Bengaluru Habba: ಬೆಂಗಳೂರು ಹಬ್ಬ ಎಲ್ಲರನ್ನೂ ಒಂದುಗೂಡಿಸಲಿ: ಸಿಎಂ ಸಿದ್ದರಾಮಯ್ಯ
ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕೈಗಾರಿಕೆ ವಲಯ ಮತ್ತು ವಿವಿಧ ಖಾಸಗಿ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿದ್ದ ಬೆಂಗಳೂರು ಹಬ್ಬ -2026ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ ಮಾತನಾಡಿದ್ದಾರೆ.
ಬೆಂಗಳೂರು ಹಬ್ಬಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. -
ಬೆಂಗಳೂರು, ಜ.16: ಬೆಂಗಳೂರಿನಲ್ಲಿ ಅನೇಕ ಭಾಷೆ, ಧರ್ಮಗಳಿದ್ದು, ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬೇಕು. ಕನ್ನಡ ನಾಡಿನವರು ಕನ್ನಡ ಭಾಷೆಯನ್ನು ಕಲಿಯಬೇಕು. ಕನ್ನಡವನ್ನು ವ್ಯಾವಹಾರಿಕ ಭಾಷೆಯನ್ನಾಗಿಸಬೇಕು ಹಾಗೂ ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ. ಯಾವುದೇ ರಾಜ್ಯದಿಂದ ಜನ ವಾಸಿಸಲು ಬಂದರೂ ಕನ್ನಡ ಕಲಿತು ಕನ್ನಡಿಗರಾಗಿ ಬಾಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕೈಗಾರಿಕೆ ವಲಯ ಮತ್ತು ವಿವಿಧ ಖಾಸಗಿ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿದ್ದ ಬೆಂಗಳೂರು ಹಬ್ಬ -2026 ಉದ್ಘಾಟನೆ ಹಾಗೂ ಜಾನಪದ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಬೆಂಗಳೂರು ಹಬ್ಬದಲ್ಲಿ 30ಕ್ಕೂ ಹೆಚ್ಚು ಪ್ರದೇಶಗಳಲ್ಲಿ 350 ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯಲಿದ್ದು, ಬೆಂಗಳೂರಿನ ನಾಗರಿಕರಿಗೆ ಇದೊಂದು ಸುಸಂದರ್ಭ. ಸಾಹಿತ್ಯ, ಕಲೆ, ಸಂಸ್ಕೃತಿಗಳನ್ನು ಬೇರೆ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ಮತ್ತು ಯುವ ಜನಾಂಗಕ್ಕೆ ತಲುಪಿಸುವುದು ಇದರ ಉದ್ದೇಶ. ಎಲ್ಲ ಊರುಗಳಲ್ಲಿ ಹಮ್ಮಿಕೊಳ್ಳುವ ಜಾತ್ರೆ, ಉತ್ಸವಗಳು ಜಾತಿ , ಧರ್ಮಗಳನ್ನು ಮರೆತು ಮನುಷ್ಯರಾಗಬೇಕು ಎನ್ನುವ ಸಂದೇಶವನ್ನು ಸಾರುತ್ತದೆ. ಮನುಷ್ಯರು ಪರಸ್ಪರ ಪ್ರೀತಿಸಬೇಕೆ ಹೊರತು ದ್ವೇಷಿಸಬಾರದು. ಯಾವುದೇ ಧರ್ಮ ದ್ವೇಷಿಸಲು ಹೇಳುವುದಿಲ್ಲ ಎಂದರು.

ಸಮಾಜಕ್ಕೆ ಏನು ಬಿಟ್ಟುಹೋಗಿದ್ದೇವೆ ಎನ್ನುವುದು ಮುಖ್ಯ
ಕನ್ನಡ ನಾಡಿನಲ್ಲಿ ಬಸವಣ್ಣ, ಕನಕದಾಸರು, ನಾರಾಯಣಗುರುಗಳು ಸೇರಿ ಅನೇಕರು ಆಗಿಹೋಗಿದ್ದಾರೆ. ಇವರೆಲ್ಲರೂ ನಾವೆಲ್ಲ ಮನುಷ್ಯರೇ ಎಂದು ಸಾರಿ ಸಾರಿ ಹೇಳಿದವರು. ಬಸವಣ್ಣ ಜಾತಿ, ಧರ್ಮ, ವರ್ಗ, ಕಂದಾಚಾರ, ಮೌಢ್ಯಗಳು ತೊಲಗಬೇಕು ಎಂದು ಕರೆ ನೀಡಿದ್ದರು. ಹುಟ್ಟು ಮತ್ತು ಸಾವು, ಇವೆರಡರ ಮಧ್ಯೆ ನಾವೇನು ಮಾಡುತ್ತೇವೆ ಎನ್ನುವುದು ಮುಖ್ಯ. ಏನು ಸಾಧಿಸಿದೆವು, ಸಮಾಜಕ್ಕೆ ಏನು ಬಿಟ್ಟುಹೋಗಿದ್ದೇವೆ ಎನ್ನುವುದು ಮುಖ್ಯ . ಬೇರೆಯವರು ಅನುಸರಿಸುವ ರೀತಿಯಲ್ಲಿ ನಮ್ಮ ಹೆಜ್ಜೆ ಗುರುತುಗಳು ಇರಬೇಕೇ ಹೊರತು, ಅದನ್ನು ವಿರೋಧಿಸುವಂತಿರಬಾರದು ಎಂದರು.
ಸಂಸ್ಕೃತಿ, ಸಾಹಿತ್ಯ, ಕಲೆಯನ್ನು ನಾವು ಮರೆಯಬಾರದು
ಭವ್ಯವಾದ ನಮ್ಮ ಸಂಸ್ಕೃತಿ, ಸಾಹಿತ್ಯ, ಕಲೆಯನ್ನು ನಾವು ಮರೆಯಬಾರದು. ನಾವೆಲ್ಲರೂ ಒಂದೇ ಎಂದು ಬಾಳಬೇಕಿರುವುದು ಅವಶ್ಯ ಎಂದರು.
ಪದ್ಮಿನಿ ರವಿ ಹಾಗೂ ನಂದಿನಿ ಆಳ್ವ ಅವರು ಪ್ರಾರಂಭಿಸಿದ ಬೆಂಗಳೂರು ಹಬ್ಬವನ್ನು ರವಿಚಂದರ್ ಮತ್ತು ಪ್ರಶಾಂತ್ ಪ್ರಕಾಶ್ ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಮುಖ್ಯಮಂತ್ರಿಗಳು ಹೇಳಿದರು.
DK Shivakumar: ಸಿಎಂ ಸ್ಥಾನ ನನ್ನ, ಸಿಎಂ ಹಾಗೂ ಹೈಕಮಾಂಡ್ ನಡುವಣ ವಿಚಾರ: ಡಿಕೆ ಶಿವಕುಮಾರ್
ಕನ್ನಡತನವನ್ನು ಬೆಳೆಸೋಣ
ಕನ್ನಡ ನಮ್ಮ ಮಾತೃಭಾಷೆಯಾಗಿದ್ದು, ಕನ್ನಡತನವನ್ನು ಬೆಳೆಸೋಣ. ಬೆಂಗಳೂರು ಹಬ್ಬ ಎಲ್ಲರನ್ನೂ ಒಂದುಗೂಡಿಸಲಿ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು. ಬೆಂಗಳೂರಿನಲ್ಲಿ 1.40 ಕೋಟಿ ಜನ ನೆಲೆಸಿದ್ದಾರೆ. ನಾವೆಲ್ಲರೂ ಒಂದಾಗಿ ಬಾಳೋಣ, ಮನುಷ್ಯರಾಗೋಣ ಎಂದರು.