Sadguru Madhusudhan Sai: ದುರಾಸೆ, ಋಣಾತ್ಮಕ ಚಿಂತನೆಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ: ಸದ್ಗುರು ಮಧುಸೂದನ ಸಾಯಿ
ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಸಾಧನೆಗೆ ಆರೋಗ್ಯ ಅತ್ಯಗತ್ಯ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ ಹಾಗೂ ಆಂತರಿಕ ಶುದ್ಧತೆಗೂ ಆದ್ಯತೆ ನೀಡಬೇಕು. ದೈವಿಕ ಚಿಂತನೆಗಳು ಮನಸ್ಸನ್ನು ಸದೃಢಗೊಳಿಸಿ ಋಣಾತ್ಮಕ ಆಲೋಚನೆಗಳಿಂದ ದೂರವಿರಲು ಸಹಕಾರಿ ಯಾಗುತ್ತವೆ ಎಂದರು.
-
ಚಿಕ್ಕಬಳ್ಳಾಪುರ: ದುರಾಸೆ, ಋಣಾತ್ಮಕ ಆಲೋಚನೆಗಳು ಮತ್ತು ಆಂತರಿಕ ಅಶಾಂತಿ ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಮನಸ್ಸು ಮತ್ತು ಹೃದಯವನ್ನು ಶುದ್ಧ ವಾಗಿಟ್ಟುಕೊಂಡು ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳುವುದರಿಂದ ಆರೋಗ್ಯಕರ ಹಾಗೂ ನೆಮ್ಮದಿಯ ಜೀವನ ನಡೆಸಬಹುದು ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ(Sadguru Madhusudhan Sai) ಹೇಳಿದರು.
ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ನಾಲ್ಕನೇ ದಿನ ಆಯೋಜಿಸಿದ್ದ ವಿಷ್ಣು ಸಹಸ್ರನಾಮ ಯಾಗ ಮತ್ತು ಧನ್ವಂತರಿ ಹೋಮದ ಪೂರ್ಣಾಹುತಿ ಬಳಿಕ ಆಶೀರ್ವಚನ ನೀಡಿದರು.
ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಸಾಧನೆಗೆ ಆರೋಗ್ಯ ಅತ್ಯಗತ್ಯ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ ಹಾಗೂ ಆಂತರಿಕ ಶುದ್ಧತೆಗೂ ಆದ್ಯತೆ ನೀಡಬೇಕು. ದೈವಿಕ ಚಿಂತನೆಗಳು ಮನಸ್ಸನ್ನು ಸದೃಢಗೊಳಿಸಿ ಋಣಾತ್ಮಕ ಆಲೋಚನೆಗಳಿಂದ ದೂರವಿರಲು ಸಹಕಾರಿ ಯಾಗುತ್ತವೆ ಎಂದರು.
ಇದನ್ನೂ ಓದಿ: Chikkaballapur News: ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಿ; ಸಮಸ್ಯೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಿ
ಮನುಷ್ಯನ ಹೃದಯ ದೇವಸ್ಥಾನದಂತೆ ಪವಿತ್ರವಾಗಿರಬೇಕು. ಉತ್ತಮ ಆಲೋಚನೆಗಳು ಮತ್ತು ದೈವಿಕ ಸ್ಮರಣೆಯಿಂದ ಮನಸ್ಸನ್ನು ತುಂಬಿಕೊಳ್ಳಬೇಕು. ಹಿಂದಿನ ತಲೆಮಾರಿನವರ ಸಂಯಮ, ಶಿಸ್ತು ಮತ್ತು ಜೀವನಶೈಲಿ ಅವರ ಆರೋಗ್ಯಕರ ಬದುಕಿಗೆ ಪೂರಕವಾಗಿದ್ದವು ಎಂದು ತಿಳಿಸಿದರು.
ದುರಾಸೆಗೆ ಮದ್ದಿಲ್ಲ
ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಗೆ ವೈದ್ಯಕೀಯ ಚಿಕಿತ್ಸೆಗಳಿವೆ; ಆದರೆ ದುರಾಸೆಗೆ ಮದ್ದಿಲ್ಲ ಎಂದು ಹೇಳಿದ ಸದ್ಗುರು ಮಧುಸೂದನ ಸಾಯಿ, ಅತಿಯಾದ ಆಸೆಗಳು ಒತ್ತಡ ಮತ್ತು ಅಶಾಂತಿಗೆ ಕಾರಣವಾಗುತ್ತವೆ. ಉತ್ತಮ ಜೀವನಶೈಲಿ ಹಾಗೂ ಮಾನಸಿಕ ನೆಮ್ಮದಿಗಾಗಿ ದುರಾಸೆ ಮತ್ತು ಋಣಾತ್ಮಕ ಚಿಂತನೆಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಶೃಂಗೇರಿಯ ಋತ್ವಿಜ ವಿದ್ವಾನ್ ನಾಗಭೂಷಣ ಭಟ್ ಮಾತನಾಡಿ, ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳನ್ನು ವ್ಯಾಪಾರದ ವಸ್ತುವಾಗಿಸಬಾರದು ಎಂಬ ಚಾಣಕ್ಯರ ಆಶಯಕ್ಕೆ ಅನುಗುಣವಾಗಿ ಸತ್ಯಸಾಯಿ ಗ್ರಾಮದಲ್ಲಿ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಶ್ಲಾಘಿಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್(Pramod Madhwaraj) ಮಾತನಾಡಿ, ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಜೊತೆಗೆ ಜಾಗತಿಕ ಗುಣಮಟ್ಟದ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದರು.
ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ. ಬಿ.ಎನ್. ನರಸಿಂಹಮೂರ್ತಿ, ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಉಪಸ್ಥಿತರಿದ್ದರು.
ನಾದ ತರಂಗಗಳ ಕುರಿತು ಸಂಶೋಧನೆ
ಆಕಾಶ ಮತ್ತು ನಾದ ತರಂಗಗಳಿಗೆ ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ವಿಶೇಷ ಮಹತ್ವವಿದೆ. ಮಂತ್ರಗಳ ಪಠಣದಿಂದ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗಬಹುದು. ಶಬ್ದವು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತು ಸಂಸ್ಥೆಯಲ್ಲಿ ಸಂಶೋಧನೆ ನಡೆಸಲಾಗುತ್ತಿದೆ ಎಂದು ಸದ್ಗುರು ಮಧುಸೂದನ ಸಾಯಿ ತಿಳಿಸಿದರು.
ಇಂದು ಲಲಿತಾ ಹೋಮ
ನವರಾತ್ರಿ ಉತ್ಸವದ ಐದನೇ ದಿನವಾದ ಅಕ್ಟೋಬರ್ ೧೫ರಂದು ಸತ್ಯಸಾಯಿ ಗ್ರಾಮದ ಯಾಗಶಾಲೆ ಯಲ್ಲಿ ಬೆಳಿಗ್ಗೆ ೭.೩೦ರಿಂದ ಲಲಿತಾ ಹೋಮ, ದುರ್ಗಾ ಹೋಮ, ಸುಹಾಸಿನಿ ಮತ್ತು ಕನ್ನಿಕಾ ಪೂಜೆ ನಡೆಯಲಿದೆ. ಸಂಜೆ ೪ ಗಂಟೆಗೆ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ, ಚಂಡಿಕಾ ಪಾರಾಯಣ ಹಾಗೂ ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ನಡೆಯಲಿದ್ದು, ಬಳಿಕ ಹಾರ್ಮೋನಿಯಂ ಕಲಾವಿದ ಡಾ. ರವೀಂದ್ರ ಕಟೋಟಿ ಅವರಿಂದ ‘ಅಮೃತಮಾಲಾ’ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.