ಪಶ್ಚಿಮ ಬಂಗಾಳ ಚುನಾವಣೆಯ ನಂತರ ಇಂಧನ ಬೆಲೆ ಏರಿಕೆಯಾಗುತ್ತಾ? ಕೇಂದ್ರ ಸರ್ಕಾರದಿಂದ ಸ್ಪಷ್ಟನೆ
Petrol and Diesel Prices: ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ನಂತರ ಇಂಧನ ಬೆಲೆ ಏರಿಕೆ ಆಗಬಹುದು ಎಂಬ ಊಹಾಪೋಹ ಜೋರಾಗಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 29ರಂದು ಪಶ್ಚಿಮ ಬಂಗಾಳದಲ್ಲಿ ಮತದಾನ ಮುಗಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಸಾಂದರ್ಭಿಕ ಚಿತ್ರ -
ಕೋಲ್ಕತ್ತಾ, ಏ. 28: ಜಾಗತಿಕವಾಗಿ ಕಚ್ಚಾ ತೈಲ ಬೆಲೆಗಳು ಏರಿಕೆಯಾಗುತ್ತಿದ್ದು, ಇದರ ಪರಿಣಾಮ ಭಾರತದ ಮೇಲೂ ಆಗಲಿದೆ ಎನ್ನಲಾಗುತ್ತಿದೆ. ಚುನಾವಣೆ ನಂತರ ಇಂಧನ ಬೆಲೆ ಏರಿಕೆ ಆಗಬಹುದು ಎಂಬ ಊಹಾಪೋಹಗಳ ನಡುವೆ ಏಪ್ರಿಲ್ 29ರಂದು ಪಶ್ಚಿಮ ಬಂಗಾಳದಲ್ಲಿ ಮತದಾನ ಮುಗಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು (petrol and diesel prices) ಹೆಚ್ಚಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ (Central Government) ಸ್ಪಷ್ಟಪಡಿಸಿದೆ.
ಜಾಗತಿಕ ತೈಲ ಮಾರುಕಟ್ಟೆ ಇನ್ನೂ ಅಸ್ಥಿರವಾಗಿರುವ ಮತ್ತು ಇಂಧನ ಚಿಲ್ಲರೆ ಮಾರಾಟಗಾರರು ಹೆಚ್ಚಿನ ನಷ್ಟವನ್ನು ಎದುರಿಸುತ್ತಿರುವ ನಡುವೆಯೇ ಈ ಭರವಸೆಯನ್ನು ನೀಡಲಾಗಿದೆ. ಬೆಲೆ ಏರಿಕೆ ಕುರಿತು ಹರಡಿದ ವದಂತಿಗಳಿಂದಾಗಿ ದೇಶದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಆಂಧ್ರ ಪ್ರದೇಶದಲ್ಲಿ ಜನರು ಭಯದಿಂದ ಇಂಧನ ತುಂಬಿಸಲು ಮುಗಿಬಿದ್ದಿದ್ದು, ಪೆಟ್ರೋಲ್ ಬಂಕ್‌ಗಳಲ್ಲಿ ಉದ್ದನೆಯ ಸಾಲು ಕಂಡುಬಂದವು.
ಭಾನುವಾರ (ಏ. 26) 400ಕ್ಕೂ ಹೆಚ್ಚು ಇಂಧನ ಪಂಪ್‌ಗಳಲ್ಲಿ ಇಂಧನ ಸಂಪೂರ್ಣವಾಗಿ ಖಾಲಿಯಾದ ಘಟನೆ ವರದಿಯಾಗಿದೆ. ಕೆಲವು ಕೇಂದ್ರಗಳಲ್ಲಿ ಬೇಡಿಕೆ ಶೇ. 30ರಿಂದ 33ರವರೆಗೆ ಹೆಚ್ಚಳ ಕಂಡಿದೆ ಎಂದು ತಿಳಿದುಬಂದಿದೆ. ಕೆಲವು ಸ್ಥಳಗಳಲ್ಲಿ ಜನರು ಭಯದಿಂದ ಇಂಧನ ಖರೀದಿಸುತ್ತಿರುವುದು ಕಂಡುಬಂದಿದೆ. ನಾವು ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ತಿಳಿಸಿದ್ದಾರೆ.
ಕತ್ತಲಲ್ಲಿ ಪಾಕಿಸ್ತಾನ; ಇಂಧನ ಬೆಲೆ ನಿಯಂತ್ರಿಸಲು ವಿದ್ಯುತ್ ಕಡಿತ ಘೋಷಣೆ
ಎಲ್ಲ ರಿಟೇಲ್ ಪೆಟ್ರೋಲ್ ಬಂಕ್‌ಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಸರಬರಾಜಿಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದ ಇಂಧನ ಲಭ್ಯತೆ ಖಚಿತವಾಗಿದ್ದು, ಸ್ಟಾಕ್ ಖಾಲಿಯಾಗುವ ಪರಿಸ್ಥಿತಿ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸುಜಾತಾ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕ ವದಂತಿಗಳಿಗೆ ಕಿವಿಗೊಡಬಾರದೆಂದು ಕೂಡ ಮನವಿ ಮಾಡಿದ್ದಾರೆ. ʼʼದಯವಿಟ್ಟು ಯಾರೂ ವದಂತಿ ನಂಬಬೇಡಿ. ಭಯದಿಂದ ಹೆಚ್ಚುವರಿ ಇಂಧನ ಖರೀದಿಸಬೇಡಿ. ಅಧಿಕೃತ ಮೂಲಗಳಿಂದಲೇ ಮಾಹಿತಿಯನ್ನು ಪಡೆಯಿರಿʼʼ ಎಂದು ಅವರು ವಿವರಿಸಿದ್ದಾರೆ.
ದೇಶದಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಹಾಗೂ ವಿಮಾನ ಇಂಧನ (ATF)ಗಳಿಗೆ ಸಾಕಷ್ಟು ಪ್ರಮಾಣದ ಸಂಗ್ರಹವಿದ್ದು, ಬೇಡಿಕೆಯನ್ನು ಪೂರೈಸಲು ಯಾವುದೇ ಕೊರತೆ ಇಲ್ಲ ಎಂದು ಸರ್ಕಾರ ತಿಳಿಸಿದೆ. ನಮ್ಮ ಬಳಿ ಎಲ್‌ಪಿಜಿ, ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಿದೆ. ಬೆಲೆಗಳು ಸ್ಥಿರವಾಗಿದ್ದು, ಯಾವುದೇ ದರ ಏರಿಕೆ ಆಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಇಂಧನ ಮಾರಾಟ ಮಾಡುತ್ತಿರುವುದರಿಂದ ಆರ್ಥಿಕ ಒತ್ತಡ ಹೆಚ್ಚುತ್ತಿದೆ. ಅಧಿಕಾರಿಗಳ ಪ್ರಕಾರ, ಈ ನಷ್ಟಗಳು ಬಹಳ ದೊಡ್ಡ ಮಟ್ಟದಲ್ಲಿದ್ದು, ದಿನಕ್ಕೆ ಸುಮಾರು 2,400 ಕೋಟಿ ರುಪಾಯಿ ನಷ್ಟವಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೂ ಮುನ್ನ ಶರ್ಮಾ, ತೈಲ ಕಂಪನಿಗಳು ಪೆಟ್ರೋಲ್‌ಗೆ ಪ್ರತಿ ಲೀಟರ್‌ಗೆ ಸುಮಾರು 20 ರುಪಾಯಿ ಹಾಗೂ ಡೀಸೆಲ್‌ಗೆ ಸುಮಾರು 100 ರುಪಾಯಿ ಪ್ರತಿ ಲೀಟರ್‌ಗೆ ನಷ್ಟ ಅನುಭವಿಸುತ್ತಿವೆ ಎಂದು ಹೇಳಿದ್ದಾರೆ.