New UPI Rules: ಗಮನಿಸಿ; ಇಂದಿನಿಂದ ಹೊಸ ನಿಯಮ: UPI ವಹಿವಾಟಿನಲ್ಲಿ 7 ಬದಲಾವಣೆ
ಆಗಸ್ಟ್ 1 ಅಂದರೆ ಇಂದಿನಿಂದಲೇ ಏಳು ಹೊಸ ಯುಪಿಐ ನಿಯಮಗಳು (New UPI Rules) ಜಾರಿಗೆ ಬರಲಿವೆ. ಇದು ಪೇಟಿಎಂ, ಫೋನ್ ಪೇ, ಗೂಗಲ್ ಪೇ, ಭೀಮ್ ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ. ಇದು ಮುಖ್ಯವಾಗಿ ಬ್ಯಾಲೆನ್ಸ್ ಚೆಕ್, ಬ್ಯಾಂಕ್ ಖಾತೆ ಲಿಂಕ್ಗಳನ್ನು ಪರಿಶೀಲನೆ ಮತ್ತು ವಹಿವಾಟು ಪರಿಶೀಲನೆಗೆ ಸಂಬಂಧಿಸಿದೆ. ಹೀಗಾಗಿ ಯುಪಿಐ ಬಳಕೆದಾರರು ಇದನ್ನು ತಿಳಿದುಕೊಂಡಿರುವುದು ಬಹುಮುಖ್ಯ.



ಯುಪಿಐಗೆ ಸಂಬಂಧಿಸಿ ಶುಕ್ರವಾರ ಏಳು ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆ ಯುಪಿಐ ಬಳಕೆದಾರರು ವಿವಿಧ ಸೇವೆಯನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಅವಲಂಬಿಸಿದೆ. ಈ ಹೊಸ ನಿಯಮಗಳು ಬ್ಯಾಲೆನ್ಸ್ ಚೆಕ್, ಬ್ಯಾಂಕ್ ಖಾತೆ ಲಿಂಕ್ ಪರಿಶೀಲನೆ, ವಹಿವಾಟು ಸ್ಥಿತಿ ಸೇರಿದಂತೆ ಹಲವು ಪ್ರಮುಖ ವಿಷಯಗಳಿಗೆ ಸಂಬಂಧಿಸಿದೆ. ಪೇಟಿಎಂ, ಫೋನ್ ಪೇ, ಗೂಗಲ್ ಪೇ, ಭೀಮ್ ಬಳಕೆದಾರರ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ.

ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI)ವು ಯುಪಿಐ ವ್ಯವಸ್ಥೆಯ ಒತ್ತಡವನ್ನು ನಿವಾರಿಸಲು, ಪಾವತಿ ವಿಳಂಬ ಮತ್ತು ವಿಫಲ ವಹಿವಾಟುಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಈ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದರಿಂದ ಮುಂದಿನ ದಿನಗಳಲ್ಲಿ ಯುಪಿಐ ವಹಿವಾಟು ಹೆಚ್ಚು ಸುಗಮವಾಗಲಿದೆ.

ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು (NPCI) ಇತ್ತೀಚೆಗೆ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (ಎಪಿಐ) ಬಳಕೆಯನ್ನು ಮಿತಿಗೊಳಿಸಲು ಬ್ಯಾಂಕ್ ಮತ್ತು ಪಿಎಸ್ಪಿಗಳಿಗೆ ಆದೇಶಿಸಿದೆ. ಇದು ಬ್ಯಾಲೆನ್ಸ್ ವಿಚಾರಣೆ, ಆಟೋಪೇ, ವಹಿವಾಟು ಸ್ಥಿತಿಯ ಪರಿಶೀಲನೆಯನ್ನು ಒಳಗೊಂಡಿದೆ. ಪದೇ ಪದೆ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ ವಿನಂತಿಗಳು ಯುಪಿಐ ನೆಟ್ವರ್ಕ್ನಲ್ಲಿ ಒತ್ತಡವನ್ನು ಹೆಚ್ಚಿಸುತ್ತಿತ್ತು. ಇದಕ್ಕಾಗಿ ಇದೀಗ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಹೊಸ ನಿಯಮಗಳ ಪ್ರಕಾರ ಆಗಸ್ಟ್ 1ರಿಂದ ಯುಪಿಐ ಬಳಕೆದಾರರು ತಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ದಿನಕ್ಕೆ 50 ಬಾರಿ ಮಾತ್ರ ಪರಿಶೀಲಿಸಬಹುದು. ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ ಮಾರ್ಗಸೂಚಿಗಳ ಪ್ರಕಾರ ದಿನದ ನಿರ್ದಿಷ್ಟ ಅವಧಿಯಲ್ಲಿ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಪ್ರತಿ ಗ್ರಾಹಕರಿಗೆ ಅಪ್ಲಿಕೇಶನ್ಗಳ ಬಳಕೆಯ ದೈನಂದಿನ ಮಿತಿಯನ್ನು 50ಕ್ಕೆ ನಿಗದಿಪಡಿಸಲಾಗಿದೆ.

ಆಗಸ್ಟ್ 1ರಿಂದ ಯುಪಿಐ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳ ವಹಿವಾಟಿನ ಬಗ್ಗೆ ದಿನಕ್ಕೆ 25 ಬಾರಿ ಮಾತ್ರ ಪರಿಶೀಲಿಸಲು ಸಾಧ್ಯವಾಗುತ್ತದೆ. ಅಲ್ಲದೇ ವಹಿವಾಟಿನ ಸ್ಥಿತಿಯನ್ನು ಕೇವಲ ದಿನಕ್ಕೆ ಮೂರು ಬಾರಿ ಪರಿಶೀಲಿಸಬಹುದು. ಪ್ರತಿ ಪರಿಶೀಲನೆಯ ನಡುವೆ ಕನಿಷ್ಠ 90 ಸೆಕೆಂಡುಗಳ ಅಂತರವಿರಬೇಕು.

ಯುಪಿಐ ಆಟೋ ಪೇ ವಹಿವಾಟುಗಳಿಗಾಗಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ಸ್ಥಿರ ಸಮಯ ಸ್ಲಾಟ್ಗಳನ್ನು ಪರಿಚಯಿಸಿದೆ. ಇದರಲ್ಲಿ ಇಎಂಐ, ಯುಟಿಲಿಟಿ ಬಿಲ್, ಚಂದಾದಾರಿಕೆ ಮತ್ತು ಆಟೋ ಪಾವತಿಗಳಂತಹ ನಿಗದಿತ ಪಾವತಿ ಮಾಡಲು ನಿರ್ದಿಷ್ಟ ವಿಂಡೋಗಳನ್ನು ತೆರೆಯಲಿದೆ.

ಹೊಸ ಮಿತಿಗಳು ಪೇಟಿಎಂ, ಗೂಗಲ್ ಪೇ, ಫೋನ್ಪೇ ಅಥವಾ ಇತರ ಯಾವುದೇ ಯುಪಿಐ ಪಾವತಿ ಅಪ್ಲಿಕೇಶನ್ ಬಳಕೆದಾರರಿಗೆ ಅನ್ವಯವಾಗಲಿದೆ. ಪದೇ ಪದೆ ವಿನಂತಿಗಳೊಂದಿಗೆ ಸಿಸ್ಟಮ್ ಮೇಲೆ ಒತ್ತಡ ಹಾಕುವ ಬಳಕೆದಾರರಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಈ ನಿಯಮಗಳನ್ನು ಪರಿಚಯಿಸಲಾಗಿದೆ.

ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ ನಿರ್ದೇಶನದ ಪ್ರಕಾರ ಬ್ಯಾಂಕ್ಗಳು ಪ್ರತಿ ಹಣಕಾಸಿನ ವಹಿವಾಟಿನ ಅನಂತರ ತಮ್ಮ ಖಾತೆಗಳಲ್ಲಿ ಲಭ್ಯವಿರುವ ಬ್ಯಾಲೆನ್ಸ್ ಅನ್ನು ಬಳಕೆದಾರರಿಗೆ ತಿಳಿಸಬೇಕು ಎಂದು ಹೇಳಿದೆ.