Cabinet Meeting: ಗ್ರಾಮೀಣ ಮಹಿಳೆಯರಿಗೆ ಮಿಶ್ರತಳಿ ಹಸು-ಸುಧಾರಿತ ಎಮ್ಮೆ ಖರೀದಿಸಲು ಪ್ರೋತ್ಸಾಹಧನ; ಸಂಪುಟ ಸಭೆಯಲ್ಲಿ ತೀರ್ಮಾನ
Priyank Kharge: ಸಣ್ಣ ಮತ್ತು ಅತಿ ಸಣ್ಣ ರೈತರು, ಭೂ ರಹಿತ ಮಹಿಳಾ ಕಾರ್ಮಿಕರಿಗೆ ಸ್ವಯಂ ಉದ್ಯೋಗಾವಕಾಶ ಕಲ್ಪಿಸಿ, ಹಾಲಿನ ಉತ್ಪಾದನೆ ಹೆಚ್ಚಿಸುವುದು ಹಾಗೂ ಅವರ ಕುಟುಂಬಕ್ಕೆ ನಿರಂತರ ಆದಾಯ ಮತ್ತು ಪೌಷ್ಟಿಕಾಂಶ ಭದ್ರತೆಯನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ (ಸಂಗ್ರಹ ಚಿತ್ರ) -
ಬೆಂಗಳೂರು, ಅ.06: ಉತ್ತರ ಕರ್ನಾಟಕ ಭಾಗದಲ್ಲಿ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ 9,600 ಅರ್ಹ ಮಹಿಳಾ ಫಲಾನುಭವಿಗಳಿಗೆ ಶೇ. 25ರಷ್ಟು ಸಹಾಯಧನದಲ್ಲಿ (ಸಬ್ಸಿಡಿ) ಮಿಶ್ರತಳಿ ಹಸು ಅಥವಾ ಸುಧಾರಿತ ಎಮ್ಮೆ ಖರೀದಿಸಲು ಪ್ರೋತ್ಸಾಹಧನ ನೀಡುವ ಯೋಜನೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯು (Cabinet Meeting) ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
2026-27ನೇ ಸಾಲಿನ ಆಯವ್ಯಯ ಭಾಷಣದದಲ್ಲಿ ಘೋಷಿಸಿದಂತೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಮೂಲಕ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ದೇವದಾಸಿಯರು, ವಿಧವೆಯರು, ತೃತೀಯ ಲಿಂಗದವರು, ಜೀವನಧಾರವಿಲ್ಲದ ಸಂಕಷ್ಟಕ್ಕೊಳಗಾದವರು, ಪರಿತ್ಯಕ್ತೆಯರು, ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕ ಮಹಿಳೆಯರಿಗೆ ಈ ಯೋಜನೆಯಡಿ ಆದ್ಯತೆ ನೀಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಯೋಜನೆಯ ಒಟ್ಟು ವೆಚ್ಚ ₹18.00 ಕೋಟಿಗಳಾಗಿದ್ದು, ಬೆಳಗಾವಿ ವಿಭಾಗದ 4,800 ಫಲಾನುಭವಿಗಳಿಗೆ ₹9.00 ಕೋಟಿ ಹಾಗೂ ಕಲಬುರಗಿ ವಿಭಾಗದ 4,800 ಫಲಾನುಭವಿಗಳಿಗೆ ₹9.00 ಕೋಟಿ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿರುವ ಸಚಿವರು, ಪ್ರತಿಯೊಬ್ಬ ಅರ್ಹ ಮಹಿಳಾ ಫಲಾನುಭವಿಗೆ ತಲಾ ₹18,750/- ಗಳಂತೆ ಶೇ. 25ರಷ್ಟು ಸರ್ಕಾರಿ ಸಹಾಯಧನ ಸಿಗಲಿದೆ ಎಂದಿದ್ದಾರೆ.
ಸಣ್ಣ ಮತ್ತು ಅತಿ ಸಣ್ಣ ರೈತರು, ಭೂ ರಹಿತ ಮಹಿಳಾ ಕಾರ್ಮಿಕರಿಗೆ ಸ್ವಯಂ ಉದ್ಯೋಗಾವಕಾಶ ಕಲ್ಪಿಸಿ, ಹಾಲಿನ ಉತ್ಪಾದನೆ ಹೆಚ್ಚಿಸುವುದು ಹಾಗೂ ಅವರ ಕುಟುಂಬಕ್ಕೆ ನಿರಂತರ ಆದಾಯ ಮತ್ತು ಪೌಷ್ಟಿಕಾಂಶ ಭದ್ರತೆಯನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.