ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs ENG: ರೋಹಿತ್‌ ಶರ್ಮಾ ದಾಖಲೆಯ ಶತಕ ವ್ಯರ್ಥ, ಇಂಗ್ಲೆಂಡ್‌ ವಿರುದ್ಧ ಒಡಿಐ ಸರಣಿಯನ್ನೂ ಸೋತ ಭಾರತ!

IND vs ENG 3rd ODI Match Highlights: ರೋಹಿತ್‌ ಶರ್ಮಾ ಅವರ ದಾಖಲೆಯ ಶತಕದ ಹೊರತಾಗಿಯೂ ಬೌಲರ್‌ಗಳ ವೈಫಲ್ಯದಿಂದ ಭಾರತ ತಂಡ, ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 27 ರನ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ 1-2 ಅಂತರದಲ್ಲಿ ಏಕದಿನ ಸರಣಿಯನ್ನೂ ಆಂಗ್ಲರು ಎದುರು ಪ್ರವಾಸಿಗರು ಕಳೆದುಕೊಂಡರು.

ರೋಹಿತ್‌ ಶರ್ಮಾ ಶತಕ ವ್ಯರ್ಥ, ಒಡಿಐ ಸರಣಿಯನ್ನೂ ಸೋತ ಭಾರತ!

ರೋಹಿತ್‌ ಶರ್ಮಾ ಶತಕದ ಹೊರತಾಗಿಯೂ ಒಡಿಐ ಸರಣಿ ಸೋತ ಭಾರತ. -

Profile
Ramesh Kote Jul 20, 2026 12:06 AM

ಲಂಡನ್‌: ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾರ (Rohit Sharma) ದಾಖಲೆಯ ಶತಕದ ಹೊರತಾಗಿಯೂ ಬೌಲರ್‌ಗಳ ವೈಫಲ್ಯದಿಂದ ಭಾರತ ತಂಡ, ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ(IND vs ENG) 27 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿಯೂ ಟೀಮ್‌ ಇಂಡಿಯಾ, ಆಂಗ್ಲರು ಎದುರು 1-2 ಅಂತರದಲ್ಲಿ ಪರಾಭವಗೊಂಡಿತು. ಇದರೊಂದಿಗೆ ಟಿ20ಐ ಸರಣಿಯ ಬಳಿಕ ಏಕದಿನ ಸರಣಿಯನ್ನೂ ಸೋಲುವ ಮೂಲಕ ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡದ ಇಂಗ್ಲೆಂಡ್‌ ಪ್ರವಾಸ ಅಧಿಕೃತವಾಗಿ ಅಂತ್ಯವಾಯಿತು.

ಭಾನುವಾರ ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಅಂಗಣದಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ನೀಡಿದ್ದ 388 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ರೋಹಿತ್‌ ಶರ್ಮಾ (138 ರನ್‌) ಶತಕ ಹಾಗೂ ಶುಭಮನ್‌ ಗಿಲ್‌ ಮತ್ತು ವಿರಾಟ್‌ ಕೊಹ್ಲಿ ಅವರ ಅರ್ಧಶತಕಗಳ ಮೂಲಕ ಕಠಿಣ ಹೋರಾಟ ನಡೆಸಿದರೂ ತನ್ನ ಪಾಲಿನ 50 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್‌ಗಳ ನಷ್ಟಕ್ಕೆ 360 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು.

IND vs ENG: ಲಾರ್ಡ್ಸ್‌ನಲ್ಲಿ ಮೊದಲ ಒಡಿಐ ಶತಕ ಸಿಡಿಸಿ ದೊಡ್ಡ ದಾಖಲೆ ಬರೆದ ರೋಹಿತ್‌ ಶರ್ಮಾ!

ರೋಹಿತ್‌ ಶರ್ಮಾ ದಾಖಲೆಯ ಶತಕ ವ್ಯರ್ಥ

388 ರನ್‌ಗಳ ಬೃಹತ್‌ ಮೊತ್ತದ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ರೋಹಿತ್‌ ಶರ್ಮಾಗೆ ದೊಡ್ಡ ಇನಿಂಗ್ಸ್‌ ಆಡಬೇಕೆಂಬ ಸವಾಲು ಎದುರಾಗಿತ್ತು. ಅದರಂತೆ ಅವರು ಕಳೆದ ಎರಡು ಪಂದ್ಯಗಳ ವೈಫಲ್ಯವನ್ನು ಮೆಟ್ಟಿನಿಂತು ಕ್ರಿಕೆಟ್‌ ಕಾಶಿ ಲಾರ್ಡ್ಸ್‌ ಅಂಗಣದಲ್ಲಿ ಮೊದಲ ಒಡಿಐ ಶತಕವನ್ನು ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಬರೆದರು. 84 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದ ಹಿಟ್‌ಮ್ಯಾನ್‌, ಜೇಕಬ್‌ ಬೆಥೆಲ್‌ಗೆ ಬೌಲ್ಡ್‌ ಆಗುವುದಕ್ಕೂ ಮುನ್ನ 110 ಎಸೆತಗಳಲ್ಲಿ 138 ರನ್‌ಗಳ ದೊಡ್ಡ ಇನಿಂಗ್ಸ್‌ ಆಡಿದರು. ಇದರ ಜೊತೆಗೆ ಶುಭಮನ್‌ ಗಿಲ್‌ ಜೊತೆಗೆ 147 ರನ್‌ ಹಾಗೂ ವಿರಾಟ್‌ ಕೊಹ್ಲಿ ಜೊತೆಗೆ 113 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ರೋಹಿತ್‌ ಆಡಿ ಭಾರತವನ್ನು ಗೆಲುವಿನ ಹಾದಿಯಲ್ಲಿ ಇರಿಸಿದರು.



ಇದಕ್ಕೂ ಮುನ್ನ ನಾಯಕ ಶುಭಮನ್‌ ಗಿಲ್‌ ಅವರು 84 ಎಸೆತಗಳಲ್ಲಿ 77 ರನ್‌ಗಳನ್ನು ಗಳಿಸಿ ಶತಕದಂಚಿನಲ್ಲಿ ಆದಿಲ್‌ ರಶೀದ್‌ಗೆ ಕ್ಲೀನ್‌ ಬೌಲ್ಡ್‌ ಆದರು. ವಿರಾಟ್‌ ಕೊಹ್ಲಿ ಮಧ್ಯಮ ಓವರ್‌ಗಳಲ್ಲಿ ಅತ್ಯುತ್ತಮ ಬ್ಯಾಟ್‌ ಮಾಡಿ 60 ಎಸೆತಗಳಲ್ಲಿ 74 ರನ್‌ ಗಳಿಸಿದ ಬಳಿಕ 46ನೇ ಓವರ್‌ನಲ್ಲಿ ಸ್ಯಾಮ್‌ ಕರನ್‌ಗೆ ವಿಕೆಟ್‌ ಒಪ್ಪಿಸಿದರು. ಶ್ರೇಯಸ್‌ ಅಯ್ಯರ್‌ಗೂ ಮುನ್ನ ಬಂದಿದ್ದ ಇಶಾನ್‌ ಕಿಶನ್‌ ಸ್ಪೋಟಕ ಬ್ಯಾಟ್‌ ಮಾಡುವಲ್ಲಿ ವಿಫಲರಾದರು. ಶ್ರೇಯಸ್‌ ಅಯ್ಯರ್‌ ಡಕ್‌ಔಟ್‌ ಹಾಗೂ ಕೆಎಲ್‌ ರಾಹುಲ್‌ 12 ರನ್‌ಗೆ ಸೀಮಿತರಾದರು. ಆದರೆ, ಗುರ್ನೂರ್‌ ಬ್ರಾರ್‌ (18* ರನ್)‌ ಹಾಗೂ ಅರ್ಷದೀಪ್‌ ಸಿಂಗ್‌ (15* ರನ್‌) ಗಮನ ಸೆಳೆದರೂ ಕೇವಲ 27 ರನ್‌ಗಳಿಗೆ ಭಾರತ ಸೋಲು ಅನುಭವಿಸಬೇಕಾಯಿತು. ಇಂಗ್ಲೆಂಡ್‌ ತಂಡದ ಪರ ಸ್ಯಾಮ್‌ ಕರನ್‌ 4 ವಿಕೆಟ್‌ ಕಿತ್ತರು.



ಡಕೆಟ್‌-ಬೆಥೆಲ್‌ ಜುಗಲ್‌ಬಂದಿ

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಿಸಿಕೊಂಡಿದ್ದ ಇಂಗ್ಲೆಂಡ್‌ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಬೆನ್‌ ಡಕೆಟ್‌ ಹಾಗೂ ಜೇಕಬ್‌ ಬೆಥೆಲ್‌ ಮೊದಲನೇ ವಿಕೆಟ್‌ಗೆ 192 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಆತಿಥೇಯರಿಗೆ ಭರ್ಜರಿ ಅಡಿಪಾಯವನ್ನು ಹಾಕಿದರು. ಆರಂಭಿಕನಾಗಿ ಈ ಪಂದ್ಯದಲ್ಲಿ ಭರ್ಜರಿ ಬ್ಯಾಟ್‌ ಮಾಡಿದ ಜೇಕಬ್‌ ಬೆಥೆಲ್‌, 93 ಎಸೆತಗಳಲ್ಲಿ 91 ರನ್‌ಗಳನ್ನು ದಾಖಲಿಸಿ ಶತಕದಂಚಿನಲ್ಲಿ ವಿಕೆಟ್‌ ಒಪ್ಪಿಸಿದರು. ಬೆಥಲ್‌ ವಿಕೆಟ್‌ ಒಪ್ಪಿಸಿದ ಬಳಿಕ ಅಜೇಯ 74 ರನ್‌ ಗಳಿಸಿದ ಜೋ ರೂಟ್‌ ಅವರ ಜೊತೆಗೆ ಡಕೆಟ್‌ 101 ರನ್‌ಗಳ ಮತ್ತೊಂದು ಜೊತೆಯಾಟವನ್ನು ಆಡಿದರು.



ಬೆನ್‌ ಡಕೆಟ್‌ ಭರ್ಜರಿ ಶತಕ

ಅದ್ಭುತ ಬ್ಯಾಟ್‌ ಮಾಡಿದ ಬೆನ ಡಕೆಟ್‌ ದೀರ್ಘಾವಧಿ ಭಾರತದ ಬೌಲರ್‌ಗಳನ್ನು ಕಾಡಿದರು. ಅವರು ಆಡಿದ 135 ಎಸೆತಗಳಲ್ಲಿ ಒಂದು ಶತಕ ಹಾಗೂ 18 ಬೌಂಡರಿಗಳೊಂದಿಗೆ 141 ರನ್‌ ಗಳಿಸಿ ಇಂಗ್ಲೆಂಡ್‌ ತಂಡವನ್ನು 300ರ ಗಡಿ ದಾಟಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು. ಈ ಇನಿಂಗ್ಸ್‌ ಮೂಲಕ ಲಾರ್ಡ್ಸ್‌ ಅಂಗಣದಲ್ಲಿ ವೈಯಕ್ತಿಕ ಗರಿಷ್ಠ ಮೊತ್ತವನ್ನು ದಾಖಲಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡರು ಹಾಗೂ ವಿಂಡೀಸ್‌ ದಿಗ್ಗಜ ವಿವಿಯನ್‌ ರಿಚರ್ಡ್ಸ್‌ ದಾಖಲೆಯನ್ನು ಮುರಿದರು. 44ನೇ ಓವರ್‌ನಲ್ಲಿ ಡಕೆಟ್‌ ಅವರನ್ನು ಪ್ರಿನ್ಸ್‌ ಯಾದವ್‌ ಔಟ್‌ ಮಾಡಿದರು.

IND vs ENG: 141 ರನ್‌ ಸಿಡಿಸಿ ವಿವಿಯನ್‌ ರಿಚರ್ಡ್ಸ್‌ರ 47 ವರ್ಷಗಳ ದಾಖಲೆ ಮುರಿದ ಬೆನ್‌ ಡಕೆಟ್‌!

ಜೋಸ್‌ ಬಟ್ಲರ್‌ ಸ್ಪೋಟಕ ಬ್ಯಾಟಿಂಗ್‌

45 ಓವರ್‌ಗಳ ಅಂತ್ಯಕ್ಕೆ ಇಂಗ್ಲೆಂಡ್‌ ತಂಡ ಎರಡು ವಿಕೆಟ್‌ಗಳನ್ನು ಕಳೆದುಕೊಂಡು 305 ರನ್‌ ಗಳಿಸಿತ್ತು. ಈ ವೇಳೆ ಜೋಸ್‌ ಬಟ್ಲರ್‌ ಅವರ ಆಕ್ರಮಣಕಾರಿ ಇನಿಂಗ್ಸ್‌ ಪಂದ್ಯದ ದಿಕ್ಕನ್ನು ಬದಲಿಸಿತು. ಅವರು ಕೇವಲ 13 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 315.38ರ ಸ್ಟ್ರೈಕ್‌ ರೇಟ್‌ನಲ್ಲಿ 41 ರನ್‌ ಚಚ್ಚಿದರು ಹಾಗೂ ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡುತ್ತಿದ್ದ ಜೋ ರೂಟ್‌ ಕೂಡ 48 ಎಸೆತಗಳಲ್ಲಿಅಜೇಯ 74 ರನ್‌ ಗಳಿಸಿದರು. ಅದರಲ್ಲಿಯೂ ವಿಶೇಷವಾಗಿ ಕೊನೆಯ 5 ಓವರ್‌ಗಳಲ್ಲಿ ಆಂಗ್ಲರು 82 ರನ್‌ಗಳನ್ನು ಸಿಡಿಸಿದರು. ಇದು ಪಂದ್ಯದ ದಿಕ್ಕನ್ನು ಬದಲಿಸಿತು.

ಜಸ್‌ಪ್ರೀತ್‌ ಬುಮ್ರಾ ಅನುಪಸ್ಥಿತಿಯಲ್ಲಿ ಭಾರತ ತಂಡದ ಯುವ ಬೌಲಿಂಗ್‌ ಪಡೆ ಪರಿಣಾಮಕಾರಿಯಾಗುವಲ್ಲಿ ವಿಫಲವಾಯಿತು. ಇದರ ಲಾಭವನ್ನು ಪಡೆದ ಇಂಗ್ಲೆಂಡ್‌ ತನ್ನ ಪಾಲಿನ 50 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 387 ರನ್‌ಗಳನ್ನು ಕಲೆ ಹಾಕಿತು. ಭಾರತದ ಪರ ಪ್ರಸಿಧ್‌ ಕೃಷ್ಣ ಎರಡು ವಿಕೆಟ್‌ ಕಿತ್ತರು.‌

IND vs ENG: ಲಾರ್ಡ್ಸ್‌ ಪಂದ್ಯದಲ್ಲಿ ಜಸ್‌ಪ್ರೀತ್‌ ಬುಮ್ರಾ ಏಕೆ ಆಡುತ್ತಿಲ್ಲ? ಕಾರಣ ತಿಳಿಸಿದ ಶುಭಮನ್‌ ಗಿಲ್‌!

ಸ್ಕೋರ್‌ ವಿವರ

ಇಂಗ್ಲೆಂಡ್‌: 50 ಓವರ್‌ಗಳಿಗೆ 387-3 (ಬೆನ್‌ ಡಕೆಟ್‌ 141 ರನ್‌, ಜೇಕಬ್‌ ಬೆಥೆಲ್‌ 91 ರನ್‌, ಜೋ ರೂಟ್‌ 74* ರನ್‌, ಜೋಸ್‌ ಬಟ್ಲರ್‌ 41* ರನ್‌; ಪ್ರಸಿಧ್‌ ಕೃಷ್ಣ 69ಕ್ಕೆ 2)

ಭಾರತ: 50 ಓವರ್‌ಗಳಿಗೆ 360-7 (ರೋಹಿತ್‌ ಶರ್ಮಾ 138 ರನ್‌, ಶುಭಮನ್‌ ಗಿಲ್‌ 77 ರನ್‌, ವಿರಾಟ್‌ ಕೊಹ್ಲಿ 74 ರನ್‌; ಸ್ಯಾಮ್‌ ಕರನ್‌ 75ಕ್ಕೆ 4, ಜೇಕಬ್‌ ಬೆಥೆಲ್‌ 49ಕ್ಕೆ 1)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಜೇಕಬ್‌ ಬೆಥೆಲ್‌

ಸರಣಿ ಶ್ರೇಷ್ಠ ಪ್ರಶಸ್ತಿ: ಜೋ ರೂಟ್