ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

1 ಲಕ್ಷ ಆಸ್ತಿದಾರರಿಗೆ ಭೂ ಗ್ಯಾರಂಟಿ ಭಾಗ್ಯ; ಅಕ್ರಮ ಮನೆಗಳ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ಭಾರೀ ರಿಯಾಯಿತಿ ಘೋಷಿಸಿದ ಸಿಎಂ ಡಿಕೆಶಿ

2008ಕ್ಕಿಂತ ಮುಂಚೆ ಮನೆ ಕಟ್ಟಿದವರಿಗೆ, ಸುಮಾರು 1 ಲಕ್ಷ ಮಾಲಿಕರಿಗೆ ಆಸ್ತಿ ದೊರಕಿಸಬೇಕು ಎಂಬ ಉದ್ದೇಶದಿಂದ ಹಿಂದಿನ ಸರ್ಕಾರ ಅವಕಾಶ ನೀಡಿತು. 2021ರಲ್ಲಿಯೇ ದರ ನಿಗದಿ ಮಾಡಿತ್ತು. ಆದರೆ ಶುಲ್ಕ ಹೆಚ್ಚಾಯಿತೆಂದು ಕೇವಲ 600ಜನ ಮಾತ್ರ ಅರ್ಜಿ ಹಾಕಿದ್ದರು. ಆದರೆ ನಾವು ಶುಲ್ಕ ಕಡಿಮೆ ಮಾಡಿ ಇನ್ನೊಂದು ಅವಕಾಶ ನೀಡಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಅಕ್ರಮ ಮನೆಗಳ ಸಕ್ರಮ ಶುಲ್ಕದಲ್ಲಿ ಶೇ.50 ರಿಯಾಯಿತಿ ಘೋಷಿಸಿದ ಸಿಎಂ

-

Prabhakara R
Prabhakara R Nov 9, 2026 7:22 PM

ಬೆಂಗಳೂರು, ನ.09: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 50ನೇ ವರ್ಷಾಚರಣೆ ಸಂದರ್ಭದಲ್ಲಿ ಆಸ್ತಿ ದಾಖಲೆಗಳಿಲ್ಲದ ಭೂ ಮಾಲೀಕರಿಗೆ ಭೂ ಗ್ಯಾರಂಟಿ ಸೇರಿದಂತೆ ಹೊಸ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (CM DK Shivakumar) ತಿಳಿಸಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳ ಕುರಿತಂತೆ ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಸಿಎಂ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನಕ್ಕೊಳಪಟ್ಟ ಜಮೀನಿನಲ್ಲಿ ದಿನಾಂಕ 10.7.2008 ರ ಪೂರ್ವದಲ್ಲಿ ನಿರ್ಮಿಸಲಾದ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸಲು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಈ ಹಿಂದಿನ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಈ ಸೌಲಭ್ಯ ಕಲಂ 38(ಡಿ) ತಿದ್ದುಪಡಿ ಮೂಲಕ ಈಗಾಗಲೇ ಜಾರಿಗೆ ಬಂದಿದ್ದು, ಡಿಸೆಂಬರ್‌ 15 ರ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಎರಡು ವರ್ಷಗಳ ಅವಧಿಯೊಳಗಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳದಿದ್ದರೆ, ಪ್ರಾಧಿಕಾರದ ಭೂಮಿಯಲ್ಲಿರುವ ಅಂತಹ ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.



2008ಕ್ಕಿಂತ ಮುಂಚೆ ಮನೆ ಕಟ್ಟಿದವರಿಗೆ, ಸುಮಾರು 1 ಲಕ್ಷ ಮಾಲಿಕರಿಗೆ ಆಸ್ತಿ ದೊರಕಿಸಬೇಕು ಎಂಬ ಉದ್ದೇಶದಿಂದ ಹಿಂದಿನ ಸರ್ಕಾರ ಅವಕಾಶ ನೀಡಿತು. 2021ರಲ್ಲಿಯೇ ದರ ನಿಗದಿ ಮಾಡಿತ್ತು. ಆದರೆ ಶುಲ್ಕ ಹೆಚ್ಚಾಯಿತೆಂದು ಕೇವಲ 600ಜನ ಮಾತ್ರ ಅರ್ಜಿ ಹಾಕಿದ್ದರು. ಆದರೆ ನಾವು ಶುಲ್ಕ ಕಡಿಮೆ ಮಾಡಿ ಇನ್ನೊಂದು ಅವಕಾಶ ನೀಡಿದ್ದೇವೆ. ಕ್ಲೀನ್ ಬಿಡಿಎ, ಪರಿಶುದ್ಧವಾದ ಆಡಳಿತವನ್ನು ಬೆಂಗಳೂರಿಗರಿಗೆ ನೀಡುವ ಉದ್ದೇಶದಿಂದ ಸರ್ಕಾರ ಈ ಸೌಲಭ್ಯವನ್ನು ಜಾರಿಗೊಳಿಸಿದೆ ಎಂದು ಹೇಳಿದರು.

ನಿಗದಿತ ಅವಧಿಯ ಒಳಗಾಗಿ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಿ, ಈ ಸೌಲಭ್ಯವನ್ನು ಬಳಸಿಕೊಂಡು ಆಸ್ತಿಯ ಹಕ್ಕನ್ನು ಪಡೆದುಕೊಳ್ಳಲು ಇದು ಉತ್ತಮ ಅವಕಾಶವಾಗಿದೆ ಎಂದರು.

ಮಾರ್ಗಸೂಚಿ ದರದ ಮೌಲ್ಯ: ಮೂಲೆ ನಿವೇಶನ ಹೊರತುಪಡಿಸಿ ಕಟ್ಟಡದೊಂದಿಗಿನ ಭೂಮಿಯ ವ್ಯಾಪ್ತಿ 20x30 ರವರೆಗೆ ಪ್ರಸ್ತುತ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು, 20x30 ಕ್ಕಿಂತ ಹೆಚ್ಚು ಮತ್ತು 30x40 ರವರೆಗೆ ಶೇ.12.5% ರಷ್ಟು, 30x40 ಕ್ಕಿಂತ ಹೆಚ್ಚು ಮತ್ತು 40x60 ರವರೆಗೆ ಶೇ.20% ರಷ್ಟು ಮತ್ತು 40x60 ಕ್ಕಿಂತ ಹೆಚ್ಚು ಮತ್ತು 50x80 ರವರೆಗೆ ಶೇ.25% ರಷ್ಟು ದರವನ್ನು ನಿಗದಿಪಡಿಸಲಾಗಿದೆ. ಇದು ಈ ಹಿಂದಿನ ಸರ್ಕಾರ ನಿಗದಿಪಡಿಸಿದ್ದ ದರಕ್ಕಿಂತ ಶೇ.50ರಷ್ಟು ಕಡಿಮೆಯಾಗಿದೆ ಎಂದು ಹೇಳಿದರು.

ಪ್ರೋತ್ಸಾಹದಾಯಕ ನಿವೇಶನ ಸೌಲಭ್ಯ

ಕೆಂಪೇಗೌಡ ಬಡಾವಣೆ ಸೇರಿದಂತೆ ಇತರೆಡೆಗಳಲ್ಲಿ ವ್ಯಾಜ್ಯವಿಲ್ಲದೆ ಸ್ವಇಚ್ಛೆಯಿಂದ ಆಸ್ತಿ ಬಿಟ್ಟು ಕೊಟ್ಟವರಿಗೆ ಒಂದು ಎಕರೆಗೆ 30x40 ನಿವೇಶನ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ವಿಶೇಷ ಪ್ರೋತ್ಸಾಹಕವಾಗಿ ನಿವೇಶನ ನೀಡುವ ಕಾರ್ಯ 2014ರಿಂದ ಬಾಕಿ ಇದ್ದು, 1989 ಕಾನೂನಿನ ಪ್ರಕಾರ ಇದಕ್ಕಾಗಿ ಸೂಕ್ತ ಅರ್ಜಿ ಹಾಕಬೇಕು. ಇದಕ್ಕೆ ಬೆಲೆ ನಿಗದಿ ಮಾಡಲಾಗುವುದು ಎಂದರು.

ಶಿವರಾಮ ಕಾರಂತ ಬಡಾವಣೆಯಲ್ಲಿ ಜಮೀನು ನೀಡಿದ ರೈತರಿಗೆ ಒಂದೇ ದಿನದಲ್ಲಿ ಸೈಟ್ ಮಂಜೂರಾತಿಯನ್ನು ಪಾರದರ್ಶಕವಾಗಿ ಮಾಡಿರುವುದು ಬಿಡಿಎ ಇತಿಹಾಸದಲ್ಲೇ ಮೊದಲು. ಜಮೀನು ನೀಡಿದ ರೈತರ ಉಪಕಾರ ಸ್ಮರಣೆಯಾಗಿ ಅಲ್ಲಿ ನಾವು Wall of gratitude ಹಾಕಿದ್ದೇವೆ ಎಂದು ಹೇಳಿದರು.

ಅಂಚಿನ ಜಾಗ ಹಂಚಿಕೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನಗಳನ್ನು ಹಂಚಿಕೆ ಮಾಡಿರುವ ನಿವೇಶನಗಳ ಹಿಂಬದಿಯಲ್ಲಿ ಮತ್ತು ಅಕ್ಕ-ಪಕ್ಕದಲ್ಲಿ ಪ್ರಾಧಿಕಾರಕ್ಕೆ ಸೇರಿರುವ ಅಂಚಿನ ಜಾಗಗಳು (Marginal Land) ಲಭ್ಯವಿದ್ದಲ್ಲಿ, ಅಂಚಿನ ಜಾಗದ ಬಗ್ಗೆ ಹಂಚಿಕೆದಾರರಿಗೆ ಆಸಕ್ತಿಯಿದ್ದಲ್ಲಿ ದಿನಾಂಕ 17.12.2026ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.600ಚದರ ಅಡಿವರೆಗೂ ಈ ರೀತಿಯ ಸೈಟ್ ನೀಡಲು ಕಾಯ್ದೆಯಲ್ಲಿ ಅವಕಾಶವಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.

ಶುದ್ಧ ಕ್ರಯಪತ್ರ ಮೇಳ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನಗಳನ್ನು ಹಂಚಿಕೆ ಮಾಡಿ, ಗುತ್ತಿಗೆ ಅವಧಿಯು ಮುಕ್ತಾಯವಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಶುದ್ಧ ಕ್ರಯಪತ್ರವನ್ನು ನೋಂದಾಯಿಸಿಕೊಡಲು ಶುದ್ಧ ಕ್ರಯಪತ್ರ ಮೇಳವನ್ನು ಆಯೋಜಿಸಲಾಗಿದೆ. ಸಾಮಾನ್ಯವಾಗಿ ಬಿಡಿಎ ಹಂಚಿಕೆ ಮಾಡುವ ನಿವೇಶನಗಳ ಹತ್ತು ವರ್ಷದ ಗುತ್ತಿಗೆ ಅವಧಿಯಿರುತ್ತದೆ. ಈ ಅವಧಿಯು ಪೂರ್ಣಗೊಂಡ ಬಳಿಕ ನಾಗರಿಕರು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ, ಸದರಿ ನಿವೇಶನಕ್ಕೆ ಶುದ್ಧ ಕ್ರಯಪತ್ರವನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ನಾನಾ ಕಾರಣಗಳಿಂದ ಸುಮಾರು 20 ಸಾವಿರ ಹಂಚಿಕೆದಾರರು ಗುತ್ತಿಗೆ ಅವಧಿ ಪೂರ್ಣಗೊಂಡರೂ ಶುದ್ಧ ಕ್ರಯಪತ್ರವನ್ನು ಮಾಡಿಸಿಕೊಂಡಿರುವುದಿಲ್ಲ.

ಹಂಚಿಕೆದಾರರ ಅನುಕೂಲಕ್ಕಾಗಿ ಶುದ್ಧ ಕ್ರಯಪತ್ರ ಮೇಳವನ್ನು ಆಯೋಜಿಸುತ್ತಿದ್ದು, ನಿವೇಶನದ ದಾಖಲಾತಿಗಳೊಂದಿಗೆ ದಿನಾಂಕ 17.12.2026ರೊಳಗೆ ಅರ್ಜಿಯನ್ನು ಸಲ್ಲಿಸಿದರೆ ಅರ್ಜಿಯನ್ನು ಸ್ವೀಕರಿಸಿದ 60 ದಿನಗಳೊಳಗೆ ನಿಯಮಾನುಸಾರ ಶುದ್ಧ ಕ್ರಯಪತ್ರವನ್ನು ನೋಂದಾಯಿಸಿಕೊಡಲು ಕ್ರಮವಹಿಸಲಾಗುವುದು ಎಂದು ಹೇಳಿದರು.

ಸುಸಜ್ಜಿತ ಕಟ್ಟಡ

ಬಿಡಿಎ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ 1ಲಕ್ಷ ಚದರ ಅಡಿ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಬಹುಪಯೋಗಿ ಪ್ರಾಧಿಕಾರದ ಕಟ್ಟಡವನ್ನು ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.