ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajnath Singh: ಪಹಲ್ಗಾಮ್‌ ದಾಳಿ; ಸೇನಾ ಮುಖ್ಯಸ್ಥರೊಂದಿಗೆ ರಾಜನಾಥ್‌ ಸಿಂಗ್‌ ಮಹತ್ವದ ಮಾತುಕತೆ

Pahalgam Attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ. 22ರಂದು ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆ ನೀಡಲು ಭಾರತ ಮುಂದಾಗಿದ್ದು, ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ (ಏ. 27) ಭಾರತೀಯ ಸೇನೆಯ ಚೀಫ್‌ ಆಫ್‌ ಜನರಲ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ಅವರೊಂದಿಗೆ ಸಭೆ ನಡೆಸಿದರು.

ಸೇನಾ ಮುಖ್ಯಸ್ಥರೊಂದಿಗೆ ರಾಜನಾಥ್‌ ಸಿಂಗ್‌ ಮಹತ್ವದ ಮಾತುಕತೆ

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್.

Profile Ramesh B Apr 27, 2025 6:57 PM

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ. 22ರಂದು ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ದಿಟ್ಟ ಉತ್ತರ ನೀಡುತ್ತಿದೆ (Pahalgam Attack). ಪಾಕಿಸ್ತಾನದ ವಿರುದ್ಧ ಕೈಗೊಳ್ಳಬೇಕಾದ ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಭಾನುವಾರ (ಏ. 27) ಭಾರತೀಯ ಸೇನೆಯ ಚೀಫ್‌ ಆಫ್‌ ಜನರಲ್ ಸ್ಟಾಫ್ (CDS) ಜನರಲ್ ಅನಿಲ್ ಚೌಹಾಣ್ (General Anil Chauhan) ಅವರೊಂದಿಗೆ ಸಭೆ ನಡೆಸಿದರು.

ಏ. 22ರಂದು ಪಾಕಿಸ್ತಾನದ ಉಗ್ರರು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಗುಂಡಿನ ಮಳೆಗೆರೆದು 26 ಪ್ರವಾಸಿಗರನ್ನು ಬಲಿ ಪಡೆದುಕೊಂಡಿದ್ದರು. 2019ರ ಪುಲ್ವಾಮಾ ದಾಳಿಯ ನಂತರ ಈ ಪ್ರದೇಶದಲ್ಲಿ ನಡೆದ ಭೀಕರ ದಾಳಿ ಇದಾಗಿದೆ.

ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸಿಆರ್‌ಪಿಎಫ್‌, ಸೇನೆ ಮತ್ತು ಇತರ ಭದ್ರತಾ ಸಿಬ್ಬಂದಿ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತುಹಾಕುವ ಸಲುವಾಗಿ ಶೋಧ ಕಾರ್ಯ ನಡೆಸುತ್ತಿವೆ. ವಿವಿಧ ಕಡೆಗಳಲ್ಲಿ ತನಿಖೆಯನ್ನು ಚರುಕುಗೊಳಿಸಿವೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೂಡ ವಿಚಾರಣೆ ಪ್ರಾರಂಭಿಸಿದೆ. ಈ ಮಧ್ಯೆ ರಕ್ಷಣಾ ಸಚಿವರು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.



ಈ ಸುದ್ದಿಯನ್ನೂ ಓದಿ: Most Wanted Terrorists: ಪಹಲ್ಗಾಮ್ ದಾಳಿ: ಲಷ್ಕರ್, ಜೈಶ್, ಹಿಜ್ಬುಲ್ ಭಯೋತ್ಪಾದಕರ ಹೆಸರು ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರ್ಪಡೆ

ಪಾಕಿಸ್ತಾನಕ್ಕೆ ನಡುಕ ಶುರು

ಭಯೋತ್ಪಾದನೆಯನ್ನು ಪೋಷಿಸುತ್ತ ಬಂದಿರುವ ಪಾಕಿಸ್ತಾನಕ್ಕೆ ಇದೀಗ ನಡುಕ ಆರಂಭವಾಗಿದೆ. ಈಗಾಗಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಈ ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವ ಮಾತೇ ಇಲ್ಲ ಎಂದು ಘೋಷಿಸಿದ್ದು, ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಯಾವ ರೀತ್ರಿ ಪ್ರತಿಕ್ರಿಯೆ ನೀಡಬೇಕು ಎನ್ನುವುದನ್ನು ಚರ್ಚಿಸಲು ಪಿಎಂ ಮೋದಿ ನೇತೃತ್ವದಲ್ಲಿ ಭದ್ರತಾ ಕ್ಯಾಬಿನೆಟ್ ಸಮಿತಿ (Cabinet Committee on Security) ಸಭೆ ನಡೆದಿತ್ತು. ಈಗಾಗಲೇ ಭಾರತ ಸಿಂಧೂ ನದಿ ನೀರಿನ ಒಪ್ಪಂದ ಸ್ಥಗಿತಗೊಳಿಸುವುದು ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ.

ದಾಳಿಯ ಹೊಣೆಯಿಂದ ನುಣುಚಿಕೊಂಡ ಟಿಆರ್‌ಎಫ್‌

ಪಹಲ್ಗಾಮ್‌ ದಾಳಿಯ ಹೊಣೆ ಹೊತ್ತುಕೊಂಡಿದ್ದ ಉಗ್ರ ಸಂಘಟನೆ ಲಷ್ಕರ್‌-ಎ-ತೊಯ್ಬಾದ ಅಂಗಸಂಸ್ಥೆ ರೆಸಿಸ್ಟೆನ್ಸ್‌ ಫ್ರಂಟ್‌ (TRF) ಇದೀಗ ಯುಟರ್ನ್‌ ಹೊಡೆದಿದ್ದು, ಪಹಲ್ಗಾಮ್‌ ದಾಳಿಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳಿದೆ. ತಮ್ಮ ವಿರುದ್ಧದ ಆರೋಪಗಳೆಲ್ಲ ಸುಳ್ಳು. ಭಾರತೀಯ ಸೈಬರ್‌ ಗುಪ್ತಚರ ಸಂಸ್ಥೆಗಳು ಅನಧಿಕೃತವಾಗಿ ಸುಳ್ಳು ಸಂದೇಶ ರವಾನಿಸಿವೆ ಎಂದು ಹೇಳಿಕೆ ನೀಡಿದೆ.

ಪಾಕ್‌ ಸಚಿವ ಹೇಳಿದ್ದೇನು?

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಯಲ್ಲಿ ರಷ್ಯಾ, ಚೀನಾ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಭಾಗವಹಿಸಬೇಕು ಎಂದು ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾನೆ. "ರಷ್ಯಾ, ಚೀನಾ ಅಥವಾ ಪಾಶ್ಚಿಮಾತ್ಯ ದೇಶಗಳು ಸಹ ಈ ಬಿಕ್ಕಟ್ಟಿನ ಸಮಯದಲ್ಲಿ ಬಹಳ ಸಕಾರಾತ್ಮಕ ಪಾತ್ರ ವಹಿಸಬಹುದು ಎಂದು ನಾನು ಭಾವಿಸುತ್ತೇನೆ. ದಾಳಿಯ ಬಗ್ಗೆ ಭಾರತ ಅಥವಾ ಮೋದಿ ಸುಳ್ಳು ಹೇಳುತ್ತಿದ್ದಾರೆಯೇ ಅಥವಾ ಅವರು ಸತ್ಯವನ್ನು ಹೇಳುತ್ತಿದ್ದಾರೆಯೇ ಎಂದು ತನಿಖೆ ಮಾಡಲು ತನಿಖಾ ತಂಡವನ್ನು ಸಹ ರಚಿಸಬೇಕು" ಎಂದು ಖವಾಜಾ ಆಸಿಫ್ ತಿಳಿಸಿದ್ದಾನೆ.