ರಾಮ ಮಂದಿರ ದೇಣಿಗೆ ಕಳವು ಪ್ರಕರಣದ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ: 12,000 ರುಪಾಯಿ ಸಂಬಳವಿದ್ದರೂ 25 ಲಕ್ಷ ರುಪಾಯಿಯ ಮನೆ ಕಟ್ಟಿಸಿದ ಲವಕುಶ್ ಮಿಶ್ರಾ!
Ayodhya Ram Mandir Donation Theft Case: ಸರಿಸುಮಾರು 1,000 ಚದರ ಅಡಿ ವಿಸ್ತೀರ್ಣದಲ್ಲಿ ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳವು ಆರೋಪಿ ಲವ್‌ಕುಶ್ ಮಿಶ್ರಾ ಎರಡು ಅಂತಸ್ತಿನ ಮನೆಯನ್ನು ನಿರ್ಮಿಸುತ್ತಿದ್ದಾನೆ. ಕಟ್ಟಡವು ಬಹುತೇಕ ಪೂರ್ಣಗೊಂಡಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಯಿತು ಎಂದು ಮೂಲಗಳು ತಿಳಿಸಿವೆ.
ಲವಕುಶ್ ಮಿಶ್ರಾ ಮತ್ತು ನಿರ್ಮಾಣ ಹಂತದಲ್ಲಿರುವ ಮನೆ -
ಲಖನೌ, ಜೂ. 29: ರಾಮ ಮಂದಿರದ ದೇಣಿಗೆ ಹಣ ಕಳ್ಳತನದ ಆರೋಪದ (Ayodhya Ram Mandir Donation Theft Case) ಮೇಲೆ ಬಂಧಿತನಾಗಿರುವ ಲವಕುಶ್ ಮಿಶ್ರಾ ದೇವಾಲಯದ ಟ್ರಸ್ಟ್‌ನ ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ನಿವೇಶನವೊಂದನ್ನು ಖರೀದಿಸಿ, ಲಕ್ಷಾಂತರ ರುಪಾಯಿ ಮೌಲ್ಯದ ಮನೆಯನ್ನು ನಿರ್ಮಿಸಲು ಪ್ರಾರಂಭಿಸಿರುವ ವಿಚಾರ ಬೆಳಕಿಗೆ ಬಂದಿದೆ. ದೇವಾಲಯದ ನಗದು ಎಣಿಕೆ ಸಿಬ್ಬಂದಿಯಾಗಿದ್ದ ಮಿಶ್ರಾನ ಹುದ್ದೆಗೆ ಹೋಲಿಸಿದರೆ, ಹಣಕಾಸು ವಹಿವಾಟುಗಳು ಅನುಮಾನ ಹುಟ್ಟಿಸುವಂತಿದೆ. ಆಸ್ತಿ ಗಳಿಕೆಯ ಬಗ್ಗೆ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಈ ವಿವರಗಳು ಹೊರಬಂದಿವೆ.
ಸುಮಾರು ಒಂದು ವರ್ಷದ ಹಿಂದೆ ಲವಕುಶ್ ಮಿಶ್ರಾ ರಾಮ ಮಂದಿರದ ಸಿಬ್ಬಂದಿಯಾಗಿ ಸೇರಿದ ನಂತರ, ಆತನ ಪತ್ನಿ ಸುಪ್ರಿಯಾ ಮಿಶ್ರಾ ಹೆಸರಿನಲ್ಲಿ ಈ ಜಾಗವನ್ನು ಖರೀದಿಸಲಾಗಿದೆ ಎಂದು ತಿಳಿದುಬಂದಿದೆ. ಅಯೋಧ್ಯೆ-ಲಖನೌ ಹೆದ್ದಾರಿಯ ಸಮೀಪವಿರುವ ಸಹದತ್‌ಗಂಜ್-ಬನ್‌ಬೀರ್‌ಪುರ ಪ್ರದೇಶದಲ್ಲಿರುವ ಈ ನಿವೇಶನವನ್ನು 8.8 ಲಕ್ಷ ರುಪಾಯಿಗೆ ಖರೀದಿಸಲಾಗಿತ್ತು. ಪ್ರಸ್ತುತ ಈ ಭೂಮಿ ಮತ್ತು ಅಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಮಾರುಕಟ್ಟೆ ಮೌಲ್ಯ ಸುಮಾರು 25 ಲಕ್ಷ ರುಪಾಯಿ ಎಂದು ಅಂದಾಜಿಸಲಾಗಿದೆ.
ಸರಿಸುಮಾರು 1,000 ಚದರ ಅಡಿ ವಿಸ್ತೀರ್ಣದ ಈ ಜಾಗದಲ್ಲಿ ಎರಡು ಅಂತಸ್ತಿನ ಮನೆಯನ್ನು ನಿರ್ಮಿಸಲಾಗುತ್ತಿದೆ. ಕಟ್ಟಡವು ಬಹುತೇಕ ಪೂರ್ಣಗೊಂಡಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ನಿರ್ಮಾಣದ ಆರಂಭಿಕ ಹಂತಗಳಲ್ಲಿ ಮಿಶ್ರಾ ಮತ್ತು ಆತನ ಕುಟುಂಬ ಸದಸ್ಯರು ಆಗಾಗ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು. ಕೆಲಸ ಪ್ರಾರಂಭವಾಗುವ ಮೊದಲು ನಡೆದ ಭೂಮಿ ಪೂಜೆ ಸಮಾರಂಭದಲ್ಲಿಯೂ ಭಾಗವಹಿಸಿದ್ದರು ಎಂದು ಸ್ಥಳೀಯರು ಹೇಳಿದರು.
3 ತಿಂಗಳ ಹಿಂದೆಯೇ ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳವು ಪತ್ತೆ ಹಚ್ಚಿದ್ದ ಎಸ್‌ಬಿಐ
ಆಸ್ತಿಯು ಮಿಶ್ರಾ ಅವರ ಕುಟುಂಬಕ್ಕೆ ಸೇರಿದ್ದು ಎಂದು ನೆರೆಹೊರೆಯವರಾದ ರಾಜ್‌ಕುಮಾರ್ ಪಾಂಡೆ ಹೇಳಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಮನೆ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಆಗಾಗ ಅವರು ಇಲ್ಲಿಗೆ ಬರುತ್ತಿದ್ದರು ಎಂದು ಪಾಂಡೆ ಹೇಳಿದರು.
ಇತ್ತೀಚಿನವರೆಗೂ ಕಾರ್ಮಿಕರು ಆ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ ಬೆಳಕಿಗೆ ಬಂದ ನಂತರ ಮತ್ತು ಮಿಶ್ರಾ ಬಂಧನದ ಬಳಿಕ ನಿರ್ಮಾಣ ಚಟುವಟಿಕೆ ಹಠಾತ್ತನೆ ನಿಂತುಹೋಗಿವೆ. ಕೆಲವು ದಿನಗಳ ಹಿಂದಿನವರೆಗೂ ಕಾರ್ಮಿಕರು ಇಲ್ಲಿದ್ದರು. ಜೂನ್ 28ರಿಂದ ಕಾರ್ಮಿಕರು ಅಥವಾ ಯಾವುದೇ ಕುಟುಂಬ ಸದಸ್ಯರುಕಾಣಿಸಿಕೊಂಡಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.
ಅಂದಹಾಗೆ, ಮಿಶ್ರಾ ರಾಮ ಮಂದಿರ ಟ್ರಸ್ಟ್‌ನ ಸಿಬ್ಬಂದಿಯಾಗಿದ್ದಾಗ ಕೇವಲ 12,000ರಿಂದ 15,000 ರುಪಾಯಿ ಮಾಸಿಕ ವೇತನ ಪಡೆಯುತ್ತಿದ್ದ ಎನ್ನಲಾಗಿದೆ. ಅಲ್ಲದೆ ಮಿಶ್ರಾ ಬೈಕ್‌ನಲ್ಲಿ ಓಡಾಡಿಕೊಂಡಿದ್ದ. ಕಾಣಿಕೆ ಮತ್ತು ನಗದು ಎಣಿಸುವ ಸಿಬ್ಬಂದಿಯಲ್ಲಿ ಒಬ್ಬನಾಗಿದ್ದ 27 ವರ್ಷದ ಲವ್‌ಕುಶ್ ಮಿಶ್ರಾ ಮತ್ತು ಇತರ ಆರೋಪಿಗಳನ್ನು ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇತ್ತೀಚಿನ ದಾಳಿಯ ನಂತರ ತನಿಖಾಧಿಕಾರಿಗಳು ಆರೋಪಿಗಳ ಮನೆಯಿಂದ ಸುಮಾರು 12 ಲಕ್ಷ ರುಪಾಯಿ ವಶಪಡಿಸಿಕೊಂಡಿದ್ದಾರೆ.