ರೇಜರ್, ಸ್ಟ್ರಾ, ಮೊಬೈಲ್ ಟಾರ್ಚ್; ಮೂರೇ ವಸ್ತು ಬಳಸಿ ರಸ್ತೆಬದಿಯಲ್ಲೇ ಸರ್ಜರಿ ಮಾಡಿದ ವೈದ್ಯರು! ಏನಿದು ಘಟನೆ?
Roadside surgery: ತುರ್ತು ಪರಿಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿಯೇ ವೈದ್ಯರು ಕೇವಲ ರೇಜರ್, ಸ್ಟ್ರಾ ಮತ್ತು ಮೊಬೈಲ್ ಟಾರ್ಚ್ ಬಳಸಿ ಶಸ್ತ್ರಚಿಕಿತ್ಸೆ ನಡೆಸಿದ ಘಟನೆ ವರದಿಯಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಉಸಿರಾಡಲು ಕಷ್ಟಪಡುತ್ತಿದ್ದುದರಿಂದ ಜೀವವುಳಿಸುವ ಸಲುವಾಗಿ ವೈದ್ಯರು ತ್ವರಿತ ಕ್ರಮಕ್ಕೆ ಮುಂದಾಗಿದ್ದು, ಆ ಮೂಲಕ ಪ್ರಾಣ ಕಾಪಾಡಿದ್ದಾರೆ.
ಸಾಂದರ್ಭಿಕ ಚಿತ್ರ. -
ತಿರುವನಂತಪುರ, ಡಿ. 24: 'ವೈದ್ಯೋ ನಾರಾಯಣ ಹರಿ' ಎನ್ನುವ ಮಾತಿದೆ. ಈ ಮಾತು ಇದೀಗ ನಿಜವಾಗಿದೆ. ರಸ್ತೆಬದಿಯಲ್ಲೇ ಸರ್ಜರಿ ಮಾಡುವ ಮೂಲಕ ವೈದ್ಯರು ವ್ಯಕ್ತಿಯೊಬ್ಬನ ಜೀವ ಉಳಿಸಲು ಯತ್ನಿಸಿದ್ದಾರೆ. ಅದೂ ಸೂಕ್ತ ಉಪಕರಣಗಳಿಲ್ಲದೆ ಕೇವಲ ಮೂರು ವಸ್ತುಗಳನ್ನು ಬಳಸಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎನ್ನುವುದು ವಿಶೇಷ. ಈ ಘಟನೆ ಅಚ್ಚರಿ ಎನಿಸಿದರೂ ಸತ್ಯ. ಕೇರಳದಲ್ಲಿ ನಡೆದ ಈ ಅಪರೂಪದ ಘಟನೆ ಸಾರ್ವತ್ರಿಕ ಮೆಚ್ಚುಗೆ ಪಾತ್ರವಾಗಿದೆ.
ಭಾನುವಾರ (ಡಿಸೆಂಬರ್ 21) ರಾತ್ರಿ ರಸ್ತೆ ಬದಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಯೊಬ್ಬರು ಉಸಿರಾಡಲು ಕಷ್ಟಪಡುತ್ತಿದ್ದರು. ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಮೂವರು ವೈದ್ಯರು ಕೂಡಲೇ ಕಾರ್ಯ ಪ್ರವೃತ್ತರಾಗಿ ಆತನಿಗೆ ಪ್ರಥಮ ಚಿಕಿತ್ಸೆ ನೀಡಿದರು. ಈ ವೇಳೆ ಅವರ ಬಳಿ ಇದ್ದಿದ್ದು ಕೇವಲ ಶೇವಿಂಗ್ ರೇಜರ್, ಪ್ಲಾಸ್ಟಿಕ್ ಸ್ಟ್ರಾ ಮತ್ತು ಮೊಬೈಲ್ ಫೋನ್ ಮಾತ್ರ.
ಏನಿದು ಘಟನೆ?
ಎರ್ನಾಕುಳಂ ಜಿಲ್ಲೆಯ ಉದಯಂಪೆರೂರ್‌ನಲ್ಲಿ ಈ ಘಟನೆ ನಡೆದಿದೆ. ಎರಡು ಬೈಕ್‍ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಪರಿಣಾಮ ಮೂವರು ತೀವ್ರವಾಗಿ ಗಾಯಗೊಂಡರು. ಈ ಪೈಕಿ ಲಿನು ಎಂಬವರ ಪ್ರಸ್ಥಿತಿ ಗಂಭೀರವಾಗಿತ್ತು. ಅವರು ಉಸಿರಾಡಲು ಕಷ್ಟಪಡುತ್ತಿದ್ದರು.
ಕೋಟಯಂ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೃದಯ ಶಸ್ತ್ರಚಿಕಿತ್ಸಕ ಡಾ. ಬಿ. ಮನುಪ್ ಇದೇ ಮಾರ್ಗಾವಾಗಿ ಮನೆಗೆ ಹಿಂತಿರುಗುತ್ತಿದ್ದರು. ಕೂಡಲೇ ಅವರು ಗಾಯಗೊಂಡರವರ ನೆರವಿಗೆ ಧಾವಿಸಿದರು. ಮನುಪ್ ಮಾಹಿತಿ ನೀಡಿದ ತಕ್ಷಣ ಇಂದಿರಾ ಗಾಂಧಿ ಸಹಕಾರಿ ಆಸ್ಪತ್ರೆಯ ಡಾ. ಥಾಮಸ್ ಪೀಟರ್, ಅವರ ಪತ್ನಿ ಡಾ. ದಿದಿಯಾ ಕೂಡ ಅಲ್ಲಿಗೆ ಧಾವಿಸಿದರು.
ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವತಿ ಬಳಿ ಪ್ರೇಮ ನಿವೇದನೆ; ನಿರಾಕರಿಸಿದ್ದಕ್ಕೆ ನಡುರಸ್ತೆಯಲ್ಲೇ ಹಲ್ಲೆ
ಕ್ಷಣವೂ ತಡ ಮಾಡದೆ ಮೂವರು ವೈದ್ಯರು ಚಿಕಿತ್ಸೆ ನೀಡಲು ಆರಂಭಿಸಿದರು. ಚಿಕಿತ್ಸೆಗೆ ಅಗತ್ಯವಾದ ಉಪಕರಣ ಇಲ್ಲದಿದ್ದರೂ ಇದ್ದುದನ್ನೇ ಬಳಸಿಕೊಂಡರು. ಡಾ. ಮನುಪ್ ಮತ್ತು ಡಾ. ದಿಡಿಯಾ ಗಂಭೀರ ಗಾಯಗೊಂಡ ಲಿನು ಅವರ ಆರೋಗ್ಯ ನೋಡಿಕೊಂಡರು. ಅವರ ಸ್ಥಿತಿ ವೇಗವಾಗಿ ಹದಗೆಡುತ್ತಿತ್ತು. ತಕ್ಷಣಕ್ಕೆ ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ ಪರಿಸ್ಥಿತಿ ಹದಗೆಡತ್ತಿದೆ ಎನ್ನುವುದನ್ನು ವೈದ್ಯರು ಅರಿತುಕೊಂಡರು.
ಹೀಗಾಗಿ ಉಸಿರಾಡಲು ಕಷ್ಟಪಡುತ್ತಿದ್ದ ಲಿನುಗೆ ತುರ್ತು ವಿಧಾನವಾದ ಕ್ರಿಕೊಥೈರೋಟಮಿಯನ್ನು ಮಾಡಲು ನಿರ್ಧರಿಸಿದರು. ಸಂಪೂರ್ಣ ಸುಸಜ್ಜಿತ ಶಸ್ತ್ರಚಿಕಿತ್ಸಾ ಕೇಂದ್ರ ಇರದಿದ್ದರೂ, ರಸ್ತೆಬದಿಯಲ್ಲಿಯೇ ಚಿಕಿತ್ಸೆ ನೀಡಲು ನಿರ್ಧರಿಸಿದರು. ಇದಕ್ಕಾಗಿ ಹತ್ತಿರದ ಅಂಗಡಿಯಿಂದ ಶೇವಿಂಗ್ ರೇಜರ್ ಹಾಗೂ ಸ್ಟ್ರಾ ಖರೀದಿಸಿದರು. ಮೊಬೈಲ್ ಫೋನ್‌ನ ಬೆಳಕನ್ನು ಬಳಸಿ, ವೈದ್ಯರು ಸ್ಥಳದಲ್ಲೇ ಆತನಿಗೆ ಸರ್ಜರಿ ಮಾಡಿದರು. ಶ್ವಾಸಕೋಶಕ್ಕೆ ಗಾಳಿ ಹಾದುಹೋಗಲು ಸ್ಟ್ರಾವನ್ನು ಬಳಸಿದರು.
ಈ ವೇಳೆ ಜನಸಮೂಹವೇ ಅಲ್ಲಿ ಸೇರಿತ್ತು. ಯಾರೂ ಚಿತ್ರೀಕರಣ ಮಾಡದಂತೆ ವೈದ್ಯರು ಮನವಿ ಮಾಡಿದರು. ವೈದ್ಯರ ಮನವಿಗೆ ಸ್ಪಂದಿಸಿದ ಜನರು ಕೂಡ ಅವರಿಗೆ ಸಂಪೂರ್ಣ ಸಹಕಾರ ನೀಡಿದರು. ಇಡೀ ಶಸ್ತ್ರಚಿಕಿತ್ಸೆ ಕೆಲವೇ ನಿಮಿಷಗಳಲ್ಲಿ ಮುಗಿದು ಹೋಯಿತು. ಲಿನು ಮತ್ತೆ ಉಸಿರಾಡಲು ಪ್ರಾರಂಭಿಸಿದರು. ಅಷ್ಟೊತ್ತಿಗೆ ಆಂಬ್ಯುಲೆನ್ಸ್ ಕೂಡ ಬಂದಿದ್ದರಿಂದ ಶೀಘ್ರದಲ್ಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಜೀವ ಉಳಿಸಲು ವೈದ್ಯರು ಪ್ರಯತ್ನಿಸಿದರೂ ಲಿನು ಎರಡು ದಿನಗಳ ನಂತರ ಡಿಸೆಂಬರ್ 23ರಂದು ಆಸ್ಪತ್ರೆಯಲ್ಲಿ ಮೃತಪಟ್ಟರು. ಅದಾಗ್ಯೂ ಅವರ ಜೀವ ಕಾಪಾಡಲು ವೈದ್ಯರು ನಡೆಸಿದ ಪ್ರಯತ್ನ ವ್ಯಾಪಕ ಪ್ರಶಂಸೆ ಗಳಿಸಿತು. ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಮೂವರು ವೈದ್ಯರಿಗೆ ಕರೆ ಮಾಡಿ ಅವರ ಧೈರ್ಯವನ್ನು ಶ್ಲಾಘಿಸಿದರು.