Richa Chadha: ಮಗಳ ಹುಟ್ಟುಹಬ್ಬಕ್ಕೆ ಪೋಸ್ಟ್ ಹಂಚಿಕೊಂಡ ಬೆನ್ನಲ್ಲೇ ಬಾಲಿವುಡ್ನ ಖ್ಯಾತ ನಟಿ ಟ್ರೋಲ್ ಆಗಿದ್ದೇಕೆ?
ಬೆನ್ನಿ ಆ್ಯಂಡ್ ಬಬ್ಲು, ವರ್ಡ್ಸ್ ವಿತ್ ಗಾಡ್ಸ್, ಫಕ್ರಿ, ಗರ್ಲ್ ವಿಲ್ ಬಿ ಗರ್ಲ್ ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ರಿಚಾ ಚಡ್ಡಾ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಇತ್ತೀಚೆ ಗಷ್ಟೆ ಅವರು ತಮ್ಮ ಮಗಳು ಜುನೈರಾ ಅವರ ಹುಟ್ಟುಹಬ್ಬದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಈ ಪೋಸ್ಟ್ ಹಂಚಿಕೊಂಡ ಬೆನ್ನಲ್ಲೆ ಸೋಶಿಯಲ್ ಮಿಡಿಯಾದಲ್ಲಿ ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿತ್ತು. ನ್ಯಾಚುರಲ್ ಬರ್ತ್ (ನೈಸರ್ಗಿಕ ಜನನ) ಎಂಬ ಪದವನ್ನು ಬಳಸಿದ್ದಕ್ಕಾಗಿ ಇವರ ಪೋಸ್ಟ್ ಟ್ರೋಲ್ ಗೆ ಗುರಿಯಾಗಿದ್ದು ಇದೀಗ ಈ ಕುರಿತು ನಟಿ ಸ್ಪಷ್ಟನೆ ನೀಡಿದ್ದಾರೆ.



ನಟಿ ರಿಚಾ ಚಡ್ಡಾ ಅವರು ತಮ್ಮ ಮಗಳ ಹುಟ್ಟು ಹಬ್ಬಕ್ಕೆ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಧನ್ಯವಾದಗಳು ಜುನಿ ಎಂಬ ಶೀರ್ಷಿಕೆಯ ಜೊತೆಗೆ ವಿಶೇಷ ಬರಹವನ್ನು ಬರೆದುಕೊಂಡಿದ್ದರು. ಒಂದು ವರ್ಷದ ಹಿಂದೆ ನಾನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಆರೋಗ್ಯ ವಂತ ಹೆಣ್ಣು ಮಗುವಿಗೆ ಜನ್ಮ ನೀಡಿದೆ. ಹೆರಿಗೆ ಕೆಲವು ಗಂಟೆಗಳ ಕಾಲ ನಡೆಯಿತು. ನೈಸರ್ಗಿಕ ಹೆರಿಗೆಯಿಂದ ಮಗು ಜನಿಸಿತು. ಅಂದಿನಿಂದ ನನ್ನ ಜೀವನವು ತುಂಬಾ ವಿಶೇಷ ವಾಗಿದೆ ಎಂದು ಬರೆದುಕೊಂಡಿದ್ದಾರೆ.

ನಾನು ಕೂಡ ತಾಯಿಯಾಗಿ ಮರುಜನ್ಮ ಪಡೆದೆ. ಮಗುವಿನ ಲಾಲನೆ ಪಾಲನೆಯಲ್ಲಿ ಸಂಪೂರ್ಣ ಸಂತೃಪ್ತಿ ಪಡೆದಿದ್ದೇನೆ ಎಂದು ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್ ಗೆ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿದೆ.

ಪ್ರತಿಯೊಂದು ಜನನವೂ ಸ್ವಾಭಾವಿಕವೇ ಆಗಿದೆ. ಆದರೆ ಈಗ ವಿಜ್ಞಾನ ಕ್ಷೇತ್ರ ಅಭಿವೃದ್ಧಿ ಹೊಂದಿದ್ದು ಪ್ರಸವಕ್ಕೆ ಅನುಕೂಲವಾಗಿದೆ. ಹೀಗಾಗಿ ನೀವು ಹೆರಿಗೆ ವಿಚಾರದಲ್ಲಿಯೂ ಸ್ತ್ರೀ ಪರ ಧೋರಣೆ ತಂದು ಖ್ಯಾತಿ ಆಗಲು ಬಯಸುವುದು ಸರಿಯಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಹಾಕಿದ್ದಾರೆ.

ತನ್ನ ಪೋಸ್ಟ್ ಗೆ ಎಲ್ಲೆಡೆ ನೆಗೆಟಿವ್ ರೆಸ್ಪಾನ್ಸ್ ಬರುವುದನ್ನು ಮನಗಂಡ ನಟಿ ರಿಚಾ ಚಡ್ಡಾ ಅವರು ತನ್ನ ಪೋಸ್ಟ್ ಹಂಚಿಕೊಂಡ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸ್ತ್ರೀಯರಿಗೆ ಜನನದಿಂದಲೇ ಒಂದು ಸೂಪರ್ ಪವರ್ ಇದೆ. ಮಗುವಿನ ಜನನದ ಮೂಲಕ ನಮಗೆ ಪುನರ್ಜನ್ಮ ಸಿಗುತ್ತದೆ ಎಂದು ಮನ ಗಾಣಿಸುವುದು ನನ್ನ ಉದ್ದೇಶವಾಗಿತ್ತು. ಅದರ ಹೊರತು ಸ್ತ್ರೀವಾದ ಮಾಡಿ ಸಮಾಜದಲ್ಲಿ ಪ್ರಚಲಿತದಲ್ಲಿರಬೇಕೆಂದು ಬಯಸುವ ಉದ್ದೇಶ ತನಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದೆ 2017 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಮೀಟೂ ಅಭಿಯಾನ ಆಗಿದ್ದ ಸಮಯದಲ್ಲಿ ಕೂಡ ನಟಿ ರಿಚಾ ಈ ಬಗ್ಗೆ ಕೂಡ ಧ್ವನಿ ಎತ್ತಿದ್ದರು. ಒಟ್ಟಿನಲ್ಲಿ ಮಹಿಳಾ ಪರ ಧೋರಣೆಗಳಿಗೆ ಸದಾ ಬೆಂಬಲಿಗರಾಗುವ ರಿಚಾ ಚಡ್ಡಾ ಅವರು ಆಗಾಗ ಸುದ್ದಿಯಾಗುತ್ತಲೆ ಇರುತ್ತಾರೆ..ನಟಿ ರಿಚಾ ಚಡ್ಡಾ ಅವರು ಗೋಲಿಯೋಂಕಾ ರಾಸ್ ಲೀಲಾ ರಾಮ್ ಲೀಲಾ ಸಿನಿಮಾದಲ್ಲಿ ಪೋಷಕ ನಟಿಯಾಗಿ ಪ್ರಸಿದ್ಧರಾಗಿದ್ದರು. ಫಕ್ರಿ, ಸೆಕ್ಷನ್ 375 ಸಿನಿಮಾ ಮೂಲಕ ಇವರು ಹೆಚ್ಚು ಖ್ಯಾತಿ ಪಡೆದಿದ್ದರು. ಇವರು ಮದುವೆಯಾದ ಬಳಿಕ ಸಿನಿಮಾರಂಗದಲ್ಲಿ ಅಷ್ಟಾಗಿ ಸಕ್ರಿಯವಾಗಿಲ್ಲ. ಹಾಗಿದ್ದರೂ ಇವರನ್ನು ತೆರೆ ಮೇಲೆ ಕಾಣಲು ಅಭಿಮಾನಿಗಳು ಕಾತುರರಾಗಿದ್ದಾರೆ.