ಬೆಂಗಾವಲು ವಾಹನಗಳ ಕಡಿತ: ಪ್ರಧಾನಿ ಮೋದಿ, ಸಚಿವರು, ವಿಐಪಿಗಳಿಗೆ ಕೇವಲ 4 ಕಾರು
ಇಂಧನ ಉಳಿತಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಬೆನ್ನಲ್ಲೇ ಅವರ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಬಿಗಿ ಭದ್ರತೆಯ ಭಾಗವಾಗಿ 14 ಕಾರುಗಳಲ್ಲಿ ಕೇವಲ 4 ಕಾರುಗಳು ಮಾತ್ರ ಇನ್ನು ಮುಂದೆ ಪ್ರಧಾನಿ ಮೋದಿ, ಸಚಿವರು ವಿಐಪಿಗಳಿಗೆ ಬೆಂಗಾವಲಾಗಿ ಇರಲಿದೆ. ಈ ಕುರಿತು ಸರ್ಕಾರ ನಿರ್ದೇಶನವನ್ನು ಕೂಡ ಹೊರಡಿಸಿದೆ.
ಸಂಗ್ರಹ ಚಿತ್ರ -
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಒದಗಿಸಲಾಗುವ ಬಿಗಿ ಭದ್ರತೆಯನ್ನು ಕಡಿತಗೊಳಿಸಲಾಗಿದೆ. ಅವರ ಬೆಂಗಾವಲು ವಾಹನಗಳಲ್ಲಿ (convoy vehicles) ಕೇವಲ 4 ಕಾರುಗಳನ್ನು ಮಾತ್ರ ಉಳಿಸಿಕೊಳ್ಳಲಾಗುತ್ತಿದೆ.ಈ ಕುರಿತು ಸರ್ಕಾರ ನಿರ್ದೇಶನವನ್ನು ಕೂಡ ಹೊರಡಿಸಿದೆ. ಸರ್ಕಾರಿ ವೆಚ್ಚಗಳನ್ನು ಕಡಿತಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟ ಸದಸ್ಯರು ಮಾತ್ರವಲ್ಲ ವಿಐಪಿಗಳಿಗೆ (VIP) ಒದಗಿಸಲಾಗುವ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. 14 ಕಾರುಗಳಲ್ಲಿ ಕೇವಲ 4 ಕಾರುಗಳು ಮಾತ್ರ ಇನ್ನು ಮುಂದೆ ಬೆಂಗಾವಲಿಗೆ ಇರಲಿದೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಸಂಘರ್ಷದ ಪರಿಣಾಮ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಲೇ ಇದೆ. ಇದರಿಂದ ದೇಶದ ಆಮದುಗಳ ಮೇಲೆ ಪರಿಣಾಮ ಬೀರಿದ್ದು, ಅನಗತ್ಯ ವೆಚ್ಚವನ್ನು ತಡೆಯಲು ಸರ್ಕಾರ ಹಲವು ಬಿಗಿ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಮುಖ್ಯವಾಗಿ ಪ್ರಧಾನಿ ಮೋದಿ, ಸಚಿವರು ವಿಐಪಿಗಳ ಬೆಂಗಾವಲು ವಾಹನಗಳ ಸಂಖ್ಯೆಯಲ್ಲಿ ಕಡಿತಗೊಳಿಸಲಾಗಿದೆ.
ಆಮದು ಹೊರೆಯಾಗಿರುವ ಖಾದ್ಯ ತೈಲ ಬೆಳೆಗಳನ್ನು ಭಾರತದಲ್ಲೇ ಏಕೆ ಹೆಚ್ಚು ಉತ್ಪಾದಿಸಬಾರದು?
ಕೇಂದ್ರ ಸರ್ಕಾರವು ಬಿಜೆಪಿ ಆಡಳಿತ ಹೊಂದಿರುವ ರಾಜ್ಯಗಳು ಸೇರಿದಂತೆ ಹಲವು ರೀತಿಯ ಸರ್ಕಾರಿ ವೆಚ್ಚವನ್ನು ಕಡಿತಗೊಳಿಸುವ ಉದ್ದೇಶದಿಂದ ಸಚಿವರು, ವಿಐಪಿಗಳು, ಅಧಿಕಾರಿಗಳಿಗೆ ನೀಡಲಾಗುವ ಭದ್ರತೆಯಲ್ಲಿ ಕೊಂಚ ಕಡಿತಗೊಳಿಸಿದೆ.
ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಇಂಧನ ಉಳಿತಾಯ ಮಾಡಲು ಕಠಿಣ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ನಾಗರಿಕರಿಗೆ ಕರೆ ನೀಡಿದ್ದರು. ಇದನ್ನು ಅನುಸರಿಸಿ ಹಲವಾರು ಕೇಂದ್ರ ಸಚಿವರು ತಮ್ಮ ಅಧಿಕೃತ ಬೆಂಗಾವಲುಗಳಲ್ಲಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ.
ಅನೇಕ ಕ್ಯಾಬಿನೆಟ್ ಸಚಿವರ ಭದ್ರತಾ ಬೆಂಗಾವಲುಗಳ ಗಾತ್ರವನ್ನು ಸುಮಾರು ಶೇಕಡಾ 50ರಷ್ಟು ಕಡಿತಗೊಳಿಸಲಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸೇರಿದ್ದಾರೆ. ಮೋದಿಯವರು ಬುಧವಾರದ ಕ್ಯಾಬಿನೆಟ್ ಸಭೆಗಾಗಿ ತಮ್ಮ ನಿವಾಸದಿಂದ ಕಚೇರಿಗೆ ಕೇವಲ ಎರಡು ವಾಹನಗಳ ಬೆಂಗಾವಲು ಪಡೆಯೊಂದಿಗೆ ಬಂದರು.
ಸಾಮಾನ್ಯವಾಗಿ ಪ್ರಧಾನಿ ಮೋದಿ ಅವರಿಗೆ ನೀಡಲಾಗುವ ಭದ್ರತೆಯಲ್ಲಿ 14 ರಿಂದ 17 ವಾಹನಗಳು ಬೆಂಗಾವಲಾಗಿ ಇರುತ್ತದೆ. ಇದರೊಂದಿಗೆ ಕೆಲವೊಂದು ಸಂದರ್ಭದಲ್ಲಿ ರಾಜ್ಯ ಪೊಲೀಸ್ ಪಡೆಗಳ ಸಿಬ್ಬಂದಿ ಮತ್ತು ವಾಹನಗಳು ಕೂಡ ಬೆಂಗಾವಲಿನ ಭಾಗವಾಗಿರುತ್ತದೆ. ಇದರಿಂದ ಅವರ ಒಟ್ಟು ಬೆಂಗಾವಲು ವಾಹನಗಳ ಸಂಖ್ಯೆ 30 ರಿಂದ 40ರವರೆಗೆ ಏರುತ್ತದೆ. ಆದರೆ ಪ್ರಧಾನಿ ಮೋದಿ ಅವರು ಇತ್ತೀಚೆಗೆ ವಿದ್ಯುತ್ ಚಾಲಿತ ವಾಹನಗಳನ್ನು ಬಳಸಲು ಒತ್ತು ನೀಡುವಂತೆ ನಾಗರಿಕರಿಗೆ ಕರೆ ನೀಡುವ ಜೊತೆಗೆ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಿದ್ದಾರೆ.
ಝೆಡ್+ ವರ್ಗದ ಭದ್ರತೆಗೆ ಅರ್ಹರಾಗಿದ್ದು 11 ವಾಹನಗಳ ಬೆಂಗಾವಲು ಹೊಂದಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈಗ ಕೇವಲ ನಾಲ್ಕು ವಾಹನಗಳ ಬೆಂಗಾವಲು ಪಡೆಯನ್ನು ಬಳಸಲು ಪ್ರಾರಂಭಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಜೆ.ಪಿ. ನಡ್ಡಾ ಕೂಡ ತಮ್ಮ ಅಧಿಕೃತ ಬೆಂಗಾವಲುಗಳನ್ನು ತಲಾ ನಾಲ್ಕು ವಾಹನಗಳಿಗೆ ಇಳಿಸಿದ್ದಾರೆ.
ಇನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಕೂಡ ಸರ್ಕಾರಿ ವೆಚ್ಚವನ್ನು ಕಡಿತಗೊಳಿಸುವ ಗುರಿಯನ್ನು ಹೊಂದಿರುವ ಹಲವಾರು ನಿರ್ದೇಶನಗಳನ್ನು ಹೊರಡಿಸಿವೆ. ಮಹಾರಾಷ್ಟ್ರದಲ್ಲಿ ತುರ್ತು ಅಧಿಕೃತ ವ್ಯವಹಾರಗಳನ್ನು ಹೊರತುಪಡಿಸಿ ಸಚಿವರು ತಮ್ಮ ಸ್ವಂತ ಇಚ್ಛೆಯಂತೆ ಸರ್ಕಾರಿ ವಿಮಾನಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಕೆಲವು ಸಚಿವರ ವಿದೇಶ ಪ್ರವಾಸಗಳನ್ನು ಕೂಡ ರದ್ದುಗೊಳಿಸಲಾಗಿದೆ. ಒಂದು ವೇಳೆ ಬಳಸಬೇಕಿದ್ದರೆ ಮುಖ್ಯಮಂತ್ರಿಯ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ.
ಇಂಧನ ಉಳಿತಾಯಕ್ಕೆ ಪ್ರಧಾನಿ ಮೋದಿಯನ್ನು ಅನುಸರಿಸಿದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು
ದೆಹಲಿಯಲ್ಲಿ ಕೂಡ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳು ಕನಿಷ್ಠ ಸಂಖ್ಯೆಯ ವಾಹನಗಳನ್ನು ಬಳಸಲು, ಕಾರ್‌ಪೂಲಿಂಗ್ ಮತ್ತು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಲು ಸೂಚಿಸಿದ್ದಾರೆ. ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶದಲ್ಲಿ ಕೂಡ ಸರ್ಕಾರಿ ವೆಚ್ಚ ಕಡಿತಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.