸಿಯೇ ಗೆಲ್ಲಲಿ-ಬಿಡಲಿ, ಜನ ಸುರಾಜ್‌ಗೆ ಮತ ಹಾಕುವುದು ಎಂದು ತೀರ್ಮಾನ ಮಾಡಿದ್ದೇನೆ ಎಂಬ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಮನೋಹರ್ ಕುಮಾರ್ ಮಾತುಗಳನ್ನು ಕುತೂಹಲದಿಂದ ಕೇಳುತ್ತಿದ್ದ ಯುವಕರಾದ ಪಾಲ್ ಜಾತಿಯ ಇಂದ್ರಜಿತ್ ಕುಮಾರ್ ಮತ್ತು ಲೋಹಾರ್ ಸಮುದಾಯದ ರಾಕೇಶ್ ಕುಮಾರ್ ಶರ್ಮ - ಪ್ರಶಾಂತ್ ಕಿಶೋರ್ ಭಾಷಣಗಳನ್ನು ನೋಡಿದ್ದೇವೆ. ಆದರೆ ಯಾರಿಗೆ ನಾವಿನ್ನೂ ಮತ ಹಾಕುವುದರ ಬಗ್ಗೆ ತೀರ್ಮಾನ ಮಾಡಿಲ್ಲ. ಅವರ ವಿಚಾರಗಳಿಗೆ ನಮ್ಮ ಸಹಮತವಿದೆ ಎಂದರು ಜನ ಸುರಾಜ್ ಬಿಹಾರಿಗರ ಮಧ್ಯೆ ಗಂಭೀರ ಚರ್ಚೆಗಳನ್ನು ಹುಟ್ಟು ಹಾಕಿರುವುದು ಮತ್ತು ಪ್ರಶಾಂತ್ ಕಿಶೋರ್ ಬಗ್ಗೆ ಜನರಲ್ಲಿ ಸದಭಿಪ್ರಾಯ ಮೂಡಿರುವುದೇ ಬಿಹಾರ ಚುನಾವಣೆಯ ಅತಿದೊಡ್ಡ ವಿಚಾರ.
ಸಾಂಪ್ರದಾಯಿಕ ರಾಜಕೀಯ ಪಕ್ಷಗಳಾದ ಜೆಡಿಯು, ಬಿಜೆಪಿ, ಆರ್‌ಜೆಡಿ ಮತ್ತು ಕಾಂಗ್ರೆಸ್ ಹೊರತುಪಡಿಸಿ ಜನ ಸುರಾಜ್ ಬಗ್ಗೆ ಯೋಚಿಸುವಂತೆ ಜನರನ್ನು ರಾಜ್ಯಾದ್ಯಂತ ಬಡಿದೆಬ್ಬಿ ಸಿದೆ ಮತ್ತು ಅವರನ್ನು ರಾಜಕೀಯ ಮತ್ತು ಸಾಮಾಜಿಕವಾಗಿ ಜಾಗರೂಕಗೊಳಿಸಿದೆ.
ನೀರು, ರಸ್ತೆ, ಶಿಕ್ಷಣ, ಉದ್ಯೋಗ, ವಲಸೆಗೆ ಕಡಿವಾಣ, ಆರೋಗ್ಯ ಇವು ನಮ್ಮ ಮೂಲಭೂತ ಹಕ್ಕುಗಳು ಮತ್ತು ಅದನ್ನು ನಾವು ಪಡೆಯಲೇಬೇಕು ಎಂಬ ಜಾಗೃತ ಮಾನಸಿಕತೆಯನ್ನು ಮುಖ್ಯವಾಗಿ ಬಿಹಾರದ ಯುವಕರಲ್ಲಿ ಬಿಟ್ಟಿರುವುದು ಪ್ರಶಾಂತ್ ಕಿಶೋರ್ ಸಾಧನೆ. ಜಾತಿಗಳ ಸಂಕೋಲೆಯಿಂದ ಹೊರಬಂದು ಯೋಚಿಸಬೇಕು ಹಾಗೂ ನಮ್ಮ ಮಕ್ಕಳ ಭದ್ರ ಭವಿಷ್ಯಕ್ಕಾಗಿ ಬದಲಾವಣೆಗೆ ತೆರೆದುಕೊಳ್ಳಬೇಕು ಎಂಬ ಚಿಂತನೆ-ಚರ್ಚೆಗಳು ಬಿಹಾರ ಜನರ ಮಧ್ಯೆ ನಡೆದಿರುವುದು ಹೊಸ ಬೆಳವಣಿಗೆ.
ವಿವಿಧ ಜಿಲ್ಲೆಗಳ ಅನೇಕ ಗ್ರಾಮೀಣ ಭಾಗಗಳಿಗೆ ನಾನು ಭೇಟಿ ನೀಡಿ, ಹತ್ತಾರು ಮಹಿಳೆ ಯಲ್ಲಿ ಮಾತನಾಡಿದಾಗ ಪಿಕೆ ಪ್ರಸ್ತಾಪಿಸಿರುವ ವಿಚಾರಗಳು ಇವರನ್ನು ಸೆಳೆದಿರುವುದು ಸ್ಪಷ್ಟವಾಗಿತ್ತು. ಕೆಲವರು ಪಿಕೆಗೆ ಮತ ಹಾಕುವುದಾಗಿ ಹೇಳಿದರೆ, ಮತ್ತೆ ಕೆಲವರು ಅವರಿಗೆ ಸಮಯಾವಕಾಶ ಇದೆ. ಖಂಡಿತ ಭವಿಷ್ಯದ ನಾಯಕ ಆಗುತ್ತಾರೆ. ಆದರೆ, ಅಲ್ಲಿಂದ ಇಲ್ಲಿಗೆ ಆ ಪಕ್ಷ ಈ ಪಕ್ಷ ಎಂದು ಹಾರಬಾರದು ಎಂದು ಎಚ್ಚರಿಕೆಯನ್ನೂ ನೀಡಿದರು.
೩ ವರ್ಷಗಳ ಬಿಹಾರದಲ್ಲಿ 4000 ಕಿಮೀ ಉದ್ದದ ಪಾದಯಾತ್ರೆ ಮಾಡಿದ್ದ ಪ್ರಶಾಂತ್ ಕಿಶೋರ್, ಹಳ್ಳಿ-ಹಳ್ಳಿಗಳಿಗೆ ಭೇಟಿ ನೀಡಿದ್ದರು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಭಾಷಣ, ಸಂವಾದಗಳ ಮೂಲಕ ಯುವಕರನ್ನು, ಮಧ್ಯವಯಸ್ಕರನ್ನು ತಲುಪಿದ್ದರು. ವಲಸೆ ಹೋಗುವ ಜನವರ್ಗದ ಬೇಕು-ಬೇಡಗಳನ್ನು ಅರ್ಥಮಾಡಿಕೊಂಡಿರುವ ಪ್ರಶಾಂತ್ ಕಿಶೋರ್, ದೀಪಾವಳಿ ನಂತರದ ಛಟ್ ಪೂಜೆಗಾಗಿ ತಮ್ಮ ಮಾತೃ ರಾಜ್ಯಕ್ಕೆ ಬರುವ ಬಡ ಬಿಹಾರಿಗಳು ರೈಲುಗಳಲ್ಲಿ ಎಷ್ಟೆ ಹರಸಾಹಸಪಟ್ಟುಕೊಂಡು ಊರಿಗೆ ಬರಬೇಕಾಯಿತು? ನನ್ನ ಬಿಹಾರಿ ಸೋದರರು ಈ ರೀತಿ ಬದುಕಬೇಕೆ? ನಿಮ್ಮ ಮಕ್ಕಳ ಭವಿಷ್ಯವೂ ಹೀಗಿರ ಬೇಕೆ? ಬಿಹಾರದ ಏಕೆ ಉದ್ಯೋಗ ಸಿಗುತ್ತಿಲ್ಲ? ಇನ್ನೆಷ್ಟು ವರ್ಷಗಳ ಕಾಲ ಜಾತಿಗಳನ್ನೇ ನೋಡಿ ವೋಟು ಹಾಕುತ್ತೀರಿ? ಮೋದಿ-ನಿತೀಶ್-ಲಾಲೂ ಕುಟುಂಬಗಳ ನಿಯಂತ್ರಣದಿಂದ ಹೊರಬನ್ನಿ ಎನ್ನುತ್ತಾ ಭರವಸೆಯ ಬದುಕಿಗಾಗಿ ನನ್ನೊಂದಿಗೆ ಕೈಜೋಡಿಸಿ.
ನಾನು ಇಲ್ಲಿಯೇ ಇರಲು ಬಂದಿದ್ದೇನೆ ಎಂದು ಭರವಸೆ ತುಂಬುವ ಯತ್ನ ಮಾಡುತ್ತಿzರೆ. ಅವರ ಮಾತುಗಳು ಅನೇಕರಿಗೆ ಭರವಸೆಯ ಬೆಳ್ಳಿ ಕಿರಣದಂತೆ ಕಾಣುತ್ತಿದೆ. ಹೌದು, ಬಿಹಾರವೂ ಬದಲಾಗಬಾಹುದು ಎಂಬ ಹೊಸ ಚರ್ಚೆ ಆರಂಭವಾಗಿದೆ.
ಅವೆಲ್ಲದರ ಪರಿಣಾಮವಾಗಿ, ಜಾತಿಗಳಾಚೆ ಯೋಚಿಸುವ ಶಿಕ್ಷಿತ-ಜಾಗೃತ ಮತದಾರ ವರ್ಗದಲ್ಲಿ, ಕೊನೆಗೂ ವಿದ್ಯಾವಂತನೊಬ್ಬ ಬಿಹಾರಕ್ಕೆ ಬಂದಿದ್ದಾನೆ ಎಂಬ ಭಾವನೆ ಬೇರೂರಿದೆ. ಪಿಕೆ ಯಾವ ಮಟ್ಟಿಗೆ ಬಿಹಾರ ರಾಜಕೀಯದ ಮೇಲೆ ಪರಿಣಾಮ ಬೀರಿದ್ದಾರೆ ಎಂದರೆ, ಈ ಸಲ ಸಾಂಪ್ರದಾಯಿಕ ಪಕ್ಷಗಳು ಕೂಡ ಬಿಹಾರಿಗರಿಗೆ ಆರೋಗ್ಯ, ಶಿಕ್ಷಣ, ನೌಕರಿ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸಲು ಪ್ರೇರೇಪಿಸಿದ್ದಾರೆ.
ಜನ ಸುರಾಜ್ ಪ್ರವೇಶದಿಂದಾಗಿ ಈ ಪಕ್ಷಗಳೂ ತಮ್ಮ ನರೇಟಿವ್ ಗಳನ್ನು ಬದಲಾಯಿಸಿ, ಜಾತಿ ಲೆಕ್ಕಾಚಾರದ ಜತೆಗೆ ಇಲ್ಲಿನ ಜ್ವಲಂತ ಸಮಸ್ಯೆಗಳ ಮೇಲೂ ದೃಷ್ಟಿಯನ್ನಿಟ್ಟಿವೆ. ಹಾಗಂತ, ಜನ ಸುರಾಜ್ ಪಕ್ಷ ಜಾತಿ ಲೆಕ್ಕಾಚಾರ ಹಾಕದೆ ಪ್ರಚಾರ ಮಾಡುತ್ತಿದೆ ಎಂದೇನಲ್ಲ. ಮೇಲ್ಜಾತಿಯ ಮತಗಳನ್ನು ಸೆಳೆಯುವ ಸಲುವಾಗಿ, ಆ ವರ್ಗದ ಜನರನ್ನು ಆಂತರಿಕವಾಗಿ ಭೇಟಿ ಮಾಡುವ ಸಂದರ್ಭಗಳಲ್ಲಿ ಪಿಕೆ ಬ್ರಾಹ್ಮಣ ಸಮುದಾಯವರು ಎನ್ನುತ್ತಾ ನಿಮ್ಮೆಲ್ಲ ರೊಂದಿಗೆ ಇರಲಿದ್ದಾರೆ ಎಂದು ತಿಳಿಸಲಾಗುತ್ತಿದೆ.
ಮುಸ್ಲಿಂ ಧರ್ಮೀಯರನ್ನು ಭೇಟಿ ಮಾಡುವಾಗ, ಬಿಹಾರದಲ್ಲಿ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಜಾರಿಯಾಗದಿರಲು ಪ್ರಶಾಂತ್ ಕಿಶೋರ್ ಕೊಡುಗೆಯೇ ಹೆಚ್ಚು. 2017ರ ತನಕ ನಿತೀಶರೊಂದಿಗೆ ಕೆಲಸ ಮಾಡುತ್ತಿದ್ದಾಗ ಅವರು, ಸಿಎಎ ಬಗ್ಗೆ ಆಗಾಗ್ಗೆ ಎಚ್ಚರಿಕೆ ನೀಡುತ್ತಿದ್ದರು ಎಂದು ತಿಳಿಸಲಾಗುತ್ತಿದೆ.
ನಾವು ಯಾವುದೇ ಕಾರಣಕ್ಕೂ ವೋಟಿಗಾಗಿ ಹಣ ಹಂಚುವುದು ಬೇಡ. ಬಿಹಾರ ಬದಲಾಯಿ ಸಲು ನಾನು ಬಂದಿದ್ದೇನೆ. ಚುನಾವಣೆ ಗೆಲ್ಲದಿದ್ದರೂ ಪರವಾಗಿಲ್ಲ. ಅದಕ್ಕಾಗಿ ಮತ್ತಷ್ಟು ವರ್ಷ ಕಾಯಲು ಸಿದ್ಧನಿದ್ದೇನೆ. ಪ್ರಚಾರ ಕಾರ್ಯಕ್ಕೆ ಖರ್ಚು ಮಾಡಿ. ಆದರೆ, ಹಣ ನೀಡಿ, ಆಮಿಷ ಒಡ್ಡಬೇಡಿ. ಹಣ ಕೊಡಲಿಲ್ಲ ಎಂದು ಜನ ವೋಟ್ ಹಾಕದಿದ್ದರೂ ಬೇಸರ ಬೇಡ. ಈ ಮಾನಸಿಕತೆಯನ್ನು ಬದಲಾಯಿಸಲು ಆಗುತ್ತದೋ ಇಲ್ಲವೋ ನೋಡೇ ಬಿಡೋಣ ಎನ್ನುವುದು ಪಿಕೆ ಖಚಿತ ನಿಲುವು.
ಇಂಡಿ ಮತ್ತು ಎನ್‌ಡಿಎ ಮೈತ್ರಿಕೂಟಗಳಿಗೆ ಭಿನ್ನವಾಗಿ, ಯಾವುದೇ ಉಚಿತ ಗ್ಯಾರಂಟಿ ಯೋಜನೆಗಳ ಹಂಗಿಗೆ ಬೀಳದೆ ಬಿಹಾರದ ಸಮಗ್ರ ಅಭಿವೃದ್ಧಿಯ ನೀಲಿನಕ್ಷೆ ರೂಪಿಸಿದ ಪ್ರಣಾಳಿಕೆಯನ್ನೂ ಜನ ಸುರಾಜ್ ಮೂಲಕ ಜನರ ಮುಂದಿಡಲಾಗಿದೆ.
ಪಿಕೆ ಬಗೆ ಕಮಲ ಗಪ್‌ಚುಪ್
ಇಡೀ ಚುನಾವಣೆ ಪ್ರಚಾರದುದ್ದಕ್ಕೂ ಪ್ರಶಾಂತ್ ಕಿಶೋರ್ ಅಥವಾ ಅವರ ಪಕ್ಷದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿಯ ಯಾವ ನಾಯಕರೂ ಸಣ್ಣ ಉಖವನ್ನೂ ಮಾಡುತ್ತಿಲ್ಲ. ಜನ ಸುರಾಜ್ ಬಗ್ಗೆ ಮಾತನಾಡಬಾರದು ಮತ್ತು ಯಾವ ಟೀಕೆಗಳನ್ನೂ ಮಾಡುವ ಅಗತ್ಯ ಇಲ್ಲ. ಏನೇ ಹೇಳಿಕೆ ನೀಡಿದರೂ ಅದು ಮಾಧ್ಯಮದಲ್ಲಿ ಬರುತ್ತದೆ ಮತ್ತು ಅದಕ್ಕೆ ಪ್ರಶಾಂತ್ ಕಿಶೋರ್ ಅಭಿಪ್ರಾಯ ಕೇಳುತ್ತಾರೆ. ಅವರು ಮತ್ತಿನ್ನೇನೋ ಹೇಳಿಕೆ ನೀಡುತ್ತಾರೆ. ಅವರ ಬಗ್ಗೆ ಹೇಳಿಕೆ ನೀಡಿದರೆ ಪಿಕೆಗೆ ನಾವೇ ಹೈಪ್ ನೀಡಿದಂತೆ. ಸುಮ್ಮನಿರುವುದೇ ನಮ್ಮ ಸ್ಟ್ರಾಟಜಿ ಎಂದು ದಿಲ್ಲಿ ನಾಯಕರೇ ಬಿಹಾರ ಬಿಜೆಪಿ ಘಟಕಕ್ಕೆ ಸೂಚಿಸಿದ್ದಾರೆ. ಡಿಸಿಎಂ ಸಾಮ್ರಾಟ್ ಚೌಧರಿ ಸೇರಿ ಹಲವರ ಮೇಲೆ ಪಿಕೆ ಗಂಭೀರ ಆರೋಪ ಮಾಡಿದಾಗಲೂ ಬಿಹಾರ ನಾಯಕರು ಪಿಕೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಲಿಲ್ಲ ಎನ್ನುವುದು ಗಮನಾರ್ಹ.
ನೋವಿಗೆ ದನಿ
ತೀರಾ ಗ್ರಾಮೀಣ ಭಾಗಗಳ ಮಹಿಳೆಯರ ಮನೆಗಳಲ್ಲಿ ಗಂಡಸರು ಕಾಣಸಿಗುವುದಿಲ್ಲ. ನಿಮ್ಮ ಮನೆಯವರು ಎಲ್ಲಿದ್ದಾರೆ ಎಂದು ಕೇಳಿದರೆ ಒಬ್ಬೊಬ್ಬ ಮಹಿಳೆ, ತಮ್ಮ ಪತಿ ಒಂದೋ ಬೆಂಗಳೂರು, ಲಖನೌ, ಜೈಪುರ, ದಿಲ್ಲಿ, ಕೊಲ್ಕತ್ತಾ.. ಹೀಗೆ ದೇಶದ ಬೇರೆ ಬೇರೆ ಷಹರಗಳಲ್ಲಿ ದಿನಗೂಲಿ ನೌಕರರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ನಿಮ್ಮ ಪತಿಗೆ ನಗರಗಳಲ್ಲಿ ಎಷ್ಟು ಸಂಬಳ ಸಿಗುತ್ತದೆ ಎಂದು ಕೇಳಿದರೆ ರೂ. 350-400 ಎನ್ನುತ್ತಾರೆ. ಬೇರೆಯವರ ಜಮೀನುಗಳಲ್ಲಿ ಕೆಲಸ ಮಾಡುವ ಈ ಬಡ ಮಹಿಳೆಯರು ದಿನಕ್ಕೆ ರೂ. 150-200 ರು. ಸಂಪಾದನೆ ಮಾಡುತ್ತಾರೆ. ಮಕ್ಕಳ ಶಾಲೆ, ಆರೋಗ್ಯವನ್ನು ಈ ಮಹಿಳೆಯರೇ ನೋಡಿಕೊಳ್ಳಬೇಕು. ಹೋಗಲಿ, ಹಳ್ಳಿಗಳಲ್ಲಿ ಶಿಕ್ಷಣ, ಆರೋಗ್ಯಕ್ಕಾಗಿ ಗುಣಮಟ್ಟದ ಕೇಂದ್ರ ಗಳಿವೆಯೇ? ಅದನ್ನು ಅರಸಿಕೊಂಡು, ಸಂಪಾದನೆ ಮಾಡಿದ ಹಣ ಖರ್ಚು ಮಾಡಿಕೊಂಡು, ನಗರಗಳಿಗೆ ಹೋಗಬೇಕು. ಈ ಎಲ್ಲಾ ಸಮಸ್ಯೆಗಳಿಂದ ಗ್ರಾಮೀಣ ಭಾಗ ತತ್ತರಿಸಿ ಹೋಗಿದೆ.
ಒಳ್ಳೆಯ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಹಾಗೂ ನೌಕರಿ ಮಾಡಲು ಸೂಕ್ತ ವ್ಯವಸ್ಥೆ ಇದ್ದರೆ ನಮ್ಮ ಗಂಡಂದಿರು ಬಿಹಾರ ಬಿಟ್ಟು ಬೇರೆ ರಾಜ್ಯಗಳಿಗೆ ಏಕೆ ಹೋಗಬೇಕು ಹೇಳಿ ಎಂದು ಪ್ರಶ್ನಿಸುತ್ತಾರೆ ಮಹಿಳೆಯರು ಮತ್ತವರ ಕುಟುಂಬಸ್ಥರು. ಬಡ ಕುಟುಂಬಗಳ ಈ ನೋವುಗಳಿಗೆ ಪಿಕೆ ತಮ್ಮ ಭರವಸೆಯ ಮಾತುಗಳಿಂದ ಸ್ಪಂದಿಸುವ ಯತ್ನ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ವಿಪರೀತ ಹವಾ ಎಬ್ಬಿಸಿದ್ದಾರೆ.
ಚುನಾವಣೆಗೆ ನಿಲ್ಲಬೇಕಿತ್ತೇ?
ಆರ್‌ಜೆಡಿ ನಾಯಕ, ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ವಿರುದ್ಧ ವೈಶಾಲಿ ಜಿಲ್ಲೆಯ ರಾಘವಪುರ ಕ್ಷೇತ್ರದಿಂದ ಪ್ರಶಾಂತ್ ಕಿಶೋರ್ ಸ್ಪರ್ಧೆ ಮಾಡುತ್ತಾರೆ ಎಂಬ ಚರ್ಚೆ ಆರಂಭದಲ್ಲಿ ಜೋರಾಗಿತ್ತು. ಅಲ್ಲದೆ, ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದೇನೆ ಎಂದೂ ಪಿಕೆ ಘೋಷಿಸಿದ್ದರು. ಆದರೆ, ಅಂತಿಮ ಕ್ಷಣದಲ್ಲಿ ಮನಸ್ಸು ಬದಲಾಯಿಸಿದ ಪಿಕೆ, ಚುನಾವಣೆಯಲ್ಲಿ ಸ್ಪರ್ಧಿಸಲಾರೆ ಎಂದು ತಿಳಿಸಿ, ನಾನು ಒಂದು ಕ್ಷೇತ್ರಕ್ಕೆ ಸೀಮಿತನಾಗಿ ಬಿಡುತ್ತೇನೆ. ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಬೇಕಿರುವುದರಿಂದ ಇದು ಅನಿವಾರ್ಯ ಎಂದು ಸಮರ್ಥನೆ ನೀಡಿದ್ದರು. ಸೋಲಲಿ-ಗೆಲ್ಲಲಿ, ಬಿಹಾರ ಡಿಸಿಎಂ ಸಾಮ್ರಾಟ್ ಚೌಧರಿ ಅಥವಾ ತೇಜಸ್ವಿ ಯಾದವ್ ವಿರುದ್ಧ ಸ್ಪರ್ಧೆ ಮಾಡಬೇಕಿತ್ತು. ಆದರೆ ಸ್ಪರ್ಧೆಯಿಂದ ಹಿಂದೆ ಸರಿದದ್ದು ಕೊಂಚ ಗೊಂದಲ ಮೂಡಿಸಿತು.
ಟಿಕೆಟ್ ಹಂಚಿಕೆಯಲ್ಲೂ ಹಲವೆಡೆ ಗೊಂದಲಗಳುಂಟಾಗಿ ಕೆಲವರು ಪಕ್ಷ ಬಿಟ್ಟರು. ಮತ್ತೆ ಕೆಲವರು ಆಪರೇಷನ್ ಕಮಲಕ್ಕೆ ಮಣಿದು, ಜೇಬು ತುಂಬಿಸಿಕೊಂಡರು. ಹೀಗಿದ್ದರೂ ನಾವು ಬಿಹಾರಿಗರ ಮನೆ-ಮನಗಳನ್ನು ಪ್ರವೇಶಿಸಿದ್ದೇವೆ ಎಂದು ಜನ ಸುರಾಜ್ ಕಾರ್ಯಕರ್ತ ರೊಬ್ಬರು ವಿಶ್ವವಾಣಿ ಜತೆ ಅನಿಸಿಕೆ ಹಂಚಿಕೊಂಡರು.