ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಂಗಾಳ ಕೊಲ್ಲಿಯಲ್ಲಿ ‘ಅರ್ನಾಬ್’ ಚಂಡಮಾರುತ ಅಬ್ಬರ: ಒಡಿಶಾ, ಆಂಧ್ರ ಹಾಗೂ ತಮಿಳುನಾಡಿಗೆ ತೀವ್ರ ಮುನ್ನೆಚ್ಚರಿಕೆ, ಶಾಲಾ-ಕಾಲೇಜುಗಳು ಬಂದ್

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ತೀವ್ರ ವಾಯುಭಾರ ಕುಸಿತದಿಂದ ಚಂಡಮಾರುತ ಮಾರ್ಪಟ್ಟಿದ್ದು, ಭಾರತದ ಪೂರ್ವ ಕರಾವಳಿ ರಾಜ್ಯಗಳಿಗೆ ಕಂಟಕವಾಗಿ ಪರಿಣಮಿಸಿದೆ. ಬಾಂಗ್ಲಾದೇಶ ನೀಡಿರುವ ಹೆಸರಿನ 'ಅರ್ನಾಬ್' ಚಂಡಮಾರುತವು ಅಕ್ಟೋಬರ್ 28 ರಂದು ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ.

ಬಂಗಾಳ ಕೊಲ್ಲಿಯಲ್ಲಿ ‘ಅರ್ನಾಬ್’ ಚಂಡಮಾರುತ ಅಬ್ಬರ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Oct 25, 2026 2:10 PM

ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ (Bay Of Bengal) ಸೃಷ್ಟಿಯಾಗಿರುವ ತೀವ್ರ ವಾಯುಭಾರ ಕುಸಿತದಿಂದ ಚಂಡಮಾರುತ ಮಾರ್ಪಟ್ಟಿದ್ದು, ಭಾರತದ ಪೂರ್ವ ಕರಾವಳಿ ರಾಜ್ಯಗಳಿಗೆ ಕಂಟಕವಾಗಿ ಪರಿಣಮಿಸಿದೆ. ಬಾಂಗ್ಲಾದೇಶ ನೀಡಿರುವ ಹೆಸರಿನ 'ಅರ್ನಾಬ್' ಚಂಡಮಾರುತವು (Arnab cyclone) ಅಕ್ಟೋಬರ್ 28 ರಂದು ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದೆ.

ಚಂಡಮಾರುತದ ಭೀತಿಯ ಹಿನ್ನೆಲೆಯಲ್ಲಿ ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳನ್ನು ಮುಚ್ಚಲು ಆದೇಶಿಸಲಾಗಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಪ್ರಸ್ತುತ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ನೆಲೆಸಿರುವ ಈ ಚಂಡಮಾರುತವು ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ. ಅಕ್ಟೋಬರ್ 28 ರ ಮುಂಜಾನೆ ಆಂಧ್ರಪ್ರದೇಶದ ಬಾಪಟ್ಲಾ ಮತ್ತು ವಿಶಾಖಪಟ್ಟಣಂ ನಡುವೆ ಇದು ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿ ಗಂಟೆಗೆ 115 ರಿಂದ 125 ಕಿ.ಮೀ ವೇಗದಲ್ಲಿ ಭಾರಿ ಗಾಳಿ ಬೀಸಲಿದ್ದು, ಇದರ ತೀವ್ರತೆಯು ಗಂಟೆಗೆ 140 ಕಿ.ಮೀ ವರೆಗೂ ತಲುಪಬಹುದು ಎಂದು ಅಂದಾಜಿಸಲಾಗಿದೆ.

ಚಂಡಮಾರುತದ ನೇರ ಪ್ರಭಾವಕ್ಕೆ ಒಳಗಾಗಲಿರುವ ಒಡಿಶಾದ ಗಂಜಾಂ, ಗಜಪತಿ, ರಾಯಗಡ, ಕೊರಾಪುಟ್ ಮತ್ತು ಮಲ್ಕಾನ್‌ಗಿರಿ ಜಿಲ್ಲೆಗಳಲ್ಲಿ ಅಕ್ಟೋಬರ್ 28 ಮತ್ತು 29 ರಂದು ಎಲ್ಲಾ ಶಾಲಾ-ಕಾಲೇಜುಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿ ಒಡಿಶಾ ಸರ್ಕಾರ ಆದೇಶ ಹೊರಡಿಸಿದೆ. ಈ ಜಿಲ್ಲೆಗಳಲ್ಲಿ 20 ಸೆಂಟಿಮೀಟರ್‌ಗಿಂತಲೂ ಅಧಿಕ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ 'ರೆಡ್ ಅಲರ್ಟ್' ಘೋಷಿಸಿದೆ. ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸಲು ಸರ್ಕಾರವು ಒಡಿಶಾ ವಿಪತ್ತು ಕ್ಷಿಪ್ರ ಕ್ರಿಯಾ ಪಡೆ (ODRAF) ನ ಸುಮಾರು 60 ತಂಡಗಳು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ನ 17 ತಂಡಗಳು ಮತ್ತು 225 ಅಗ್ನಿಶಾಮಕ ಸೇವಾ ತಂಡಗಳನ್ನು ನಿಯೋಜಿಸಿದೆ.

ರಾಜ್ಯದಲ್ಲಿ ಹಿಂಗಾರು ಮಳೆ ಚುರುಕು; ನಾಳೆ 3 ಜಿಲ್ಲೆಗಳಿಗೆ ಯೆಲ್ಲೋ ಅರ್ಲಟ್‌: ಬೆಂಗಳೂರಿನಲ್ಲಿ ಗುಡುಗು ಸಹಿತ ಸುರಿಯಲಿದೆ ವರ್ಷಧಾರೆ

ಮತ್ತೊಂದೆಡೆ, ಚಂಡಮಾರುತದ ಹಿನ್ನೆಲೆಯಲ್ಲಿ ತಮಿಳುನಾಡಿನ ಚೆನ್ನೈ, ಕಡಲೂರು ಮತ್ತು ನಾಗಪಟ್ಟಣಂ ಸೇರಿದಂತೆ 9 ಪ್ರಮುಖ ಬಂದರುಗಳಲ್ಲಿ ಅಪಾಯದ ಮುನ್ನೆಚ್ಚರಿಕೆ ಸಿಗ್ನಲ್‌ಗಳನ್ನು ಹಾಕಲಾಗಿದೆ. ಪುದುಚೇರಿ ಮತ್ತು ತಮಿಳುನಾಡಿನ ಕರಾವಳಿ ಭಾಗಗಳಲ್ಲಿ ಈಗಾಗಲೇ ಸತತ ಮಳೆ ಆರಂಭವಾಗಿದೆ.