OTT ವೀಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಜೀ5; 7 ಭಾಷೆಯಲ್ಲಿ ಹೊಸ ವೆಬ್ ಸಿರೀಸ್, ಸಿನಿಮಾಗಳ ಘೋಷಣೆ!
ಭಾರತೀಯ ಪ್ರಾದೇಶಿಕ ಮನರಂಜನಾ ಲೋಕದಲ್ಲಿ ಕ್ರಾಂತಿ ಸೃಷ್ಟಿಸಲು ಮುಂದಾಗಿರುವ 'ಜೀ5' ಒಟಿಟಿ ವೇದಿಕೆಯು ಏಕಕಾಲಕ್ಕೆ ಕನ್ನಡ, ಹಿಂದಿ, ತಮಿಳು ಸೇರಿದಂತೆ 7 ಭಾಷೆಗಳಲ್ಲಿ ಹೊಸ ವೆಬ್ ಸರಣಿಗಳು, ಚಿತ್ರಗಳು ಹಾಗೂ ಎಐ ಬೆಂಬಲಿತ ಕಥೆಗಳನ್ನು ಘೋಷಣೆ ಮಾಡಿದೆ.
-
ಭಾರತದ ಪ್ರಮುಖ ಸ್ವದೇಶಿ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆದ 'ಜೀ5' (Zee5) ತನ್ನ ವೀಕ್ಷಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಭಾರತೀಯ ಪ್ರಾದೇಶಿಕ ಭಾಷೆಗಳ ಮನರಂಜನೆಗೆ ಹೊಸ ಮೆರುಗು ನೀಡುವ ಉದ್ದೇಶದಿಂದ, ಜೀ5 ಏಕಕಾಲಕ್ಕೆ 7 ಭಾಷೆಗಳಲ್ಲಿ ಹೊಸ ವೆಬ್ ಸರಣಿಗಳು, ಸಿನಿಮಾಗಳು, ಲೈವ್ ಸ್ಪೋರ್ಟ್ಸ್, ಅನಿಮೇಷನ್ ಹಾಗೂ AI ಆಧಾರಿತ ಕಥೆ ಹೇಳುವಿಕೆಯ ಬೃಹತ್ ಶ್ರೇಣಿಯನ್ನು ಅನಾವರಣಗೊಳಿಸಿದೆ.
ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ ಮತ್ತು ಬಾಂಗ್ಲಾ ಭಾಷೆಗಳಲ್ಲಿ ಈ ಹೊಸ ವಿಷಯಗಳು ಲಭ್ಯವಾಗಲಿದ್ದು, ಇದಕ್ಕಾಗಿ ಜೀ5 ಭಾರತದ ಪ್ರಸಿದ್ಧ ನಿರ್ಮಾಣ ಸಂಸ್ಥೆಗಳು ಹಾಗೂ ನಿರ್ದೇಶಕರೊಂದಿಗೆ ಕೈಜೋಡಿಸಿದೆ.
ಯಾವ್ಯಾವ ಭಾಷೆಯಲ್ಲಿ ಯಾವೆಲ್ಲಾ ಕಂಟೆಂಟ್ ಬರಲಿದೆ?
ಕನ್ನಡ:
ಕನ್ನಡದಲ್ಲಿ 'ಅಯ್ಯನ ಮನೆ' ಹೊಸ ಸೀಸನ್‌ನೊಂದಿಗೆ ಮರಳುತ್ತಿದ್ದರೆ, 'ಬಿಟ್‌ಕಾಯಿನ್ ಸ್ಕ್ಯಾಮ್' ಮತ್ತು 'ಆಪರೇಷನ್ ಬಂಗಾರ' ಸರಣಿಗಳು ಶೀಘ್ರದ್ಲಲೇ ಬರಲಿವೆ. ರಾಜ್ ಬಿ. ಶೆಟ್ಟಿ ಮತ್ತು ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ 'ಕರಾವಳಿ' ಸಿನಿಮಾ ಜೀ5 ವೇದಿಕೆಗೆ ಬರಲಿದೆ. KVN ಪ್ರೊಡಕ್ಷನ್ಸ್, ಬಹಾವಾ ಎಂಟರ್‌ಟೈನ್‌ಮೆಂಟ್ ಮುಂತಾದ ಸಂಸ್ಥೆಗಳ ಜೊತೆ ಜೀ5 ಒಪ್ಪಂದ ಮಾಡಿಕೊಂಡಿದೆ.
ಹಿಂದಿ:
ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಜೀವನಾಧಾರಿತ ವೆಬ್ ಸಿರೀಸ್ 'ಕಾಂಬ್ಳಿ', ದಿ ಸ್ಕ್ಯಾಮ್: ಲೀಕ್ಡ್, ಕಾಫಿ ಕಿಂಗ್, ರಂಗಬಾಜ್ ಸೀಸನ್ 4, ಹಾಗೂ ವರುಣ್ ಧವನ್, ಪೂಜಾ ಹೆಗ್ಡೆ ಅಭಿನಯದ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ', ಬಾಬಿ ಡಿಯೋಲ್ ನಟನೆಯ 'ಬಂದರ್', ಕಂಗನಾ ರಣಾವತ್ ಮತ್ತು ವಾಣಿ ಕಪೂರ್ ಅವರ ನೂತನ ಚಿತ್ರಗಳು ಬಿಡುಗಡೆಯಾಗಲಿವೆ. ಜಿಯೋ ಸ್ಟುಡಿಯೋಸ್, ಮ್ಯಾಡಾಕ್ ಫಿಲ್ಮ್ಸ್, ಟಿಪ್ಸ್ ಫಿಲ್ಮ್ಸ್ ನಂತಹ ದೈತ್ಯ ಸಂಸ್ಥೆಗಳು ಇದರ ಭಾಗವಾಗಿವೆ.
ತಮಿಳು ಮತ್ತು ತೆಲುಗು:
ತಮಿಳಿನಲ್ಲಿ 'ಕೂಸ್ ಮುನಿಸಾಮಿ ವೀರಪ್ಪನ್' ಮತ್ತು 'ಥಡಯಂ' ಹೊಸ ಸೀಸನ್‌ಗಳ ಜೊತೆಗೆ ನಯನತಾರಾ-ಕವಿನ್ ಅಭಿನಯದ 'ಹಾಯ್!', 'ಡಿಮೋಂಟೆ ಕಾಲೋನಿ 3' ಪ್ರಸಾರವಾಗಲಿವೆ. ತೆಲುಗಿನಲ್ಲಿ ನಿವೇತಾ ಥಾಮಸ್ ಅಭಿನಯದ 'ಶ್ರೀಮತಿ', ಶ್ರೀಕಾಂತ್ ಅವರ 'ಆಬ್ಜೆಕ್ಷನ್ ಮೈಲಾರ್ಡ್' ಹಾಗೂ ವೆಂಕಿ ಅನಿಲ್ 5, NBK111 ನಂತಹ ದೊಡ್ಡ ಚಿತ್ರಗಳು ಪ್ರಸಾರಕ್ಕೆ ಸಜ್ಜಾಗಿವೆ.
ಮಲಯಾಳಂ, ಮರಾಠಿ ಮತ್ತು ಬಾಂಗ್ಲಾ:
ಮಲಯಾಳಂನಲ್ಲಿ ಮೆಚ್ಚುಗೆ ಪಡೆದ 'ಬಾಲನ್ ದಿ ಬಾಯ್' ಮತ್ತು 'ಎ ಕ್ವೀನ್', ಮರಾಠಿಯ 'ಹೇ ಕೇ ನವೀನ್?' ಹಾಗೂ ಹಿಟ್ ಸಿನಿಮಾ 'ತುಂಬಾಡ್ಚಿ ಮಂಜುಳಾ', ಬಾಂಗ್ಲಾದಲ್ಲಿ 'ಶ್ವೇತಕಳಿ' ಮತ್ತು 'ಲಾಲ್‌ಬಜಾರ್' ನಂತಹ ಪ್ರಸಿದ್ಧ ಸರಣಿಗಳು ಪ್ರೇಕ್ಷಕರನ್ನು ರಂಜಿಸಲಿವೆ.
OTT This Week: ಈ ವಾರ OTTಯಲ್ಲಿ ಈ ಐದು ತೆಲುಗು ಸಿನಿಮಾಗಳನ್ನು ನೋಡಿ!
“ನಾವು ಕೇವಲ ಮನರಂಜನಾ ಕ್ಷೇತ್ರವನ್ನು ಅನುಸರಿಸುತ್ತಿಲ್ಲ, ಅದನ್ನು ಹೊಸದಾಗಿ ರೂಪಿಸುತ್ತಿದ್ದೇವೆ. ದಿಟ್ಟತನದ ಕಥೆಗಳನ್ನು ಬೆಂಬಲಿಸುವುದು ಮತ್ತು ಪ್ರೇಕ್ಷಕರಿಗೆ ಆಧುನಿಕ ತಂತ್ರಜ್ಞಾನ ಹಾಗೂ AI ಬೆಂಬಲಿತ ಸ್ಮಾರ್ಟ್ ಅನುಭವ ನೀಡುವುದೇ ನಮ್ಮ ಮುಖ್ಯ ಉದ್ದೇಶ" ಎಂದು ಜೀ5 ಇಂಡಿಯಾ ಬ್ಯುಸಿನೆಸ್ ಹೆಡ್ ತೇಜ್‌ಕರನ್ ಸಿಂಗ್ ಬಜಾಜ್ ಹೇಳಿದ್ದಾರೆ.
ವಿಭಿನ್ನ ಕಥೆಗಳನ್ನು ತರಲು ಬದ್ಧರಾಗಿದ್ದೇವೆ
"ಉತ್ತಮ ವಿಷಯವೆಂದರೆ ಕೇವಲ ಸಂಖ್ಯೆಯಲ್ಲ, ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವ ಕಥೆಗಳು. ಭಾರತದ ವೀಕ್ಷಕರು ಭಾಷೆಗಳ ಗಡಿ ಮೀರಿ ವಿಷಯಗಳನ್ನು ವೀಕ್ಷಿಸುತ್ತಿದ್ದು, ಅವರ ಅಗತ್ಯಕ್ಕೆ ತಕ್ಕಂತೆ ಧೈರ್ಯಶಾಲಿ ಮತ್ತು ವಿಭಿನ್ನ ಕಥೆಗಳನ್ನು ತರಲು ನಾವು ಬದ್ಧರಾಗಿದ್ದೇವೆ" ಎಂದು ಜೀ5 ಮುಖ್ಯ ಕಂಟೆಂಟ್ ಅಧಿಕಾರಿ (CCO) ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.