Virat Kohli: ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯ ಅತ್ಯಂತ ಶ್ರೇಷ್ಠ ಇನಿಂಗ್ಸ್ಗಳು!
ಆಧುನಿಕ ಕ್ರಿಕೆಟ್ ದಿಗ್ಗಜ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೇ 12ರಂದು ಸೋಮವಾರ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಆ ಮೂಲಕ ತಮ್ಮ 14 ವರ್ಷಗಳ ಟೆಸ್ಟ್ ವೃತ್ತಿ ಜೀವನದ ಪಯಣವನ್ನು ಮುಗಿಸಿದ್ದಾರೆ. ವಿರಾಟ್ ಕೊಹ್ಲಿ 2011ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅವರು 123 ಪಂದ್ಯಗಳಿಂದ 30 ಶತಕಗಳೊಂದಿಗೆ 9230 ರನ್ಗಳನ್ನು ಗಳಿಸಿದ್ದಾರೆ. ಅಂದ ಹಾಗೆ ವಿರಾಟ್ ಕೊಹ್ಲಿಯ ಟೆಸ್ಟ್ ಕ್ರಿಕೆಟ್ನ ಶ್ರೇಷ್ಠ ಇನಿಂಗ್ಸ್ಗಳನ್ನು ಇಲ್ಲಿ ವಿವರಿಸಲಾಗಿದೆ.



ದಕ್ಷಿಣ ಆಫ್ರಿಕಾ ವಿರುದ್ಧ 119 ಮತ್ತು 96 ರನ್ (ಜೋಹನ್ಸ್ಬರ್ಗ್, 2013)
2013ರಲ್ಲಿ ವಿರಾಟ್ ಕೊಹ್ಲಿ ಮೊಟ್ಟ ಮೊದಲ ಬಾರಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಾಗ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಜೋಹನ್ಸ್ಬರ್ಗ್ ವಾಂಡರರ್ಸ್ನಲ್ಲಿ ಆಡಿದ್ದ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ಗಳಲ್ಲಿ ವಿರಾಟ್ ಕೊಹ್ಲಿ ಕ್ರಮವಾಗಿ 119 ರನ್ ಹಾಗೂ 96 ರನ್ಗಳನ್ನು ಕಲೆ ಹಾಕಿ ದೊಡ್ಡ ಹೆಸರು ಮಾಡಿದ್ದರು.

ಆಸ್ಟ್ರೇಲಿಯಾ ವಿರುದ್ಧ 115 ಮತ್ತು 141 ರನ್ (ಅಡಿಲೇಡ್ 2014)
2014ರಲ್ಲಿ ಎಂಎಸ್ ಧೋನಿ ಗಾಯಕ್ಕೆ ತುತ್ತಾದ ಬಳಿಕ ಭಾರತ ತಂಡವನ್ನು ವಿರಾಟ್ ಕೊಹ್ಲಿ ಹಂಗಾಮಿ ನಾಯಕನಾಗಿ ಮುನ್ನಡೆಸಿದ್ದರು. ಅವರು ಅಡಿಲೇಡ್ ಟಸ್ಟ್ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು ಈ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ 115 ರನ್ಗಳಿಸಿದ್ದರೆ, ದ್ವಿತೀಯ ಇನಿಂಗ್ಸ್ನಲ್ಲಿ 141 ರನ್ಗಳನ್ನು ಗಳಿಸಿದ್ದಾರೆ. ಆದರೂ ಭಾರತ ತಂಡ 48 ರನ್ಗಳಿಂದ ಸೋಲು ಅನುಭವಿಸಿತ್ತು.

ಇಂಗ್ಲೆಂಡ್ ವಿರುದ್ದ 235 ರನ್ (ಮುಂಬೈ, 2016)
2016ರಲ್ಲಿ ಇಂಗ್ಲೆಂಡ್ ವಿರುದ್ದ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ್ದ ಕೊಹ್ಲಿ 235 ರನ್ಗಳನ್ನು ಕಲೆ ಹಾಕಿದ್ದರು. ಈ ಪಂದ್ಯದಲ್ಲಿ ಭಾರತ ಇನಿಂಗ್ಸ್ ಗೆಲುವು ಪಡೆದಿತ್ತು.

ಇಂಗ್ಲೆಂಡ್ ವಿರುದ್ದ 149 ರನ್ (ಎಜ್ಬಾಸ್ಟನ್, 2018)
2014ರ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಆದರೆ, 2018ರ ಪ್ರವಾಸದಲ್ಲಿಯೂ ವಿರಾಟ್ ಕೊಹ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಅವರು ಎಜ್ಬಾಸ್ಟನ್ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ 149 ರನ್ಗಳನ್ನು ಕಲೆ ಹಾಕಿದ್ದರು. ಆದರೂ ಭಾರತ ಈ ಪಂದ್ಯದಲ್ಲಿ 31 ರನ್ಗಳಿಂದ ಸೋಲು ಅನುಭವಿಸಿತ್ತು.

ದಕ್ಷಿಣ ಆಫ್ರಿಕಾ ವಿರುದ್ದ 153 ರನ್ (ಸೆಂಚೂರಿಯನ್, 2018)
2018ರಲ್ಲಿ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದ ಸೆಂಚೂರಿಯನ್ನ ಅತ್ಯಂತ ಕಷ್ಟದ ಕಂಡೀಷನ್ಸ್ನಲ್ಲಿ ತಮ್ಮ ವೃತ್ತಿ ಜೀವನದ ಶ್ರೇಷ್ಠ ಇನಿಂಗ್ಸ್ ಆಡಿದ್ದರು. ಮಾರ್ನೆ ಮಾರ್ಕೆಲ್, ಕಗಿಸೊ ರಬಾಡ ಹಾಗೂ ವರ್ನೇನ್ ಫಿಲ್ಯಾಂಡರ್ ಸೇರಿದಂತೆ ಹರಿಣ ಪಡೆ ಮಾರಕ ಬೌಲಿಂಗ್ ದಾಳಿಯನ್ನು ಮೆಟ್ಟಿ ನಿಂತು 153 ರನ್ಗಳನ್ನು ಗಳಿಸಿದ್ದರು. ಭಾರತ 307ಕ್ಕೆ ಆಲ್ಔಟ್ ಆಗಿತ್ತು.

ದಕ್ಷಿಣ ಆಫ್ರಿಕಾ ವಿರುದ್ದ 254 ರನ್ (ಪುಣೆ, 2019)
ವಿರಾಟ್ ಕೊಹ್ಲಿಯ ಟೆಸ್ಟ್ ವೃತ್ತಿ ಜೀವನದಲ್ಲಿ ಅತ್ಯಂತ ಶ್ರೇಷ್ಠ ಇನಿಂಗ್ಸ್ ಮೂಡಿ ಬಂದಿದ್ದು 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಪುಣೆ ಟೆಸ್ಟ್ ಪಂದ್ಯದಲ್ಲಿ. ಭಾರತ 136ಕ್ಕೆ ಎರಡು ವಿಕೆಟ್ ಕಳೆದುಕೊಂಡಿದ್ದ ವೇಳೆ ಕ್ರೀಸ್ಗೆ ಹೋಗಿದ್ದ ಕೊಹ್ಲಿ ಅಜೇಯ 254 ರನ್ಗಳನ್ನು ಬಾರಿಸಿದ್ದರು. ಇದರಲ್ಲಿ ಅವರು 33 ಬೌಂಡರಿಗಳು ಹಾಗೂ 2 ಸಿಕ್ಸರ್ಗಳನ್ನು ಬಾರಿಸಿದ್ದರು. ಅಂತಿಮವಾಗಿ ಭಾರತ 137 ರನ್ಗಳಿಂದ ಗೆಲುವು ಪಡೆದಿತ್ತು.