Chennamma Deve Gowda: ಬೆಂಗಳೂರಿನಲ್ಲಿ ಚೆನ್ನಮ್ಮ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ
ಬೆಂಗಳೂರಿನಿಂದ ಹೊಳೆನರಸೀಪುರಕ್ಕೆ ಹೊರಟ ಚೆನ್ನಮ್ಮ ಅಂತಿಮ ಯಾತ್ರೆ ಹೊರಟ ವಾಹನದಲ್ಲಿ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮತ್ತು ಮೊಮ್ಮಕ್ಕಳು ಕುಳಿದಿದ್ದಾರೆ. ಹಾಸನ ಕಡೆಗೆ ಹೊರಟ ಚೆನ್ನಮ್ಮ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರು, ಅಭಿಮಾನಿಗಳು ಕಣ್ಣೀರ ವಿದಾಯ ಹೇಳಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಚೆನ್ನಮ್ಮ ಅಂತಿಮ ಪಡೆದ ಸಾರ್ವಜನಿಕರು. (ಚಿತ್ರಗಳು: ಸುಧಾಕರ್ ದೇವರಾಜ್-ವಿಶ್ವವಾಣಿ) -
ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ಚೆನ್ನಮ್ಮ ಅವರ ಅಂತಿಮ ದರ್ಶನಕ್ಕೆ ಭಾನುವಾರ ಜನಸಾಗರವೇ ಹರಿದುಬಂದಿತ್ತು. ರಾಜಕೀಯ, ಸಿನಿಮಾ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಅಂತಿಮ ದರ್ಶನ ಪಡೆದಿದ್ದಾರೆ.
ರಾಜಕೀಯ ನಾಯಕರಾದ ಪ್ರಲ್ಹಾದ್ ಜೋಶಿ, ಆರ್.ಅಶೋಕ್, ಹಿರಿಯ ನಟ ದೊಡ್ಡಣ್ಣ ನಟರಾದ ದುನಿಯಾ ವಿಜಯ್, ಡಾಲಿ ಧನಂಜಯ್, ನಟಿ ಪೂಜಾ ಗಾಂಧಿ ಸೇರಿ ಹಲವು ಗಣ್ಯರು ಅಂತಿಮ ದರ್ಶನಕ್ಕೆ ಆಗಮಿಸಿದ್ದರು.
ಅಂತಿಮ ದರ್ಶನದ ಬಳಿಕ ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಅಂತಿಮ ಯಾತ್ರೆಯನ್ನು ಬೆಂಗಳೂರಿನ ಪದ್ಮನಾಭನಗರದ ನಿವಾಸದಿಂದ ಹೊಳೆನರಸೀಪುರಕ್ಕೆ ತೆಗೆದುಕೊಂಡುಹೋಗಲಾಗುತ್ತಿದೆ.
ಸಾರ್ವಜನಿಕರು ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಮಾರ್ಗಮಧ್ಯೆ ಅಂತಿಮ ನಮನ ಸಲ್ಲಿಸಲು ಅನುಕೂಲವಾಗುವಂತೆ ಬೆಂಗಳೂರಿನಿಂದ ಹಾಸನದವರೆಗೆ ಒಟ್ಟು 10 ಪ್ರಮುಖ ಸ್ಥಳಗಳಲ್ಲಿ ವಿಶೇಷ ಅವಕಾಶ ಕಲ್ಪಿಸಲಾಗಿದೆ.
ಅಂತಿಮ ಸಂಸ್ಕಾರಕ್ಕಾಗಿ ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಹಾಗೂ ಕುಟುಂಬಸ್ಥರು ಹೊಳೆನರಸೀಪುರಕ್ಕೆ ಪ್ರಯಾಣ ಬೆಳೆಸಿದರು.
ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಾಗಲಿರುವ ಈ ಯಾತ್ರೆಯು ನೆಲಮಂಗಲ ಕ್ರಾಸ್, ಸೋಲೂರು ಕ್ರಾಸ್, ಮರೂರು ಹ್ಯಾಂಡ್ ಪೋಸ್ಟ್, ಕುಣಿಗಲ್ ಕ್ರಾಸ್, ಬೆಳ್ಳೂರು ಕ್ರಾಸ್, ಕದಬಳ್ಳಿ ಕ್ರಾಸ್, ಹಿರಿಸಾವೆ ಕ್ರಾಸ್, ಚನ್ನರಾಯಪಟ್ಟಣ, ಎಲೆಯೂರು (ಉದಯಪುರ), ಶಾಂತಿಗ್ರಾಮ, ಬೂವನಹಳ್ಳಿ ಕ್ರಾಸ್, ಹಾಸನ ಡೈರಿ ಸರ್ಕಲ್, ಎನ್ ಆರ್ ಸರ್ಕಲ್ ಹಾಗೂ ಮೊಸಳೆ ಹೊಸಹಳ್ಳಿ ಮಾರ್ಗವಾಗಿ ಹೊಳೆನರಸೀಪುರವನ್ನು ತಲುಪಲಿದೆ.
ಅಂತಿಮ ಯಾತ್ರೆಯ ಹಿನ್ನೆಲೆಯಲ್ಲಿ ಬೆಂಗಳೂರು-ಹಾಸನ ಹೆದ್ದಾರಿಯುದ್ದಕ್ಕೂ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಇಂದು ರಾತ್ರಿ ಹೊಳೆನರಸೀಪುರದಲ್ಲಿರುವ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆಗಾಗಿ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಇನ್ನು ಸೋಮವಾರ ಬೆಳಗ್ಗೆ ಮಧ್ಯಾಹ್ನ ಧಾರ್ಮಿಕ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.