ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

By Elections: ಮೂರರಲ್ಲಿ ಎರಡು ಸ್ಥಾನ ಕಳೆದುಕೊಂಡ ಬಿಜೆಪಿ; ಜೆನ್‌ ಝೀ ಹೋರಾಟ ಕಮಲ ಪಡೆಗೆ ಎಚ್ಚರಿಕೆಯ ಕರೆಗಂಟೆಯಾಗುತ್ತ?

Prashant Kishor: 3 ರಾಜ್ಯಗಳ 3 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸೋತಿದ್ದು, 1 ಸ್ಥಾನದಲ್ಲಷ್ಟೇ ಜಯಗಳಿಸಲು ಶಕ್ತವಾಗಿದೆ. ಬಿಜೆಪಿ ಆಡಳಿತದಲ್ಲಿರುವ ಗುಜರಾತ್‌, ಮಧ್ಯ ಪ್ರದೇಶ ಮತ್ತು ಬಿಹಾರದಲ್ಲಿ ಉಪಚುನಾವಣೆ ನಡೆದಿದ್ದು, ಗುಜರಾತ್‌ನಲ್ಲಿ ಮಾತ್ರ ಕಮಲ ಅರಳಿದೆ. ಮಧ್ಯ ಪ್ರದೇಶ ಮತ್ತು ಬಿಹಾರದಲ್ಲಿ ತೀವ್ರ ಮುಖಭಂಗ ಅನುಭವಿಸಿದೆ. ಇದು ಬಿಜೆಪಿಗೆ ಹಲವು ಪಾಠ ಕಲಿಸಿದೆ.

ಉಪಚುನಾವಣೆ: ಮೂರರಲ್ಲಿ ಎರಡು ಸ್ಥಾನ ಕಳೆದುಕೊಂಡ ಬಿಜೆಪಿ

ಮತ ಎಣಿಕೆ ಮತ್ತು ಪ್ರಶಾಂತ್‌ ಕಿಶೋರ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Aug 3, 2026 8:54 PM

ದೆಹಲಿ, ಆ. 3: ಕೇಂದ್ರದ ಜತೆಗೆ ಬಹುತೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಕೆಲವು ದಿನಗಳಿಂದ ಹಿನ್ನಡೆಯಾಗುತ್ತಿದೆ. ವರ್ಷಾರಂಭದಲ್ಲಿ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಮರು ಪರೀಕ್ಷೆ ಆಯೋಜಿಸಬೇಕಾಯ್ತು. ಇದು ವಿಪಕ್ಷಗಳ ಟೀಕೆಗೆ ಕಾರಣವಾಯ್ತು. ಅದಾದ ಬಳಿಕ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಿದರು. ಇದೀಗ 3 ರಾಜ್ಯಗಳ 3 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ (By Elections) ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸೋತಿದ್ದು, 1 ಸ್ಥಾನದಲ್ಲಷ್ಟೇ ಜಯಗಳಿಸಲು ಶಕ್ತವಾಗಿದೆ. ಬಿಜೆಪಿ ಆಡಳಿತದಲ್ಲಿರುವ ಗುಜರಾತ್‌, ಮಧ್ಯ ಪ್ರದೇಶ ಮತ್ತು ಬಿಹಾರದಲ್ಲಿ ಉಪಚುನಾವಣೆ ನಡೆದಿದ್ದು, ಗುಜರಾತ್‌ನಲ್ಲಿ ಮಾತ್ರ ಕಮಲ ಅರಳಿದೆ. ಮಧ್ಯ ಪ್ರದೇಶ ಮತ್ತು ಬಿಹಾರದಲ್ಲಿ ತೀವ್ರ ಮುಖಭಂಗ ಅನುಭವಿಸಿದೆ.

ಬಿಹಾರದ ಬಂಕಿಪುರ ಮತ್ತು ಮಧ್ಯ ಪ್ರದೇಶದ ದತಿಯಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತಿದ್ದು, ಕ್ರಮವಾಗಿ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಮತ್ತು ಕಾಂಗ್ರೆಸ್‌ನ ಘನಶ್ಯಾಮ್‌ ಸಿಂಗ್‌ ಜಯ ಗಳಿಸಿದ್ದಾರೆ. ಇನ್ನು ಗುಜರಾತ್‌ನ ಮಂಜಲ್‌ಪುರದಲ್ಲಿ ಬಿಜೆಪಿಯ ಸತೀಶ್‌ ಗೋವಿಂದಭಾಯಿ ಪಟೇಲ್‌ ಜಯದ ನಗು ಬೀರುವ ಮೂಲಕ ಪಕ್ಷಕ್ಕೆ ಕೊಂಚ ರಿಲೀಫ್‌ ತಂದಿತ್ತಿದ್ದಾರೆ.

ಬಿಜೆಪಿಯ 30 ವರ್ಷಗಳ ಭದ್ರಕೋಟೆ ಪುಡಿ ಪುಡಿ ಮಾಡಿದ ಪ್ರಶಾಂತ್ ಕಿಶೋರ್

ಬಿಜೆಪಿಯ ಭದ್ರ ಕೋಟೆ ನುಚ್ಚುನೂರು

ಬಿಹಾರದ ಬಂಕಿಪುರದ ಕ್ಷೇತ್ರದ ಶಾಸಕರಾಗಿದ್ದ, ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ರಾಜೀನಾಮೆ ನೀಡಿ ರಾಜ್ಯಸಭೆಗೆ ಪ್ರವೇಶಿಸಿದ್ದರಿಂದ ಇಲ್ಲಿ ಉಪಚುನಾವಣೆ ನಡೆಸಲಾಯಿತು. ಬಿಜೆಪಿ ಅಭ್ಯರ್ಥಿಯಾಗಿ ನೀರಜ್‌ ಕುಮಾರ್‌ ಸಿನ್ಹಾ ಕಣಕ್ಕಿಳಿದರೆ, ಜನ ಸುರಾಜ್‌ ಪಾರ್ಟಿ (JSP) ಸ್ಥಾಪಕ ಪ್ರಶಾಂತ್‌ ಕಿಶೋರ್‌ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಈ ಕ್ಷೇತ್ರ 30 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದು, ನಿತಿನ್‌ ನಬಿನ್‌ ಅವರ ಕುಟುಂಬಸ್ಥರ ಸುಪರ್ದಿಯಲ್ಲಿತ್ತು. ಆದರೆ ಈ ಬಾರಿ ಕೋಟೆ ಕುಸಿದು ಬಿದ್ದಿದೆ. ಬಿಜೆಪಿಯ ಅತಿಯಾದ ವಿಶ್ವಾಸವೇ ಮುಳುವಾಯಿತೆ ಎನ್ನುವ ಚರ್ಚೆ ಆರಂಭವಾಗಿದೆ.

ಸದ್ಯ ಬಿಜೆಪಿ ಸೋಲಿನ ಬಗ್ಗೆ ಚರ್ಚೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದೆ. ಎಲ್ಲಿ ತಪ್ಪಾಗಿದೆ ಎನ್ನುವುದನ್ನು ವಿಮರ್ಶೆಗೆ ಒಳಪಡಿಸಲಾಗುವುದು ಎಂದು ನಾಯಕರು ಹೇಳಿದ್ದಾರೆ. ಮೂಲಗಳ ಪ್ರಕಾರ ಆರ್‌ಜೆಡಿಯ ಮತ ಪ್ರಶಾಂತ್‌ ಕಿಶೋರ್‌ಗೆ ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಕೇವಲ 1 ಗಂಟೆ ಮತ ಪ್ರಚಾರ ನಡೆಸಿದ್ದು, ಆರ್‌ಜೆಡಿ ನಾಯಕರು ಮತ್ತು ಪ್ರಶಾಂತ್‌ ಕಿಶೋರ್‌ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಹಿಂದಿನ ಚುನಾವಣೆಯಲ್ಲಿ ಆರ್‌ಜೆಡಿಯ ರೇಖಾ ಗುಪ್ತಾ 46,000ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಈ ಬಾರಿ ಅವರು 15,000 ಮತಗಳನ್ನಷ್ಟೇ ಗಳಿಸಿದ್ದು ಇದಕ್ಕೆ ಸಾಕ್ಷಿ ಎಂದು ದೂರಿದೆ. ಬಿಜೆಪಿಯ ಮತಗಳ ಸಂಖ್ಯೆ ಮೂರನೇ ಒಂದರಷ್ಟು ಕುಸಿದೆ. ಇದು ಬಿಜೆಪಿಗೆ ಎಚ್ಚರಿಕೆಯ ಕರೆಗಂಟೆಯಾಗಿದ್ದು, ನಾಯಕರು ಯಾವ ರೀತಿ ಸೋಲನ್ನು ಸ್ವೀಕರಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಈ ಸೋಲಿಗೂ ಇತ್ತಿಚೆಗೆ ನಡೆದ ಜೆನ್‌ ಝೀ ಪ್ರತಿಭಟನೆಗೂ ನೇರ ಸಂಬಂಧವಿಲ್ಲ. ಅದಾಗ್ಯೂ ಬಿಜೆಪಿಯ ಕಾರ್ಯ ವೈಖರಿ ಬದಲಾಯಿಸಬೇಕು ಎಂಬುದರ ಸೂಚನೆ ಸಿಕ್ಕಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಬಿಜೆಪಿ ರಾ‍ಷ್ಟ್ರೀಯ ಅಧ್ಯಕ್ಷರಾದ ನಿತಿನ್‌ ನಬಿನ್‌ಗೆ ಮೋದಿ ಅಭಿನಂದನೆ

ಇನ್ನು ದತಿಯಾ ಕ್ಷೇತ್ರದ ಸೋಲು ಮಧ್ಯ ಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ. ಈಗಾಗಲೇ ಅವರು ಪಕ್ಷದೊಳಗಿನ ಒಂದು ಬಣದ ಟೀಕೆ ಎದುರಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಸ್ಪರ್ಧೆ ಕಠಿಣವಾಗಿತ್ತು ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ರಾಜ್ಯಾದ್ಯಂತ ಭಾರಿ ಬಿಜೆಪಿ ಅಲೆಯ ಹೊರತಾಗಿಯೂ, ಹಿಂದಿನ ವಿಧಾನಸಭಾ ಚುನಾವಣೆಗಳಲ್ಲಿಯೂ ಪಕ್ಷವು ದತಿಯಾದಲ್ಲಿ ಗೆದ್ದಿರಲಿಲ್ಲ. ಇಲ್ಲಿ ಬಿಜೆಪಿಯ ಅಶುತೋಷ್ ತಿವಾರಿ ಸೋಲುಂಡಿದ್ದಾರೆ. ಎರಡೂ ಕ್ಚೇತ್ರಗಳಲ್ಲಿನ ಸೋಲಿಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡದಿರುವುದೂ ಕಾರಣ ಎನ್ನುವ ಮಾತೂ ಕೇಳಿ ಬಂದಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.