Karnataka Drought: 178 ತಾಲೂಕುಗಳಲ್ಲಿ ಮಳೆ ಕೊರತೆ; ಬರ ಪರಿಸ್ಥಿತಿ ಕುರಿತು ವರದಿ ಸಲ್ಲಿಸಲು ಡಿಸಿ-ಸಿಇಒಗಳಿಗೆ ಸಿಎಂ ಸೂಚನೆ
ಮಳೆ ಕೊರತೆ ಹಿನ್ನೆಲೆಯಲ್ಲಿ ಪ್ರಮುಖ ಜಲಾಶಯಗಳಲ್ಲಿ ಕೇವಲ ಶೇ. 40 ರಷ್ಟು ಮಾತ್ರ ನೀರು ಸಂಗ್ರಹವಿದೆ. ರೈತರು ಕಡಿಮೆ ನೀರಿನ ಬಳಕೆಯಾಗುವ ಬೆಳೆಗಳನ್ನು ಬೆಳೆಯುವ ಮೂಲಕ ಬರದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೈಜೋಡಿಸಬೇಕು. ರೈತರ ಹಿತರಕ್ಷಣೆಗೆ ಸಕಲ ಸಿದ್ಧತೆಗಳನ್ನೂ ಮಾಡಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
-
ಬೆಂಗಳೂರು: ಬರ ಪರಿಸ್ಥಿತಿ (Karnataka Drought) ಕುರಿತು ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳ ಜತೆ ಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ವಿಡಿಯೊ ಸಂವಾದ ನಡೆಸಿ, ಹಲವು ಮಹತ್ವದ ಸೂಚನೆಗಳನ್ನು ನೀಡಿದರು. ಸದ್ಯ ಶೇ. 60 ರಷ್ಟು ಮಳೆ ಕೊರತೆ ಕಾಣುತ್ತಿದೆ. 178 ತಾಲೂಕುಗಳಲ್ಲಿ ಮಳೆಯ ಕೊರತೆ ಕಾಣುತ್ತಿದೆ. ಎರಡನೇ ಹಂತದ ಪರಿಶೀಲನೆ ಮಾಡುವ ಅಗತ್ಯವಿದೆ. ಮುಂದಿನ ಹದಿನೈದು ದಿನಗಳಲ್ಲಿ ನಾನು ಕೇಂದ್ರ ಸರ್ಕಾರಕ್ಕೆ ಬರ ಪರಿಸ್ಥಿತಿ ಕುರಿತಂತೆ ವರದಿ ರವಾನಿಸಬೇಕಿದೆ. ಈ ಹಿನ್ನೆಲೆಯಲ್ಲಿ ಡಿಸಿ-ಸಿಇಒ ಗಳು ತ್ವರಿತವಾಗಿ ಸಮಗ್ರ ಮಾಹಿತಿ ಸಂಗ್ರಹಿಸಿ ಕಳುಹಿಸಬೇಕು ಎಂದು ಸಿಎಂ ಸೂಚಿಸಿದರು.
ಜುಲೈ 18ರವರೆಗೆ ರಾಜ್ಯದಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಒಟ್ಟಾರೆ ಶೇ. 39ರಷ್ಟು ಕೊರತೆಯಾಗಿದ್ದು, 170ಕ್ಕೂ ಹೆಚ್ಚು ತಾಲೂಕುಗಳಲ್ಲಿ ಮಳೆ ಅಭಾವ (ವಿಜಯನಗರ ಜಿಲ್ಲೆಯಲ್ಲಿ ಅತ್ಯಧಿಕ -67% ಕೊರತೆ) ಇದೆ. ಮಲೆನಾಡು (-43%), ಕರಾವಳಿ (-35%), ಉತ್ತರ ಒಳನಾಡು (-33%), ದಕ್ಷಿಣ ಒಳನಾಡು (-31%) ಮಳೆ ಕೊರತೆಯಾಗಿದೆ.
ಪ್ರಮುಖ ಜಲಾಶಯಗಳಲ್ಲಿ ಕೇವಲ ಶೇ. 40 ರಷ್ಟು ಮಾತ್ರ ನೀರು ಸಂಗ್ರಹವಿದೆ (ಪ್ರಸ್ತುತ 359.98 ಟಿಎಂಸಿ, ಕಳೆದ ವರ್ಷ 681.83 ಟಿಎಂಸಿ ಇತ್ತು). ಲಿಂಗನಮಕ್ಕಿ, ಸೂಪ ಮತ್ತು ವಾರಾಹಿಯಲ್ಲಿ ಕೇವಲ ಸರಾಸರಿ ಶೇ. 23 ರಷ್ಟು ಮಾತ್ರ ನೀರು ಸಂಗ್ರಹವಿದೆ. ಕಾವೇರಿ ಕಣಿವೆಯಲ್ಲಿ ಶೇ. 51 ಹಾಗೂ ಕೃಷ್ಣಾ ಕಣಿವೆಯಲ್ಲಿ ಶೇ. 48 ರಷ್ಟು ನೀರಿದೆ.
ಈ ಹಿನ್ನೆಲೆಯಲ್ಲಿ ರೈತರು ಕಡಿಮೆ ನೀರಿನ ಬಳಕೆಯಾಗುವ ಬೆಳೆಗಳನ್ನು ಬೆಳೆಯುವ ಮೂಲಕ ಬರದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೈಜೋಡಿಸಬೇಕು. ರೈತರ ಹಿತರಕ್ಷಣೆಗೆ ಸಕಲ ಸಿದ್ಧತೆಗಳನ್ನೂ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಗ್ರಾಮೀಣ ತಾಲೂಕುಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಹೆಚ್ಚುವರಿ ಅನುದಾನ ಘೋಷಣೆ ಮಾಡಲಾಗಿದೆ. ಹೊಸ ಬೋರ್‌ವೆಲ್ ಕೊರೆಸುವಾಗ ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ ಆಗಬೇಕು. ನಕಲಿ ಪ್ರಕರಣಗಳು ಕಂಡುಬಂದರೆ ಸಿಇಒಗಳೇ ನೇರ ಹೊಣೆಯಾಗುತ್ತಾರೆ.
ಮುಂದಿನ 15 ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಬರ ಪರಿಸ್ಥಿತಿಯ ಸಮಗ್ರ ವರದಿ ಸಲ್ಲಿಕೆ ಮಾಡಬೇಕು. ಕೇಂದ್ರ ತಂಡಕ್ಕೆ ವಾಸ್ತವಾಂಶ ಮನವರಿಕೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡದರು.
ರೈತರ ಹಿತರಕ್ಷಣೆಗೆ ಆದ್ಯತೆ:
ಸಣ್ಣ ಮತ್ತು ಅತಿ ಸಣ್ಣ ರೈತರ ಹಿತವೇ ಮುಖ್ಯ ಆದ್ಯತೆ. ಕೃಷಿ, ಪಶುಸಂಗೋಪನೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಟ್ರಾನ್ಸ್‌ಫಾರ್ಮರ್‌ಗಳ ರಿಪೇರಿಗೆ ವಿಶೇಷ ಗಮನ ನೀಡಿ, ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಲು 4G ವಿನಾಯಿತಿ ನೀಡಲಾಗುವುದು. ಅಧಿಕಾರಿಗಳು ಕೇವಲ ಕಾಗದದ ವರದಿ ನೀಡದೆ, ಫೀಲ್ಡ್‌ಗಿಳಿದು ಆಡಳಿತಾತ್ಮಕ ಟೀಮ್ ವರ್ಕ್ ಮತ್ತು ಕಾರ್ಯಕ್ಷಮತೆ ಪ್ರದರ್ಶಿಸಬೇಕು ಎಂದು ಸಿಎಂ ತಿಳಿಸಿದ್ದಾರೆ.
ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ; ಯೆಲ್ಲೋ ಅಲರ್ಟ್ ಘೋಷಣೆ
ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ ಅವರು, ಸಚಿವರುಗಳಾದ ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್, ಈಶ್ವರ್ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ ಅವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.