Pahalgam Terror Attack: ದಾಳಿ ನಡೆದ ಪಹಲ್ಗಾಮ್ನ ಬೈಸರನ್ ಕಣಿವೆ ಹೇಗಿದೆ ಗೊತ್ತಾ? ಕಾರ್ಯಾಚರಣೆಗೆ ಎದುರಾಗುವ ಸವಾಲೇನು?
ಭೂಲೋಕದ ಸ್ವರ್ಗದಂತ್ತಿದ್ದ ಕಣಿವೆ ನಾಡು ಜಮ್ಮು ಕಾಶ್ಮೀರದಲ್ಲಿ ಸ್ಮಶಾನ ಮೌನ ಆವರಿಸಿದೆ. ಪ್ರಕೃತಿ ಸೌಂದರ್ಯವನ್ನು ಸವಿಯಲು ತೆರಳಿದ್ದ ಪ್ರವಾಸಿಗರು ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಈ ವರೆಗೆ 26 ಜನರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.



ಭೂಲೋಕದ ಸ್ವರ್ಗದಂತ್ತಿದ್ದ ಕಣಿವೆ ನಾಡು ಜಮ್ಮು ಕಾಶ್ಮೀರದಲ್ಲಿ ಸ್ಮಶಾನ ಮೌನ ಆವರಿಸಿದೆ. ಪ್ರಕೃತಿ ಸೌಂದರ್ಯವನ್ನು ಸವಿಯಲು ತೆರಳಿದ್ದ ಪ್ರವಾಸಿಗರು ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಈ ವರೆಗೆ 26 ಜನರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. 35 ವರ್ಷಗಳ ಬಳಿಕ ಕಾಶ್ಮೀರದಲ್ಲಿ ಇಷ್ಟು ದೊಡ್ಡ ದಾಳಿ ನಡೆದಿದೆ ಎಂದು ಹೇಳಲಾಗಿದೆ. ದಾಳಿ ನಡೆದ ಸ್ಥಳವು ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಶ್ರೀನಗರದಿಂದ ಸುಮಾರು 85 ಕಿಲೋಮೀಟರ್ ದೂರದಲ್ಲಿದೆ. ಈ ಪ್ರದೇಶವನ್ನೇ ಉಗ್ರರು ಆಯ್ಕೆ ಮಾಡಿಕೊಂಡು ದಾಳಿ ನಡೆಸಿದ್ದಾರೆ.

ಉಗ್ರರು ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿಯೇ ಏಕೆ ದಾಳಿ ಮಾಡಿದ್ದಾರೆ ಎಂಬ ಪ್ರಶ್ನೆ ಕಾಡುತ್ತದೆ. ಪಹಲ್ಗಾಮ್ ಅನಂತ್ನಾಗ್ ಜಿಲ್ಲೆಯಲ್ಲಿದ್ದು, ಆ ಪ್ರದೇಶಕ್ಕೆ ತೆರಳುವುದು ಬಹಳ ಕಠಿಣವಾಗಿದೆ. ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಬೈಸರನ್ ಕಣಿವೆ ಪ್ರದೇಶಕ್ಕೆ ತೆರಳಬೇಕೆಂದರೆ ಕಾಲ್ನಡಿಗೆ ಇಲ್ಲವೇ ಕುದುರೆ ಸವಾರಿ ಮೂಲಕ ತೆರಳಬೇಕು. ದುರ್ಗಮ ರಸ್ತೆಗಳು, ಸುತ್ತಲೂ ಕಣಿವೆಯಿಂದ ಬೈಸರನ್ ಕಣಿವೆ ಆವೃತವಾಗಿದೆ.

ದಾಳಿ ನಡೆದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಸುಲಭವಾಗಿಲ್ಲ. ಈಗಾಗಲೇ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ಹೆಲಿಕಾಪ್ಟರ್ ವ್ಯವಸ್ಥೆಯನ್ನು ಮಾಡಲಾಗಿದೆ. ಮಂಗಳವಾರ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹಲವಾರು ಪ್ರವಾಸಿಗರು ಸಾವನ್ನಪ್ಪಿದ ನಂತರ ಕಾಶ್ಮೀರ ಕಣಿವೆಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸೇನೆ, ಸಿಆರ್ಪಿಎಫ್ ಮತ್ತು ಜೆ & ಕೆ ಪೊಲೀಸರ ಜಂಟಿ ಕೂಂಬಿಂಗ್ ಕಾರ್ಯಾಚರಣೆ ಈ ಪ್ರದೇಶದಲ್ಲಿ ನಡೆಯುತ್ತಿದೆ. ಪಹಲ್ಗಾಮ್ನಲ್ಲಿ ದಾಳಿ ನಡೆದ ಸ್ಥಳದಿಂದ 5 ಕಿಲೋಮೀಟರ್ ವ್ಯಾಪ್ತಿಗೆ ಕಾರ್ಯಾಚರಣೆ ವಿಸ್ತರಿಸಿದೆ ಎಂದು ವರದಿಯಾಗಿದೆ.

ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿರುವ ಬೆನ್ನಲ್ಲೇ ಎನ್ಐಎ ತನಿಖೆ ಕೈಗೆತ್ತಿಕೊಂಡಿದೆ. ಇದೀಗ ಮೂವರು ಶಂಕಿತ ಉಗ್ರರ ರೇಖಾಚಿತ್ರ ಮತ್ತು ಫೋಟೋ ರಿಲೀಸ್ ಮಾಡಿರುವ ಎನ್ಐಎ(NIA) ಉಗ್ರರ ಬೇಟೆ ಶುರು ಮಾಡಿದೆ. ಮೂವರು ಭಯೋತ್ಪಾದಕರನ್ನು ಆಸಿಫ್ ಫುಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಎಂದು ಗುರುತಿಸಲಾಗಿದೆ.

ದಾಳಿ ಬೆನ್ನಲ್ಲೇ ಕಣಿವೆ ರಾಜ್ಯ ಸಂಪೂರ್ಣ ಸ್ತಬ್ಧವಾಗಿದೆ. ಪ್ರವಾಸಿಗರ ವೆಕೇಷನ್ ಹಾಟ್ ಸ್ಟಾಟ್ ಆಗಿದ್ದ ಪ್ರದೇಶಗಳು ಜನರಿಲ್ಲದೆ ಈಗ ಬಿಕೋ ಎನ್ನುತ್ತಿವೆ.