ಕಾಡಿನಲ್ಲಿದ್ದ ಹತ ಎಲ್‌ಇಟಿ ಕಮಾಂಡರ್ ಹಾಶಿಮ್ ಮೂಸ ಗುಂಡೇಟಿನ ಗಾಯಕ್ಕೆ ಜೇನುತುಪ್ಪ ಬಳಸುತ್ತಿದ್ದ: ತನಿಖೆ ವೇಳೆ ಹೊರಬಿತ್ತು ರಹಸ್ಯ
LeT commander Hashim Moosa: ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾದ ಉಗ್ರ ಹಾಶಿಮ್ ಮೂಸ ಗಾಯವನ್ನು ವಾಸಿ ಮಾಡಲು ಜೇನುತುಪ್ಪವನ್ನು ಬಳಸಿದ್ದ ಎಂದು ತಿಳಿದುಬಂದಿದೆ. ಗಾಯ ಬೇಗ ಗುಣವಾಗಲು ಆತ ಶುದ್ಧ ಜೇನನ್ನು ಬಳಸಿ ಸಾಂಪ್ರದಾಯಿಕ ಆಯುರ್ವೇದದ ಚಿಕಿತ್ಸೆ ಮಾಡಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಶ್ರೀನಗರ, ಅ. 4: ಇತ್ತೀಚೆಗೆ ಹತನಾದ ಪಾಕಿಸ್ತಾನ ಸೇನೆಯ ಎಲೈಟ್ ಸ್ಪೆಷಲ್ ಸರ್ವಿಸಸ್ ಗ್ರೂಪ್‌ನ ಮಾಜಿ ಕಮಾಂಡೋ ಎಂದು ಶಂಕಿಸಲಾಗಿರುವ ಪ್ರಮುಖ ಉಗ್ರ ಹಾಶಿಮ್ ಮೂಸಾ (Hashim Moosa) ಹಿಂದೊಮ್ಮೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ದಟ್ಟ ಕಾಡುಗಳಲ್ಲಿ ಅಡಗಿ ಕುಳಿತಿದ್ದಾಗ ಗುಂಡೇಟಿನಿಂದ ಗಾಯಗೊಂಡಿದ್ದ. ಆ ಗಾಯ ಬೇಗ ಗುಣವಾಗಲು ಆತ ಶುದ್ಧ ಜೇನನ್ನು ಬಳಸಿ ಸಾಂಪ್ರದಾಯಿಕ ಆಯುರ್ವೇದದ ಚಿಕಿತ್ಸೆ ಮಾಡಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಷೇಧಿತ ಲಷ್ಕರ್-ಎ-ತೈಬಾ (LeT) ಸಂಘಟನೆಯ ಮುಖ್ಯ ಕಾರ್ಯಾಚರಣೆ ಕಮಾಂಡರ್ ಮತ್ತು 2025ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್‌ಗಳಲ್ಲಿ ಒಬ್ಬನಾದ ಮೊಹಮ್ಮದ್ ಆಸಿಫ್ ಅಲಿಯಾಸ್ ಹಾಶಿಮ್ ಮೂಸಾನನ್ನು ಈ ವಾರದ ಆರಂಭದಲ್ಲಿ ಮಧ್ಯ ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಯೂಸ್ಮಾರ್ಗ್‌ನಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ.
ಈ ಹಿಂದೆ ಜಮ್ಮು ಪ್ರದೇಶದ ರಾಜೌರಿ ಪ್ರದೇಶದಲ್ಲಿ ನಡೆಸಿದ ಆಪರೇಷನ್ ಶೇರುವಾಲಿ ಕಾರ್ಯಾಚರಣೆ ಸಮಯದಲ್ಲಿ ಡೋರಿಮಲ್-ಗಂಭೀರ್ ಮೊಘ್ಲಾದ ಎನ್‌ಕೌಂಟರ್‌ನಲ್ಲಿ ಮೂಸ ಗುಂಡೇಟಿನಿಂದ ಗಾಯಗೊಂಡಿದ್ದ. ಈ ವೇಳೆ ಕಾಡಿಗೆ ಪರಾರಿಯಾಗಿದ್ದ ಆತ ಜೇನು ಚಿಕಿತ್ಸೆಯ ಮೊರೆ ಹೋಗಿದ್ದ ಎನ್ನಲಾಗಿದೆ.
ಈ ಔೇಳೆ ಆತನ ಸಹಚರ ಯಾಸಿರ್ ಕೂಡ ಪರಾರಿಯಾಗಿದ್ದ. ಈ ಇಬ್ಬರು ಭಯೋತ್ಪಾದಕರನ್ನು ಹುಡುಕಲು 45 ದಿನಗಳಿಗೂ ಹೆಚ್ಚು ಕಾಲ ಶೋಧ ಮುಂದುವರಿಯಿತು.
ಮೋಸ್ಟ್ ವಾಂಟೆಡ್ ಲಷ್ಕರ್ ಉಗ್ರ ಮೂಸಾನನ್ನು ಹೊಡೆದುರುಳಿಸಿದ್ದೇ ರೋಚಕ
ಪೂಂಚ್ ಮತ್ತು ರಾಜೌರಿ ಕಾಡಿನೊಳಗೆ ಅಡಗಿಕೊಂಡಿದ್ದ ಭಯೋತ್ಪಾದಕ ಮೂಸ ತನ್ನ ಗಾಯಗಳಿಗೆ ಜೇನುತುಪ್ಪ ಹಚ್ಚಿಕೊಂಡಿದ್ದ. ಆ ಪ್ರದೇಶದ ಸುತ್ತಲೂ ಭದ್ರತಾ ಪಡೆ ಸುತ್ತುವರಿದ ಕಾರಣ ಅವನಿಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ವೇಗವಾಗಿ ಚೇತರಿಕೆ ಪಡೆಯಲು ಮತ್ತು ಕಾಡಿನಲ್ಲಿ ಸೋಂಕನ್ನು ತಡೆಗಟ್ಟಲು ಜೇನುತುಪ್ಪವನ್ನು ಔಷಧಿಯಾಗಿ ಬಳಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಯೂಸ್ಮಾರ್ಗ್‌ನಲ್ಲಿ ಯಾಸಿರ್ ಮೃತಪಟ್ಟ ನಂತರ, ಅವನಿಂದ ಒಂದು ಫೋನ್ ವಶಪಡಿಸಿಕೊಳ್ಳಲಾಯಿತು. ಅದರಲ್ಲಿ ಮೂಸನಿಗಾದ ಗಾಯಕ್ಕೆ ಜೇನುತುಪ್ಪ ಬಳಸಿ ನೀಡುತ್ತಿದ್ದ ಚಿಕಿತ್ಸೆಯ ಚಿತ್ರಗಳು ಕಂಡುಬಂದವು. ಪ್ರಮುಖ ಭಯೋತ್ಪಾದಕನ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿಸಲು ಪಾಕಿಸ್ತಾನದಲ್ಲಿರುವ ನಿರ್ವಾಹಕರಿಗೆ ಅವುಗಳನ್ನು ರವಾನಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಹಾಶಿಮ್ ಮೂಸ ಗಾಯಗಳಿಂದ ಬೇಗ ಚೇತರಿಸಿಕೊಳ್ಳಲು ಬಳಸುವ ಜೇನುತುಪ್ಪ ಶುದ್ಧವಾಗಿರಬೇಕು ಎಂದು ಆತನಿಗೆ ಸೂಚನೆ ನೀಡುತ್ತಿದ್ದ ಹ್ಯಾಂಡ್ಲರ್‌ಗಳು ಹೇಳಿದ್ದರು. 2025ರ ಪಹಲ್ಗಾಮ್ ದಾಳಿ ಸೇರಿ ಸುಮಾರು 12 ಭಯೋತ್ಪಾದಕ ದಾಳಿಗಳಲ್ಲಿ ಮೂಸ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲು ಪ್ರದೇಶದಲ್ಲಿ ನಡೆದ ಆ ದಾಳಿಯಲ್ಲಿ ಬಹುತೇಕ ಪ್ರವಾಸಿಗರು ಸೇರಿ 26 ಮಂದಿ ಮೃತಪಟ್ಟಿದ್ದರು.
ಬದಲಾಗುತ್ತಿದೆ ಜಮ್ಮು ಮತ್ತು ಕಾಶ್ಮೀರ: 2025ರಲ್ಲಿ ಒಂದೇ ಒಂದು ಕಲ್ಲು ತೂರಾಟದ ಘಟನೆಯಿಲ್ಲ
ವೈದ್ಯಕೀಯ ತಜ್ಞರ ಪ್ರಕಾರ, ಕಾಡಿನಲ್ಲಿ ಅಡಗಿ ಬದುಕಲು ಉಗ್ರನು ಅನುಸರಿಸಿದ್ದ ಈ ವಿಧಾನವು ಗಾಯಗಳ ಆರೈಕೆಗೆ ಸಂಬಂಧಿಸಿದ ದೀರ್ಘಕಾಲದ ಆಯುರ್ವೇದ ತತ್ವಗಳನ್ನು ಆಧರಿಸಿತ್ತು. ಆಯುರ್ವೇದದಲ್ಲಿ ವಿಶೇಷವಾಗಿ ಸುಶ್ರುತ ಸಂಹಿತೆಯಂತಹ ಗ್ರಂಥಗಳಲ್ಲಿ ಗಾಯಗಳ ಆರೈಕೆಗೆ ಜೇನಿಗೆ ಪ್ರಮುಖ ಸ್ಥಾನವಿದೆ. ಆಯುರ್ವೇದದಲ್ಲಿ ಗಾಯದ ಚಿಕಿತ್ಸೆಯನ್ನು ವ್ರಣ ಚಿಕಿತ್ಸಾ ಎಂದು ಕರೆಯಲಾಗುತ್ತದೆ. ಜೇನಿನಲ್ಲಿರುವ ಶೋಧನ ಅಂದರೆ ಶುದ್ಧೀಕರಣ ಮತ್ತು ರೋಪಣ ಅಂದರೆ ಗಾಯ ಗುಣಪಡಿಸುವ ಗುಣಗಳಿಂದಾಗಿ ಅದನ್ನು ಗಾಯಗಳ ಆರೈಕೆಯಲ್ಲಿ ಬಳಸಲಾಗುತ್ತದೆ ಎಂದು ಆಲ್ ಇಂಡಿಯಾ ಡಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ ಅಧ್ಯಕ್ಷ ಡಾ. ಆರ್.ಪಿ. ಪರಾಶರ್ ವಿವರಿಸಿದ್ದಾರೆ.
ಒಟ್ಟಾರೆ ಮೂಸನ ಹತ್ಯೆಯೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯವಾಗಿದ್ದ ಪ್ರಮುಖ ಉಗ್ರ ಕಮಾಂಡರ್‌ಗಳಲ್ಲಿ ಒಬ್ಬನಿಗಾಗಿ ಐದು ವರ್ಷಗಳಿಂದ ನಡೆಯುತ್ತಿದ್ದ ತೀವ್ರ ಶೋಧ ಕಾರ್ಯ ಅಂತ್ಯವಾಗಿದೆ.