International Day of Forests 2026: ದೇಶದ ದೊಡ್ಡ ಅರಣ್ಯಗಳಿವು; ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ
ಭೂಮಿಯ ಸಮತೋಲನ ಕಾಯ್ದುಕೊಳ್ಳುವಲ್ಲಿ ಅರಣ್ಯಗಳ ಪಾತ್ರ ಬಹುಮುಖ್ಯ. ಪ್ರತಿ ದೇಶದ ಶೇ. 33ರಷ್ಟು ಭೂಭಾಗ ಅರಣ್ಯ ಹೊಂದಿರಬೇಕು ಎನ್ನುತ್ತಾರೆ ಪರಿಸರ ತಜ್ಞರು. ಆದರೆ ವಾಸ್ತವ ಹಾಗಿಲ್ಲ. ಎಲ್ಲ ಕಡೆ ಅಭಿವೃದ್ಧಿ ಹೆಸರಲ್ಲಿ ಕಾಡು ನಾಶವಾಗುತ್ತಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಮಾನವನ ಅಸ್ತಿತ್ವಕ್ಕೇ ಇದು ಧಕ್ಕೆ ತರಲಿದೆ. ಹೀಗಾಗಿ ಅರಣ್ಯದ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ 21ರಂದು ಅಂತಾರಾಷ್ಟ್ರೀಯ ಅರಣ್ಯ ದಿನ (International Day of Forests 2026) ಆಚರಿಸಲಾಗುತ್ತಿದೆ. ಈ ವರ್ಷದ ಥೀಮ್ ʼಅರಣ್ಯ ಮತ್ತು ಆರ್ಥಿಕತೆʼ. ಸಮಾಧಾನದ ಸಂಗತಿ ಎಂದರೆ ಅತಿ ಹೆಚ್ಚು ಅರಣ್ಯ ಹೊಂದಿದ ದೇಶಗಳ ಪೈಕಿ ಭಾರತ ಟಾಪ್ 10 ಪಟ್ಟಿಯಲ್ಲಿದೆ. ದೇಶದಲ್ಲಿರುವ ದೊಡ್ಡ 5 ಅರಣ್ಯಗಳ ವಿವರ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ಸುಂದರ್ಬನ್ಸ್ (Sundarbans), ಪಶ್ಚಿಮ ಬಂಗಾಳ
ಭಾರತ ಮತ್ತು ಬಾಂಗ್ಲಾದೇಶದಲ್ಲಿ ಹರಡಿಕೊಂಡಿರುವ ಸುಂದರ್ಬನ್ಸ್ ವಿಶ್ವದ ಅತೀ ದೊಡ್ಡ ಮ್ಯಾಂಗ್ರೋವ್ (ಕಾಂಡ್ಲಾ) ಕಾಡು. ಭಾರತದಲ್ಲಿ ಅತಿ ಹೆಚ್ಚಿನ ಭಾಗ ಆವರಿಸಿಕೊಂಡಿದೆ. ದೇಶದಲ್ಲಿ 4,260 ಚದರ ಕಿಲೋ ಮೀಟರ್ ವ್ಯಾಪಿಸಿದೆ. ಈ ರಾಷ್ಟ್ರೀಯ ಉದ್ಯಾನವನವು ಹುಲಿ ಸಂರಕ್ಷಿತ ಮತ್ತು ಜೀವವೈವಿಧ್ಯ ತಾಣವಾಗಿದ್ದು, ಇದು ರಾಯಲ್ ಬೆಂಗಾಲ್ ಟೈಗರ್ನ ಆವಾಸಸ್ಥಾನವೂ ಹೌದು. ದಟ್ಟವಾದ ಹಸಿರು ಕಾಡುಗಳು ಮತ್ತು ರುದ್ರ ರಮಣೀಯ ಪ್ರಕೃತಿ ನೋಡಲು ಬಯಸುವವರು ಸುಂದರ್ಬನ್ಸ್ಗೆ ಭೇಟಿ ನೀಡಲೇಬೇಕು. ಇದು ಯುನೆಸ್ಕೋ ಸಂರಕ್ಷಿತ ತಾಣವಾಗಿದ್ದು, ಸುಂದರಿ ಮರಗಳಿಂದ ಈ ಹೆಸರು ಬಂದಿದೆ.
ಗಿರ್ ಅರಣ್ಯ (Gir Forest), ಗುಜರಾತ್
ಗುಜರಾತ್ನ ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಏಷ್ಯಾಟಿಕ್ ಸಿಂಹಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಚಿರತೆಗಳು, ಜಿಂಕೆಗಳು ಮತ್ತು ವೈವಿಧ್ಯಮಯ ಪಕ್ಷಿ ಪ್ರಭೇದಗಳು ಇಲ್ಲಿವೆ. ಆಫ್ರಿಕಾ ಹೊರತುಪಡಿಸಿ ಸಿಂಹಗಳು ಮುಕ್ತವಾಗಿ ವಿಹರಿಸುವ ಏಕೈಕ ಸ್ಥಳ ಗಿರ್ ರಾಷ್ಟ್ರೀಯ ಉದ್ಯಾನವನ. 1913ರಲ್ಲಿ ಕೇವಲ 20 ಸಿಂಹಗಳಿದ್ದ ಗಿರ್ ಅರಣ್ಯದಲ್ಲಿ ಇದೀಗ ಅವುಗಳ ಸಂಖ್ಯೆ ಗಮನಾರ್ಹವಾಗಿ ವೃದ್ಧಿಸಿದೆ. ಈ ಅರಣ್ಯ ಪ್ರದೇಶವು ದಟ್ಟ ಕಾಡು, ಹುಲ್ಲುಗಾವಲು, ಬಂಡೆಗಳನ್ನು ಒಳಗೊಂಡ ವೈವಿಧ್ಯ ಭೂಪ್ರದೇಶ ಹೊಂದಿದೆ. ಇದರ ವಿಸ್ತೀರ್ಣ: 1,412 ಚದರ ಕಿಲೋ ಮೀಟರ್.
ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ (Jim Corbett National Park), ಉತ್ತರಾಖಂಡ
ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವು ಭಾರತದ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯಾನಗಳಲ್ಲಿ ಒಂದು. ಈ ಉದ್ಯಾನವನವು ಭಾರತದ ಬಂಗಾಳ ಹುಲಿಗಳಿಗೆ ರಕ್ಷಣಾ ವಲಯವಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು 1936ರಲ್ಲಿ ಸ್ಥಾಪಿಸಲಾಯಿತು. ಇದು ಶೇ. 73ರಷ್ಟು ತೇವಾಂಶವುಳ್ಳ ಕಾಡಿನಿಂದ ಆವೃತವಾಗಿದ್ದು, 580 ಪಕ್ಷಿ ಪ್ರಭೇದಗಳು, 50 ಸಸ್ತನಿಗಳು ಮತ್ತು 25 ಸರೀಸೃಪಗಳಿವೆ. 1,318 ಚದರ ಕಿಲೋ ಮೀಟರ್ ವ್ಯಾಪಿಸಿರುವ ಈ ಅರಣ್ಯದಲ್ಲಿ ವೈವಿಧ ಭೂಪ್ರ ದೇಶವಿದೆ.
ನೀಲಗಿರಿ ಮೀಸಲು ಅರಣ್ಯ (Nilgiri Biosphere Reserve), ಕರ್ನಾಟಕ, ಕೇರಳಂ, ತಮಿಳುನಾಡು
ನೀಲಗಿರಿ ಮೀಸಲು ಅರಣ್ಯವು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಹಾಗೂ ಕೇರಳಂನಲ್ಲಿ ವ್ಯಾಪಿಸಿದ್ದು, ವಿಶ್ವದ ಜೀವವೈವಿಧ್ಯದ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಒಂದು ಭಾಗ. ಇದು ದಟ್ಟವಾದ ಮಳೆಕಾಡು ಮತ್ತು ಎತ್ತರದ ಹುಲ್ಲುಗಾವಲು ಹೊಂದಿದೆ. ಅಪರೂಪದ ಏಷ್ಯನ್ ಆನೆಗಳು ಮತ್ತು ಹುಲಿಗಳ ಆಶ್ರಯತಾಣ ಎನಿಸಿಕೊಂಡಿದೆ. ಇದರ ವ್ಯಾಪ್ತಿ: 5,520 ಚದರ ಕಿಲೋ ಮೀಟರ್.
ಕಾಜಿರಂಗ ರಾಷ್ಟ್ರೀಯ ಉದ್ಯಾನವನ (Kaziranga National Park), ಅಸ್ಸಾಂ
ಅಸ್ಸಾಂನಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶವು ಭಾರತದ ಅತ್ಯಂತ ಜನಪ್ರಿಯ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದು. ಅಳಿವಿನಂಚಿನಲ್ಲಿರುವ ಒಂದು ಕೊಂಬಿನ ಘೇಂಡಾಮೃಗ ಇಲ್ಲಿ ಕಾಣ ಸಿಗುತ್ತದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನ 1,090 ಚದರ ಕಿಲೋ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ಪ್ರವಾಹ ಪ್ರದೇಶಗಳು, ಜೌಗು ಪ್ರದೇಶಗಳು ಮತ್ತು ಹುಲ್ಲುಗಾವಲುಗಳನ್ನು ಒಳಗೊಂಡಿದೆ. ಆ ಮೂಲಕ ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.