ಗ್ರಾಮೀಣ, ಬುಡಕಟ್ಟು ಸಮುದಾಯಗಳಿರುವ ಪ್ರದೇಶಗಳಲ್ಲಿನ ಎಲ್ಲ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಇರಬೇಕು: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ
School Sanitation: ದೇಶದ ಎಲ್ಲ ಬುಡಕಟ್ಟು ಜನಾಂಗಗಳಿರುವ ಮತ್ತು ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳು ಇರುವುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ. 4,236 ಶಾಲೆಗಳಲ್ಲಿ ಪ್ರತ್ಯೇಕ ಬಾಲಕಿಯರ ಶೌಚಾಲಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಸೆ. 2: ದೇಶದ ಗ್ರಾಮೀಣ, ಬುಡಕಟ್ಟು ಸಮುದಾಯ ವಾಸಿಸುವ ಪ್ರದೇಶಗಳಲ್ಲಿನ ಎಲ್ಲ ಶಾಲೆಗಳಲ್ಲಿ ಪ್ರತ್ಯೇಕ ಬಾಲಕಿಯರ ಶೌಚಾಲಯ ಇರಬೇಕು ಎಂದು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ (Supreme Court) ಕಟ್ಟುನಿಟ್ಟಿನ ಆದೇಶ ನೀಡಿದೆ. ದೇಶದ ಒಟ್ಟು 14 ಲಕ್ಷ ಶಾಲೆಗಳ ಪೈಕಿ ಕೇವಲ 4,745 ಶಾಲೆಗಳಲ್ಲಿ ಮಾತ್ರ ಇನ್ನು ಬಾಲಕಿಯರ ಶೌಚಾಲಯಗಳನ್ನು ನಿರ್ಮಿಸಬೇಕಿದೆ ಎಂದು ಕೇಂದ್ರ ಸರ್ಕಾರ (Centre Government) ತಿಳಿಸಿದೆ. ಬುಡಕಟ್ಟು ಸಮುದಾಯಗಳಿರುವ ಮತ್ತು ಗ್ರಾಮೀಣ ಪ್ರದೇಶದ ಎಲ್ಲ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳು ಇರುವುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿದ ಅಂಕಿ-ಅಂಶಗಳ ಪ್ರಕಾರ, 2024-25ರಲ್ಲಿ ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಮ್ ಫಾರ್ ಎಜುಕೇಶನ್ ಪ್ಲಸ್ (UDISE+) ಅಡಿಯಲ್ಲಿ ನಡೆಸಿದ ಕೊನೆಯ ಸಮೀಕ್ಷೆಯ ಪ್ರಕಾರ, ಒಟ್ಟು 1.47 ಮಿಲಿಯನ್ ಶಾಲೆಗಳಲ್ಲಿ, ಸುಮಾರು ಶೇ. 97.3ರಷ್ಟು ಶಾಲೆಗಳಲ್ಲಿ ಬಾಲಕಿಯರ ಶೌಚಾಲಯಗಳಿವೆ ಎಂದು ವರದಿಯಾಗಿದೆ.
ಮುಟ್ಟಿನ ನೈರ್ಮಲ್ಯವನ್ನು ಮೂಲಭೂತ ಹಕ್ಕು ಎಂದು ಘೋಷಿಸಿದ ಸುಪ್ರೀಂ ಕೋರ್ಟ್‌ನ ಆದೇಶದ ಅನ್ವಯ, ಕೇಂದ್ರ ಸರ್ಕಾರವು ಈ ವಿಷಯವನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಚರ್ಚಿಸಿದೆ. ಈ ವೇಳೆ, ಬಾಕಿ ಉಳಿದಿದ್ದ ಶೇ. 2.7ರಷ್ಟು ಕೊರತೆಯ ಪೈಕಿ (39,729 ಶಾಲೆಗಳು ಸೇರಿ), 30,458 ಶಾಲೆಗಳಲ್ಲಿ ಈಗಾಗಲೇ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳನ್ನು ಒದಗಿಸಲಾಗಿದೆ. ಇನ್ನುಳಿದ 4,236 ಶಾಲೆಗಳಲ್ಲಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಿಳಿಸಿವೆ.
ಉಕ್ಕಿ ಹರಿಯುವ ನದಿಯ ಮಧ್ಯೆ ಜೀವ ಪಣಕ್ಕಿಟ್ಟು ಶಾಲೆಗೆ ತೆರಳುವ ಮಕ್ಕಳು
ಕೇಂದ್ರದ ಪ್ರಕಾರ, ಕೇವಲ 4,745 ಶಾಲೆಗಳಲ್ಲಿ ಮಾತ್ರ ಪ್ರತ್ಯೇಕ ಬಾಲಕಿಯರ ಶೌಚಾಲಯವಿಲ್ಲ. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು, ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳಿರುವ ಪ್ರದೇಶಗಳಲ್ಲಿನ ಶಾಲೆಗಳ ಮೇಲೆ ಹೆಚ್ಚು ಗಮನ ಹರಿಸಬೇಕು. ಏಕೆಂದರೆ ಅಲ್ಲಿನ ವಿದ್ಯಾರ್ಥಿಗಳು ಸಮಾಜದ ಬಡ ವರ್ಗದಿಂದ ಬಂದವರಾಗಿದ್ದಾರೆ ಎಂದು ಹೇಳಿದೆ.
ಅಂತಹ ಶಾಲೆಗಳಿರುವ ಸಾಧ್ಯತೆ ಹೆಚ್ಚಿರುವ ಜಾರ್ಖಂಡ್, ಒಡಿಶಾ ಮತ್ತು ಬಿಹಾರದಂತಹ ರಾಜ್ಯಗಳನ್ನು ಹೆಸರಿಸಿದ ನ್ಯಾಯಪೀಠವು, ವಿದ್ಯಾರ್ಥಿನಿಯರು ಸ್ವಚ್ಛ, ಆರೋಗ್ಯಕರ ಶೌಚಾಲಯ ಮತ್ತು ಸ್ಯಾನಿಟರಿ ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಲು ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಧನಸಹಾಯವನ್ನು (ಫಂಡಿಂಗ್) ಖಚಿತಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಶಿಕ್ಷಣ ಸಚಿವಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವನ್ನು ಪ್ರತಿನಿಧಿಸುವ ಕೇಂದ್ರವು, 6ರಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳು, ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಷಿನ್‌ಗಳು, ಮುಟ್ಟಿನ ನೈರ್ಮಲ್ಯ, ಪ್ರತ್ಯೇಕ ಬಟ್ಟೆಗಳು ಮತ್ತು ಇತರ ಸೌಲಭ್ಯಗಳನ್ನು ಕಡ್ಡಾಯಗೊಳಿಸಿದ್ದ ನ್ಯಾಯಾಲಯದ ಜನವರಿ 30ರ ತೀರ್ಪಿನ ಪಾಲನಾ ವರದಿಯನ್ನು ಸಲ್ಲಿಸಲು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯಾ ಭಾಟಿ ಮತ್ತು ಅರ್ಚನಾ ಪಾಠಕ್ ಡೇವ್ ಅವರನ್ನು ನಿಯೋಜಿಸಲಾಗಿದೆ.
ಶಾಲೆಗಳಲ್ಲಿ ಋತುಸ್ರಾವದ ನೈರ್ಮಲ್ಯ ಮತ್ತು ಪೂರಕ ಸೌಲಭ್ಯಗಳ ಕೊರತೆಯಿಂದಾಗಿ ಹಲವಾರು ವಿದ್ಯಾರ್ಥಿನಿಯರು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಲು ಅಥವಾ ತರಗತಿಗಳಿಗೆ ಗೈರುಹಾಜರಾಗುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಅವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಈ ಆದೇಶವನ್ನು ಹೊರಡಿಸಿದೆ.