ಮಹಾರಾಷ್ಟ್ರದಲ್ಲಿ ಭಾರಿ ಪ್ರವಾಹ, ರಸ್ತೆ ಸಂಪರ್ಕ ಕಡಿತ; ಮರದ ಬಾಗಿಲನ್ನೇ ಸ್ಟ್ರೆಚರ್‌ನಂತೆ ಬಳಸಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
Maharashtra Flood: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ಸ್ಟ್ರೆಚರ್ ಆಗಿ ಬಾಗಿಲನ್ನು ಗ್ರಾಮಸ್ಥರು ಬಳಸಿರುವ ಮನಮಿಡಿಯುವ ಘಟನೆ ನಡೆದಿದೆ. ಬೇರೆ ದಾರಿ ಕಾಣದೆ ಮನೆಯ ಬಾಗಿಲನ್ನೇ ತಾತ್ಕಾಲಿಕ ಸ್ಟ್ರೆಚರ್ ಆಗಿ ಪರಿವರ್ತಿಸಲಾಗಿದೆ.
ಬಾಗಿಲನ್ನೇ ಸ್ಟ್ರೆಚರ್ ಆಗಿ ಬಳಸಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು -
ಮುಂಬೈ, ಜು. 8: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ (Maharashtra Flood) ಉಂಟಾಗಿದೆ. ಪಾಲ್ಘರ್ ಜಿಲ್ಲೆಯಲ್ಲಂತೂ ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಪ್ರವಾಹ ಗ್ರಾಮದ ಸಂಪರ್ಕ ಕಡಿತಗೊಳಿಸಿದೆ. ಹೀಗಾಗಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ಸ್ಟ್ರೆಚರ್ ಆಗಿ ಬಾಗಿಲನ್ನು ಗ್ರಾಮಸ್ಥರು ಬಳಸಿರುವ ಮನ ಮಿಡಿಯುವ ಘಟನೆ ನಡೆದಿದೆ. ಪ್ರವಾಹದಿಂದಾಗಿ ಯಾವುದೇ ಆಂಬ್ಯುಲೆನ್ಸ್ ಸಿಗದ ಕಾರಣ, ಸ್ಥಳೀಯರು ಮನೆಯೊಂದರ ಮರದ ಬಾಗಿಲನ್ನೇ ತಾತ್ಕಾಲಿಕ ಸ್ಟ್ರೆಚರ್ ಆಗಿ ಪರಿವರ್ತಿಸಿದ್ದಾರೆ. ಎದೆಯ ಮಟ್ಟಕ್ಕೆ ತಲುಪಿದ ನೀರಿನ ನಡುವೆ ಗರ್ಭಿಣಿಯನ್ನು ಹೆರಿಗೆಗೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸಾಗಿಸುವ ಮೂಲಕ ಗ್ರಾಮಸ್ಥರು ಆಕೆಗೆ ಪುನರ್ಜನ್ಮ ನೀಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ತಾತ್ಕಾಲಿಕ ಸ್ಟ್ರೆಚರ್ ಅನ್ನು ಹೆಗಲ ಮೇಲೆ ಇಟ್ಟುಕೊಂಡ ಗ್ರಾಮಸ್ಥರು ಎದೆಯ ಮಟ್ಟದ ನೀರಿನ ಮೂಲಕ ಗರ್ಭಿಣಿ ಪ್ರಿಯಾಂಕಾ ರವಿ ಯಾದವ್ ಅವರನ್ನು ಪಾಲ್ಘರ್‌ನ ಸಫಲೆ ಗ್ರಾಮೀಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯಲ್ಲಿ ಪ್ರಿಯಾಂಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ʼʼಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆʼʼ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಗರ್ಭಿಣಿಯನ್ನು ಮರದ ಬಾಗಿಲಿನ ಮೇಲೆ ಮಲಗಿಸಿ, ಗ್ರಾಮಸ್ಥರು ಪ್ರವಾಹದಿಂದ ಆವೃತವಾದ ಪ್ರದೇಶವನ್ನು ಅತ್ಯಂತ ಎಚ್ಚರಿಕೆಯಿಂದ ದಾಟಿಸಿ ರಕ್ಷಿಸುತ್ತಿರುವ ದೃಶ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಇಲ್ಲಿದೆ ವಿಡಿಯೊ:
Palghar - In a heartwarming display of community spirit, residents of Kelve in Palghar rescued a pregnant woman by carrying her on wooden planks after her house was surrounded by floodwaters.The woman went into labour pains as heavy rainfall caused severe water logging in the… pic.twitter.com/ng3XKaxmGH
— NextMinute News (@nextminutenews7) July 8, 2026
ಪಾಲ್ಘರ್‌ನ ಹನುಮಾನ್‌ಪಾದ ಗ್ರಾಮದ ನಿವಾಸಿ ಪ್ರಿಯಾಂಕಾ ಯಾದವ್ ಅವರಿಗೆ ಮಂಗಳವಾರ (ಜು. 7) ಹೆರಿಗೆ ನೋವು ಕಾಣಿಸಿಕೊಂಡಿತು. ಭಾರಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದರಿಂದ ಯಾವುದೇ ಆಂಬ್ಯುಲೆನ್ಸ್‌ಗೆ ಆ ಪ್ರದೇಶಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪ್ರಿಯಾಂಕಾ ಕುಟುಂಬವು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗುವುದಿಲ್ಲ ಎಂದು ಭಯಪಟ್ಟಿತ್ತು.
ವೃದ್ಧೆಯನ್ನು ಹೆಗಲ ಮೇಲೆ ಹೊತ್ತು ಸಾಗಿದ ಪೊಲೀಸ್‌ಗೆ ಬಿಗ್ ಸೆಲ್ಯೂಟ್ ಹೊಡೆದ ನೆಟ್ಟಿಗರು
ಸ್ಥಳೀಯ ಆಶಾ ಕಾರ್ಯಕರ್ತೆ ದಿವ್ಯಾ ಘರತ್ ಮತ್ತು ಸಮಾಜ ಸೇವಕ ಚೇತನ್ ಗವಾಡ್ ನಿವಾಸಿಗಳನ್ನು ಒಟ್ಟುಗೂಡಿಸಿದರು. ಅವರು ಹತ್ತಿರದ ಮನೆಯಿಂದ ಮರದ ಬಾಗಿಲನ್ನು ತೆಗೆದುಕೊಂಡು ಪ್ರಿಯಾಂಕಾ ಅವರನ್ನು ಅದರ ಮೇಲೆ ಕೂರಿಸಿ ಪ್ರವಾಹದಿಂದ ತುಂಬಿದ್ದ ಭೂಪ್ರದೇಶವನ್ನು ದಾಟಿ ಹತ್ತಿರದ ಆಸ್ಪತ್ರೆಗೆ ತಲುಪಿದರು.
“ಪರಿಸ್ಥಿತಿ ಭಯಾನಕವಾಗಿತ್ತು, ನೀರು ವೇಗವಾಗಿ ಏರುತ್ತಿತ್ತು. ನಾವು ಸುಮ್ಮನೆ ಕುಳಿತು ನೋಡುವಂತಿಲ್ಲ ಎಂದು ನಮಗೆ ತಿಳಿದಿತ್ತು. ರಸ್ತೆಗಳು ಕಣ್ಮರೆಯಾಗಿದ್ದವು. ಗರ್ಭಿಣಿಯನ್ನು ಹೊತ್ತೊಯ್ಯಲು ಮನೆಯ ಬಾಗಿಲನ್ನು ಬಳಸಿದೆವು. ನೀರಿನ ಮೂಲಕ ಸಾಧ್ಯವಾದಷ್ಟು ವೇಗವಾಗಿ ಚಲಿಸಿದೆವು” ಎಂದು ದಿವ್ಯಾ ಘರತ್ ವಿವರಿಸಿದ್ದಾರೆ. ತಾಯಿ ಮತ್ತು ನವಜಾತ ಶಿಶು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯಾಧಿಕಾರಿ ಡಾ. ಶುಭಂಗಿ ಸನಪ್ ಹೇಳಿದ್ದಾರೆ.