ವಿಜಯ್ ಪ್ರಧಾನಿ ಅಭ್ಯರ್ಥಿ ಎಂದ ಟಿವಿಕೆ; ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯುವ ಬಗ್ಗೆ ಕಾಂಗ್ರೆಸ್ ಎಚ್ಚರಿಕೆ
PM face 2029: ತಮಿಳಗ ವೆಟ್ರಿ ಕಳಗಂ ಪಕ್ಷ ಅಧಿಕಾರಕ್ಕೆ ಬಂದ ನಾಲ್ಕು ತಿಂಗಳಲ್ಲೇ ತಮಿಳುನಾಡಿನಲ್ಲಿ ರಾಜಕೀಯ ಬಿರುಗಾಳಿ ಎದ್ದೇಳುವ ಮುನ್ಸೂಚನೆ ಸಿಕ್ಕಿದೆ. ಮುಖ್ಯಮಂತ್ರಿ ವಿಜಯ್ ಜೋಸೆಫ್ ನೇತೃತ್ವದ ಸರ್ಕಾರ ರಚನೆಗೆ ಸಹಾಯ ಮಾಡಿರುವ ಕಾಂಗ್ರೆಸ್ ಇದೀಗ ಬೆಂಬಲ ಹಿಂಪಡೆಯುವ ಕುರಿತು ಮಾತನಾಡಿದೆ. ಇದಕ್ಕೆ ಮುಖ್ಯ ಕಾರಣವೇನು ? ಎಂಬುದರ ಕುರಿತು ಇಲ್ಲಿದೆ ಮಾಹಿತಿ.
ಸಂಗ್ರಹ ಚಿತ್ರ -
ಚೆನ್ನೈ: ಮುಂದಿನ ಲೋಕ ಸಭಾ ಚುನಾವಣೆಯಲ್ಲಿ (PM face 2029) ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (congress leader rahul gandhi) ಅವರನ್ನು ಬೆಂಬಲಿಸದೇ ಇದ್ದರೆ ತಮಿಳುನಾಡಿನ ವಿಧಾನ ಸಭೆಯಲ್ಲಿ (Tamil Nadu Assembly) ಪಕ್ಷ ಅಧಿಕಾರಕ್ಕೇರಲು ನೀಡಿರುವ ಬೆಂಬಲವನ್ನು ಹಿಂದಕ್ಕೆ ಪಡೆಯುವುದಾಗಿ ಕಾಂಗ್ರೆಸ್ (Congress) ಎಚ್ಚರಿಕೆ ನೀಡಿದೆ. ಈ ಕುರಿತು ಸ್ವತಃ ಕಾಂಗ್ರೆಸ್ ನಾಯಕ, ತಮಿಳುನಾಡು ಪ್ರವಾಸೋದ್ಯಮ ಸಚಿವ ಎಸ್ ರಾಜೇಶ್ ಕುಮಾರ್ (Tamil Nadu Tourism Minister S Rajesh Kumar) ಅವರು ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಅಭ್ಯರ್ಥಿಗಳ ಮೆಚ್ಚಿನ ನಾಯಕನಾಗಿ ಟಿವಿಕೆ ನಾಯಕ ಜೋಸೆಫ್ ವಿಜಯ್ ಹೊರಹೊಮ್ಮಿದ ಬೆನ್ನಲ್ಲೇ ಕಾಂಗ್ರೆಸ್ ಈ .ಎಚ್ಚರಿಕೆಯನ್ನು ನೀಡಿದೆ. ಒಂದು ವೇಳೆ 2029ರ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಅವರನ್ನು ಟಿವಿಕೆ ತಿರಸ್ಕರಿಸಿದರೆ ರಾಜ್ಯದ ಸಂಪುಟದಿಂದ ಬೆಂಬಲ ಹಿಂಪಡೆಯುವುದಾಗಿ ಕಾಂಗ್ರೆಸ್ ಎಚ್ಚರಿಸಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಿಂದ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಸಂಭಾವ್ಯ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ಟಿವಿಕೆ ನಾಯಕರು ಅಭಿಯಾನವನ್ನು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಕಾಂಗ್ರೆಸ್ ನಿಂದ ಈ ಹೇಳಿಕೆಗಳು ಹೊರಬಿದ್ದಿವೆ.
ಕನ್ಯಾಕುಮಾರಿ ಜಿಲ್ಲೆಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಸ್. ರಾಜೇಶ್ ಕುಮಾರ್, ರಾಹುಲ್ ಗಾಂಧಿ ಅವರನ್ನು 2029 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಸ್ವೀಕರಿಸಲು ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ ಪಕ್ಷ ನಿರಾಕರಿಸಿದರೆ ರಾಜ್ಯ ಸಂಪುಟದಲ್ಲಿರುವ ಇಬ್ಬರು ಕಾಂಗ್ರೆಸ್ ಸಚಿವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಲಿದ್ದಾರೆ ಎಂದರು.
ರಾಹುಲ್ ಗಾಂಧಿ ಅವರು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗುತ್ತಾರೆ. ಇದನ್ನು ನೋಡಲು ಕಾಂಗ್ರೆಸ್ ಕಾರ್ಯಕರ್ತರು ಬಯಸುತ್ತಾರೆ. ಟಿವಿಕೆ ಇದನ್ನು ಒಪ್ಪಿಕೊಳ್ಳಲು ನಿರಾಕರಿಸಿದರೆ ಇಬ್ಬರು ಕಾಂಗ್ರೆಸ್ ಸಚಿವರು ಸಂಪುಟದಿಂದ ಹೊರ ಹೋಗುತ್ತಾರೆ ಎಂದರು.
ನನಗೆ ಸಚಿವ ಸ್ಥಾನಕ್ಕಿಂತ ಪಕ್ಷವು ಹೆಚ್ಚು ಮುಖ್ಯವಾಗಿದೆ. ಪಕ್ಷವು ನಮ್ಮನ್ನು ಸಚಿವ ಸ್ಥಾನದಿಂದ ಹಿಂದೆ ಸರಿಯುವಂತೆ ಕೇಳಿದರೆ ತಕ್ಷಣ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಇತ್ತೀಚೆಗೆ ಅಧಿಕಾರಕ್ಕೆ ಬಂದಿರುವ ಟಿವಿಕೆ ನೇತೃತ್ವದ ಸರ್ಕಾರಕ್ಕೆ ವಿಧಾನಸಭೆಯಲ್ಲಿ ಬಹುಮತ ಗಳಿಸಲು ಕಾಂಗ್ರೆಸ್‌ನ ಐದು ಶಾಸಕರು ನಿರ್ಣಾಯಕರಾಗಿದ್ದಾರೆ. ಇದಕ್ಕಾಗಿಯೇ ಟಿವಿಕೆ ಎರಡು ಸಚಿವ ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡಿದೆ. ಇದರಲ್ಲಿ ರಾಜೇಶ್ ಕುಮಾರ್ ಅವರಿಗೆ ಪ್ರವಾಸೋದ್ಯಮ ಮತ್ತು ಪಿ. ವಿಶ್ವನಾಥನ್ ಅವರಿಗೆ ಉನ್ನತ ಶಿಕ್ಷಣ ಖಾತೆಯನ್ನು ನೀಡಲಾಗಿದೆ.
ತಿರುಚಿ ವಿಮಾನ ನಿಲ್ದಾಣದಲ್ಲಿ ಭಾನುವಾರ ವಿಶ್ವನಾಥನ್ ಅವರು ಕೂಡ ರಾಹುಲ್ ಗಾಂಧಿಯವರೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಏಕೈಕ ಪ್ರಧಾನಿ ಅಭ್ಯರ್ಥಿ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದ್ದರು. ವಿಧಾನಸಭೆ ಚರ್ಚೆಯ ಸಂದರ್ಭದಲ್ಲಿ ಇತ್ತೀಚೆಗೆ ಲೋಕೋಪಯೋಗಿ ಇಲಾಖೆ ಸಚಿವ ಆಧವ್ ಅರ್ಜುನ ಅವರು ತಮಿಳುನಾಡಿನಿಂದ ಪ್ರಧಾನಿ ಹೊರಹೊಮ್ಮಬೇಕು ಎಂದು ಹೇಳಿದ ಬಳಿಕ ಈ ಕುರಿತು ಚರ್ಚೆ ತೀವ್ರವಾಗಿದೆ.