ಬಹಳ ದಿನಗಳ ಬಳಿಕ ಮಮತಾ ಬ್ಯಾನರ್ಜಿಗೆ ತುಸು ರಿಲೀಫ್; ಘರ್ ವಾಪಸಿ ಘೋಷಿಸಿದ ತೃಣಮೂಲ ಕಾಂಗ್ರೆಸ್‌ನ ಬಂಡಾಯ ಶಾಸಕ
Ghar Wapsi: ರಿತಬ್ರತ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣಕ್ಕೆ ಸೇರಿದ ಕೆಲವು ತಿಂಗಳ ನಂತರ ಇದೀಗ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಮರಳುವುದಾಗಿ ಶಾಸಕ ಕಾಸೆಮ್ ಸಿದ್ದಿಕಿ ಘೋಷಿಸಿದ್ದಾರೆ. ಬಂಗಾಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕತ್ವ ಕುರಿತು ಟಿಎಂಸಿಯೊಳಗೆ ದೊಡ್ಡ ಜಗಳ ನಡೆಯುತ್ತಿರುವ ಮಧ್ಯೆಯೇ ಇದೀಗ ಬಂಡಾಯ ಶಾಸಕ ಮರಳಿ ಗೂಡು ಸೇರಿದ್ದು, ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಕಾಸೆಂ ಸಿದ್ದಿಕಿ ಜತೆ ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ) -
ಕೋಲ್ಕತಾ, ಆ. 24: ವಿರೋಧ ಪಕ್ಷದ ನಾಯಕ ರಿತಬ್ರತ ಬ್ಯಾನರ್ಜಿ (Ritabrata Banerjee) ನೇತೃತ್ವದ ಬಂಡಾಯ ಬಣಕ್ಕೆ ಸೇರಿದ ಕೆಲವು ತಿಂಗಳ ನಂತರ ಮಮತಾ ಬ್ಯಾನರ್ಜಿ ನೇತೃತ್ವದ ಮೂಲ ತೃಣಮೂಲ ಕಾಂಗ್ರೆಸ್‌ಗೆ ಮರಳುವುದಾಗಿ ಶಾಸಕ ಕಾಸೆಮ್ ಸಿದ್ದಿಕಿ ಘೋಷಿಸಿದ್ದಾರೆ (Rebel MLA returns to TMC). ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಅಮ್ದಂಗಾದ ಟಿಎಂಸಿ ಶಾಸಕ ಸಿದ್ದಿಕಿ, ತಾವು ಯಾವಾಗಲೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರೊಂದಿಗೆ ಇರುವುದಾಗಿ ಮತ್ತು ಅವರ ನಾಯಕತ್ವದಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ.
ಬಂಡಾಯ ಬಣವನ್ನು ತೊರೆಯುವ ತಮ್ಮ ನಿರ್ಧಾರವನ್ನು ವಿವರಿಸಿದ ಅವರು, ಈ ಬಣವು ಬ್ಯಾನರ್ಜಿ ಅವರ ನಾಯಕತ್ವದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಮಗೆ ತಿಳಿಸಲಾಗಿತ್ತು. ಆದರೆ ನಂತರ ಅದರ ಕಾರ್ಯಚಟುವಟಿಕೆಯಲ್ಲಿ ಮಮತಾ ಬ್ಯಾನರ್ಜಿ ಅವರ ಪಾತ್ರವಿಲ್ಲ ಎಂದು ಅರಿತುಕೊಂಡಿದ್ದಾಗಿ ಹೇಳಿದರು. “ನಮಗೆ (ದಾಖಲೆಗೆ) ಸಹಿ ಹಾಕಲು ಹೇಳಲಾಯಿತು. ಆ ಸಹಿಯು ದೀದಿಯನ್ನು ತಲುಪುತ್ತದೆ ಎಂದು ಹೇಳಲಾಗಿತ್ತು. ನಾವು ದೀದಿಯೊಂದಿಗೆ ಇದ್ದೇವೆ ಮತ್ತು ಅವರೊಂದಿಗೆ ಇರುತ್ತೇವೆ. ನಾವು ಒಟ್ಟಿಗೆ ಇರುತ್ತೇವೆ ಎಂದು ಹೇಳಿದ್ದೆವು” ಎಂಬುದಾಗಿ ಸಿದ್ದಿಕಿ ತಿಳಿಸಿದರು.
“ನಾವು ಸಭೆಗೆ ಹೋದಾಗ, ದೀದಿಯವರ ಯಾವುದೇ ಉಲ್ಲೇಖವಿರಲಿಲ್ಲ. ನಮಗೆ ಅವರೇ ಎಲ್ಲವೂ. ನಮಗೆ ದೀದಿ ಮಾತ್ರ ಗೊತ್ತು. ಅವರೇ ನಮಗೆ ಟಿಕೆಟ್ ನೀಡಿ ವಿಧಾನಸಭೆಗೆ ಕಳುಹಿಸಿದ್ದು. ನಾವು ಅವರ ಫೋಟೊ ತೋರಿಸಿ ಮತ ಕೇಳಿದ್ದೆವು. ಜನರು ಅವರ ಮುಖ ನೋಡಿಯೇ ನಮಗೆ ಮತ ಹಾಕಿದ್ದಾರೆ. ನಾವು ದೀದಿ ಜತೆಗಿದ್ದೇವೆ ಮತ್ತು ಅವರೊಂದಿಗೇ ಇರುತ್ತೇವೆ” ಎಂದು ಅವರು ವಿವರಿಸಿದರು.
ʼʼಮಮತಾ ಬ್ಯಾನರ್ಜಿ ಬೆಂಗಾವಲು ಪಡೆ ಮೇಲಿನ ದಾಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲʼʼ: ಅರ್ಜುನ ಸಿಂಗ್ ಸ್ಪಷ್ಟನೆ
ಪೀರ್‌ಜಾದಾ ಎಂದೇ ಜನಪ್ರಿಯರಾದ ಮತ್ತು ಹೂಗ್ಲಿ ಜಿಲ್ಲೆಯ ಪ್ರಭಾವಿ ಫುರ್ಫುರಾ ಷರೀಫ್ ದರ್ಗಾ ಮೂಲದವರಾದ ಸಿದ್ದಿಕಿ ಮುಸ್ಲಿಂ ಸಮುದಾಯದ ಪ್ರಭಾವ ಹೊಂದಿದ್ದಾರೆ. ಅವರು ಕಳೆದ ವರ್ಷ ಟಿಎಂಸಿ ಸೇರಿದ್ದರು. ತರುವಾಯ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಅವರನ್ನು ಆಮ್ದಂಗಾ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಅವರು ಜಯ ಗಳಿಸಿದ್ದರು.
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕತ್ವದ ಕುರಿತು ಟಿಎಂಸಿಯೊಳಗೆ ದೊಡ್ಡ ರಾಜಕೀಯ ಜಗಳ ನಡೆಯುತ್ತಿರುವ ಮಧ್ಯೆಯೇ ಇದೀಗ ಬಂಡಾಯ ಶಾಸಕ ಮರಳಿ ಗೂಡು ಸೇರಿದ್ದಾರೆ.
ಬಹುಮತ ಸಾಬೀತುಪಡಿಸುವ ಸವಾಲನ್ನು ಸ್ವೀಕರಿಸಲು ಟಿಎಂಸಿ ಸಿದ್ಧವಾಗಿದೆ ಎಂದು ಶಾಸಕ ಕುನಾಲ್ ಘೋಷ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ ಅದನ್ನು ರಹಸ್ಯ ಮತದಾನದ ಮೂಲಕ ನಡೆಸಬೇಕೆಂದು ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಬಂಡಾಯ ಬಣವು ಟಿಎಂಸಿಯನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.