Ahmedabad Plane Crash: ಗುಜರಾತ್ ವಿಮಾನ ಪತನ; ಟೇಕ್‌ಆಫ್ ವೇಳೆ ಆಪಘಾತವಾಗಿದ್ದೇಕೆ?
Gujarat Plane Crash: ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿದ್ದು, ಸುಮಾರು 40 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಲಂಡನ್‌ಗೆ ತೆರಳುತ್ತಿದ್ದ ವಿಮಾನ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದ್ದು, ಅದಕ್ಕೇನು ಕಾರಣ ಎನ್ನುವ ಬ್ಗೆ ತನಿಖೆ ನಡೆಯುತ್ತಿದೆ.


ಗಾಂಧಿನಗರ: ದೇಶದಲ್ಲಿ ಮತ್ತೊಂದು ಭೀಕರ ವಿಮಾನ ಅಪಘಾತ ಸಂಭವಿಸಿದೆ (Ahmedabad Plane Crash). ಗುಜರಾತ್‌ನ ಅಹಮದಾಬಾದ್‌ನ ಏರ್‌ಪೋರ್ಟ್ ಬಳಿ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಸುಮಾರು 800 ಅಡಿ ಎತ್ತರದಲ್ಲಿ ಪತನವಾಗಿದ್ದು, ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ಗೆ ಅಪ್ಪಳಿಸಿದೆ (Gujarat Plane Crash). ಪ್ರಯಾಣಿಕರು, ಹಾಸ್ಟೆಲ್ ವಿದ್ಯಾರ್ಥಿಗಳು ಸೇರಿ ಒಟ್ಟು 40 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಪತನದ ವೇಳೆ ವಿಮಾನದಲ್ಲಿ ಸಿಬ್ಬಂದಿ ಸೇರಿ ಒಟ್ಟು 242 ಪ್ರಯಾಣಿಕರಿದ್ದರು ಎಂದು ಮೂಲಗಳು ತಿಳಿಸಿವೆ. ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಆಪಘಾತಕ್ಕೀಡಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷರು ಮತ್ತು 7 ಮಂದಿ ಪೋರ್ಚುಗೀಸ್ ಪ್ರಯಾಣಿಕರಿದ್ದರು.
ವಿಮಾನವು ರನ್‌ವೇಯಲ್ಲಿ ವೇಗವನ್ನು ಹೆಚ್ಚಿಸಲು ಮುಂದಾದಾಗ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಯಿತು ಎಂದು ವರದಿಯೊಂದು ತಿಳಿಸಿದೆ.
ಗುಜರಾತ್ ವಿಮಾನ ಅಪಘಾತದ ವಿಡಿಯೊ:
LIVE VIDEO
— Vijaykumar Desai (@KumarVijayDesai) June 12, 2025
Flight AI171, operating Ahmedabad-London Gatwick, was involved in an incident today#Ahmedabadplanecrash #london #planecrash #Ahmedabad #AirIndia pic.twitter.com/XFKVYVPf5k
ಈ ಸುದ್ದಿಯನ್ನೂ ಓದಿ: Ahmedabad Plane Crash: ಗುಜರಾತ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ; ಹೊತ್ತಿ ಉರಿಯುವ ಭೀಕರ ದೃಶ್ಯ ವೈರಲ್
ಅಪಘಾತಕ್ಕೇನು ಕಾರಣ?
ಟೇಕ್‌ಆಫ್ ಅವಧಿಯನ್ನು ಅತ್ಯಂತ ಅಪಾಯಕಾರಿ ಹಂತವೆಂದು ಪರಿಗಣಿಸಲಾಗುತ್ತದೆ. ಅಂತಾರಾಷ್ಟ್ರೀಯ ವಾಯುಯಾನ ಸುರಕ್ಷತಾ ಅಂಕಿಅಂಶಗಳ ಪ್ರಕಾರ, ಜಾಗತಿಕವಾಗಿ ಸುಮಾರು ಶೇ. 35ರಷ್ಟು ವಿಮಾನ ಅಪಘಾತಗಳು ಟೇಕ್‌ಆಫ್ ಸಮಯದಲ್ಲಿ ಸಂಭವಿಸುತ್ತವೆ. ಟೇಕ್‌ಆಫ್ ಅವಧಿಯಲ್ಲಿ ಎಂಜಿನ್‌ಗಳು ಪೂರ್ಣ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತವೆ. ಈ ವೇಳೆ ಸ್ವಲ್ಪ ಹೆಚ್ಚು ಕಮ್ಮಿಯಾದರೂ ದುರಂತ ಸಂಭವಿಸುತ್ತದೆ ಎನ್ನುತ್ತಾರೆ ತಜ್ಞರು.
ಟೇಕ್‌ಆಫ್ ವೇಳೆ ದುರಂತ ಸಂಭವಿಸಲು ಕಾರಣ
ಎಂಜಿನ್ ವೈಫಲ್ಯ: ಟೇಕ್‌ಆಫ್ ವೇಳೆ ಎಂಜಿನ್‌ಗಳು ಗರಿಷ್ಠ ಒತ್ತಡದಲ್ಲಿರುತ್ತವೆ. ತಾಂತ್ರಿಕ ದೋಷ ಕಂಡುಬಂದರೆ ತಕ್ಷಣವೇ ವಿಮಾನವನ್ನು ನಿಲ್ಲಿಸಲು ಸಾಧ್ಯವಿಲ್ಲ.
ಪೈಲಟ್ ದೋಷ: ತಜ್ಞರ ಪ್ರಕಾರ, ಟೇಕ್‌ಆಫ್ ಸಮಯದಲ್ಲಿ ಅಪಘಾತಗಳಿಗೆ ಪೈಲಟ್ ನಿರ್ಲಕ್ಷ್ಯವು ಪ್ರಮುಖ ಕಾರಣವಾಗುತ್ತದೆ. ವೇಗವನ್ನು ತಪ್ಪಾಗಿ ನಿರ್ಣಯಿಸುವುದು, ತಿರುಗುವಿಕೆಯ ಬಿಂದುವನ್ನು ತಪ್ಪಾಗಿ ಲೆಕ್ಕಾಚಾರ ಮಾಡುವುದು ಅಥವಾ ಪಿಚ್ ಕೋನವನ್ನು ಆಯ್ಕೆ ಮಾಡುವಲ್ಲಿ ಎಡವುದು ಸೇರಿದಂತೆ ಹಲವು ಕಾರಣಗಳಿಂದ ವಿಮಾನ ಪತನವಾಗಬಹುದು. ಟೇಕ್‌ಆಫ್ ಅಪಘಾತಗಳಲ್ಲಿ ಶೇ. 65ರಷ್ಟು ಪೈಲಟ್ ದೋಷದಿಂದಲೇ ಸಂಭವಿಸುತ್ತದೆ ಎನ್ನುತ್ತಾರೆ ತಜ್ಞರು.
ಹವಾಮಾನ ವೈಪರೀತ್ಯ: ಹವಾಮಾನ ವೈಫಲ್ಯ, ವಿಶೇಷವಾಗಿ ಕಡಿಮೆ ಗೋಚರತೆ, ಗುಡುಗು ಸಹಿತ ಮಳೆ ಅಥವಾ ಮೈಕ್ರೋಬರ್ಸ್ಟ್‌ಗಳು (ತೀವ್ರ ಒತ್ತಡದ ಕೆಳಮುಖ ಗಾಳಿ) ಅಪಾಯಕಾರಿಯಾಗುತ್ತದೆ. ಮೈಕ್ರೋಬರ್ಸ್ಟ್ ವಿಮಾನವು ಏರಲು ಪ್ರಯತ್ನಿಸುತ್ತಿರುವಾಗ ಭೌತಿಕವಾಗಿ ಕೆಳಗೆ ತಳ್ಳುವ ಸಾಧ್ಯತೆ ಇದೆ.
ರನ್‌ವೇ ಅಡಚಣೆಗಳು: ರನ್‌ವೇಯಲ್ಲಿ ಸಂಭವಿಸಬಹುದಾದ ಯಾವುದೇ ಅಡಚಣೆ ವಿಮಾನ ಹಾರಾಟದ ಮೇಲೆ ಪರಿಣಾಮ ಬೀರುತ್ತದೆ. ರನ್‌ವೇಯಲ್ಲಿ ಕಂಡುಬರುವ ಹಠಾತ್ ಒಳನುಗ್ಗುವಿಕೆ - (ವಾಹನ, ಪಕ್ಷಿ, ಪ್ರಾಣಿ ಅಥವಾ ಇನ್ನೊಂದು ವಿಮಾನವಾಗಿರಬಹುದು) ಪೈಲಟ್‌ಗೆ ಪ್ರತಿಕ್ರಿಯಿಸಲು ಸಾಧ್ಯವಾಗುವುದಿಲ್ಲ.
ಸದ್ಯ ಅಹಮದಾಬಾದ್ ವಿಮಾನ ಅಪಘಾತಕ್ಕೆ ಕಾರಣವೇನು ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.