Delhi Blast: ಆಪರೇಷನ್ ಸಿಂದೂರ್ ಆನ್; ದೆಹಲಿ ಸ್ಫೋಟದ ಬೆನ್ನಲ್ಲೇ ಉಗ್ರರಿಗೆ ಖಡಕ್ ಸಂದೇಶ
ದೆಹಲಿಯ ಕೆಂಪು ಕೋಟೆ ಸಮೀಪ ಸಂಭವಿಸಿದ ಕಾರು ಸ್ಫೋಟದ ಹಿಂದೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡವಿರುವ ಶಂಖೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಸರ್ಕಾರ ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಲು ಮುಂದಾಗಿದೆ ಎನ್ನುವ ಸೂಚನೆ ಸಿಕ್ಕಿದೆ.
ದೆಹಲಿ ಸ್ಫೋಟದ ಬೆನ್ನಲ್ಲೇ ಉಗ್ರರಿಗೆ ಭಾರತ ಕಠಿನ ಕ್ರಮ ಎಚ್ಚರಿಕೆ ನೀಡಿದೆ -
ದೆಹಲಿ, ನ. 11: ನವೆಂಬರ್ 10ರ ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ನಡೆದ ಉಗ್ರರ ಅಟ್ಟಹಾಸಕ್ಕೆ ದೇಶವೇ ಬೆಚ್ಚಿ ಬಿದ್ದಿದೆ (Delhi Blast). ಶಂಕಿತ ಆತ್ಮಹತ್ಯಾ ಬಾಂಬರ್‌ಗಳು ಕಾರು ಸ್ಫೋಟಿಸಿ 12 ಮಂದಿಯನ್ನು ಬಲಿ ಪಡೆದುಕೊಂಡಿದ್ದಾರೆ. ಇದೀಗ ಭಾರತ ಭಯೋತ್ಪಾದಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದು, ಕಠಿಣ ಕ್ರಮದ ಸೂಚನೆ ನೀಡಿದೆ. ಭಾರತದ ನೆಲದಲ್ಲಿ ಯಾವುದೇ ಭಯೋತ್ಪಾದಕ ಕಾರ್ಯಾಚರಣೆಯನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಈ ಸ್ಫೋಟವನ್ನು ಹರಿಯಾಣದ ಫರಿದಾಬಾದ್‌ನಲ್ಲಿ ನೆಲೆಸಿರುವ ಜೈಶ್-ಎ-ಮೊಹಮ್ಮದ್ (Jaish-e-Mohammad) ಭಯೋತ್ಪಾದಕ ಸಂಘಟನೆಯ ಘಟಕ ನಡೆಸಿರುವ ಶಂಕೆ ವ್ಯಕ್ತವಾದ ಬೆನ್ನಲ್ಲೇ ಕೇಂದ್ರ ಪ್ರತೀಕಾರಕ್ಕೆ ಮುಂದಾಗಿದೆ ಎನ್ನುವ ಸೂಚನೆ ಸಿಕ್ಕಿದೆ.
ಪಹಲ್ಗಾಮ್ ದಾಳಿಯ ನಂತರ ಉಗ್ರರ ವಿರುದ್ದ ಸಮರ ಸಾರಿದ್ದ ಭಾರತ ಆಪರೇಷನ್ ಸಿಂದೂರ್ ಮೂಲಕ ತಿರುಗೇಟು ನೀಡಿತ್ತು. ಜತೆಗೆ ಇನ್ನು ಒಂದೇ ಒಂದು ಭಯೋತ್ಪದಕ ದಾಳಿ ನಡೆದರೆ ಅದನ್ನು ಯುದ್ಧವೆಂದು ಪರಿಗಣಿಸುವುದಾಗಿ ಎಚ್ಚರಿಕೆ ನೀಡಿತ್ತು. ಇದೀಗ ಪಹಲ್ಗಾಮ್ ದಾಳಿಯ ನಂತರ ಭಾರತದ ನಿಲುವನ್ನು ಒತ್ತಿ ಹೇಳುತ್ತ ಸರ್ಕಾರಿ ಮೂಲಗಳು ಆಪರೇಷನ್ ಸಿಂದೂರ್ ಇನ್ನೂ ಮುಂದುವರಿದಿದೆ ಎಂದು ತಿಳಿಸಿವೆ.
ದೆಹಲಿ ಸ್ಫೋಟದ ಬಗ್ಗೆ ಪ್ರದಾನಿ ಮೋದಿ ಮಾತು:
The horrific blast in Delhi last evening has deeply pained everyone. India stands with those who have suffered.
— Narendra Modi (@narendramodi) November 11, 2025
I assure everyone that the agencies will get to the bottom of the entire conspiracy.
All those involved will be brought to justice. pic.twitter.com/gwFzSVwD2Q
ಈ ಸುದ್ದಿಯನ್ನೂ ಓದಿ: Delhi bomb Blast: ದೆಹಲಿ ಸ್ಫೋಟಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ- ಪ್ರಧಾನಿ ಮೋದಿ ವಾರ್ನಿಂಗ್!
ರಾಜಧಾನಿಯ ಹೃದಯ ಭಾಗದಲ್ಲಿ ಸಂಭವಿಸಿದ ಭೀಕರ ಕಾರು ಸ್ಫೋಟಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. "ದೇಶದ ಪ್ರಮುಖ ತನಿಖಾ ಸಂಸ್ಥೆಗಳು ಘಟನೆಯ ಬಗ್ಗೆ ಕೂಲಂಕುಷ ಪರಿಶೀಲನೆ ನಡೆಸಲಿವೆ. ತನಿಖೆಯ ವಿವರಗಳು ಶೀಘ್ರದಲ್ಲೇ ಬಹಿರಂಗಗೊಳ್ಳಲಿವೆ" ಎಂದು ಅವರು ಹೇಳಿದ್ದಾರೆ. "ಈ ದುರಂತಕ್ಕೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ನಾನು ರಾಷ್ಟ್ರಕ್ಕೆ ಭರವಸೆ ನೀಡಲು ಬಯಸುತ್ತೇನೆʼʼ ಎಂದು ತಿಳಿಸಿದ್ದಾರೆ.
ಭೂತಾನ್‌ನಲ್ಲಿ ಗುಡುಗಿದ ಮೋದಿ
ಸದ್ಯ ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದಲೇ ಭಯೋತ್ಪಾದಕರ ವಿರುದ್ಧ ಗುಡುಗಿದ್ದಾರೆ. ಭೂತಾತ್‌ನ ರಾಜಧಾನಿ ಥಿಂಪುವಿನಲ್ಲಿ ಮಾತನಾಡಿದ ಅವರು, ʼʼದಿಲ್ಲಿ ಸ್ಫೋಟದ ಪಿತೂರಿ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ಹೊಣೆಗಾರರಾದ ಎಲ್ಲರನ್ನೂ ತಕ್ಕ ಶಿಕ್ಷೆ ವಿಧಿಸಲಾಗುವುದುʼʼ ಎಂದು ಎಚ್ಚರಿಸಿದ್ದಾರೆ.
ಸ್ಫೋಟವನ್ನು ಭಯಾನಕ ಎಂದು ಕರೆದ ಅವರು ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ʼʼಇಡೀ ರಾಷ್ಟ್ರ ಅವರೊಂದಿಗೆ ನಿಂತಿದೆ. ನಿನ್ನೆ ರಾತ್ರಿಯಿಡೀ ಈ ಘಟನೆಯ ತನಿಖೆ ನಡೆಸುತ್ತಿರುವ ಎಲ್ಲ ಸಂಸ್ಥೆಗಳೊಂದಿಗೆ ನಾನು ಸಂಪರ್ಕದಲ್ಲಿದ್ದೆ. ನಮ್ಮ ಸಂಸ್ಥೆಗಳು ಈ ಪಿತೂರಿಯ ಆಳವನ್ನು ಭೇದಿಸುತ್ತವೆʼʼ ಎಂದಿದ್ದಾರೆ.
ಮೋದಿ ಭಾರತ ಮರಳಿದ ಬೆನ್ನಲ್ಲೇ ನವೆಂಬರ್ 12ರ ಸಂಜೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಅದರಲ್ಲಿ ಭಯೋತ್ಪಾದಕರ ವಿರುದ್ದ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ನಿವಾಸಿ ಡಾ. ಉಮರ್ ಮೊಹಮ್ಮದ್ ಸ್ಫೋಟದ ನಡೆದ ಹುಂಡೈ ಐ20 ಕಾರನ್ನು ಚಲಾಯಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹರಿಯಾಣದ ಫರಿದಾಬಾದ್‌ನಲ್ಲಿ ತನಿಖಾಧಿಕಾರಿಗಳು ಉಗ್ರ ಸಂಘಟನೆಯ ಇಬ್ಬರು ಪ್ರಮುಖ ಸದಸ್ಯರಾದ ಡಾ. ಮುಜಮ್ಮಿಲ್ ಶಕೀಲ್ ಮತ್ತು ಡಾ. ಆದಿಲ್ ರಾಥರ್‌ನನ್ನು ಬಂಧಿಸಿ 2,900 ಕೆಜಿ ಶಂಕಿತ ಸ್ಫೋಟಕಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ದೆಹಲಿಯಲ್ಲಿ ಸ್ಫೋಟ ನಡೆದಿದೆ.