Ram Charan: ಲಂಡನ್ ಮ್ಯೂಸಿಯಂನಲ್ಲಿ ರಾಮ್ ಚರಣ್ ಮೇಣದ ಪ್ರತಿಮೆ-ಫೋಟೋ ವೈರಲ್
ಮಗಧೀರ, ಗೇಮ್ ಚೇಂಜರ್, ಆರ್ ಆರ್ ಆರ್ ಸಿನೆಮಾ ಖ್ಯಾತ ನಟ ರಾಮ್ ಚರಣ್ ತೆಲುಗು ಚಲನಚಿತ್ರೋದ್ಯಮದಲ್ಲಿ ಸಾಕಷ್ಟು ಹೆಸರು ಸಂಪಾದಿಸಿದ್ದಾರೆ. ಅವರ ಸಿನಿಮಾಗಳು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು ಅನೇಕ ಪ್ರಶಸ್ತಿ ಗೌರವಗಳು ಇವರಿಗೆ ದೊರೆತಿದೆ. ಇದೀಗ ಜಾಗತಿಕ ಮಟ್ಟದಲ್ಲಿ ನಟ ರಾಮ್ ಚರಣ್ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ಲಂಡನ್ನಲ್ಲಿರುವ ವಿಶ್ವಪ್ರಸಿದ್ಧ ಮೇಡಮ್ ಟುಸ್ಸಾಡ್ಸ್ ವಸ್ತು ಸಂಗ್ರಹಾಲಯದಲ್ಲಿ ನಟ ರಾಮ್ ಚರಣ್ ಅವರ ಮೇಣದ ಪ್ರತಿಮೆಯನ್ನು ಗೌರವಾರ್ಥವಾಗಿ ನಿರ್ಮಿಸಲಾಗಿದೆ. ಇದನ್ನು ಸ್ವತಃ ರಾಮ್ ಚರಣ್ ಅವರೆ ಅನಾವರಣಗೊಳಿಸಿದ್ದಾರೆ.



ಸಿನಿಮಾ, ಕ್ರೀಡೆ, ಫ್ಯಾಷನ್ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ‘ಮೇಡಂ ಟುಸಾಡ್ಸ್’ ಮ್ಯೂಸಿಯಂನಲ್ಲಿ ಗೌರವಾರ್ಥವಾಗಿ ಸೆಲೆಬ್ರಿಟಿಗಳ ಮೇಣದ ಪ್ರತಿಮೆಯನ್ನು ತಯಾರು ಮಾಡಲಾಗುತ್ತದೆ. ಈಗಾಗಲೇ ಭಾರತೀಯ ಸಿನಿಮಾ ರಂಗದ ಅನೇಕ ಸಾಧಕರಿಗೆ ಈ ಗೌರವ ಸಿಕ್ಕಿದೆ. ಈಗ ಟಾಲಿವುಡ್ ನಟ ರಾಮ್ ಚರಣ್ ಅವರು ಕೂಡ ಈ ಗೌರವವನ್ನು ಪಡೆದಿದ್ದಾರೆ. ಅನಾವರಣ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಸುರೇಖಾ ಮತ್ತು ಉಪಾಸನ ಭಾಗವಹಿಸಿದ್ದಾರೆ.

ರಾಮ್ ಚರಣ್ ಸಾಕು ನಾಯಿ ಜೊತೆಗಿನ ಮೇಣದ ಪ್ರತಿಮೆ ಮೂಡಿ ಬಂದಿದೆ. ಅವರ ಸಾಕು ನಾಯಿ ರೈಮ್ ನ ಪ್ರತಿ ಕೃತಿಯನ್ನು ಸಹ ರಚಿಸಿದ್ದು ನೋಡಲು ಬಹಳ ಆಕರ್ಷಕವಾಗಿದೆ. ಸ್ವತಃ ರಾಮ್ ಚರಣ್ ಅವರು ಈ ಪ್ರತಿಕೃತಿ ಕಂಡು ಆಶ್ಚರ್ಯಕ್ಕೊಳಗಾಗಿದ್ದಾರೆ..

ಸಾಕು ನಾಯಿ ರೈಮ್ ಜೊತೆಗೆ ನಟ ರಾಮ್ ಚರಣ್ ವೇದಿಕೆಗೆ ತೆರಳಿ ಅಲ್ಲಿ ಸೋಫಾ ಮೇಲಿರುವ ತಮ್ಮದೇ ಮೇಣದ ಪ್ರತಿಕೃತಿ ಅನಾವರಣಗೊಳಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ರಾಮ್ ಚರಣ್ ತಮ್ಮ ಪ್ರತಿಮೆಯೊಂದಿಗೆ ಪೋಸ್ ನೀಡಿದಾಗ, ಪ್ರೇಕ್ಷಕರು ಚಪ್ಪಾಳೆ ತಟ್ಟಿ ಅವರನ್ನು ಪ್ರೋತ್ಸಾಹಿಸಿದರು.

ತೆಲುಗು ಸಿನಿಮಾದ ಖ್ಯಾತ ನಟರಾದ ಪ್ರಭಾಸ್ ಮತ್ತು ಅಲ್ಲು ಅರ್ಜುನ್ ಅವರ ಪ್ರತಿಮೆಗಳು ಈಗಾಗಲೇ ವಸ್ತು ಸಂಗ್ರಹಾಲಯದಲ್ಲಿ ಕಾಣಿಸಿಕೊಂಡಿದ್ದು ಇದೀಗ ಈ ಸಾಲಿನಲ್ಲಿ ನಟ ರಾಮ್ ಚರಣ್ ಕೂಡ ಸೇರಿಬಿಟ್ಡಿದ್ದಾರೆ. ಹೀಗಾಗಿ ರಾಮ್ ಚರಣ್ ಅಭಿಮಾನಿಗಳು ಮತ್ತು ತೆಲುಗು ಸಿನಿಮೋದ್ಯಮಕ್ಕೆ ಹೊಸ ಹೆಗ್ಗುರುತು ಸಿಕ್ಕಂತಾಗಿದ್ದು, ನಟ ರಾಮ್ ಚರಣ್ ಅವರಿಗೆ ಅಭಿನಂದನೆಗಳ ಶುಭಾಶಯ ತಿಳಿಸಿದ್ದಾರೆ.

ಸದ್ಯ ನಟ ರಾಮ್ ಚರಣ್ ಅವರು ಬುಚಿ ಬಾಬು ಸನಾ ನಿರ್ದೇಶನ ಪೆಡ್ಡಿ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಉತ್ತರ ಆಂಧ್ರ ಪ್ರದೇಶದ ಗ್ರಾಮೀಣ ಕ್ರೀಡೆಗಳ ಹಿನ್ನೆಲೆಯಲ್ಲಿ ವಿಶೇಷ ಹೆಣೆಯಲಾದ ಕಥಾಹಂದರ ಈ ಸಿನಿಮಾಕ್ಕೆ ಇದೆ. ಈ ಸಿನಿಮಾದಲ್ಲಿ ನಟ ರಾಮ್ ಚರಣ್ ಅವರು ಕ್ರಿಕೆಟ್ ಮತ್ತು ಕುಸ್ತಿ ಕೌಶಲ್ಯವನ್ನು ಪ್ರದರ್ಶಿಸಲಿದ್ದಾರೆ. ರಾಮ್ ಚರಣ್ ಜೊತೆಗೆ ಬಾಲಿವುಡ್ ನಟಿ ಜಾನ್ವಿ ಕಪೂರ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪೆಡ್ಡಿ ಸಿನಿಮಾ ಮಾರ್ಚ್ 26, 2027 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ನಿರೀಕ್ಷೆ ಇದೆ.