ಬಂಡಾಯ ಸಂಸದರ ವಿರುದ್ಧ ಸಮರ ಸಾರಿದ ಟಿಎಂಸಿ; ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧಾರ: 20 ಎಂಪಿಗಳ ಅನರ್ಹತೆಗೆ ಕೌಂಟ್‌ಡೌನ್!
TMC: ಪಕ್ಷದಿಂದ ಬಂಡಾಯವೆದ್ದ 20 ಸಂಸದರ ವಿರುದ್ಧ ಕ್ರಮ ಕೈಗೊಳ್ಳಲು ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನಿರ್ಧರಿಸಿದೆ. ಬಂಡಾಯ ಎದ್ದಿರುವ ಸಂಸದರ ಅನರ್ಹತೆ ಕೋರಿ ಸಲ್ಲಿಸಿರುವ ಅರ್ಜಿಗಳ ಮೇಲೆ ಲೋಕಸಭೆ ಸ್ಪಿಕರ್ ಓಂ ಬಿರ್ಲಾ ತಕ್ಷಣ ತೀರ್ಮಾನ ಕೈಗೊಳ್ಳದಿದ್ದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಪಕ್ಷ ತಿಳಿಸಿದೆ.
ಅಭಿಷೇಕ್ ಬ್ಯಾನರ್ಜಿ ಮತ್ತು ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ) -
ಕೋಲ್ಕತಾ, ಆ. 13: ಪಕ್ಷದಿಂದ ಬಂಡಾಯವೆದ್ದು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದತ್ತ ವಾಲಿರುವ 20 ಸಂಸದರ ವಿರುದ್ಧ ಕ್ರಮ ಕೈಗೊಳ್ಳಲು ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್ (Trinamool Congress) ನಿರ್ಧರಿಸಿದೆ. ಬಂಡಾಯ ಎದ್ದಿರುವ ಸಂಸದರ ಅನರ್ಹತೆ ಕೋರಿ ಸಲ್ಲಿಸಿರುವ ಅರ್ಜಿಗಳ ಮೇಲೆ ಲೋಕಸಭೆ ಸ್ಪಿಕರ್ ಓಂ ಬಿರ್ಲಾ ತಕ್ಷಣ ತೀರ್ಮಾನ ಕೈಗೊಳ್ಳದಿದ್ದಲ್ಲಿ, ಮುಂದಿನ 10ರಿಂದ 15 ದಿನಗಳಲ್ಲಿ ಸುಪ್ರೀಂ ಕೋರ್ಟ್ (Supreme Court) ಮೆಟ್ಟಲೇರುವುದಾಗಿ ಪಕ್ಷ ತಿಳಿಸಿದೆ.
ಪಕ್ಷದ ಲೋಕಸಭಾ ನಾಯಕ ಹಾಗೂ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಬುಧವಾರ ಬಿರ್ಲಾ ಅವರನ್ನು ಬೇಟಿಯಾಗಿ, ಶೀಘ್ರ ನಿರ್ಧಾರ ತೆಗೆದುಕೊಳ್ಳುವಂತೆ ಕೋರಿದರು. ಕಾನೂನು ಮತ್ತು ನ್ಯಾಯಾಂಗ ನಿರ್ದೇಶನಗಳ ಪ್ರಕಾರ ನಿಗದಿತ ಅವಧಿಯೊಳಗೆ ಸ್ಪೀಕರ್ ಕ್ರಮ ಕೈಗೊಳ್ಳಲು ವಿಫಲರಾದರೆ, ತಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಕೆ ನೀಡಿದರು.
ಬಂಡಾಯ ಸಂಸದರ ಬಗ್ಗೆ ಟಿಎಂಸಿ ನಾಯಕ ಅಭಿಷೇಕ್ ಮಾತು:
The Hon’ble Speaker has been sitting on critical matters concerning the AITC and a group of TRAITOR MPs who have now rebranded themselves as NCPI MPs - a party even their core voters have NOT HEARD OF!
— All India Trinamool Congress (@AITCofficial) August 12, 2026
If the Hon’ble Speaker continues this shameless delay and dithering, we will… pic.twitter.com/TuK1GaHzt2
ಬಂಡಾಯ ಸಂಸದರು ಟಿಎಂಸಿ ತೊರೆದಿರುವುದೇಕೆ?
ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್ ಸೇರಿ 20 ಲೋಕಸಭಾ ಸಂಸದರು ಪಕ್ಷದ ವಿರುದ್ಧ ಬಂಡಾಯ ಎದ್ದು, ಎನ್‌ಸಿಪಿಐ ಪಕ್ಷದೊಂದಿಗೆ ವಿಲೀನಗೊಳ್ಳುವುದಾಗಿ ಘೋಷಿಸಿದ್ದಾರೆ. ಟಿಎಂಸಿಯ ಒಟ್ಟು 28 ಸಂಸದರಲ್ಲಿ ತಾವು ಮೂರನೇ ಎರಡರಷ್ಟು ಭಾಗಕ್ಕಿಂತ ಹೆಚ್ಚಿದ್ದೇವೆ ಎಂದು ಹಕ್ಕು ಸಾಧಿಸಿರುವ ಇವರು, ಸಂಸತ್ತಿನಲ್ಲಿ ತಮಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಕೋರಿದ್ದಾರೆ. ಲೋಕಸಭೆಯ ಅಧಿಕೃತ ದಾಖಲೆಗಳಲ್ಲಿ ಇಂದಿಗೂ ಟಿಎಂಸಿ ಸದಸ್ಯರೆಂದೇ ಕರೆಯಲ್ಪಡುವ ಇವರು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸಭೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದ್ದಾರೆ.
ಟಿಎಂಸಿಗೆ ಮತ್ತೊಂದು ಆಘಾತ; ಪಕ್ಷಕ್ಕೆ ನೇತಾಜಿ ಕುಟುಂಬದ ಚಂದ್ರಕುಮಾರ್ ಬೋಸ್ ಗುಡ್‌ಬೈ
ಮತ್ತೊಂದೆಡೆ, ಈ ನಡೆಯನ್ನು ಕಾನೂನುಬಾಹಿರ ಎಂದು ಪ್ರಶ್ನಿಸಿರುವ ಟಿಎಂಸಿ, ಬಂಡಾಯ ಸಂಸದರು ಮತ್ತೊಂದು ಪಕ್ಷಕ್ಕೆ ಸೇರುವ ಮೂಲಕ ತಮ್ಮ ಸದಸ್ಯತ್ವವನ್ನು ಸ್ವಯಂಪ್ರೇರಿತವಾಗಿ ತೊರೆದಿದ್ದಾರೆ. ವಿಲೀನಕ್ಕೆ ಪಕ್ಷಾಂತರ ವಿರೋಧಿ ಕಾಯ್ದೆಯಡಿ ಯಾವುದೇ ರಕ್ಷಣೆ ಸಿಗುವುದಿಲ್ಲ ಎಂದು ವಾದಿಸಿದೆ. ಜೂನ್ 19ರಂದೇ 20 ಬಂಡಾಯ ಸಂಸದರ ಅನರ್ಹತೆಗೆ ಆಗ್ರಹಿಸಿ ಲೋಕಸಭಾ ಸ್ಪೀಕರ್‌ಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅವುಗಳು ಇನ್ನೂ ಇತ್ಯರ್ಥವಾಗದೇ ಬಾಕಿ ಉಳಿದಿವೆ. ಜತೆಗೆ ಲೋಕಸಭೆಯಲ್ಲಿ ಟಿಎಂಸಿ ಸಂಸದರ ಆಸನ ಸಂಖ್ಯೆಗಳಲ್ಲಿ ಮಾಡಲಾದ ಬದಲಾವಣೆಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿದೆ.
ಪ್ರತ್ಯೇಕ ಆಸನ ವಿವಾದ
ಸಂಸತ್ತಿನಲ್ಲಿ ಬಂಡಾಯ ಸಂಸದರ ಸ್ಥಾನಮಾನ ಮತ್ತು ಅವರಿಗೆ ನೀಡಲಾಗಿರುವ ಆಸನ ವ್ಯವಸ್ಥೆಯ ಕುರಿತು ಈಗ ತೀವ್ರ ವಿವಾದ ಎದ್ದಿದೆ. ಬಂಡಾಯ ಎದ್ದಿರುವ ಸಂಸದರನ್ನು ಈವರೆಗೆ ಅಧಿಕೃತವಾಗಿ ಪ್ರತ್ಯೇಕ ಗುಂಪು ಎಂದು ಏಕೆ ಗುರುತಿಸಿಲ್ಲ ಹಾಗೂ ಅದಕ್ಕೆ ತಕ್ಕಂತೆ ನಡೆಸಿಕೊಳ್ಳುತ್ತಿಲ್ಲ ಎಂದು ಅಭಿಷೇಕ್ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. "ಅವರನ್ನು ಎನ್‌ಸಿಪಿಐ ಪಕ್ಷವೆಂದು ಗುರುತಿಸುವುದಿದ್ದರೆ ಆ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಲಿ. ಆದರೆ ಅವರಿಗೆ ಅಧಿಕೃತ ಮಾನ್ಯತೆಯನ್ನೂ ನೀಡದೆ, ಸಂಸತ್ತಿನಲ್ಲಿ ಅವರು ಮಾತನಾಡುವ ಸಮಯವನ್ನು ಮಾತ್ರ ನಮ್ಮ ಟಿಎಂಸಿ ಪಕ್ಷಕ್ಕೆ ನಿಗದಿಯಾದ ಸಮಯದಿಂದ ಕಡಿತಗೊಳಿಸುತ್ತಿರುವುದು ಸರಿಯಲ್ಲ" ಎಂದು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಟಿಎಂಸಿ ಬಂಡಾಯ ನಾಯಕರಿಗೆ ಡೋಂಟ್ ಕೇರ್ ಎಂದ ಮಮತಾ ಬ್ಯಾನರ್ಜಿ
ಇದಲ್ಲದೆ ಜುಲೈ 18ರಂದು ಲೋಕಸಭೆ ಸಚಿವಾಲಯ ಹೊರಡಿಸಿದ ಸುತ್ತೋಲೆಯಲ್ಲಿ ಟಿಎಂಸಿಯ 28 ಸಂಸದರ ವಿಭಾಗ ಮತ್ತು ಆಸನ ಸಂಖ್ಯೆಗಳನ್ನು ಬದಲಾಯಿಸಿರುವುದಕ್ಕೆ ಪಕ್ಷ ವಿರೋಧ ವ್ಯಕ್ತಪಡಿಸಿದೆ. ಏಕೆಂದರೆ, ಅದೇ ದಿನ ಹೊರಡಿಸಲಾದ ಮತ್ತೊಂದು ಸುತ್ತೋಲೆಯಲ್ಲಿ ಅಭಿಷೇಕ್ ಬ್ಯಾನರ್ಜಿ ನಾಯಕತ್ವದ ಟಿಎಂಸಿಯನ್ನು 28 ಸಂಸದರನ್ನು ಹೊಂದಿರುವ ಏಕೈಕ ಸಂಸದೀಯ ಪಕ್ಷವೆಂದು ಉಲ್ಲೇಖಿಸಲಾಗಿತ್ತು. ಇನ್ನೊಂದೆಡೆ, ಮುಂಗಾರು ಅಧಿವೇಶನಕ್ಕೂ ಮುನ್ನ ಬಂಡಾಯ ಸಂಸದರು ಸ್ಪೀಕರ್ ಓಂ ಬಿರ್ಲಾರನ್ನು ಭೇಟಿಯಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ, ಎನ್‌ಸಿಪಿಐ ಸಂಸದೀಯ ಗುಂಪಿಗೆ ಮಾನ್ಯತೆ ನೀಡುವಂತೆ ಹಾಗೂ ಸುದೀಪ್ ಬಂಡೋಪಾಧ್ಯಾಯ ಅವರನ್ನು ಸಭಾ ನಾಯಕನ್ನಾಗಿ ಮತ್ತು ಕಾಕೋಲಿ ಘೋಷ್ ದಸ್ತಿದಾರ್‌ನ್ನು ಮುಖ್ಯ ಸಚೇತಕರಾಗಿ ನೇಮಿಸುವಂತೆ ಮನವಿ ಮಾಡಿದ್ದರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.