ಬಸ್ ಓಡಿಸುತ್ತಾ ರಾಜ್ಯ ಸುತ್ತುತ್ತಿರುವ ನಟ ಶೈನ್ ಶೆಟ್ಟಿ; ʻಶಂಕರಾಭರಣʼ ಸಿನಿಮಾಗೆ ಸಾಥ್ ನೀಡಿದ ರಾಜ್ ಬಿ. ಶೆಟ್ಟಿ
Shine Shettyʼs Shankarabharana Movie: ನಟ ಶೈನ್ ಶೆಟ್ಟಿ ನಟನೆಯ ʻಶಂಕರಾಭರಣʼ ಚಿತ್ರದ ಪ್ರಚಾರಕ್ಕಾಗಿ ಖುದ್ದು ನಾಯಕ ನಟ ಶೈನ್ ಶೆಟ್ಟಿ ಅವರೇ ಬಸ್ ಚಾಲನೆ ಮಾಡುತ್ತಾ ರಾಜ್ಯಾದ್ಯಂತ ಸುತ್ತುತ್ತಿದ್ದಾರೆ. ಸುಮಂತ್ ಭಟ್ ನಿರ್ದೇಶನದ ಈ ಚಿತ್ರವನ್ನು ವೀಕ್ಷಿಸಿ ಎಂದು ರಾಜ್ ಬಿ. ಶೆಟ್ಟಿ ಕರೆ ನೀಡಿದ್ದಾರೆ.
-
ಸಿನಿಮಾ ಕಥೆಯಲ್ಲಿ ಮಾತ್ರವಲ್ಲದೆ ಪ್ರಚಾರದಲ್ಲೂ ಹೊಸತನ ಮೆರೆಯುತ್ತಿರುವ ಸ್ಯಾಂಡಲ್ವುಡ್ ನಟ ಶೈನ್ ಶೆಟ್ಟಿ, ತಮ್ಮ ಬಹುನಿರೀಕ್ಷಿತ ‘ಶಂಕರಾಭರಣ’ ಚಿತ್ರಕ್ಕಾಗಿ ರಾಜ್ಯಾದ್ಯಂತ ಬಸ್ ಓಡಿಸುತ್ತಾ ಪ್ರೇಕ್ಷಕರನ್ನು ತಲುಪುವ ವಿನೂತನ ಅಭಿಯಾನಕ್ಕೆ ಇಳಿದಿದ್ದಾರೆ.
ಈಗಾಗಲೇ ಪೋಸ್ಟರ್ಗಳು ಮತ್ತು ಇಂಪಾದ ಹಾಡುಗಳ ಮೂಲಕ ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿರುವ ಈ ಚಿತ್ರಕ್ಕೆ ಸುಮಂತ್ ಭಟ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ನಾಯಕ ನಟ ಬಸ್ ಡ್ರೈವರ್ ಪಾತ್ರ ನಿರ್ವಹಿಸುತ್ತಿರುವುದರಿಂದ, ಚಿತ್ರೀಕರಣಕ್ಕೆ ಬಳಸಲಾದ ಅದೇ ಬಸ್ನಲ್ಲಿ ಖುದ್ದು ಶೈನ್ ಶೆಟ್ಟಿ ಅವರೇ ಚಾಲಕರಾಗಿ ಕುಳಿತು ಕರ್ನಾಟಕದ ಜಿಲ್ಲೆ-ಜಿಲ್ಲೆಗಳಿಗೆ ಪ್ರಯಾಣ ಬೆಳೆಸುತ್ತಿರುವುದು ಸಾರ್ವಜನಿಕರ ಗಮನ ಸೆಳೆದಿದೆ.
Just Married Movie: ಶೈನ್ ಶೆಟ್ಟಿ ಅಭಿನಯದ ʼಜಸ್ಟ್ ಮ್ಯಾರೀಡ್ʼ ಚಿತ್ರದ ʼಕೇಳೋ ಮಚ್ಚಾʼ ಪಾರ್ಟಿ ಸಾಂಗ್ ಔಟ್
ರಾಜ್ಯದ ಹಲವು ಊರುಗಳಿಗೆ ಭೇಟಿ
ಕುಂದಾಪುರದಿಂದ ಆರಂಭವಾದ ಈ ವಿಶೇಷ ಬಸ್ ಯಾತ್ರೆ ಈಗಾಗಲೇ ಮಂಗಳೂರು, ಉಡುಪಿ, ಶಿವಮೊಗ್ಗ ಹಾಗೂ ಮೈಸೂರು ಸೇರಿದಂತೆ ಹಲವು ಭಾಗಗಳಲ್ಲಿ ಸಂಚರಿಸಿ ಪ್ರೇಕ್ಷಕರನ್ನು ಮುಟ್ಟಿದೆ. ಕೇವಲ ನಗರಗಳಿಗೆ ಭೇಟಿ ನೀಡುವುದು ಮಾತ್ರವಲ್ಲದೆ, ಆಯಾ ಭಾಗದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಕಾಲೇಜು ಕ್ಯಾಂಪಸ್ಗಳು ಹಾಗೂ ಸಾರ್ವಜನಿಕ ಸಮಾರಂಭಗಳಿಗೆ ನಾಯಕ ಶೈನ್ ಶೆಟ್ಟಿ ಮತ್ತು ನಾಯಕಿ ತನ್ವಿ ರಾವ್ ತೆರಳಿ ಜನರೊಂದಿಗೆ ಬೆರೆಯುತ್ತಿದ್ದಾರೆ.
ಈ ಸಿನಿಮಾ ನೋಡಿ ಎಂದ ರಾಜ್ ಶೆಟ್ಟಿ
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕರಾವಳಿಯ ಜನಪ್ರಿಯ ‘ಪಿಲಿನಲಿಕೆ’ ಉತ್ಸವದಲ್ಲಿ ಈ ತಂಡ ಭಾಗವಹಿಸಿತ್ತು. ಈ ವೇಳೆ ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರು ‘ಶಂಕರಾಭರಣ’ ತಂಡಕ್ಕೆ ಸಾಥ್ ನೀಡಿ, ಚಿತ್ರವು ನವೆಂಬರ್ನಲ್ಲಿ ತೆರೆಕಾಣುತ್ತಿದ್ದು ಎಲ್ಲರೂ ಚಿತ್ರಮಂದಿರಗಳಲ್ಲೇ ಸಿನಿಮಾ ವೀಕ್ಷಿಸುವಂತೆ ಮನವಿ ಮಾಡಿದರು.
ಉತ್ತರ ಕರ್ನಾಟಕದಲ್ಲಿ ಸಂಚಾರ
ಪ್ರಸ್ತುತ ಬೆಳಗಾವಿ ತಲುಪಿರುವ ‘ಶಂಕರಾಭರಣ’ ಬಸ್, ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಮಲಯಾಳಂ ಚಿತ್ರರಂಗದಲ್ಲಿ ಸುಮಾರು 17ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಪ್ರತಿಭಾವಂತ ನಟಿ ತನ್ವಿ ರಾವ್ ಈ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್ವುಡ್ಗೆ ಲಗ್ಗೆಯಿಡುತ್ತಿದ್ದು, ಪ್ರಚಾರ ಕಾರ್ಯದಲ್ಲಿ ಶೈನ್ ಜೊತೆ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಇವರೊಂದಿಗೆ ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರ ಪತ್ನಿ ಕೃತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿರುವುದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಈ ವಿನೂತನ ಪ್ರಚಾರ ಶೈಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.