ಟಿಎಂಸಿ ಭದ್ರಕೋಟೆಯ ಮೇಲೆ ಎಲ್ಲರ ಕಣ್ಣು: ಎರಡನೇ ಹಂತದ ಮತದಾನಕ್ಕೂ ಮುನ್ನ ಪಶ್ಚಿಮ ಬಂಗಾಳ ಸಂಪೂರ್ಣ ಮೌನ
ದೇಶವೇ ಈಗ ಟಿಎಂಸಿಯ ಭದ್ರಕೋಟೆಯಾಗಿರುವ ಪಶ್ಚಿಮ ಬಂಗಾಳದ ಕಡೆಗೆ ದೃಷ್ಟಿ ನೆಟ್ಟಿದೆ. ಎರಡನೇ ಹಂತದ ಮತದಾನಕ್ಕೂ ಮುನ್ನ ಪಶ್ಚಿಮ ಬಂಗಾಳದಲ್ಲಿ ಈಗ ಸಂಪೂರ್ಣ ಮೌನ ಆವರಿಸಿದೆ. ಮೊದಲ ಹಂತದ ಮತದಾನದಲ್ಲಿ ದಾಖಲೆ ಬರೆದ ಮೇಲೆ ಇದೀಗ ಎರಡನೇ ಹಂತದ ಮತದಾನದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಸಂಗ್ರಹ ಚಿತ್ರ -
ಕೋಲ್ಕತ್ತಾ: ಎರಡನೇ ಹಂತದ ಮಾತದಾನ (second phase of voting) ಪ್ರಚಾರ ಕಾರ್ಯ ಸೋಮವಾರ ಸಂಜೆ 6 ಗಂಟೆಗೆ ಕೊನೆಗೊಂಡ ಬಳಿಕ ಟಿಎಂಸಿಯ (TMC) ಭದ್ರಕೋಟೆಯಾಗಿರುವ ಪಶ್ಚಿಮ ಬಂಗಾಳದ (west bengal) ಕಡೆಗೆ ಎಲ್ಲರ ದೃಷ್ಟಿ ನೆಟ್ಟಿದೆ. ಬುಧವಾರ ನಡೆಯಲಿರುವ ಮತದಾನಕ್ಕೆ (Voting) ಪಶ್ಚಿಮ ಬಂಗಾಳ ಸಜ್ಜಾಗಿದ್ದು, ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಳ್ಳಲಿದೆ. ದಕ್ಷಿಣ ಬಂಗಾಳದ ಏಳು ಜಿಲ್ಲೆಗಳ 142 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಇದರಲ್ಲಿ ಉತ್ತರ ಮತ್ತು ದಕ್ಷಿಣ 24 ಪರಗಣಗಳು, ಕೋಲ್ಕತ್ತಾ ಮತ್ತು ಹೌರಾ ಸೇರಿವೆ. ಇವು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನ ಭದ್ರಕೋಟೆ ಎಂದು ಪರಿಗಣಿಸಲಾಗಿದೆ.
ಕಳೆದ ಏಪ್ರಿಲ್ 23 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ 16 ಜಿಲ್ಲೆಗಳ 152 ಕ್ಷೇತ್ರಗಳಲ್ಲಿ ಮತದಾನವಾಗಿದ್ದು, ದಾಖಲೆಯ ಶೇ. 93.19ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದ ಇತಿಹಾಸದಲ್ಲೇ ಇದು ಅತೀ ಹೆಚ್ಚಿನ ಮತದಾನವಾಗಿದೆ.
"ನಾವು ಸಂಸದರನ್ನಾಗಿ ಮಾಡಿದ್ದಕ್ಕೆ ನಿಮಗೆ ಮದುವೆಯಾಯಿತು": ರಾಘವ್ ಚಡ್ಡಾ ವಿರುದ್ಧ ಆಪ್ ವಾಗ್ದಾಳಿ
ರಾಜ್ಯದಲ್ಲಿ ನಡೆಸಿದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಸುಮಾರು 1.2 ಕೋಟಿ ಹೆಸರುಗಳನ್ನು ಅಳಿಸಿ ಹಾಕಲಾಗಿದೆ. ಈ ಪೈಕಿ 27 ಲಕ್ಷಕ್ಕೂ ಹೆಚ್ಚು ಮತದಾರರು ಎಲ್ಲಾ ಮಾನ್ಯ ದಾಖಲೆಗಳನ್ನು ಹೊಂದಿದ್ದು, ಮೇಲ್ಮನವಿ ನ್ಯಾಯಮಂಡಳಿಯ ತೀರ್ಪಿಗಾಗಿ ಕಾಯುತ್ತಿದ್ದಾರೆ. ಇದು ರಾಜ್ಯಾದ್ಯಂತ ಮತದಾರರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೊದಲ ಹಂತದಲ್ಲಿ ಶಾಂತಿಯುತ ಮತದಾನ ನಡೆದಿದೆ. ಮತದಾನದ ಸಮಯದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಕೇಂದ್ರ ಅರೆಸೈನಿಕ ಪಡೆಗಳು, ಪೊಲೀಸ್ ವೀಕ್ಷಕರನ್ನು ನಿಯೋಜಿಸಲಾಗಿತ್ತು. ಇದರಲ್ಲಿ ಕೋಲ್ಕತ್ತಾ ಪೊಲೀಸ್ ಮತ್ತು ಪಶ್ಚಿಮ ಬಂಗಾಳ ಪೊಲೀಸರ ಸಿಬ್ಬಂದಿ ಜೊತೆಗೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ಭಾರತ ಮೀಸಲು ಬೆಟಾಲಿಯನ್, ಇತರ ರಾಜ್ಯಗಳ ಸಶಸ್ತ್ರ ಪೊಲೀಸ್ ವಿಭಾಗಗಳು ಸೇರಿದಂತೆ ಕೇಂದ್ರ ಸಶಸ್ತ್ರ ಪಡೆಗಳ 2,407 ಕಂಪನಿಗಳು ಸೇರಿವೆ.
ಎರಡನೇ ಹಂತದ ಮತದಾನ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ 142 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಬ್ಬರು ಸೇರಿದಂತೆ 142 ಸಾಮಾನ್ಯ ವೀಕ್ಷಕರು ಮತ್ತು 95 ಪೊಲೀಸ್ ವೀಕ್ಷಕರನ್ನು ನಿಯೋಜಿಸಲಾಗಿದೆ. ಏಪ್ರಿಲ್ 23 ರಂದು ನಡೆದ ಮೊದಲ ಹಂತದಲ್ಲಿ 84 ಪೊಲೀಸ್ ವೀಕ್ಷಕರನ್ನು ನಿಯೋಜಿಸಲಾಗಿತ್ತು.
ಎರಡನೇ ಹಂತದಲ್ಲಿ, ಬೂತ್ ಮಟ್ಟದ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಮಾತ್ರವಲ್ಲದೆ ವಿಶೇಷವಾಗಿ ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್ ಉಪವಿಭಾಗದಲ್ಲಿ ಮತದಾರರಿಗೆ ಬೆದರಿಕೆಯೊಡ್ಡುವುದನ್ನು ತಡೆಯಲು ಹೆಚ್ಚಿನ ಗಮನ ಹರಿಸಲಾಗಿದೆ. ಯಾವುದೇ ರೀತಿಯ ದೂರುಗಳನ್ನು ಸ್ವೀಕರಿಸಲು ಸಹಾಯವಾಣಿಯನ್ನು ಕೂಡ ತೆರೆಯಲಾಗಿದೆ ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಚಾರದ ಕೊನೆಯ ದಿನವಾದ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ 24 ಪರಗಣದ ಜಗತ್‌ದಲ್‌ನಲ್ಲಿ ರಾಲಿ ನಡೆಸಿ, ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೋಲ್ಕತ್ತಾ ಉಪನಗರ ಬೆಹಾಲಾದಲ್ಲಿ ನಡೆದ ರೋಡ್ ಶೋನಲ್ಲಿ ಭಾಗವಹಿಸಿದರು.
ಟಿಎಂಸಿಯ ಭದ್ರಕೋಟೆಯಾದ ಪಶ್ಚಿಮ ಬಂಗಾಳದ ದಕ್ಷಿಣ ಕ್ಷೇತ್ರವನ್ನು ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದ್ದರೆ, ಮತ್ತೊಮ್ಮೆ ಬಂಗಾಳದಲ್ಲಿ ಅಧಿಕಾರ ಸ್ಥಾಪಿಸಲು ಟಿಎಂಸಿ ಸಿದ್ಧತೆ ನಡೆಸಿಕೊಂಡಿದೆ. ಕೋಲ್ಕತ್ತಾದ 11 ಸ್ಥಾನಗಳು, ಹೌರಾದ 16 ಸ್ಥಾನಗಳೊಂದಿಗೆ ಈ ನಾಲ್ಕು ಜಿಲ್ಲೆಗಳು ಬಂಗಾಳದ 294 ವಿಧಾನಸಭಾ ಸ್ಥಾನಗಳಲ್ಲಿ 91 ಸ್ಥಾನಗಳನ್ನು ಹೊಂದಿವೆ. ಇದು ಸದನದ ಸುಮಾರು ಮೂರನೇ ಒಂದು ಭಾಗವಾಗಿದೆ.
ಕೋಲ್ಕತ್ತಾ, ಹೌರಾ, ನಾಡಿಯಾ, ಉತ್ತರ ಮತ್ತು ದಕ್ಷಿಣ 24 ಪರಗಣಗಳು ಒಟ್ಟು 111 ಶಾಸಕರನ್ನು ವಿಧಾನಸಭೆಗೆ ಕಳುಹಿಸುತ್ತದೆ. ಇದು ಟಿಎಂಸಿಯ ಭದ್ರಕೋಟೆಯಾಗಿದೆ. 2021ರ ಚುನಾವಣೆಯಲ್ಲಿ ಬಿಜೆಪಿ ಒತ್ತಡದ ನಡುವೆ ಟಿಎಂಸಿ ಇಲ್ಲಿ 111 ಸ್ಥಾನಗಳಲ್ಲಿ 96 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ ಕೇವಲ 14 ಮತ್ತು ಐಎಸ್‌ಎಫ್ ಒಂದು ಸ್ಥಾನವನ್ನು ಗಳಿಸಿತ್ತು.
2024ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಬಿಜೆಪಿ 21ರಲ್ಲಿ ಮುನ್ನಡೆ ಸಾಧಿಸಿತು. ಟಿಎಂಸಿ 90 ಸ್ಥಾನಗಳನ್ನು ಉಳಿಸಿಕೊಂಡಿತ್ತು. ಬಿಜೆಪಿಯು ನಾಡಿಯಾ ಮತ್ತು ಉತ್ತರ 24 ಪರಗಣಗಳಲ್ಲಿ ಅಧಿಕಾರ ಉಳಿಸಿಕೊಂಡಿದ್ದರೆ ದಕ್ಷಿಣ 24 ಪರಗಣಗಳು, ಹೌರಾ ಮತ್ತು ಕೋಲ್ಕತ್ತಾ ದಕ್ಷಿಣದಲ್ಲಿ ಟಿಎಂಸಿ ಹಿಡಿತ ಸಾಧಿಸಿದೆ.