Actor Rishab Shetty: 'ಕಾಂತಾರʼಕ್ಕಿಂತೂ ಮೊದಲೇ ಸೂಪರ್ ಹಿಟ್ ಆದ ರಿಷಬ್ ಶೆಟ್ಟಿ ಚಿತ್ರಗಳಿವು
ವಾಟರ್ ಕ್ಯಾನ್ ವ್ಯವಹಾರ ನಡೆಸುತ್ತಿದ್ದ ಯುವಕನೊಬ್ಬ ಇಂದು ಇಡೀ ದೇಶವೇ ಗುರುತಿಸುವ ನಾಯಕ, ನಿರ್ದೇಶಕನಾಗಿ ಬೆಳೆದಿದ್ದಾರೆ ಎಂದರೆ ಅದು ಸುಲಭದ ಮಾತಲ್ಲ. ಈ ಯಶಸ್ಸಿನ ಪ್ರಯಾಣದ ಹಿಂದೆ ಅದೆಷ್ಟೋ ತ್ಯಾಗ ಇದೆ, ಕಠಿಣ ಪರಿಶ್ರಮ ಇದೆ, ಕಂಡ ಕನಸು ನನಸು ಮಾಡಬೇಕೆಂಬ ಛಲ ಇದೆ. ನಾವು ಈಗ ಹೇಳ ಹೊರಟಿರುವುದು ರಿಷಬ್ ಶೆಟ್ಟಿ ಎಂಬ ಕನ್ನಡದ ಹೆಮ್ಮೆಯ ನಟ, ನಿರ್ದೇಶಕನ ಬಗ್ಗೆ. ಕುಂದಾಪುರದ ಕೆರಾಡಿ ಎನ್ನುವ ಸಣ್ಣ ಹಳ್ಳಿಯಿಂದ ಬಂದು ಇದೀಗ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಜನಪ್ರಿಯರಾಗಿದ್ದಾರೆ. 2022ರಲ್ಲಿ ರಿಲೀಸ್ ಆದ ʼಕಾಂತಾರʼ, ʼಕಾಂತಾರ: ಚಾಪ್ಟರ್ 1' ಚಿತ್ರಗಳ ಮೂಲಕ ಗಮನ ಸೆಳೆದ ಅವರು ಅದಕ್ಕೂ ಮೊದಲು ಒಂದಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ನೀಡಿದ್ದಾರೆ. ಆ ಕುರಿತಾದ ವಿವರ ಇಲ್ಲಿದೆ.

-


ʼರಿಕ್ಕಿʼ
2012ರಲ್ಲಿ ತೆರೆಕಂಡ ʼತುಗ್ಲಕ್ʼ ಚಿತ್ರದ ಮೂಲಕ ನಟನಾಗಿ ಸ್ಯಾಂಡಲ್ವುಡ್ಗೆ ಕಾಲಿಟ್ಟ ರಿಷಬ್ ಶೆಟ್ಟಿ ನಿರ್ದೇಶನದ ಮೊದಲ ಚಿತ್ರ ʼರಿಕ್ಕಿʼ. ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯಾ ಜೋಡಿಯಾಗಿ ನಟಿಸಿದ ಈ ಸಿನಿಮಾ 2016ರ ಜನವರಿ 22ರಂದು ತೆರೆಗೆ ಬಂತು. ನಕ್ಸಲೈಟ್ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆಯಿತು. ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಯಶಸ್ಸು ಗಳಿಸಿದರೂ ನಿರ್ದೇಶಕನಾಗಿ ರಿಷಬ್ ಶೆಟ್ಟಿ ಭರ್ಜರಿ ಗೆಲುವು ಕಂಡರು. ಆ ಮೂಲಕ ಕನ್ನಡಕ್ಕೊಬ್ಬ ಭರವಸೆಯ ನಿರ್ದೇಶಕ ಸಿಕ್ಕಂತಾಯ್ತು.

ʼಕಿರಿಕ್ ಪಾರ್ಟಿʼ
ಇಡೀ ದೇಶದ ಗಮನ ಸೆಳೆದ ಚಿತ್ರ ʼಕಿರಿಕ್ ಪಾರ್ಟಿʼ. ಇದು ರಿಷಬ್ ನಿರ್ದೇಶನದ 2ನೇ ಚಿತ್ರ. ಇದು ಕೂಡ 2016ರಲ್ಲೇ ರಿಲೀಸ್ ಆಯ್ತು. ಡಿಸೆಂಬರ್ 30ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಯೇ ನಾಯಕನಾಗಿ ಕಾಣಿಸಿಕೊಂಡರು. ಈ ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ ನಾಯಕಿಯರಾಗಿ ಪರಿಚಿತಗೊಂಡರು. ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ ಈ ಚಿತ್ರ ತೆಲುಗಿಗೂ ರಿಮೇಕ್ ಆಯ್ತು. ಮೊದಲ ಚಿತ್ರದಲ್ಲಿ ನಕ್ಸಲ್ ಸಮಸ್ಯೆಯಂತಹ ಗಂಭೀರ ವಿಚಾರ ಎತ್ತಿಕೊಂಡಿದ್ದ ರಿಷಬ್ 2ನೇ ಸಿನಿಮಾದಲ್ಲಿ ಕಾಲೇಜು ಸ್ಟೋರಿಯನ್ನು ಮಜವಾಗಿ ತೆರೆಗೆ ತಂದು ಗೆಲುವು ಕಂಡರು.

ʼಸ.ಹಿ.ಪ್ರಾ.ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈʼ
ಈ ವಿಶಿಷ್ಟ ಹೆಸರಿನ ಚಿತ್ರದ ಮೂಲಕ ರಿಷಬ್ ಮತ್ತೊಮ್ಮೆ ಗಮನ ಸೆಳೆದರು. ಗಡಿನಾಡು ಕಾಸರಗೋಡಿನ ಕನ್ನಡಿಗರು ಮಲಯಾಳಂ ಹೇರಿಕೆಯಿಂದ ಎದುರಿಸುತ್ತಿರುವ ಸಮಸ್ಯೆಯನ್ನು ಈ ಚಿತ್ರದಲ್ಲಿ ರಿಷಬ್ ಹಾಸ್ಯದ ಮೂಲಕ ಪ್ರಸ್ತುತಪಡಿಸಿದ ರೀತಿ ಗಮನ ಸೆಳೆಯಿತು. ಮಕ್ಕಳ ಚಿತ್ರವಾದರೂ ಇಡೀ ರಾಜ್ಯದ ಜನತೆ ಎರಡೂ ಕೈಚಾಚಿ ಸ್ವಾಗತಿಸಿದರು. ಹಿರಿಯ ನಟ ಅನಂತ್ ನಾಗ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಈ ಸಿನಿಮಾದಲ್ಲಿ ರಂಜನ್, ಪ್ರಮೋದ್ ಶೆಟ್ಟಿ, ಸಪ್ತಾ ಪಾವೂರ್, ಪ್ರಕಾಶ್ ತುಮ್ಮಿನಾಡು ಮತ್ತಿತರರು ನಟಿಸಿದರು. ಅತ್ಯುತ್ತಮ ಮಕ್ಕಳ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದೆ. ಇದು 2018ರ ಆಗಸ್ಟ್ 24ರಂದು ತೆರೆಗೆ ಬಂತು.

ʼಕಾಂತಾರʼ
2022ರ ಸೆಪ್ಟೆಂಬರ್ 30ರಂದು ಬಿಡುಗಡೆಯಾದ ʼಕಾಂತಾರʼ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜತೆಗೆ ರಿಷನ್ ನಾಯಕನಾಗಿಯೂ ನಟಿಸಿದರು. ಕನ್ನಡದತ್ತ ಇಡೀ ಜಾಗತಿಕ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ 16 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದೆ. ಬಾಕ್ಸ್ ಆಫೀಸ್ನಲ್ಲಿ 400 ಕೋಟಿ ರೂ.ಗಿಂತ ಹೆಚ್ಚು ದೋಚಿದ ಈ ಚಿತ್ರದಲ್ಲಿ ಸಪ್ತಮಿ ಗೌಡ, ಮಾನಸಿ ಸುಧೀರ್, ಕಿಶೋರ್, ಅಚ್ಯುತ್ ಕುಮಾರ್ ಮತ್ತಿತರರು ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಕರಾವಳಿಯ ವಿಶಿಷ್ಟ ಸಂಸ್ಕೃತಿ ಭೂತಾರಾಧನೆಯನ್ನು, ಕಂಬಳವನ್ನು ರಿಷಬ್ ಶೆಟ್ಟಿ ಪರಿಚಯಿಸಿದರು.

ʼಕಾಂತಾರ: ಚಾಪ್ಟರ್ 1'
ಅಕ್ಟೋಬರ್ 2ರಂದು ತೆರೆಗೆ ಬಂದಿರುವ ʼಕಾಂತಾರ: ಚಾಪ್ಟರ್ 1' ಸದ್ಯ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿದೆ. ʼಕಾಂತಾರʼ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ಮತ್ತೊಮ್ಮೆ ರಿಷಬ್ ನಟನಾಗಿ, ನಿರ್ದೇಶಕನಾಗಿ ಗಮನ ಸೆಳೆದಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸುಮಾರು 125 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಈ ಚಿತ್ರ ಈಗಾಗಲೇ 600 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದು, ಜಯರಾಮ್, ಗುಲ್ಶನ್ ದೇವಯ್ಯ, ರಾಕೇಶ್ ಪೂಜಾರಿ ಮತ್ತಿತರರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.