Cannes Fashion: ಕಾನ್ಸ್ನಲ್ಲಿ ಬಂಗಾರ ವರ್ಣದ ಸೀರೆಯಲ್ಲಿ ಮಿರಮಿರ ಮಿಂಚಿದ ಡಯಾನಾ ಪೆಂಟಿ
Diana Penty: ಕಾನ್ಸ್ನಲ್ಲಿ ಬಾಲಿವುಡ್ ತಾರೆ ಡಯಾನಾ ಪೆಂಟಿ ಮಿನುಗುವ ಮೆಟಾಲಿಕ್ ಗೋಲ್ಡನ್ ಪ್ರಿ ಡ್ರೆಪ್ಡ್ ಸೀರೆಯಲ್ಲಿ ಮಿರಮಿರ ಮಿಂಚಿದ್ದಾರೆ. ಇದ್ಯಾವ ಬಗೆಯ ಸೀರೆ? ಡಿಸೈನರ್ ಯಾರು? ಏನಿದರ ವಿಶೇಷತೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಡಯಾನಾ ಪೆಂಟಿ, ನಟಿ -
ಬಂಗಾರ ವರ್ಣದ ಮೆಟಾಲಿಕ್ ಸೀರೆಯಲ್ಲಿ ಮಿನುಗಿದ್ದಾರೆ ಬಾಲಿವುಡ್ ನಟಿ ಡಯಾನಾ ಪೆಂಟಿ. ಹೌದು, ಕಾನ್ಸ್ನಲ್ಲಿ ನಟಿ ಡಯಾನಾ ಪೆಂಟಿ ಉಟ್ಟಿದ್ದ, ಅಲ್ಲಲ್ಲ ಧರಿಸಿದ್ದ ಇಂಡೋ-ವೆಸ್ಟರ್ನ್ ಲುಕ್ ನೀಡುವ ಮೆಟಾಲಿಕ್ ಗೋಲ್ಡನ್ ಪ್ರೀ ಡ್ರೆಪ್ಡ್ ಸೀರೆಯು ಇದೀಗ ಜಾಗತೀಕ ಮಟ್ಟದಲ್ಲಿ, ಮಹಿಳೆಯರನ್ನು ಆಕರ್ಷಿಸಿದೆ. ಹೊಸ ಬಗೆಯ ಪ್ರಯೋಗಾತ್ಮಕ ಸೀರೆಯ ಟ್ರೆಂಡ್ಗೆ ಕಾರಣವಾಗಿದೆ.
ಮನೀಶ್ ಮಲ್ಹೋತ್ರಾ ಡಿಸೈನರ್ ಸೀರೆಯಿದು
ಅಂದಹಾಗೆ, ಈ ಸೀರೆಯನ್ನು ಡಿಸೈನ್ ಮಾಡಿರುವುದು ಬೇರ್ಯಾರು ಅಲ್ಲ! ಬಾಲಿವುಡ್ನ ಸೆಲೆಬ್ರೆಟಿ ಡಿಸೈನರ್ ಆದ ಮನೀಶ್ ಮಲ್ಹೋತ್ರಾ. ಪ್ರತಿ ಬಾರಿ ಒಬ್ಬರಲ್ಲ, ಒಬ್ಬರಿಗೆ ಡಿಸೈನರ್ವೇರ್ ಸಿದ್ಧಪಡಿಸುವ ಇವರು, ಈ ಬಾರಿ ಡಯಾನಾ ಪೆಂಟಿಗೆ ಪ್ರಯೋಗಾತ್ಮಕ ಗೋಲ್ಡನ್ ಸೀರೆಯನ್ನು ಡಿಫರೆಂಟಾಗಿ ಸಿದ್ಧಪಡಿಸಿದ್ದಾರೆ. ಸೈ ಎನಿಸಿಕೊಂಡಿದ್ದಾರೆ.
ಇದ್ಯಾವ ಬಗೆಯ ಸೀರೆ?
ಇದೇನೂ ಸಾಮಾನ್ಯವಾಗಿ ಕಾಣಿಸುವ ಗೋಲ್ಡನ್ ಸೀರೆಯಲ್ಲ! ರೇಷ್ಮೆಯದ್ದೂ ಅಲ್ಲ ಅಥವಾ ಕಾಮನ್ ಸೀರೆಯೂ ಅಲ್ಲ, ಈ ಸೀರೆಯನ್ನು ನೋಡಿದಾಕ್ಷಣ ಗೊತ್ತಾಗುತ್ತದೆ. ಇದೊಂದು ಬಗೆಯ ವಿಭಿನ್ನ ಸೀರೆ. ಇದು ಪ್ರೀ ಡ್ರೇಪ್ಡ್ ಡಿಸೈನರ್ ಸೀರೆಯಾಗಿದೆ. ನೋಡಿದಾಕ್ಷಣ ಇದು ರೆಡಿ ಸೀರೆ ಎಂಬುದು ಗೊತ್ತಾಗುತ್ತದೆ. ಲಾಂಗ್ ಮೆರ್ಮೈಡ್ ಸ್ಕರ್ಟ್ನಂತೆ ಕಾಣಿಸುವ ಈ ಸೀರೆಗೆ ಹೊಂದಿಕೊಂಡಂತೆ ಸೆರಗನ್ನು ಡಿಸೈನ್ ಮಾಡಲಾಗಿದೆ. ಇದರ ಜತೆ ಬಿಕಿನಿ ಬ್ಲೌಸ್ ಹಾಗೂ ಅದರ ಮೇಲೆ ಪಫ್ ಸ್ಲೀವ್ನ ಕ್ರಾಪ್ ಜಾಕೆಟ್ ಮ್ಯಾಚ್ ಮಾಡಲಾಗಿದೆ. ಇವೆಲ್ಲದರೊಂದಿಗೆ ಗೋಲ್ಡನ್ ಮೆಟಲ್ನ ಎಮ್ ಬಕಲ್ನ ವೇಸ್ಟ್ ಬ್ಯಾಂಡ್ ಧರಿಸಿರುವ ಡಯಾನಾ ಗೋಲ್ಡನ್ ಗರ್ಲ್ನಂತೆ ಕಾಣಿಸುತ್ತಿದ್ದಾರೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.
ಚಿನ್ನದಲ್ಲಿ ಸಿದ್ಧಪಡಿಸಿದಂತೆ ಕಾಣಿಸುವ ಸೀರೆ
ಡಯಾನಾ ಉಟ್ಟಿರುವ ರೆಡಿ ಸೀರೆ ಚಿನ್ನದಲ್ಲಿ ಡಿಸೈನ್ ಮಾಡಿರುವಂತೆ ಕಾಣಿಸುತ್ತಿದೆ. ಥೇಟ್ ಬಂಗಾರದ ಹುಡುಗಿಯಂತೆಯೇ ಕಾಣಿಸುತ್ತಿದ್ದಾರೆ. ಇದುವರೆಗೂ ಸಾಕಷ್ಟು ಬಗೆಯ ಗೋಲ್ಡನ್ ಸೀರೆಗಳನ್ನು ನೋಡಿರಬಹುದು. ಆದರೆ, ಈ ಸೀರೆಯ ಫ್ಯಾಬ್ರಿಕ್ ಮೆಟಾಲಿಕ್ ರೀತಿಯಾದ್ದಾಗಿದ್ದು, ಡಯಾನಾಗೆ ಕಂಪ್ಲೀಟ್ ಗೋಲ್ಡ್ ಲುಕ್ ನೀಡಿದೆ. ಹಾಗಾಗಿ ಅವರನ್ನು ಬಂಗಾರದಲ್ಲಿ ಮಿಂದೆದ್ದಂತೆ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಪ್ರಯೋಗಾತ್ಮಕ ಸೀರೆ
ಒಟ್ಟಾರೆ, ಡಯಾನಾ ಪೆಂಟಿಯ ಈ ಲುಕ್ ಪ್ರೀ ಡ್ರೆಪ್ಡ್ ಗೋಲ್ಡನ್ ಸೀರೆ ಹೊಸ ಪ್ರಯೋಗಾತ್ಮಕ ಡಿಸೈನ್ಗಳನ್ನು ಹುಟ್ಟುಹಾಕಲು ಕಾರಣವಾಗಿದೆ ಎಂದಿದ್ದಾರೆ ಸ್ಟೈಲಿಸ್ಟ್ಗಳು.