ಸರ್ಕಾರ ರಚಿಸಲು ವಿಜಯ್‌ಗೆ ಸಿಕ್ತು ರಾಜ್ಯಪಾಲರ ಗ್ರೀನ್ ಸಿಗ್ನಲ್; ಮುಖ್ಯಮಂತ್ರಿಯಾಗಿ ನಾಳೆಯೇ ಪ್ರಮಾಣ ವಚನ
Vijay: ಸಾಕಷ್ಟು ನಾಟಕೀಯ ಬೆಳವಣಿಗೆ, ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ಬಳಿಕ ತಮಿಳುನಾಡಿನಲ್ಲಿ ದಳಪತಿ ವಿಜಯ್ ಸರ್ಕಾರ ರಚಿಸಲು ಸಜ್ಜಾಗಿದ್ದಾರೆ. ವಿಜಯ್‌ಗೆ 121 ಶಾಸಕರು ಬೆಂಬಲ ಸೂಚಿಸಿದ್ದು, ಶನಿವಾರ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಜ್ಯಪಾಲರನ್ನು ಭೇಟಿಯಾದ ವಿಜಯ್ -
ಚೆನ್ನೈ, ಮೇ 8: ತಮಿಳುನಾಡಿನಲ್ಲಿ ಹೊಸ ರಾಜಕೀಯ ಶಕೆ ಆರಂಭವಾಗಿದೆ. ಕೇವಲ 2 ವರ್ಷಗಳ ಹಿಂದೆ ಆರಂಭವಾದ ಪಕ್ಷ ಸರ್ಕಾರ ರಚಿಸಲು ವೇದಿಕೆ ಸಿದ್ಧವಾಗಿದ್ದು, ಇದುವರೆಗೆ ತೆರೆಮೇಲೆ ರಂಜಿಸುತ್ತಿದ್ದ ಕಾಲಿವುಡ್ ದಳಪತಿ ವಿಜಯ್ (Vijay) ಇನ್ನುಮುಂದೆ ಮುಖ್ಯಮಂತ್ರಿಯಾಗಿ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ. ಸಾಕಷ್ಟು ರಾಜಕೀಯ ಬೆಳವಣಿಗೆ ಮತ್ತು ಬಿಡುವಿಲ್ಲದ ಚಟುವಟಿಕೆ ಬಳಿಕ ಇದೀಗ ವಿವಿಧ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ಅವರ ಟಿವಿಕೆ (TVK) ಅಧಿಕಾರಕ್ಕೆ ಬರಲಿದೆ. ವಿಜಯ್ 121 ಶಾಸಕರ ಬೆಂಬಲ ಹೊಂದಿರುವುದನ್ನು ಮನವರಿಕೆ ಮಾಡಿದ ಬಳಿಕ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ.
ಗುರುವಾರ (ಮೇ 7) 2 ಬಾರಿ ಭೇಟಿಯಾಗಿದ್ದ ವಿಜಯ್ ಬಳಿ ರಾಜ್ಯಪಾಲರು 118 ಶಾಸಕ ಬೆಂಬಲ ಸಾಬೀತುಪಡಿಸುವಂತೆ ಸೂಚಿಸಿದ್ದರು. ಅದರಂತೆ ಶುಕ್ರವಾರ ತಮ್ಮನ್ನು ಬೆಂಬಲಿಸುವ ವಿವಿಧ ಪಕ್ಷಗಳ 121 ಶಾಸಕರ ಪಟ್ಟಿಯನ್ನು ಹಾಜರು ಪಡಿಸಿದರು. ಶನಿವಾರವೇ (ಮೇ 9) ವಿಜಯ್ ತಮಿಳುನಾಡಿನ 27ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಪಾಲರನ್ನು ಭೇಟಿಯಾದ ವಿಜಯ್:
#WATCH | Tamil Nadu: TVK chief Vijay meets Governor Rajendra Vishwanath Arlekar and stakes claim to form Government in the state.
— ANI (@ANI) May 8, 2026
(Video Source: Tamil Nadu Lok Bhavan) pic.twitter.com/SleWYzzvZm
ದೊಡ್ಡ ಪಕ್ಷ ಟಿವಿಕೆ
2024ರಲ್ಲಿ ವಿಜಯ್ ಹುಟ್ಟು ಹಾಕಿರುವ ಟಿವಿಕೆ ಪಕ್ಷ ಈ ವರ್ಷ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಮಾಲ್ ಮಾಡಿದೆ. ಮೊದಲ ಪ್ರಯತ್ನದಲ್ಲೇ ಶತಕ ಬಾರಿಸಿ 108 ಸ್ಥಾನಗಳಲ್ಲಿ ಜಯಗಳಿಸಿದೆ. ಸರ್ಕಾರ ರಚನೆಗೆ ಅಗತ್ಯವಾದ ಮ್ಯಾಜಿಕ್ ನಂಬರ್ 118. ಹೀಗಾಗಿ ಸರ್ಕಾರ ರಚಿಸಲು ಈ ಹಿಂದೆ 2 ಬಾರಿ ವಿಜಯ್ ನಡೆಸಿದ ಪ್ರಯತ್ನ ವಿಫಲವಾಗಿತ್ತು.
ಮೇ 7ರಂದು ಕಾಂಗ್ರೆಸ್ ಟಿವಿಕೆಗೆ ಬೆಂಬಲ ಸೂಚಿಸಿತು. ಆದರೆ ಕಾಂಗ್ರೆಸ್ ಬಳಿ ಕೇವಲ 5 ಸೀಟ್‌ಗಳಷ್ಟೇ ಇರುವುದರಿಂದ ಬಹುಮತಕ್ಕೆ ಅಗತ್ಯವಾದ ಸಂಖ್ಯೆ ಸಿಕ್ಕಿರಲಿಲ್ಲ. ಹೀಗಾಗಿ ಇತರ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ವಿಜಯ್ ನಾಯಕರ ಮನವೊಲಿಸಲು ಸಫಲರಾಗಿದ್ದಾರೆ. ಎಡ ಪಕ್ಷಗಳ ನಾಲ್ವರು, ಮುಸ್ಲಿಂ ಲೀಗ್ ಮತ್ತು ವಿಸಿಕೆಯ ತಲಾ ಇಬ್ಬರು ಬೆಂಬಲ ಸೂಚಿಸುವುದರೊಂದಿಗೆ 121 ಶಾಸಕರ ಬಲ ಸಿಕ್ಕಂತಾಗಿದೆ.
ಮುಗಿಲು ಮುಟ್ಟಿದ ಸಂಭ್ರಮಾಚರಣೆ
ವಿಜಯ್ ಸರ್ಕಾರ ರಚಿಸುವುದು ಪಕ್ಕಾ ಆಗುತ್ತಿದ್ದಂತೆ ಟಿವಿಕೆ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಕಚೇರಿಯ ಹೊರಗೆ ಪಟಾಕಿ ಸಿಡಿಸಿ, ವಿಷಲ್ ಹೊಡೆದು, ಸಿಹಿ ಹಂಚಿ ಸಂತಸ ಹಂಚಿಕೊಂಡರು.
ʼಇಂಡಿಯಾʼ ಒಕ್ಕೂಟ ಛಿದ್ರ ಛಿದ್ರ
ಇತ್ತ ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡುವುದರೊಂದಿಗೆ ತಮಿಳುನಾಡಿನಲ್ಲಿ ʼಇಂಡಿಯಾʼ ಒಕ್ಕೂಟ ಛಿದ್ರ ಛಿದ್ರವಾಗಿದೆ. ಕಾಂಗ್ರೆಸ್ ನಡೆಗೆ ಡಿಎಂಕೆ ಕಿಡಿಕಾರಿದ್ದು, ಮೈತ್ರಿಗೆ ಮೋಸ ಮಾಡಿದೆ ಎಂದು ಎಂದು ಹೇಳಿದೆ. 234 ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಶಾಸಕ ಬೆಂಬಲ ಅಗತ್ಯ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಟಿವಿಕೆ 108 ಕಡೆ ಜಯ ಗಳಿಸಿದರೆ, ಡಿಎಂಕೆಗೆ 73, ಎಐಎಡಿಎಂಕೆ 53 ಸೀಟ್ ಲಭಿಸಿತ್ತು. ಆ ಮೂಲಕ ಯಾವ ಪಕ್ಷಕ್ಕೂ ಸರ್ಕಾರ ರಚನೆಗೆ ಅಗತ್ಯವಾದ ಬಹುಮತ ಸಿಕ್ಕಿರಲಿಲ್ಲ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.