ದೆಹಲಿಯಲ್ಲಿ ಕಾರಿನೊಂದಿಗೆ ಛಿದ್ರವಾದ ಆತ್ಮಹತ್ಯಾ ಬಾಂಬರ್ ಗುರುತು ಪತ್ತೆಗೆ ಡಿಎನ್‌ಎ ಟೆಸ್ಟ್; ತಾಯಿ, ಸಹೋದರ ವಶಕ್ಕೆ
Delhi Blast: ಸೋಮವಾರ (ನವೆಂಬರ್ 10) ಸಂಜೆ ದೆಹಲಿಯ ಕೆಂಪು ಕೋಟೆ ಸಮೀಪ ನಡೆದ ಭಯೋತ್ಪಾದಕ ದಾಳಿಯ ಪ್ರಧಾನ ಸೂತ್ರಧಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ವೈದ್ಯ ಡಾ. ಉಮರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಇದೀಗ ಈತನ ತಾಯಿಯ ಡಿಎನ್‌ಎ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
ದೆಹಲಿ ಸ್ಫೋಟದ ರೂವಾರಿ ಡಾ. ಉಮರ್ ಮೊಹಮ್ಮದ್‌ನ ತಾಯಿಯ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತದೆ (ಸಾಂದರ್ಭಿಕ ಚಿತ್ರ) -
ದೆಹಲಿ, ನ. 11: ಸೋಮವಾರ (ನವೆಂಬರ್ 10) ಸಂಜೆ ದೆಹಲಿಯನ್ನು ನಡುಗಿಸಿದ ಕೆಂಪು ಕೋಟೆ ಸಮೀಪ ನಡೆದ ಭಯೋತ್ಪಾದಕ ದಾಳಿಗೆ 9 ಮಂದಿ ಬಲಿಯಾಗಿದ್ದಾರೆ (Delhi Blast). ಹ್ಯುಂಡೈ ಐ20 ಕಾರು ಚಲಾಯಿಸುತ್ತಿದ್ದ ಆತ್ಮಹತ್ಯಾ ಬಾಂಬರ್ ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಹೀಗೆ ಕಾರಿನೊಂದಿಗೆ ಛಿದ್ರವಾಗಿ ಹೋದ ಉಗ್ರನನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ವೈದ್ಯ ಡಾ. ಉಮರ್ ಮೊಹಮ್ಮದ್ (Dr Umar Mohammad) ಎಂದು ಶಂಕಿಸಲಾಗಿದ್ದು, ಈತನ ತಾಯಿಯ ಡಿಎನ್‌ಎ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
ಸ್ಫೋಟ ನಡೆದ ಸ್ಥಳದಲ್ಲಿ ಪತ್ತೆಯಾದ ಮಾನವ ಅವಶೇಷ ಡಾ. ಉಮರ್ ಮೊಹಮ್ಮದ್‌ನದ್ದೇ ಎನ್ನುವುದನ್ನು ಖಾತರಿ ಪಡಿಸಲು ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಸ್ಫೋಟ ನಡೆದ ಸ್ಥಳದಲ್ಲಿ ದೊರೆತ ಮಾನವ ಭಾಗಗಳ ಗುರುತು ಪತ್ತೆಗೆ ನಾವು ಶಂಕಿತನ ತಾಯಿಯನ್ನು ಡಿಎನ್ಎ ಮಾದರಿಗಳನ್ನು ಸಂಗ್ರಹಿಸಲು ಕರೆದೊಯ್ದಿದ್ದೇವೆ" ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
🚨The car owner of Delhi Red Fort Blast has been identified as Dr. Mohammad Umar, a Pulwama-based doctor
— Nabila Jamal (@nabilajamal_) November 11, 2025
Police confirm his charred body has been recovered from the blast site near Delhi’s Red Fort and sent for DNA testing
CCTV shows Umar driving the Hyundai i20 that exploded… pic.twitter.com/kbdiLugZYN
ಸ್ಫೋಟದ ನಂತರ ಸೋಮವಾರ ರಾತ್ರಿಯೇ ಉಮರ್‌ನ ತಾಯಿ ಮತ್ತು ಇಬ್ಬರು ಸಹೋದರರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿತ್ತು. ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (FSL) ತಂಡವು ಸ್ಫೋಟ ನಡೆದ ಕೆಂಪು ಕೋಟೆ ಪ್ರದೇಶದಿಂದ ಎಲ್ಲ ಮಾನವ ಅವಶೇಷಗಳು ಮತ್ತು ಪುರಾವೆಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಿದೆ. ಸಿಸಿ ಟಿವಿ ದೃಶ್ಯದ ಆಧಾರದಲ್ಲಿ ಸ್ಫೋಟಗೊಂಡ ಕಾರನ್ನು ಉಮರ್ ಚಲಾಯಿಸುತ್ತಿದ್ದ ಎಂದು ನಿರ್ಧರಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ: Delhi blast: ದೆಹಲಿ ಸ್ಪೋಟದ ಹಿಂದೆ ಮುಸ್ಲಿಂ ಧರ್ಮಗುರು ಮೌಲ್ವಿ ಇರ್ಫಾನ್ ಅಹ್ಮದ್ ?
ಡಾ. ಉಮರ್ ಮೊಹಮ್ಮದ್ ಹಿನ್ನೆಲೆ
1989ರ ಫೆಬ್ರವರಿ 24ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜನಿಸಿದ ಉಮರ್ ಮೊಹಮ್ಮದ್, ಹರಿಯಾಣದ ಫರಿದಾಬಾದ್‌ನ ಅಲ್ ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿದ್ದ. ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣದ ಪೊಲೀಸ್ ತಂಡಗಳು ʼವೈಟ್ ಕಾಲರ್ʼ ಭಯೋತ್ಪಾದನಾ ಮಾಡ್ಯೂಲ್‌ನ ತನಿಖೆಯ ಭಾಗವಾಗಿ ಬಂಧಿಸಿದ್ದ ಇಬ್ಬರು ವೈದ್ಯರಾದ ಡಾ. ಅದೀಲ್ ಅಹ್ಮದ್ ರಾಥರ್ ಮತ್ತು ಡಾ. ಮುಜಮ್ಮಿಲ್ ಶಕೀಲ್ ಈತನ ಆಪ್ತ ಸಹಾಯಕರಾಗಿದ್ದರು ಎಂದು ಶಂಕಿಸಲಾಗಿದೆ.
ಫರಿದಾಬಾದ್‌ನಲ್ಲಿ ಸಹಚರರನ್ನು ಬಂಧಿಸಿ 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡ ಬಳಿಕ ಉಮರ್ ಅಲ್ಲಿಂದ ಪರಾರಿಯಾಗಿ ದೆಹಲಿಗೆ ಆಗಮಿಸಿರಬೇಕು ಎಂದು ತನಿಖಾಧಿಕಾರಿಗಳು ಊಹಿಸಿದ್ದಾರೆ. ಕೆಂಪು ಕೋಟೆಯ ಬಳಿ ಆತ ಸಿಕ್ಕಿ ಬೀಳುವ ಭಯದಲ್ಲಿ ಸ್ಫೋಟ ನಡೆಸಿರುವ ಸಾಧ್ಯತೆ ಇದೆ.
ಸಿಸಿ ಟಿವಿ ದೃಶ್ಯಗಳ ಪ್ರಕಾರ, ಕೆಂಪು ಕೋಟೆಯ ಪಾರ್ಕಿಂಗ್ ಏರಿಯಾ ಬಳಿ ಸುಮಾರು 3 ಗಂಟೆಗಳ ಕಾಲ ನಿಲ್ಲಿಸಿದ್ದ ಬಿಳಿ ಹ್ಯುಂಡೈ ಐ20 ಕಾರು ಮೆಟ್ರೋ ನಿಲ್ದಾಣದ ಸಿಗ್ನಲ್ ಕಡೆಗೆ ಚಲಿಸುವ ವೇಳೆ ಸ್ಫೋಟಗೊಂಡಿತ್ತು.
ಮೂಲಗಳ ಪ್ರಕಾರ ಉಗ್ರರು ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಇಂಧನ ತೈಲ (ANFO) ಬಳಸಿದ್ದಾರೆ. "ಉಮರ್ ಮೊಹಮ್ಮದ್ ಮತ್ತು ಅವರ ಸಹಚರರು ದಾಳಿ ನಡೆಸಲು ಅಮೋನಿಯಂ ನೈಟ್ರೇಟ್ ಇಂಧನ ತೈಲ ಬಳಸಿದ್ದಾರೆ. ಅವರು ಕಾರಿನಲ್ಲಿ ಡಿಟೋನೇಟರ್ ಇರಿಸಿ ಕೆಂಪು ಕೋಟೆ ಬಳಿ ಜನದಟ್ಟಣೆಯ ಪ್ರದೇಶದಲ್ಲಿ ಸ್ಫೋಟ ನಡೆಸಿದ್ದಾರೆ" ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಸ್ಫೋಟದ ವೇಳೆ ಕಾರಿನಲ್ಲಿ ಒಟ್ಟು ಮೂವರಿದ್ದರು ಎನ್ನಲಾಗಿದೆ.