ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನರೇಂದ್ರ ಮೋದಿ-ಜಾರ್ಜಿಯಾ ಮೆಲೋನಿ ʼಮೆಲೋಡಿʼ ಚಾಕೊಲೇಟ್ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಉತ್ತುಂಗಕ್ಕೆ ಏರಿದ ರಿಯಲ್ ಎಸ್ಟೇಟ್ ಕಂಪನಿ ಪಾರ್ಲೆ ಇಂಡಸ್ಟ್ರೀಸ್‌ನ ಷೇರು

'Melody' Frenzy: ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಮೆಲೋಡಿ ಚಾಕೊಲೇಟ್ ಅನ್ನು ಮೆಲೋನಿ ಅವರಿಗೆ ಉಡುಗೊರೆಯಾಗಿ ನೀಡಿದ್ದು, ವಿಡಿಯೊ ವೈರಲ್‌ ಆಗುತ್ತಿದೆ. ಈ ವಿಡಿಯೊ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದ್ದಂತೆ ರಿಯಲ್ ಎಸ್ಟೇಟ್ ಕಂಪನಿ ಪಾರ್ಲೆ ಇಂಡಸ್ಟ್ರೀಸ್‌ನ ಷೇರುಗಳು ತೀವ್ರವಾಗಿ ಏರಿಕೆಯಾಗಿವೆ.

ಉತ್ತುಂಗಕ್ಕೆ ಏರಿದ ರಿಯಲ್ ಎಸ್ಟೇಟ್ ಕಂಪನಿ ಪಾರ್ಲೆ ಇಂಡಸ್ಟ್ರೀಸ್‌ನ ಷೇರು

ನರೇಂದ್ರ ಮೋದಿ ಮತ್ತು ಜಾರ್ಜಿಯಾ ಮೆಲೊನಿ -

Ramesh Ballamoole
Ramesh Ballamoole May 20, 2026 3:14 PM

ರೋಮ್‌, ಮೇ 20: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಮೊದಲಿನಿಂದಲೂ ಆತ್ಮೀಯರು. ಇಬ್ಬರ ಮಧ್ಯೆ ಉತ್ತಮ ಸ್ನೇಹ ಬಾಂಧವ್ಯವಿದೆ. ಇದೇ ಕಾರಣಕ್ಕೆ ಇವರಿಬ್ಬರ ಹೆಸರನ್ನು ಸೇರಿಸಿ ಮೆಲೋಡಿ ಎಂದೇ ಕರೆಯಲಾಗುತ್ತದೆ. ಈ ಹಿಂದೆ ಮೋದಿಯೊಂದಿಗಿನ ಸೆಲ್ಫಿಗೆ ಸ್ವತಃ ಜಾರ್ಜಿಯಾ ಮೆಲೋನಿ ʼಮೆಲೊಡಿʼ ಎಂದೇ ಶೀರ್ಷಿಕೆ ನೀಡಿ ಗಮನ ಸೆಳೆದಿದ್ದರು. ಇದೀಗ ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಮೆಲೋಡಿ ಚಾಕೊಲೇಟ್ ಅನ್ನು ಮೆಲೋನಿ ಅವರಿಗೆ ಉಡುಗೊರೆಯಾಗಿ ನೀಡಿದ್ದು, ವಿಡಿಯೊ ವೈರಲ್‌ ಆಗುತ್ತಿದೆ. ಈ ವಿಡಿಯೊ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದ್ದಂತೆ ಮೆಲೊಡಿ ಚಾಕೊಲೇಟ್ ಕಂಪನಿ ಕೂಡ ಟೆಂಡಿಂಗ್‌ನಲ್ಲಿದೆ.

ಮೋದಿ ಅವರ ಮೆಲೋಡಿ ಚಾಕೊಲೇಟ್ ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಅಚ್ಚರಿ ಎಂಬಂತೆ ಬಿಎಸ್‌ಇ-ಲಿಸ್ಟೆಡ್ ರಿಯಲ್ ಎಸ್ಟೇಟ್ ಕಂಪನಿ ಪಾರ್ಲೆ ಇಂಡಸ್ಟ್ರೀಸ್‌ನ ಷೇರುಗಳು ತೀವ್ರವಾಗಿ ಏರಿಕೆಯಾಗಿವೆ. ವಿಶೇಷ ಎಂದರೆ ಈ ಕಂಪನಿಗೂ ಮೆಲೊಡಿ ಚಾಕೊಲೇಟ್ ತಯಾರಿಕ ಕಂಪನಿಗೂ ಯಾವುದೇ ಸಂಬಂಧವಿಲ್ಲ.

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ‘ಮೆಲೊಡಿʼ ಚಾಕೊಲೇಟ್ ಉಡುಗೊರೆ ನೀಡಿದ ಮೋದಿ

ಚಿಲ್ಲರೆ ಹೂಡಿಕೆದಾರರು ಬಿಎಸ್‌ಇ-ಪಟ್ಟಿ ಮಾಡಲಾದ ಪಾರ್ಲೆ ಇಂಡಸ್ಟ್ರೀಸ್‌ನ ಷೇರುಗಳನ್ನು ಖರೀದಿಸಲು ಉತ್ಸುಕರಾಗಿದ್ದಾರೆ. ಪಾರ್ಲೆ-ಜಿ, ಮೆಲೊಡಿ, ಮೊನಾಕೊ, ಕ್ರಾಕ್‌ಜ್ಯಾಕ್ ಮತ್ತು ಹೈಡ್ & ಸೀಕ್‌ನಂತಹ ಬ್ರ್ಯಾಂಡ್‌ಗಳ ಮಾತೃಸಂಸ್ಥೆ ಪಾರ್ಲೆ ಇಂಡಸ್ಟ್ರೀಸ್‌ ಎಂದು ತಪ್ಪಾಗಿ ಭಾವಿಸಿ ಷೇರು ಖರೀದಿಗೆ ಮುಂದಾಗಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ.

ಪಾರ್ಲೆ ಇಂಡಸ್ಟ್ರೀಸ್ ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿರುವ ಕಂಪನಿ. ಅಲ್ಲದೆ ಇದು ಕಾಗದ, ಕಾಗದದ ತ್ಯಾಜ್ಯ ಮತ್ತು ಸಂಬಂಧಿತ ಮರುಬಳಕೆ ಉತ್ಪನ್ನಗಳ ವ್ಯಾಪಾರದಲ್ಲಿಯೂ ತೊಡಗಿಸಿಕೊಂಡಿದೆ. ಪ್ರಸ್ತುತ, ಪಾರ್ಲೆ ಇಂಡಸ್ಟ್ರೀಸ್ ಫಾರ್ಚೂನ್ ಪಾಯಿಂಟ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಗೊಂದಲ ಸೃಷ್ಟಿಯಾಗಿದ್ದೇಕೆ?

ವಾಸ್ತವವಾಗಿ ಮೆಲೋಡಿ ಚಾಕೊಲೇಟ್‌ ಉತ್ಪಾದಿಸುವ ಪಾರ್ಲೆ ಪ್ರಾಡಕ್ಟ್ಸ್‌ ಷೇರು ಮಾರುಕಟ್ಟೆಯಲ್ಲಿ ಪಟ್ಟಿಯಾಗಿಲ್ಲ. ಅದರ ಬದಲು ರಿಯಲ್‌ ಎಸ್ಟೇಟ್‌ ಕಂಪನಿ ಪಾರ್ಲೆ ಇಂಡಸ್ಟ್ರೀಸ್‌ ಷೇರು ಮಾರುಕಟ್ಟೆಯಲ್ಲಿ ಪಟ್ಟಿಯಾಗಿದೆ. ಇದನ್ನು ತಪ್ಪಾಗಿ ಭಾವಿಸಿ ಹೂಡಿಕೆದಾರರು ಪಾರ್ಲೆ ಇಂಡಸ್ಟ್ರೀಸ್‌ನಲ್ಲಿ ಹೂಡಿಕೆ ಮಾಡಿದ್ದಾರೆ.

ವೈರಲ್‌ ವಿಡಿಯೊ:



ಯಾವುದೇ ಸಂಬಂಧವಿಲ್ಲ

ಮೆಲೊಡಿ ಚಾಕೊಲೇಟ್ ಮತ್ತು ಪಾರ್ಲೆ-ಜಿ ಬಿಸ್ಕೆಟ್‌ ತಯಾರಿಸುವುದು ಪಾರ್ಲೆ ಪ್ರಾಡಕ್ಟ್ಸ್‌ ಕಂಪನಿ. ಅದಕ್ಕೂ ಪಾರ್ಲೆ ಇಂಡಸ್ಟ್ರೀಸ್‌ಗೂ ಯಾವುದೇ ಸಂಬಂಧ ಇಲ್ಲ. ಪಾರ್ಲೆ ಪ್ರಾಡಕ್ಟ್ಸ್ ಒಂದು ಪ್ರತ್ಯೇಕ ಕಂಪನಿಯಾಗಿದ್ದು, ಇದು 1999-2000ರವರೆಗೆ ಪಾರ್ಲೆ-ಬಿಸ್ಲೆರಿ ಲಿಮಿಟೆಡ್‌ನ ಅಂಗಸಂಸ್ಥೆಯಾಗಿತ್ತು. ಅದಾಗ್ಯೂ ಈಗ ಇದು ಬಿಸ್ಲೆರಿ ಅಥವಾ ಪಾರ್ಲೆ ಗುಂಪಿನೊಂದಿಗೆ ಸಂಬಂಧ ಹೊಂದಿಲ್ಲ. ಮೆಲೊಡಿ ಚಾಕೊಲೇಟ್ ಉತ್ಪಾದಿಸುವ ಪಾರ್ಲೆ ಪ್ರಾಡಕ್ಟ್ಸ್ ಭಾರತದ ಅತಿದೊಡ್ಡ ಬಿಸ್ಕೆಟ್‌ ಮತ್ತು ಚಾಕೊಲೇಟ್ ತಯಾರಕ ಕಂಪನಿಗಳಲ್ಲಿ ಒಂದು ಎನಿಸಿಕೊಂಡಿದೆ.

ಜಿ20 ಶೃಂಗಸಭೆಯಲ್ಲಿ ಗಮನ ಸೆಳೆದ ಮೋದಿ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ

ಏನಿದು ವೈರಲ್‌ ವಿಡಿಯೊ?

ಮೆಲೋಡಿ ಚಾಕೊಲೇಟ್ ಭಾರತದಲ್ಲಿ ಭಾರಿ ಜನಪ್ರಿಯವಾಗಿದ್ದು, ಅದರ ರುಚಿಗೆ ಮನ ಸೋಲದವರಿಲ್ಲ. ಇಟಲಿಗೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಮೆಲೋಡಿ ಚಾಕೊಲೇಟ್ ಪ್ಯಾಕ್ ಅನ್ನು ಜಾರ್ಜಿಯಾ ಮೆಲೋನಿ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದು, ಎರಡೂ ದೇಶಗಳ ಸಂಬಂಧ ಇಷ್ಟೇ ಸಿಹಿಯಾಗಿರಲಿ ಎಂದು ಹಾರೈಸಿದ್ದಾರೆ. ಮೋದಿಯಿಂದ ಗಿಫ್ಟ್​ ಪಡೆದಿರುವ ಮೆಲೋನಿ ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್‌ ಆಗಿದೆ.

ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.