ನೀಟ್ ಪ್ರತಿಭಟನೆ: ಮಹಿಳಾ ದೌರ್ಜನ್ಯ ದೂರುಗಳಿಗೆ ಆದ್ಯತೆ, ಮಧ್ಯಂತರ ವರದಿ ಸಲ್ಲಿಸಲು ಸಮಿತಿಗೆ ಸುಪ್ರೀಂ ಕೋರ್ಟ್ ಸೂಚನೆ
NEET Protests: ದೆಹಲ್ಲಿ ಆಯೋಜಿಸಿದ್ದ ನೀಟ್ ಹೋರಾಟದ ವೇಳೆ ಮಹಿಳಾ ಪ್ರತಿಭಟನಾಕಾರರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಆರೋಪಗಳ ದೂರುಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ, ತಕ್ಷಣ ಮಧ್ಯಂತರ ವರದಿ ಸಲ್ಲಿಸುವಂತೆ ಉನ್ನತ ಮಟ್ಟದ ತನಿಖಾ ಸಮಿತಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ದೆಹಲಿಯಲ್ಲಿ ನಡೆದ ನೀಟ್ ಪ್ರತಿಭಟನೆ (ಸಂಗ್ರಹ ಚಿತ್ರ) -
ನವದೆಹಲಿ, ಆ. 24: ಜಂತರ್-ಮಂತರ್‌ನಲ್ಲಿ ಆಯೋಜಿಸಿದ್ದ ನೀಟ್ ಪ್ರತಿಭಟನೆ (Neet Protest) ವೇಳೆ ಪೊಲೀಸರ ದೌರ್ಜನ್ಯದ ಆರೋಪಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್(Supreme Court) ರಚಿಸಿರುವ ಉನ್ನತ ಮಟ್ಟದ ತನಿಖಾ ಸಮಿತಿಯು ಮಹಿಳಾ ಪ್ರತಿಭಟನಾಕಾರರು ಎದುರಿಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಹಾಗೂ ಕಿರುಕುಳದ ದೂರುಗಳನ್ನು ಆದ್ಯತೆಯ ಮೇರೆಗೆ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠವು, ಈ ವಿಚಾರ ಈಗಾಗಲೇ ಸಮಿತಿಯ ಪರಿಗಣನೆಯಲ್ಲಿದೆ ಎಂದು ತಿಳಿಸಿತು. ಮಹಿಳಾ ಪ್ರತಿಭಟನಾಕಾರರ ಮೇಲಿನ ಲೈಂಗಿಕ ದೌರ್ಜನ್ಯದ ದೂರುಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ, ಕೂಡಲೇ ಮಧ್ಯಂತರ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ ಎಂದು ಸಿಜೆಐ ಹೇಳಿದರು.
ಜುಲೈ 20ರಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ನಡೆದಿದೆ ಎಂಬ ಆರೋಪಗಳ ಕುರಿತು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಹಿರಿಯ ವಕೀಲೆ ಶೋಭಾ ಗುಪ್ತಾ ಮನವಿ ಮಾಡಿದ್ದರು.
ಸಂತ್ರಸ್ತರು ತಮ್ಮ ದೂರುಗಳನ್ನು ನೇರವಾಗಿ ಸಮಿತಿಗೆ ಸಲ್ಲಿಸಲು ಇ-ಮೇಲ್ ವಿಳಾಸ ಅಥವಾ ನಿರ್ದಿಷ್ಟ ಅಧಿಕಾರಿಯನ್ನು ನೇಮಿಸುವಂತೆ ಸಲಹೆ ನೀಡಿದರು. ಇದರಿಂದ ದೂರು ನೇರವಾಗಿ ಸಮಿತಿಗೆ ತಲುಪಿ, ಪ್ರಕರಣಗಳನ್ನು ಪ್ರತ್ಯೇಕವಾಗಿ ಹಾಗೂ ತ್ವರಿತವಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನೀಟ್-ಯುಜಿ ಮರುಪರೀಕ್ಷೆ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದೇನು?
ಜುಲೈ 20ರ ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಮತ್ತು ಅಶ್ರುವಾಯು ಬಳಸಿ ಪ್ರತಿಭಟನಾಕಾರರನ್ನು ಚದುರಿಸಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಅತಿಯಾದ ಬಲಪ್ರಯೋಗ ಮಾಡಿದ್ದಾರೆಂಬ ಆರೋಪಗಳ ಜತೆಗೆ, ಪ್ರತಿಭಟನಾಕಾರರಿಂದಲೂ ಪೊಲೀಸ್ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಮೇಲೆ ಹಿಂಸಾಚಾರ ನಡೆದಿದೆ ಎಂಬ ಆರೋಪಗಳನ್ನು ಪರಿಶೀಲಿಸಲು ಆಗಸ್ಟ್ 20ರಂದು ಸುಪ್ರೀಂ ಕೋರ್ಟ್ ಐವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು.
ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ನೇತೃತ್ವದ ಸಮಿತಿಯಲ್ಲಿ ಮಾಜಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರವಿ ಶಂಕರ್ ಝಾ, ದೆಹಲಿ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಶಾಲಿಂದರ್ ಕೌರ್, ಸಿಬಿಐ ಮಾಜಿ ನಿರ್ದೇಶಕ ರಿಷಿ ಕುಮಾರ್ ಶುಕ್ಲಾ ಹಾಗೂ ಮೇಘಾಲಯ ನಿವೃತ್ತ ಡಿಜಿಪಿ ಎಲ್.ಆರ್. ಬಿಷ್ಣೋಯ್ ಇದ್ದಾರೆ.
ನೀಟ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಜೂನ್ 20ರಂದು ಜಂತರ್ ಮಂತರ್‌ನಲ್ಲಿ ಆರಂಭವಾಗಿತ್ತು. ಪ್ರತಿಭಟನೆ ಹಲವು ನಗರಗಳಿಗೆ ವ್ಯಾಪಿಸಿದ್ದು, ಜುಲೈ 20ರಂದು ಸಂಸತ್ ಮಾರ್ಚ್ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದಿತ್ತು. ಜುಲೈ 25ರಂದು ಪ್ರತಿಭಟನೆ ಅಂತ್ಯಗೊಂಡಿತ್ತು.