ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗ್ರಾಮ ಪಂಚಾಯಿತಿಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ, 'ಜನರ ಯೋಜನೆ' ಜಾರಿಗೆ ಮಾರ್ಗಸೂಚಿ: ಸಿಎಂ

CM DK Shivakumar: 5ನೇ ರಾಜ್ಯ ಹಣಕಾಸು ಆಯೋಗದ ವರದಿಯಂತೆ ಗ್ರಾಮ ಪಂಚಾಯಿತಿಗಳಿಗೆ ಒಟ್ಟು ರೂ. 1261 ಕೋಟಿ, ತಾಲೂಕು ಪಂಚಾಯಿತಿಗಳಿಗೆ ಒಟ್ಟು ರೂ. 557 ಕೋಟಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಒಟ್ಟು ರೂ. 183 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ: ಸಿಎಂ

-

Profile
Siddalinga Swamy Oct 14, 2026 9:18 PM

ಬೆಂಗಳೂರು. ಅ.14: ಗ್ರಾಮ ಪಂಚಾಯಿತಿಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಮೂಲಕ ವಿಕೇಂದ್ರೀಕರಣ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM DK Shivakumar) ತಿಳಿಸಿದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆ ನಡೆಸಿ, ಅವರು ಮಾತನಾಡಿದರು.

5ನೇ ಹಣಕಾಸು ಆಯೋಗದ ವರದಿಯ ಹಣಕಾಸು ಹಂಚಿಕೆ ಹಾಗೂ ಆಡಳಿತ ಸುಧಾರಣೆಗೆ ಸಂಬಂಧಿಸಿದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಕುರಿತಾಗಿ ಗ್ರಾಮೀಣಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗುವುದು. ಸಮಿತಿಯು ಅನುಷ್ಠಾನಗೊಳಿಸಬಹುದಾದ ಶಿಫಾರಸುಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲಿದೆ ಎಂದರು.

5ನೇ ರಾಜ್ಯ ಹಣಕಾಸು ಆಯೋಗದ ವರದಿಯಂತೆ ಗ್ರಾಮ ಪಂಚಾಯಿತಿಗಳಿಗೆ ಒಟ್ಟು ರೂ. 1261 ಕೋಟಿ, ತಾಲೂಕು ಪಂಚಾಯಿತಿಗಳಿಗೆ ಒಟ್ಟು ರೂ. 557 ಕೋಟಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಒಟ್ಟು ರೂ. 183 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

ಸಂವಿಧಾನದ 74ನೇ ತಿದ್ದುಪಡಿಯ ಆಶಯದಂತೆ ನಗರ ಸ್ಥಳೀಯ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ತರುವ ಕುರಿತಾಗಿ ನ್ಯಾಷನಲ್ ಲಾ ಕಾಲೇಜಿನ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.

ಗ್ರಾಮಸಭೆಗಳ ಮಾದರಿಯಲ್ಲಿ ವಾರ್ಡ್ ಸಭೆ ರಚನೆ

ಗ್ರಾಮಸಭೆಗಳ ಮಾದರಿಯಲ್ಲಿ ವಾರ್ಡ್ ಸಭೆಗಳ ಮೂಲಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕಾಗಿದೆ. ಈಗಾಗಲೇ ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಹಾಗೂ ಗ್ರಾಮ ಮಟ್ಟದಲ್ಲಿ ಜಿಲ್ಲಾ ಯೋಜನಾ ಸಮಿತಿಗಳನ್ನು ರಚಿಸಲಾಗಿದ್ದು, ಈ ಎಲ್ಲಾ ಸಮಿತಿಗಳು ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು.

'ಜನರ ಯೋಜನೆ' ಜಾರಿಗೆ ಮಾರ್ಗಸೂಚಿ

ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಯೋಜನಾ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲು ಅವಶ್ಯಕವಾದ ಅನುದಾನವನ್ನು ಒದಗಿಸಬೇಕು. ತಳಮಟ್ಟದಿಂದ ಜನರ ಬೇಡಿಕೆಗಳನ್ನು ಪಡೆದು ರಾಜ್ಯ ಆಯವ್ಯಯದಲ್ಲಿ ಒಳಗೂಡಿಸುವ ನಿಟ್ಟಿನಲ್ಲಿ ʻಜನರ ಯೋಜನೆʼ ಯನ್ನು ಜಾರಿಗೊಳಿಸುವುದಾಗಿ ಬಜೆಟ್‌ನಲ್ಲಿ ನಾವು ಘೋಷಿಸಿದ್ದೇವೆ. ಈ ಕುರಿತಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕು. ಇದಕ್ಕೆ ಅಗತ್ಯವಾದ ತಂತ್ರಾಂಶವನ್ನು ರೂಪಿಸಿ ಎಂದು ನಿರ್ದೇಶನ ನೀಡಿದರು.

ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಅನುಷ್ಠಾನದ ಜವಾಬ್ದಾರಿ ನಕ್ಷೆಯನ್ನು ಸಿದ್ಧಪಡಿಸಲು ಈಗಾಗಲೇ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಇಲಾಖೆಗಳು ನಿಗದಿತ ಅವಧಿಯ ಒಳಗಾಗಿ ಜವಾಬ್ದಾರಿ ನಕ್ಷೆಯನ್ನು ಸಿದ್ಧಪಡಿಸಿ ಸಲ್ಲಿಸಲು ಸೂಚನೆ ನೀಡಿದರು.

ಸ್ಥಳೀಯ ಸಂಸ್ಥೆಗಳಿಗೆ ಜಿಎಸ್ಟಿಯಲ್ಲಿ ಪಾಲಿನ ಬಗ್ಗೆ ಜಿಎಸ್ಟಿ ಮಂಡಳಿಗೆ ಪ್ರಸ್ತಾವನೆ

ಕರ್ನಾಟಕ ಪಂಚಾಯತ್ ಆಡಳಿತಾತ್ಮಕ ಸೇವೆಯನ್ನು ಪ್ರಾರಂಭಿಸುವ ಕುರಿತಾಗಿ ಇಲಾಖೆಯ ಸಚಿವರಿಂದ ಪ್ರಸ್ತಾವನೆಯನ್ನು ಪಡೆಯಲಾಗುವುದು. ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಜಿಎಸ್ಟಿಯಲ್ಲಿ ಪಾಲು ನೀಡುವ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಜಿಎಸ್ಟಿ ಮಂಡಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.

ಗ್ರಾಮ ಠಾಣಾ ಗಡಿಯನ್ನು ನಿಗದಿಪಡಿಸುವ ಕಾರ್ಯವನ್ನು ತ್ವರಿತಗೊಳಿಸಿ ಪೂರ್ಣಗೊಳಿಸಬೇಕು. ಇದಕ್ಕಾಗಿ ಸ್ವಮಿತ್ವ ದತ್ತಾಂಶವನ್ನು ಬಳಸಿಕೊಳ್ಳಬೇಕು. ಪಂಚಾಯತ್ ರಾಜ್ ಮತ್ತು ಕಂದಾಯ ಇಲಾಖೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಕೈದಿಗಳ ಉತ್ಪನ್ನಗಳಿಗೆ ಆಕರ್ಷಕ ಪ್ಯಾಕೇಜಿಂಗ್‌, ಮಾರುಕಟ್ಟೆ ವಿಸ್ತರಣೆಗೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

ಕೈಗಾರಿಕೆಗಳಿಗೆ ತೆರಿಗೆ ಹಾಕುವ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳಿಂದ ಕೆ.ಐ.ಎ.ಡಿ.ಬಿ ಹಿಂಪಡೆದಿರುವುದರಿಂದ ಗ್ರಾಮ ಪಂಚಾಯಿತಿಗಳ ಆದಾಯ ಕಡಿತವಾಗಿರುವುದು ಗಮನಕ್ಕೆ ಬಂದಿದೆ. ಪ್ರಾಧಿಕಾರವು ಸಂಗ್ರಹಿಸಿದ ಸ್ವತ್ತಿನ ತೆರಿಗೆಯ ಶೇ.30ರಷ್ಟು ಗ್ರಾಮ ಪಂಚಾಯಿತಿಗಳಿಗೆ ನೀಡಲು ಅಧಿನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ. ಪ್ರಾಧಿಕಾರ ಇದುವರೆಗೆ ಸಂಗ್ರಹಿಸಿರುವ ತೆರಿಗೆ ಮೊತ್ತ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆ ಮಾಡಿರುವ ಮೊತ್ತದ ಸಂಪೂರ್ಣ ವಿವರಗಳನ್ನು ಒದಗಿಸಿ ಎಂದು ಸಿಎಂ ಡಿ.ಕೆ. ಶಿವಕುಮಾರ್‌, ಅಧಿಕಾರಿಗಳಿಗೆ ಸೂಚಿಸಿದರು.