IND vs WI: ಶೇಯ್ ಹೋಪ್ ಸ್ಪೋಟಕ ಶತಕಕ್ಕೆ ಬೆದರಿದ ಭಾರತ, ವೆಸ್ಟ್ ಇಂಡೀಸ್ಗೆ ಭರ್ಜರಿ ಜಯ!
IND vs WI 4th T20I Highlights: ಶೇಯ್ ಹೋಪ್ ಸ್ಪೋಟಕ ಶತಕದ ಬಲದಿಂದ ವೆಸ್ಟ್ ಇಂಡೀಸ್ ತಂಡ, ಭಾರತದ ಎದುರು 24 ರನ್ಗಳ ಗೆಲುವು ಪಡೆಯಿತು. ಆ ಮೂಲಕ ನಾಲ್ಕು ಪಂದ್ಯಗಳ ಅಂತ್ಯಕ್ಕೆ ಟಿ20ಐ ಸರಣಿಯಲ್ಲಿ 2-2 ಸಮಬಲ ಕಾಯ್ದುಕೊಂಡಿವೆ. 50 ಎಸೆತಗಳಲ್ಲಿ 102 ರನ್ ಗಳಿಸಿದ ಶೇಯ್ ಹೋಪ್ ಹಾಗೂ 5 ವಿಕೆಟ್ ಕಿತ್ತ ಕೀಮೋ ಪಾಲ್ ಮ್ಯಾಚ್ ವಿನ್ನರ್ಗಳಾದರು.
ವೆಸ್ಟ್ ಇಂಡೀಸ್ ಎದುರು ನಾಲ್ಕನೇ ಟಿ20ಐ ಸೋತ ಭಾರತ. -
ಹೈದರಾಬಾದ್: ಶೇಯ್ ಹೋಪ್ (Shai Hope) ಸ್ಪೋಟಕ ಶತಕ ಹಾಗೂ ಕೀಮೋ ಪಾಲ್ ಅವರ ಮಾರಕ ಬೌಲಿಂಗ್ ದಾಳಿಯ ಸಹಾಯದಿಂದ ವೆಸ್ಟ್ ಇಂಡೀಸ್ ತಂಡ, ಭಾರತದ ವಿರುದ್ಧ ನಾಲ್ಕನೇ ಪಂದ್ಯದಲ್ಲಿ (IND vs WI) 24 ರನ್ಗಳ ಗೆಲುವು ಸಾಧಿಸಿತು. ಆ ಮೂಲಕ ನಾಲ್ಕು ಪಂದ್ಯಗಳ ಅಂತ್ಯಕ್ಕೆ ಉಭಯ ತಂಡಗಳು ಟಿ20ಐ ಸರಣಿಯಲ್ಲಿ 2-2 ಸಮಬಲ ಕಾಯ್ದುಕೊಂಡಿವೆ. ಅಕ್ಟೋಬರ್ 17 ರಂದು ಶನಿವಾರ ಸರಣಿ ನಿರ್ಣಾಯಕ ಪಂದ್ಯದಲ್ಲಿ ಗೆದ್ದ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿದೆ.
ಬುಧವಾರ ಇಲ್ಲಿನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 248 ರನ್ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡಕ್ಕೆ ಸಂಜು ಸ್ಯಾಮ್ಸನ್ ಸ್ಪೋಟಕ ಅರ್ಧಶತಕದಿಂದ ಭರ್ಜರಿ ಆರಂಭ ತಂದುಕೊಟ್ಟಿದ್ದರು.. ಸ್ಪೋಟಕ ಬ್ಯಾಟ್ ಮಾಡಿದ ಸಂಜು ಕೇವಲ 23 ಎಸೆತಗಳಲ್ಲಿ 56 ರನ್ ಗಳಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿ ಔಟ್ ಆದರು. ಇಶಾನ್ ಕಿಶನ್ ಕೇವಲ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ಶ್ರೇಯಸ್ ಅಯ್ಯರ್ 16 ರನ್ ಗಳಿಸಿ ಔಟ್ ಆದರು. ಅಭಿಷೇಕ್ ಶರ್ಮಾ 24 ಎಸೆತಗಳಲ್ಲಿ 29 ರನ್ ಗಳಿಸಿ ಔಟ್ ಆದರು. ನಮನ್ ಧೀರ್ ತಾವು ಎದುರಿಸಿದ ಮೊಟ್ಟ ಮೊದಲ ಎಸೆತದಲ್ಲಿಯೇ ಸ್ಟಂಪ್ ಔಟ್ ಆದರು.
IND vs WI: ಟಿ20ಐ ಕ್ರಿಕೆಟ್ನಲ್ಲಿ 100 ಸಿಕ್ಸರ್ಗಳ ಪೂರ್ಣಗೊಳಿಸಿದ ಸಂಜು ಸ್ಯಾಮ್ಸನ್!
ಭಾರತ ತಂಡ 130 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ವೇಳೆ ಜೊತೆಯಾದ ತಿಲಕ್ ವರ್ಮಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ಕ್ರಮವಾಗಿ 43 ಹಾಗೂ 41 ರನ್ಗಳನ್ನು ಗಳಿಸಿದ ಜೊತೆಗೆ ಆರನೇ ವಿಕೆಟ್ಗೆ 70 ರನ್ಗಳನ್ನು ದಾಖಲಿಸಿದರು. ಆ ಮೂಲಕ ಭಾರತಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ಈ ಇಬ್ಬರನ್ನು ರೊಮ್ಯಾರಿಯೊ ಶೆಫರ್ಡ್ ಹಾಗೂ ಕೀಮೋ ಪಾಲ್ ಔಟ್ ಮಾಡಿದರು. ಅಂತಿಮವಾಗಿ ಭಾರತ ತಂಡಕ್ಕೆ ಕೊನೆಯ ಎರಡು ಎಸೆತಗಳಲ್ಲಿ 24 ರನ್ ಅಗತ್ಯವಿತ್ತು. ಈ ವೇಳೆ ಅರ್ಷದೀಪ್ ಸಿಂಗ್ ರಿಟೈರ್ ಔಟ್ ಆದರು. 19.4 ಓವರ್ಗಳಿಗೆ ಭಾರತ 223 ರನ್ಗಳಿಗೆ ಆಲ್ಔಟ್ ಆಯಿತು.
ವೆಸ್ಟ್ ಇಂಡೀಸ್ ತಂಡದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಕೀಮೋ ಪಾಲ್ ತಮ್ಮ ಪಾಲಿನ 4 ಓವರ್ಗಳಿಗೆ 41 ರನ್ ನೀಡಿದರೂ 5 ವಿಕೆಟ್ ಸಾಧನೆ ಮಾಡಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಭಾಜನರಾದರು.
West Indies deliver a clinical performance to level the T20I series 2-2 against India and set up a decider in Bengaluru 👊 📝: https://t.co/WixfTzusOa https://t.co/PvS7eCgKs6
— ICC (@ICC) October 14, 2026
247 ರನ್ ಕಲೆ ಹಾಕಿದ ವೆಸ್ಟ್ ಇಂಡೀಸ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ವೆಸ್ಟ್ ಇಂಡೀಸ್ ತಂಡ, ಶೇಯ್ ಹೋಪ್ ಶತಕದ ಬಲದಿಂದ ತನ್ನ ಪಾಲಿನ 20 ಓವರ್ಗಳಿಗೆ 3 ವಿಕೆಟ್ಗಳ ನಷ್ಟಕ್ಕೆ 247 ರನ್ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 248 ರನ್ಗಳ ಕಠಿಣ ಗುರಿಯನ್ನು ನೀಡಿತು.
ಶೇಯ್ ಹೋಪ್ ಜೊತೆಗೆ ಹೊಸ ಬ್ಯಾಟ್ಸ್ಮನ್ ಜೆವೆಲ್ ಆಂಡ್ರೆ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಅವರು ಆಡಿದ 16 ಎಸೆತಗಳಲ್ಲಿ 21 ರನ್ ಗಳಿಸಿದರು. ಆದರೆ, ಈ ಆರಂಭಿಕ ಜೋಡಿಯಿಂದ 52 ರನ್ಗಳು ಮೂಡಿ ಬರುವ ಮೂಲಕ ವಿಂಡೀಸ್ ಉತ್ತಮ ಆರಂಭವನ್ನು ಪಡೆಯಿತು. ನಂತರ ಕ್ರೀಸ್ಗೆ ಬಂದ ಶಿಮ್ರಾನ್ ಹೆಟ್ಮಾಯೆರ್ ಕೇವಲ 12 ಎಸೆತಗಳಲ್ಲಿ 33 ರನ್ಗಳನ್ನು ಗಳಿಸಿ ವಿಕೆಟ್ ಒಪ್ಪಿಸಿದರು.
Captain FANTASTIC. ✨🤩 The first West Indian with 3️⃣ T20I 💯s. 🔥 #INDvWI | #MenInMaroon https://t.co/N2Y7JGUUxF
— Windies Cricket (@windiescricket) October 14, 2026
ಶೇಯ್ ಹೋಪ್ ಸ್ಪೋಟಕ ಶತಕ
ಈ ಸರಣಿಯಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿರುವ ಶೇಯ್ ಹೋಪ್, ನಾಲ್ಕನೇ ಟಿ20ಐ ಪಂದ್ಯದ ಕೊನಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಶತಕವನ್ನು ಪೂರ್ಣಗೊಳಿಸಿದರು. ಸ್ಪೋಟಕ ಬ್ಯಾಟ್ ಮಾಡಿದ ಶೇಯ್ ಹೋಪ್ ಅವರನ್ನು ಕಟ್ಟಿ ಹಾಕಲು ಭಾರತೀಯ ಬೌಲರ್ಗಳಿಂದ ಸಾಧ್ಯವಾಗಲಿಲ್ಲ. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಹೋಪ್, 50 ಎಸೆತಗಳಲ್ಲಿ 102 ರನ್ಗಳನ್ನು ಗಳಿಸಿದರು. ಅಲ್ಲದೆ, ಹೆಟ್ಮಾಯೆರ್ ಜೊತೆಗೆ 58 ರನ್, ರೊವ್ಮನ್ ಪೊವೆಲ್ 46 ರನ್ ಹಾಗೂ ಶೆರ್ಫೆನ್ ಋದರ್ಫೋರ್ಡ್ ಅವರ ಜೊತೆಗೆ 91ರನ್ಗಳ ಜೊತೆಯಾಟವನ್ನು ಆಡಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಶೆರ್ಫೆನ್ ಋದರ್ಫೋರ್ಟ್ ಅವರು 26 ಎಸೆತಗಳಲ್ಲಿ ಅಜೇಯ 49 ರನ್ ಬಾರಿಸಿದರು. ಇವರ ಜೊತೆಗೆ ರೊವ್ಮನ್ ಪೊವೆಲ್ 24 ರನ್ಗಳನ್ನು ಗಳಿಸಿದರು.
ಸ್ಕೋರ್ ವಿವರ
ವೆಸ್ಟ್ ಇಂಡೀಸ್: 20 ಓವರ್ಗಳಿಗೆ 247-3 (ಶೇಯ್ ಹೋಪ್ 102* ರನ್, ಶೆರ್ಪೆನ್ ಋದರ್ಫೋರ್ಡ್ 49* ರನ್; ಪ್ರಿನ್ಸ್ ಯಾದವ್ 36 ಕ್ಕೆ 1)
ಭಾರತ: 19.4 ಓವರ್ಗಳಿಗೆ 223-10 (ಸಂಜು ಸ್ಯಾಮ್ಸನ್ 56 ರನ್, ತಿಲಕ್ ವರ್ಮಾ 43 ರನ್, ನಿತೀಶ್ ಕುಮಾರ್ ರೆಡ್ಡಿ 41 ರನ್; ಕೀಮೋ ಪಾಲ್ 41 ಕ್ಕೆ 5, ಗುಡಕೇಶ್ ಮೋತಿ 13 ಕ್ಕೆ 2)