ಬಹುಮತ ಸಾಬೀತುಪಡಿಸದೆ ವಿಜಯ್ ಸಿಎಂ ಆಗಲು ಸಾಧ್ಯವಿಲ್ಲ: ಕೋರ್ಟ್ ಮೊರೆ ಹೋಗುತ್ತಾ ಟಿವಿಕೆ?
TVK move the Court: ತಮಿಳುನಾಡಿನಲ್ಲಿ ಟಿವಿಕೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮ್ಯಾಜಿಕ್ ನಂಬರ್ ಪಡೆಯಲು ಸಾಧ್ಯವಾಗಲಿಲ್ಲ. ಈ ಗುರಿ ತಲುಪಲು ವಿಜಯ್‍ಗೆ ಇನ್ನೂ 11 ಸ್ಥಾನಗಳು ಬೇಕಾಗುತ್ತದೆ. ಹೀಗಾಗಿ ದಳಪತಿಗೆ ಸವಾಲು ಎದುರಾಗಿದೆ. ಟಿವಿಕೆಗೆ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದರೂ ಮ್ಯಾಜಿಕ್ ಸಂಖ್ಯೆ ತಲುಪಲು ಅಷ್ಟು ಶಾಸಕರು ಸಾಕಾಗುವುದಿಲ್ಲ.
ದಳಪತಿ ವಿಜಯ್ (ಸಂಗ್ರಹ ಚಿತ್ರ) -
ಚೆನ್ನೈ, ಮೇ 7: ತಮಿಳುನಾಡಿನ (Tamil Nadu) ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆ ಮುಂದುವರಿದಿದೆ. ವಿಜಯ್ ಅವರ ಪಕ್ಷ ಟಿವಿಕೆ 107 ಸ್ಥಾನಗಳಲ್ಲಿ ಜಯಗಳಿಸಿ ಇತಿಹಾಸ ಬರೆದರೂ ಸರ್ಕಾರ ರಚಿಸಲು ಅಗತ್ಯವಾದ ಮ್ಯಾಜಿಕ್ ನಂಬರ್ ಗಳಿಸಿಲ್ಲ. ಡಿಎಂಕೆ ಹಾಗೂ ಎಐಎಡಿಎಂಕೆ ಬಲಿಷ್ಠವಾಗಿರುವ ಈ ರಾಜ್ಯದಲ್ಲಿ, ಸೂಪರ್‌ಸ್ಟಾರ್ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಚುನಾವಣೆಯಲ್ಲಿ ರಾಜ್ಯದ ಅತಿದೊಡ್ಡ ಪಕ್ಷಗಳನ್ನು ಸೋಲಿಸಿದೆ.
ರಾಜ್ಯದ 234 ಸ್ಥಾನಗಳಲ್ಲಿ ಪಕ್ಷವು 107 ಸ್ಥಾನಗಳನ್ನು ಗೆದ್ದುಕೊಂಡಿದೆ. ದ್ರಾವಿಡ ದಿಗ್ಗಜ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ 100ಕ್ಕಿಂತ ಕಡಿಮೆ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿವೆ. ಆದರೆ ಈ ಬಾರಿ ಜನ ಟಿವಿಕೆಗೆ ಬಹುಪರಾಕ್ ಎಂದರೂ ಬಹುಮತವನ್ನು ತಲುಪಲು ಸಾಧ್ಯವಾಗಿಲ್ಲ. ಇದು ಸರ್ಕಾರ ರಚನೆ ಪ್ರಕ್ರಿಯನ್ನು ವಿಳಂಬಗೊಳಿಸಿದೆ.
ಈ ಗುರಿ ತಲುಪಲು ವಿಜಯ್‍ಗೆ ಇನ್ನೂ 11 ಸ್ಥಾನಗಳು ಬೇಕಾಗುತ್ತದೆ. ಹೀಗಾಗಿ ದಳಪತಿಗೆ ಸವಾಲು ಎದುರಾಗಿದೆ. ಕಾಂಗ್ರೆಸ್ ಟಿವಿಕೆಗೆ ಬೆಂಬಲ ನೀಡುವುದಾಗಿ ಘೋಷಿಸಿದರೂ, ಮ್ಯಾಜಿಕ್ ಸಂಖ್ಯೆ ತಲುಪಲು ಅಷ್ಟು ಶಾಸಕರು ಸಾಕಾಗುವುದಿಲ್ಲ.
2018ರಲ್ಲಿ ಯಡಿಯೂರಪ್ಪ ಎದುರಿಸಿದ ಸ್ಥಿತಿ ಈಗ ತಮಿಳುನಾಡಿನಲ್ಲಿ ದಳಪತಿ ವಿಜಯ್‌ಗೂ ಬಂತಾ?
ವಿಜಯ್ ಲೆಕ್ಕಾಚಾರ ಏನಾಗಿತ್ತು?
ಆರಂಭದಲ್ಲಿ ಐದು ಸ್ಥಾನಗಳಲ್ಲಿ ಜಯ ಗಳಿಸಿರುವ ಕಾಂಗ್ರೆಸ್‌ನಿಂದ ಷರತ್ತುಬದ್ಧ ಬೆಂಬಲದೊಂದಿಗೆ ಟಿವಿಕೆ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದೆ ಮತ್ತು ವಿಶ್ವಾಸ ಮತಯಾಚನೆಗೆ ಮುಂಚಿತವಾಗಿ ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಸಂಖ್ಯೆಗಳನ್ನು ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಬುಧವಾರ (ಮೇ 6) ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರ ಭೇಟಿಯು ಆ ಯೋಜನೆಗೆ ತಣ್ಣೀರೆರಚಿತು. ಮೂಲಗಳ ಪ್ರಕಾರ, ವಿಜಯ್ ಮಂಡಿಸಿದ ಪ್ರಸ್ತಾವನೆ ಅರ್ಲೇಕರ್ ಅವರಿಗೆ ಮನವರಿಕೆಯಾಗಲಿಲ್ಲ. ಗುರುವಾರ ಬೆಳಗ್ಗೆ ವಿಜಯ್ ಮತ್ತೆ ರಾಜ್ಯಪಾಲರನ್ನು ಭೇಟಿಯಾದರು. ಈ ವೇಳೆ ಪ್ರಶ್ನೆಯೆತ್ತಿದ ರಾಜ್ಯಪಾಲರು ಕೇವಲ 112 ಶಾಸಕರನ್ನು ಇಟ್ಟುಕೊಂಡು ಹೇಗೆ ಸರ್ಕಾರವನ್ನು ನಡೆಸುತ್ತೀರಿ ಎಂದು ಕೇಳಿದರು. ಅಂತಿಮವಾಗಿ, ವಿಜಯ್ 118 ಶಾಸಕರ ಬೆಂಬಲ ಪತ್ರವನ್ನು ಸಲ್ಲಿಸಬೇಕು ಎಂದು ಅರ್ಲೇಕರ್ ಪಟ್ಟು ಹಿಡಿಯುವುದರೊಂದಿಗೆ ಸಭೆಯು ಮುಕ್ತಾಯವಾಯಿತು ಎಂದು ಮೂಲಗಳು ತಿಳಿಸಿವೆ. ಆ ಪತ್ರಗಳಿಲ್ಲದೆ ವಿಜಯ್ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಈ ಮಧ್ಯೆ, ಟಿವಿಕೆ ಈ ನಿಲುವಿನ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಪ್ರಸ್ತುತ ಬಹುಸಂಖ್ಯಾತ ಸ್ಥಾನಮಾನ ಹೊಂದಿದ್ದರೂ (112 ಶಾಸಕರು), ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲರ ಮೇಲೆ ಒತ್ತಡ ಹೇರಲು ಕಾನೂನು ಹೋರಾಟದ ಹಾದಿ ತುಳಿಯುವುದಾಗಿ ಪಕ್ಷವು ಹೇಳಿದೆ. ಅಂದರೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಕಾಂಗ್ರೆಸ್ ಬೆಂಬಲವೂ ಇರುವುದರಿಂದ ಸರ್ಕಾರ ರಚಿಸಲು ತಮಗೆ ಹಕ್ಕಿದೆ ಎಂಬುದು ಟಿವಿಕೆ ವಾದ. ಹೀಗಾಗಿ ಕೋರ್ಟ್ ಮೆಟ್ಟಿಲೇರಲು ಸಿದ್ಧವಿರುವುದಾಗಿ ಪಕ್ಷದ ಸದಸ್ಯರು ಹೇಳಿದ್ದಾರೆ.
ಈ ವಿಷಯದಲ್ಲಿ ಪಕ್ಷವು ಎಡಪಂಥೀಯ ಬಣಗಳಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮತ್ತು ಸಿಪಿಐ (ಮಾರ್ಕ್ಸ್‌ವಾದ) ಮತ್ತು ವಿದುತಲೈ ಚಿರುತೈಗಲ್ ಕಚ್ಚಿಯಿಂದ ಬೆಂಬಲವನ್ನು ಪಡೆದುಕೊಂಡಿದೆ. ಈ ಮೂರೂ ಪಕ್ಷಗಳು ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿದ್ದರೂ, ಸೀಟುಗಳ ವರ್ಗಾವಣೆಗೆ ಸಂಬಂಧಿಸಿದಂತೆ ಟಿವಿಕೆಯನ್ನು ಸಂಪರ್ಕಿಸಿದೆ.
ಪಶ್ಚಿಮ ಬಂಗಾಳದಲ್ಲಿ ನಿಲ್ಲುತ್ತಿಲ್ಲ ಹಿಂಸಾಚಾರ; MLA ಮನೆ ಬಳಿ ಬಾಂಬ್ ಸ್ಪೋಟ, 5 ಬಿಜೆಪಿ ಕಾರ್ಯಕರ್ತರಿಗೆ ಗಾಯ
ಈ ವರ್ಗಾವಣೆಯ ಬಗ್ಗೆ ಚರ್ಚಿಸಲು ಮೂರು ಪಕ್ಷಗಳ ನಾಯಕರು ಗುರುವಾರ ಬೆಳಗ್ಗೆ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾದರು. ಅವರ ನಿರ್ದಿಷ್ಟ ರಾಜಕೀಯ ಹಿತಾಸಕ್ತಿಗಳ ಆಧಾರದ ಮೇಲೆ ನಿರ್ಧರಿಸುವ ಸ್ವಾತಂತ್ರ್ಯವನ್ನು ಅವರಿಗೆ ನೀಡಲಾಗಿದೆ ಎಂದು ವರದಿಯಾಗಿದೆ.
ಡಿಎಂಕೆಯಿಂದ ಬೆಂಬಲ
ಟಿವಿಕೆಯನ್ನು ಡಿಎಂಕೆ ಕೂಡ ಬೆಂಬಲಿಸಿದೆ. ರಾಜ್ಯಪಾಲರ ನಿರ್ಧಾರ ಸ್ವೀಕಾರಾರ್ಹವಲ್ಲ ಮತ್ತು ಜನಾದೇಶಕ್ಕೆ ಅಗೌರವ ಎಂದು ಕರೆದಿದೆ. ಮತ್ತು ಸಹ ನಟ ಕಮಲ್ ಹಾಸನ್ ಕೂಡ ವಿಜಯ್ ಪರವಾಗಿ ಮಾತನಾಡಿದ್ದಾರೆ. ಒಂದು ವೇಳೆ ಪರಿಸ್ಥಿತಿ ತೀರಾ ಹದಗೆಟ್ಟರೆ, ಅಂದರೆ ಟಿವಿಕೆ ಅಥವಾ ಮತ್ಯಾವುದೇ ಪಕ್ಷವು ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗದಿದ್ದರೆ, ರಾಜ್ಯಪಾಲರು ಹೊಸದಾಗಿ ಆಯ್ಕೆಯಾದ ವಿಧಾನಸಭೆಯನ್ನು ಅಮಾನತುಗೊಳಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಹುದು. ಅಂತಹ ಸಂದರ್ಭ ಎದುರಾದರೆ, ಅದು ಅಂತಿಮವಾಗಿ ಮರುಚುನಾವಣೆಗೆ ದಾರಿ ಮಾಡಿಕೊಡುತ್ತದೆ.