IPL 2025: ಮೊದಲನೇ ಎಸೆತದಲ್ಲಿ ಬೌಂಡರಿ ಬಾರಿಸಿ ಇತಿಹಾಸ ಬರೆದ ಯಶಸ್ವಿ ಜೈಸ್ವಾಲ್!
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ರಾಜಸ್ಥಾನ್ ರಾಯಲ್ಸ್ ತಂಡ 6 ವಿಕೆಟ್ಗಳ ಗೆಲುವು ಪಡೆಯಿತು. 188 ರನ್ಗಳ ಗುರಿ ಹಿಂಬಾಲಿಸಿದ ರಾಜಸ್ಥಾನ್ ರಾಯಲ್ಸ್ ಪರ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಸ್ಪೋಟಕ ಬ್ಯಾಟ್ ಮಾಡಿದರು. ಅವರು 19 ಎಸೆತಗಳಲ್ಲಿ 36 ರನ್ ಸಿಡಿಸಿದರು. ಅಂದ ಹಾಗೆ ಪಂದ್ಯದ ಮೊದಲನೇ ಎಸೆತದಲ್ಲಿ ಬೌಂಡರಿ ಬಾರಿಸಿ ಜೈಸ್ವಾಲ್ ವಿಶೇಷ ದಾಖಲೆಯನ್ನು ಬರೆದಿದ್ದಾರೆ.



ರಾಜಸ್ಥಾನ್ ರಾಯಲ್ಸ್ಗೆ 6 ವಿಕೆಟ್ ಜಯ
ಮಂಗಳವಾರ ದಿಲ್ಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 6 ವಿಕೆಟ್ಗಳಿಂದ ಗೆಲುವು ಸಾಧಿಸಿತು. ಆ ಮೂಲಕ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಪಡೆಯಿತು. ಆದರೆ, ರಾಜಸ್ಥಾನ್ ತಂಡ ಈಗಾಗಲೇ ಪ್ಲೇಆಫ್ಸ್ ರೇಸ್ನಿಂದ ಹೊರ ಬಿದ್ದಿದೆ.

187 ರನ್ ಕಲೆ ಹಾಕಿದ್ದ ಸಿಎಸ್ಕೆ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ತನ್ನ ಪಾಲಿನ 20 ಓವರ್ಗಳಿಗೆ 8 ವಿಕೆಟ್ಗಳ ನಷ್ಟಕ್ಕೆ 187 ರನ್ಗಳನ್ನು ಕಲೆ ಹಾಕಿತ್ತು. ಆ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 188 ರನ್ಗಳ ಗುರಿಯನ್ನು ನೀಡಿತ್ತು. ಸಿಎಸ್ಕೆ ಪರ ಆಯುಷ್ ಮ್ಹಾತ್ರೆ 43 ರನ್ ಳಗಳಿಸಿದರೆ, ಡೆವಾಲ್ಡ್ ಬ್ರೆವಿಸ್ 42 ರನ್ ಗಳಿಸಿದರು.

ರಾಜಸ್ಥಾನ್ ರಾಯಲ್ಸ್: 188
ಗುರಿ ಹಿಂಬಾಲಿಸಿದ ರಾಜಸ್ಥಾನ್ ರಾಯಲ್ಸ್ ತಂಡ 17.1 ಓವರ್ಗಳಿಗೆ 4 ವಿಕೆಟ್ಗಳ ನಷ್ಟಕ್ಕೆ 188 ರನ್ಗಳನ್ನು ಕಲೆ ಹಾಕಿತು. ಆ ಮೂಲಕ 6 ವಿಕೆಟ್ ಗೆಲುವು ಪಡೆಯಿತು. ಯಶಸ್ವಿ ಜೈಸ್ವಾಲ್ 36 ರನ್, ವೈಭವ್ ಸೂರ್ಯವಂಶಿ 57 ರನ್ ಹಾಗೂ ಸಂಜು ಸ್ಯಾಮ್ಸನ್ 41 ರನ್ ಗಳಿಸಿದರು. ಕೊನೆಯಲ್ಲಿ ಧ್ರುವ್ ಜುರೆಲ್ 31 ರನ್ ಗಳಿಸಿದರು.

ವಿಶೇಷ ದಾಖಲೆ ಬರೆದ ಜೈಸ್ವಾಲ್
ಆರ್ಆರ್ ಪರ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಪಂದ್ಯದ ಮೊಟ್ಟ ಮೊದಲ ಎಸೆತದಲ್ಲಿಯೇ ಬೌಂಡರಿಯನ್ನು ಬಾರಿಸಿದರು. ಆ ಮೂಲಕ ಪ್ರಸಕ್ತ ಟೂರ್ನಿಯ ಐದು ಪಂದ್ಯಗಳ ಅವರು ಮೊಟ್ಟ ಮೊದಲ ಎಸೆತಗಳಲ್ಲಿ ಬೌಂಡರಿಗಳನ್ನು ಬಾರಿಸಿದ್ದಾರೆ. ಆ ಮೂಲಕ ಈ ಸೀಸನ್ನಲ್ಲಿ ಹೆಚ್ಚು ಬಾರಿ ಮೊದಲ ಬಾಲ್ನಲ್ಲಿ ಬೌಂಡರಿ ಸಿಡಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.

ಎರಡು ಆವೃತ್ತಿಗಳಲ್ಲಿ 5 ಬಾರಿ ಮೊದಲ ಎಸೆತದಲ್ಲಿ ಬೌಂಡರಿ
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 2023 ಮತ್ತು 2025ರ ಎರಡು ಆವೃತ್ತಿಗಳಲ್ಲಿ ಮೊದಲ ಎಸೆತದಲ್ಲಿ ಬೌಂಡರಿಯನ್ನು ಯಶಸ್ವಿ ಜೈಸ್ವಾಲ್ ಐದು ಬಾರಿ ಬಾರಿಸಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್ಮನ್ ಆಗಿದ್ದಾರೆ.

13 ಬಾರಿ ಮೊದಲ ಎಸೆತದಲ್ಲಿ ಬೌಂಡರಿ
ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಯಶಸ್ವಿ ಜೈಸ್ವಾಲ್ ಅವರು 13 ಪಂದ್ಯಗಳಲ್ಲಿ ಮೊಟ್ಟ ಮೊದಲ ಬಾರಿ ಬೌಂಡರಿಯನ್ನು ಬಾರಿಸಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಮೊಟ್ಟ ಮೊದಲ ಎಸೆತದಲ್ಲಿ ಬೌಂಡರಿಯನ್ನು ಬಾರಿಸಿದ್ದಾರೆ ಹಾಗೂ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್ಮನ್ ಆಗಿದ್ದಾರೆ.

ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದವರು
ಐಪಿಎಲ್ ಟೂರ್ನಿಯಲ್ಲಿ ಯಶಸ್ವಿ ಜೈಸ್ವಾಲ್ 13 ಬಾರಿ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿ ಈ ಸಾಧಕರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ವಿರಾಟ್ ಕೊಹ್ಲಿ 11 ಬಾರಿ ಬೌಂಡರಿ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಕ್ವಿಂಟನ್ ಡಿ ಕಾಕ್ (11 ಬಾರಿ) ಹಾಗೂ ರಾಬಿನ್ ಉತ್ತಪ್ಪ (10 ಬಾರಿ) ಇದ್ದಾರೆ.