ಆಪ್ ಉಪನಾಯಕ ಹುದ್ದೆಯಿಂದ ತೆಗೆದುಹಾಕಿದ ಬಳಿಕ ರಾಘವ್ ಚಡ್ಡಾ ಬಿಡುಗಡೆ ಮಾಡಿರುವ ಮೊದಲ ವಿಡಿಯೊದಲ್ಲಿ ಏನಿದೆ?
ಸಾಮಾನ್ಯ ನಾಗರಿಕರ ಪರವಾಗಿ ಧ್ವನಿ ಎತ್ತಿ ದೇಶದ ಗಮನ ಸೆಳೆದಿರುವ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರನ್ನು ಸಂಸತ್ತಿನ ಮೇಲ್ಮನೆಯ ಉಪನಾಯಕ ಹುದ್ದೆಯಿಂದ ಆಮ್ ಆದ್ಮಿ ಪಕ್ಷ (ಎಎಪಿ) ತೆಗೆದು ಹಾಕಿದೆ. ಈ ಬಳಿಕ ಮೊದಲ ವಿಡಿಯೊ ಬಿಡುಗಡೆ ಮಾಡಿರುವ ರಾಘವ್ ಚಡ್ಡಾ ಇದರಲ್ಲಿ ಏನು ಹೇಳಿದ್ದಾರೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಘವ್ ಚಡ್ಡಾ -
ನವದೆಹಲಿ: ರಾಜ್ಯಸಭಾ ಸಂಸದ ರಾಘವ್ ಚಡ್ಡಾ (Rajya Sabha MP Raghav Chadha) ಅವರನ್ನು ಸಂಸತ್ತಿನ ಮೇಲ್ಮನೆಯ ಉಪನಾಯಕ ಹುದ್ದೆಯಿಂದ ಆಮ್ ಆದ್ಮಿ ಪಕ್ಷ (Aam Aadmi Party) ತೆಗೆದುಹಾಕಿದೆ. ಇದರ ಬಳಿಕ ಗುರುವಾರ ಅವರು ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯನ್ನು ಬಿಡುಗಡೆ ಮಾಡಿದರು. ರಾಘವ್ ಚಡ್ಡಾ ಅವರನ್ನು ನಾಯಕ ಸ್ಥಾನದಿಂದ ತೆಗೆದುಹಾಕಿರುವ ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ಪಕ್ಷದ ಈ ಕ್ರಮ ಈಗ ಹೊಸ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಚಡ್ಡಾ ಅವರು ಬಿಡುಗಡೆ ಮಾಡಿರುವ ಮೊದಲ ವಿಡಿಯೊದಲ್ಲಿ ಏನಿರಬಹುದು ಎನ್ನುವ ಕುತೂಹಲ ಕೂಡ ಹೆಚ್ಚಾಗಿತ್ತು.
ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ರಾಘವ್ ಚಡ್ಡಾ ಅವರು ಬಿಡುಗಡೆ ಮಾಡಿದ ವಿಡಿಯೊದಲ್ಲಿ ಅವರು ಪಕ್ಷದ ಉಪನಾಯಕನ ಹುದ್ದೆಯಿಂದ ತಮ್ಮನ್ನು ತೆಗೆದು ಹಾಕಿರುವ ಬಗ್ಗೆ ಅಥವಾ ಪಕ್ಷದ ನಾಯಕರೊಂದಿಗಿನ ಮನಸ್ತಾಪದ ಬಗ್ಗೆ ಯಾವುದೇ ಮಾತು ಕೂಡ ಆಡಿಲ್ಲ. ಅವರು ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಕೇವಲ ಅವರು ರಾಜ್ಯಸಭೆಯಲ್ಲಿ ಇತ್ತೀಚೆಗೆ ಮಾತನಾಡಿರುವ ವಿಷಯಗಳ ತುಣುಕು ಸರಣಿಯನ್ನು ಹೊಂದಿದೆ.
ಭಾರತಕ್ಕೆ 3ನೇ ಪರಮಾಣು ಜಲಾಂತರ್ಗಾಮಿ ನೌಕೆ? ಐಎನ್ಎಸ್ ಅರಿಧಮನ್ ಲೋಕಾರ್ಪಣೆ ಬಗ್ಗೆ ರಾಜನಾಥ್ ಸಿಂಗ್ ಸುಳಿವು
ದೇಶದ ವಿಶಾಲ ಆರ್ಥಿಕತೆಯ ಭಾಗವಾಗಿರುವ ಸಾಮಾನ್ಯ ನಾಗರಿಕರ ಸಮಸ್ಯೆಗಳನ್ನು ಅವರು ರಾಜ್ಯ ಸಭೆಯಲ್ಲಿ ಎತ್ತಿ ದೇಶದ ಗಮನ ಸೆಳೆದಿದ್ದರು. ಇದರಲ್ಲಿ ಇತ್ತೀಚೆಗೆ ಮೊಬೈಲ್ ಡೇಟಾ ಪ್ಯಾಕೇಜ್‌ಗಳ ಮುಕ್ತಾಯ ಅವಧಿ, ಪಿತೃತ್ವ ರಜೆ ಹಕ್ಕುಗಳು ಕೂಡ ಸೇರಿವೆ. ಆದರೆ ಗುರುವಾರ ರಾಜ್ಯಸಭಾ ಸಚಿವಾಲಯಕ್ಕೆ ಆಪ್ ಇನ್ನು ಮುಂದೆ ಸದನದಲ್ಲಿ ಮಾತನಾಡಲು ರಾಘವ್ ಚಡ್ಡಾ ಅವರಿಗೆ ಅವಕಾಶ ನೀಡಬಾರದು ಎಂದು ಔಪಚಾರಿಕವಾಗಿ ತಿಳಿಸಿತ್ತು ಎನ್ನಲಾಗಿದೆ.
ಚಡ್ಡಾ ಅವರ ಬದಲಿಗೆ ಪಂಜಾಬ್‌ನ ಸದಸ್ಯ ಮತ್ತು ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ ಕುಲಪತಿ ಅಶೋಕ್ ಮಿತ್ತಲ್ ಅವರನ್ನು ಪಕ್ಷವು ಹೊಸ ಉಪ ನಾಯಕರನ್ನಾಗಿ ಹೆಸರಿಸಿದೆ. ಸಂಜಯ್ ಸಿಂಗ್ ಸದನದಲ್ಲಿ ಎಎಪಿ ಗುಂಪಿನ ನಾಯಕರಾಗಿದ್ದಾರೆ. ಪಕ್ಷವು ಈಗ 245 ಸದಸ್ಯರ ರಾಜ್ಯಸಭೆಯಲ್ಲಿ ಪಂಜಾಬ್‌ನ ೭ ಮತ್ತು ದೆಹಲಿಯ ಮೂವರು ಸೇರಿ ಒಟ್ಟು ಹತ್ತು ಸ್ಥಾನಗಳನ್ನು ಹೊಂದಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಬಳಿಕ ಆಪ್ ಅತಿದೊಡ್ಡ ಸ್ಥಾನವನ್ನು ಪಡೆದಿದೆ.
2012ರಲ್ಲಿ ಆಪ್ ಪಕ್ಷ ಸ್ಥಾಪನೆಯಾದಾಗಿನಿಂದ ರಾಘವ್ ಚಡ್ಡಾ ಅವರು ಎಎಪಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಭ್ರಷ್ಟಾಚಾರದ ವಿರುದ್ಧ ನಡೆಸಿದ ಅಭಿಯಾನದ ವೇಳೆ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದರು. ಬಳಿಕ ಅವರು ಪಕ್ಷ ಸೇರಿದರು. ಮೊದಲಿಗೆ ಅವರಿಗೆ ದೆಹಲಿ ಲೋಕಪಾಲ್ ಮಸೂದೆ ರಚಿಸುವ ಕಾರ್ಯವನ್ನು ನೀಡಲಾಯಿತು. ಅನಂತರ ರಾಷ್ಟ್ರೀಯ ವಕ್ತಾರರಾಗಿ ಗುರುತಿಸಿಕೊಂಡರು. ಬಳಿಕ ರಾಷ್ಟ್ರೀಯ ಖಜಾಂಚಿಯಾಗಿ ನೇಮಕಗೊಂಡರು.
2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ರಾಜಿಂದರ್ ನಗರ ಸ್ಥಾನವನ್ನು ಗೆದ್ದ ಅವರು ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷರಾದರು. 2022ರಲ್ಲಿ ಎಎಪಿ ನಾಮನಿರ್ದೇಶಿತರಾಗಿ ರಾಜ್ಯಸಭೆ ಪ್ರವೇಶಿಸಿದರು.
ರಾಜ್ಯಸಭಾ ಉಪನಾಯಕನ ಸ್ಥಾನದಿಂದ ರಾಘವ್ ಚಡ್ಡಾ ಅವರನ್ನು ತೆಗೆದು ಹಾಕಿರುವುದಕ್ಕೆ ಆಪ್ ನಿರ್ಧಿಷ್ಟ ಕಾರಣವನ್ನು ತಿಳಿಸದೇ ಇದ್ದರೂ ಕಳೆದ ಏಳು ತಿಂಗಳಿನಿಂದ ಈ ಕುರಿತು ವದಂತಿಗಳು ಕೇಳಿಬರುತ್ತಿದ್ದವು.
ಪಕ್ಷದ ಉಪನಾಯಕನ ಸ್ಥಾನದಿಂದ ತೆಗೆದು ಹಾಕಿದ ಬಳಿಕ ಮೊದಲ ಬಾರಿಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ತಮಗೆ ಜವಾಬ್ದಾರಿ ನೀಡಿದ್ದಕ್ಕಾಗಿ ಮಿತ್ತಲ್, ಕೇಜ್ರಿವಾಲ್ ಅವರಿಗೆ ಧನ್ಯವಾದ ಸಲ್ಲಿಸಿದರು. ನಮ್ಮ ಪಕ್ಷವು ಪ್ರಜಾಪ್ರಭುತ್ವ ಪಕ್ಷವಾಗಿದ್ದು, ಪ್ರತಿಯೊಬ್ಬ ನಾಯಕರಿಗೂ ಪಾಠ ಕಲಿಯಲು ಅವಕಾಶ ನೀಡುತ್ತದೆ. ಮೊದಲು, ಎನ್‌ಡಿ ಗುಪ್ತಾ ಉಪನಾಯಕರಾಗಿದ್ದರು, ಅನಂತರ ನನಗೆ ಸಿಕ್ಕಿತು ಎಂದು ತಿಳಿಸಿದರು.
ರಾಘವ್ ಚಡ್ಡಾ ಅವರು ಸಂಸತ್ತಿನಲ್ಲಿ ಗಿಗ್ ಕಾರ್ಮಿಕರ ಸಮಸ್ಯೆ, ಡಿಜಿಟಲ್ ವಿಷಯ ರಚನೆಕಾರರ ಕುರಿತಾಗಿ, ಒಂದು ರಾಷ್ಟ್ರ, ಒಂದು ಆರೋಗ್ಯ ಚಿಕಿತ್ಸೆ, ಆಹಾರದಲ್ಲಿ ಕಲಬೆರಕೆ, ವಿಮಾನ ನಿಲ್ದಾಣಗಳಲ್ಲಿ ಕೈಗೆಟುಕುವ ದರದಲ್ಲಿ ಆಹಾರ, 28 ದಿನಗಳ ರೀಚಾರ್ಜ್ ಸಮಸ್ಯೆ, ಬ್ಯಾಂಕ್ ದಂಡಗಳು, ಜಂಟಿ ಆದಾಯ ತೆರಿಗೆ ಸಲ್ಲಿಕೆ, ಪಿತೃತ್ವ ರಜೆ ಕುರಿತು ವಿಷಯಗಳನ್ನು ಪ್ರಸ್ತಾಪಿಸಿದ್ದರು.