ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದ್ದು, ತನಿಖೆ ಪೂರ್ಣಗೊಳಿಸಲು ಮೂರು ತಿಂಗಳ ಗಡುವು ವಿಧಿಸಿದೆ. ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರ ತನಿಖಾ ದಳ (ಸಿಬಿಐ) ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸೌಜನ್ಯಾ ತಾಯಿ ಕುಸುಮಾವತಿ ಗೌಡ ಅವರು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Sep 21, 2026 12:49 PM

ನವದೆಹಲಿ: ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ (Soujanya Case) ಮರುತನಿಖೆಗೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದ್ದು, ತನಿಖೆ ಪೂರ್ಣಗೊಳಿಸಲು ಮೂರು ತಿಂಗಳ ಗಡುವು ವಿಧಿಸಿದೆ. ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರ ತನಿಖಾ ದಳ (CBI) ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸೌಜನ್ಯಾ ತಾಯಿ ಕುಸುಮಾವತಿ ಗೌಡ ಅವರು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣವನ್ನು ಮರುತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಬಳಿಕ ಕುಸುಮಾವತಿ ಗೌಡ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಇದೀಗ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ಪೀಠ, ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಅಧಿಕಾರಿಗಳನ್ನು ಹೊಸ ತನಿಖೆಯಲ್ಲಿ ಸೇರಿಸದಂತೆ ನಿರ್ದೇಶನ ನೀಡಿದ್ದು, ಹೊಸ ತಂಡದಿಂದ ಸ್ವತಂತ್ರವಾಗಿ ಮರು ತನಿಖೆ ನಡೆಸುವಂತೆ ಸೂಚಿಸಿದೆ. ಸಿಬಿಐ ನಡೆಸಿದ ತನಿಖೆಯಲ್ಲಿ ಸ್ವತಂತ್ರತೆ ಕೊರತೆಯಿದ್ದು, ಕಳಪೆ ಮಟ್ಟದ ತನಿಖೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ಸೌಜನ್ಯಾ ಪ್ರಕರಣದ ಸಂಪೂರ್ಣ ಮರುತನಿಖೆ ನಡೆಸಿ ಮುಂದಿನ 3 ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಆದೇಶಿಸಿದೆ.

ಅರ್ಜಿಯ ವಿಚಾರಣೆ ವೇಳೆ ಸಿಬಿಐ ತನಿಖೆಯ ಲೋಪದೋಷಗಳನ್ನು ಕಟುವಾಗಿ ಟೀಕಿಸಿದ್ದ ಸುಪ್ರೀಂ ಕೋರ್ಟ್, ಜುಲೈನಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು. “ವಾಸ್ತವವಾಗಿ ಸಿಬಿಐನ ತನಿಖಾ ಅಧಿಕಾರಿಯೇ ಇಲ್ಲಿ ನ್ಯಾಯಾಧೀಶರಂತೆ ಕಾರ್ಯಾಚರಿಸಿದ್ದಾರೆ. ಹಿಂದೆ ಪೊಲೀಸರು ಸಂಗ್ರಹಿಸಿದ್ದ ಸಾಕ್ಷ್ಯಗಳನ್ನು ಮರುಪರಿಶೀಲಿಸಿ ವರದಿ ಸಲ್ಲಿಸಿದ್ದಾರೆಯೇ ಹೊರತು, ಯಾವುದೇ ಸ್ವತಂತ್ರ ಹಾಗೂ ವೈಜ್ಞಾನಿಕ ತನಿಖೆ ನಡೆಸಿಲ್ಲ. ಇದು ಸಿಬಿಐ ಸಂಸ್ಥೆಯ ತೀರಾ ಕಳಪೆ ಕಾರ್ಯವೈಖರಿಯನ್ನು ಪ್ರತಿಬಿಂಬಿಸುತ್ತದೆ” ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಸಂಜೀವ್ ಸಚ್‌ದೇವ್ ಅವರಿದ್ದ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಏನಿದು ಪ್ರಕರಣ?

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಅಕ್ಟೋಬರ್ 9, 2012 ರಂದು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆಯಿತು. ಸೌಜನ್ಯಾ, ಕಾಲೇಜು ಮುಗಿಸಿ ಮನೆಗೆ ಹಿಂದಿರುಗುವಾಗ ಅಪಹರಣಕ್ಕೊಳಗಾಗಿ, ಅತ್ಯಾಚಾರಕ್ಕೊಳಗಾಗಿ ಭೀಕರವಾಗಿ ಕೊಲೆಯಾಗಿದ್ದಳು. ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿ 'ಸಂತೋಷ್ ರಾವ್' ಎಂಬ ಮಾನಸಿಕ ಅಸ್ವಸ್ಥ ಎನ್ನಲಾದ ವ್ಯಕ್ತಿಯನ್ನು ಬಂಧಿಸಿದ್ದರು. ಜೂನ್ 2023 ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದ ಸಂತೋಷ್ ರಾವ್‌ನನ್ನು ದೋಷಮುುಕ್ತಗೊಳಿಸಿತು. ಈ ಸುದೀರ್ಘ ಕಾನೂನು ಹೋರಾಟದ ನಂತರ, ಇದೀಗ ಸೆಪ್ಟೆಂಬರ್ 21, 2026 ರಂದು ಸುಪ್ರೀಂ ಕೋರ್ಟ್ ಹೊಸ ವಿಶೇಷ ತನಿಖಾ ತಂಡ (SIT) ರಚಿಸಿ ಮರುತನಿಖೆ ನಡೆಸಲು ಆದೇಶ ನೀಡಿದೆ.