ಬಸ್‌ನಲ್ಲಿ ರೀಲ್ಸ್ ಮಾಡ್ತಾ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಮಹಿಳೆ; ವಿಡಿಯೊ ವೈರಲ್ ಆಗುತ್ತಿದ್ದಂತೆ ವ್ಯಕ್ತಿ ಆತ್ಮಹತ್ಯೆ
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿರುವ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊ ಹರಿದಾಡುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಮತ್ತು ಆಕ್ರೋಶ ವ್ಯಕ್ತವಾಗಿದ್ದು, ಆರೋಪ ಎದುರಿಸುತ್ತಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ -
ತಿರುವನಂತಪುರ: ಬಸ್ಸಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ (Physical harassment) ಎಂದು ಮಹಿಳೆಯೊಬ್ಬರು ಆರೋಪಿಸಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ. 42 ವರ್ಷದ ವ್ಯಕ್ತಿಯೊಬ್ಬರ ವಿರುದ್ಧ ಸ್ಥಳೀಯ ಬಸ್ಸಿನಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಭಾನುವಾರ (ಜನವರಿ 18) ಬೆಳಗ್ಗೆ ಈ ಘಟನೆ ನಡೆದಿದೆ. ದೀಪಕ್ ಯು ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ ಕೋಝಿಕ್ಕೋಡ್‌ನ ಗೋವಿಂದಪುರಂ ನಿವಾಸಿ. ಬೆಳಗ್ಗೆ 7 ಗಂಟೆ ಸುಮಾರಿಗೆ ಪೋಷಕರು ಆತನನ್ನು ಎಬ್ಬಿಸಲು ಪ್ರಯತ್ನಿಸಿದಾಗ ಆತ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಹಲವು ಬಾರಿ ಬಾಗಿಲು ಬಡಿದು ಕರೆದರೂ ದೀಪಕ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ಹೆದರಿದ ಆತನ ಪೋಷಕರು ನೆರೆಹೊರೆಯವರ ಸಹಾಯ ಪಡೆದು ಬಲವಂತವಾಗಿ ಬಾಗಿಲು ಒಡೆದು ತೆರೆದರು. ಆದರೆ, ಆತ ಮೃತಪಟ್ಟಿರುವುದು ಕಂಡುಬಂದಿದೆ.
ಲೈಂಗಿಕ ದೌರ್ಜನ್ಯಕ್ಕೆ ಸೋಶಿಯಲ್ ಮೀಡಿಯಾ ಕಾರಣ: ವಿವಾದ ಹುಟ್ಟು ಹಾಕಿದ ಎಸ್‌ಪಿ ನಾಯಕ ಎಸ್.ಟಿ. ಹಸನ್
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಆ ವ್ಯಕ್ತಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ವರದಿಯಾಗಿದೆ. 20 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ ಎಂದು ಆತನ ಪೋಷಕರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಪಡೆಯುವುದಕ್ಕಾಗಿ ಮಹಿಳೆಯು ದೀಪಕ್‌ನ ಸಾವಿಗೆ ಕಾರಣವಾಗಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ದೀಪಕ್ ತನ್ನ ಜೀವನದುದ್ದಕ್ಕೂ ವಿವಾದಗಳಿಂದ ದೂರವಿದ್ದರು ಎಂದು ಅವರು ಹೇಳಿದರು.
ಇಲ್ಲಿದೆ ವಿಡಿಯೊ:
Kerala man dies by suicide after being accused of sexual misconduct on a bus.
— The Tatva (@thetatvaindia) January 18, 2026
The man was reportedly going through mental stress after the video went viral. pic.twitter.com/7KFcIPOP9X
ಕೆಲವು ದಿನಗಳ ಹಿಂದೆ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಪಯ್ಯನ್ನೂರು ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಜನದಟ್ಟಣೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಆತ ತನ್ನನ್ನು ಹಲವಾರು ಬಾರಿ ಅನುಚಿತವಾಗಿ ಮುಟ್ಟಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ವಿಡಿಯೊ ನೋಡಿದ ಸಂಬಂಧಿಕರು, ಸ್ನೇಹಿತರು ದೀಪಕ್‌ನನ್ನು ತೀವ್ರವಾಗಿ ನಿಂದಿಸಿದರು. ಇದು ತೀವ್ರ ಮಾನಸಿಕ ಒತ್ತಡಕ್ಕೆ ಕಾರಣವಾಯಿತು. ಅದನ್ನು ನಿಭಾಯಿಸಲು ಸಾಧ್ಯವಾಗದೆ ದೀಪಕ್ ಈ ಕಠಿಣ ಕ್ರಮ ತೆಗೆದುಕೊಂಡರು ಎಂದು ಹೇಳಲಾಗಿದೆ.
2 ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಕುಕಿ ಯುವತಿ ಸಾವು
ಪೊಲೀಸರು ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ದೀಪಕ್ ಆತ್ಮಹತ್ಯೆ ಮಾಡಿಕೊಂಡ ನಂತರ ಈ ವಿಡಿಯೊ ಮಾಡಿರುವ ಮಹಿಳೆಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.