ಮತದಾರರ ಪಟ್ಟಿ ಪರಿಷ್ಕರಣೆಗೆ ತೀವ್ರ ವಿರೋಧ: ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ
ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಹೆಸರು ಕೈಬಿಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆರಂಭವಾದ ಪ್ರತಿಭಟನೆ ಹಿಂಸೆಗೆ ತಿರುಗಿದೆ. ಇದರಿಂದ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ಉದ್ವಿಗ್ನವಾಗಿದ್ದು, ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಖಂಡಿಸಿ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಪ್ರತಿಭಟನೆ -
ಕೋಲ್ಕತ್ತಾ, ಏ. 2: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision) ಪ್ರಕ್ರಿಯೆಯ ವೇಳೆ ಅರ್ಹ ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂಬ ಆರೋಪಿಸಿ ಪಶ್ಚಿಮ ಬಂಗಾಳದ (West Bengal) ಮಾಲ್ಡಾ (Malda) ಜಿಲ್ಲೆಯಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಇದೀಗ ಈ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದೆ. ಗುರುವಾರ (ಏಪ್ರಿಲ್ 1) ಬೆಳಗ್ಗೆ ಪ್ರತಿಭಟನಾಕಾರರು ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ (Stone Pelting) ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಅಲ್ಲಿ ಆಗಿದ್ದೇನು?
ಬುಧವಾರ ಸುಜಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ-12 ಅನ್ನು ತಡೆದ ನಂತರ, ಗುರುವಾರ ಬೆಳಗ್ಗೆ ಹಳೆಯ ಮಾಲ್ಡಾದ ನಾರಾಯಣಪುರದಲ್ಲಿ ಮತ್ತೆ ಪ್ರತಿಭಟನೆಗಳು ಭುಗಿಲೆದ್ದವು. ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಸ್ಥಳೀಯ ಪೊಲೀಸರು ಮತ್ತು ಕೇಂದ್ರ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಇಂಗ್ಲಿಷ್ ಬಜಾರ್‌ನ ಜಾದುಪುರ ಪ್ರದೇಶದಲ್ಲಿ ನೂರಾರು ಜನರು ರಾಷ್ಟ್ರಧ್ವಜವನ್ನು ಹಿಡಿದು ರಸ್ತೆ ತಡೆ ನಡೆಸಿ, ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡುತ್ತಿರುವ ಬಗ್ಗೆ ಘೋಷಣೆ ಕೂಗಿದರು.
ಪೊಲೀಸರ ಮೇಲೆ ದಾಳಿ
ಜಾದುಪುರ ಬೈಪಾಸ್ ಬಳಿ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಆಕ್ರೋಶಗೊಂಡ ಪ್ರತಿಭಟನಾಕಾರರ ಗುಂಪು ಪೊಲೀಸ್ ವಾಹನದ ಮೇಲೆ ದಾಳಿ ಮಾಡಿದೆ. ಕಲ್ಲು ತೂರಾಟದಿಂದಾಗಿ ವಾಹನದ ಗಾಜುಗಳು ಪುಡಿಯಾಗಿದ್ದು, ವಾಹನ ಚಾಲಕನ ತಲೆಗೆ ಗಂಭೀರ ಗಾಯಗಳಾಗಿವೆ. ಪರಿಸ್ಥಿತಿಯು ಕೈಮೀರುತ್ತಿರುವುದನ್ನು ಕಂಡು ಭದ್ರತಾ ಪಡೆಗಳು ಹೆಚ್ಚಿನ ನಿಗಾ ವಹಿಸಿವೆ.
VIDEO | West Bengal: Protest against SIR turns violent in Malda, stone pelting on police vehicles. More details are awaited.#BengalNews #MaldaNews
— Press Trust of India (@PTI_News) April 2, 2026
(Full video available on PTI Videos - https://t.co/n147TvrpG7) pic.twitter.com/sAVpmEOslK
ನ್ಯಾಯಾಧೀಶರ ದಿಗ್ಬಂಧನ ಮತ್ತು ಆಯೋಗದ ಮಧ್ಯ ಪ್ರವೇಶ
ಇದಕ್ಕೂ ಮೊದಲ ಬುಧವಾರ ಮೋತಾಬರಿಯಲ್ಲಿ ಎಸ್‌ಐಆರ್ (SIR) ಕೆಲಸದಲ್ಲಿ ತೊಡಗಿದ್ದ ಏಳು ನ್ಯಾಯಾಧೀಶರನ್ನು ಪ್ರತಿಭಟನಾಕಾರರು ಸುಮಾರು ಒಂಬತ್ತು ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಚುನಾವಣಾ ಆಯೋಗವು, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಂದ (DGP) ಈ ಬಗ್ಗೆ ವಿವರವಾದ ವರದಿ ಕೇಳಿದೆ.
ಏಪ್ರಿಲ್ 10ರಂದು ನಿತೀಶ್ ಕುಮಾರ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸಾಧ್ಯತೆ
ಪ್ರತಿಭಟನಾಕಾರರ ಆರೋಪ
ಅಲ್ಪಸಂಖ್ಯಾತರು ಹೆಚ್ಚಿರುವ ಹಳ್ಳಿಗಳಲ್ಲಿ ಮತದಾರರ ಹೆಸರನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. 2002ರ ಮತದಾರರ ಪಟ್ಟಿಯ ಆಧಾರದ ಮೇಲೆ ಹೆಸರು ಸೇರಿಸಲಾಗುವುದು ಎಂಬ ಭರವಸೆಯನ್ನು ಅಧಿಕಾರಿಗಳು ಈಗ ಗಾಳಿಗೆ ತೂರಿದ್ದಾರೆ ಎಂದು ಅವರು ದೂರಿದ್ದಾರೆ. "ತಾರ್ಕಿಕ ವ್ಯತ್ಯಾಸಗಳ" ಹೆಸರಿನಲ್ಲಿ ಹೆಸರು ಅಳಿಸಲಾಗುತ್ತಿದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ದೂರಾಗಿದೆ. ಸದ್ಯ ಮಾಲ್ಡಾ ಜಿಲ್ಲೆಯಾದ್ಯಂತ ಭಾರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.