ವಯನಾಡು ಭೂಕುಸಿತ: ಮತ್ತೆ ಮೂರು ಶವ ಪತ್ತೆ, ಮೃತರ ಸಂಖ್ಯೆ 6ಕ್ಕೆ ಏರಿಕೆ
ಕೇರಳದ ವಯನಾಡಿನಲ್ಲಿ ಮಂಗಳವಾರ ಉಂಟಾದ ಭೂಕುಸಿತದಿಂದ ಸಾವನ್ನಪ್ಪಿರುವವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಗುರುವಾರ ಮತ್ತೆ ಮೂರು ಶವ ಪತ್ತೆಯಾಗಿದೆ. ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ರಳದ ಸಚಿವರಾದ ಎ.ಪಿ. ಅನಿಲ್ ಕುಮಾರ್ ಮತ್ತು ಟಿ. ಸಿದ್ದಿಕ್ ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ವಯನಾಡು: ಇತ್ತೀಚೆಗೆ ಕೇರಳದ (kerala) ವಯನಾಡಿನಲ್ಲಿ (Wayanad landslide) ಸಂಭವಿಸಿದ ಭೂಕುಸಿತದಿಂದಾಗಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿದೆ. ಈ ಕುರಿತು ಕೇರಳದ ಸಚಿವರಾದ (Kerala minister) ಎ.ಪಿ. ಅನಿಲ್ ಕುಮಾರ್ (AP Anil Kumar) ಮತ್ತು ಟಿ. ಸಿದ್ದಿಕ್ (T Siddique) ಅವರು ಮಾಹಿತಿ ನೀಡಿದ್ದು, ಗುರುವಾರ ಮೂವರ ಶವ ಪತ್ತೆಯಾಗಿದೆ. ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ಒಂದು ಶವವನ್ನು ಗುರುವಾರ ಬೆಳಗ್ಗೆ ಶೋಧ ಪ್ರದೇಶದ ವಲಯ 1ರಲ್ಲಿ ಮತ್ತು ಇನ್ನೊಂದು ವಿಪತ್ತು ಸಂಭವಿಸಿದ ಸ್ಥಳದ ಮೂಲಕ ಹರಿಯುವ ನದಿಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅನಿಲ್ ಕುಮಾರ್, ವಲಯ 1 ಮತ್ತು 2 ರಲ್ಲಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದು. ನದಿ ಬಳಿಯೂ ಶೋಧ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದರು. ಸಚಿವರು ಮಾಹಿತಿ ನೀಡುವ ವೇಳೆಗೆ ಕೇವಲ ಎರಡು ಶವಗಳು ಪತ್ತೆಯಾಗಿದ್ದವು. ಮೂರನೇ ಶವ ಅನಂತರ ಪತ್ತೆಯಾಗಿದೆ. ಇನ್ನಿಬ್ಬರು ನಾಪತ್ತೆಯಾಗಿದ್ದಾರೆ.
ವಯನಾಡು ಭೂಕುಸಿತ: ಸರ್ಕಾರದ ನಿಲುವಿನಲ್ಲಿ ಬದಲಾವಣೆ; ವೈಜ್ಞಾನಿಕ ವರದಿ ಬಳಿಕವೇ ಅಂತಿಮ ತೀರ್ಮಾನ ಎಂದ ಸಿಎಂ
ವಯನಾಡು ಮತ್ತು ಕೋಳಿಕೋಡ್ ಜಿಲ್ಲೆಗಳನ್ನು ಸಂಪರ್ಕಿಸುವ ಅನಕ್ಕೊಂಪೊಯಿಲ್-ಮೆಪ್ಪಾಡಿ ಸುರಂಗ ಯೋಜನೆಯ ಸ್ಥಳದಲ್ಲಿ ಮಂಗಳವಾರ ಭೂಕುಸಿತ ಉಂಟಾಗಿತ್ತು.
ರಕ್ಷಣಾ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್, ನಾಪತ್ತೆಯಾಗಿರುವವರ ಹುಡುಕಾಟಕ್ಕೆ ಅಧಿಕಾರಿಗಳು ಆದ್ಯತೆ ನೀಡುತ್ತಿದ್ದಾರೆ. ದುರಂತದಲ್ಲಿ ಗಾಯಗೊಂಡ 10 ಮಂದಿಯಲ್ಲಿ ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು ನಾಲ್ವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಮತ್ತೆ ಮೂವರು ಐಸಿಯುನಲ್ಲಿದ್ದು, ಅವರಲ್ಲಿ ಇಬ್ಬರು ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದರು.
ಶೋಧ ಕಾರ್ಯಾಚರಣೆಗಳಿಗೆ ಸಂಬಂಧಿಸಿ ಪರಿಶೀಲನಾ ಸಭೆ ನಡೆಸಿದ ಅವರು ದುರಂತಕ್ಕೆ ಗುತ್ತಿಗೆದಾರರ ಕಡೆಯಿಂದ ಯಾವುದಾದರೂ ಲೋಪವಾಗಿದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುವುದು. ಈ ಬಗ್ಗೆ ಪೊಲೀಸ್ ತನಿಖೆ ಕೂಡ ನಡೆಯಲಿದೆ. ನಾನು ಈಗ ಯಾರನ್ನೂ ದೂಷಿಸುವುದಿಲ್ಲ. ಸಮಿತಿಗಳ ವರದಿ ಮತ್ತು ಪೊಲೀಸ್ ತನಿಖೆಯ ಫಲಿತಾಂಶಕ್ಕಾಗಿ ಕಾಯುತ್ತೇನೆ ಎಂದರು.
ಸಭೆಯಲ್ಲಿ ಸಚಿವರಾದ ಸಿದ್ದಿಕ್, ಅನಿಲ್ ಕುಮಾರ್ ಮತ್ತು ವಯನಾಡ್‌ನ ಕಾಂಗ್ರೆಸ್ ಸಂಸದ ಪ್ರಿಯಾಂಕಾ ಗಾಂಧಿ ವಾದ್ರಾ ಭಾಗವಹಿಸಿದ್ದರು.
ದುರಂತದ ಬಗ್ಗೆ ಮಂಗಳವಾರ ಮಾತನಾಡಿದ್ದ ಸಚಿವರಾದ ಸಿದ್ದಿಕ್ ಮತ್ತು ರಮೇಶ್ ಚೆನ್ನಿತ್ತಲ ಅವರು ಇದು ನೈಸರ್ಗಿಕ ಭೂಕುಸಿತವಲ್ಲ. ಅವೈಜ್ಞಾನಿಕ ಅಗೆಯುವಿಕೆಯ ಕಾರಣದಿಂದ ಉಂಟಾಗಿದೆ ಎಂದು ಹೇಳಿದ್ದರು.