ನಟಿ ತ್ರಿಶಾ ಬಗೆಗಿನ ಹೇಳಿಕೆಗೆ ತೀವ್ರ ವಿರೋಧದ ಬೆನ್ನಲ್ಲೇ ತಮಿಳುನಾಡು ಬಿಜೆಪಿ ಅಧ್ಯಕ್ಷ ಕ್ಷಮೆಯಾಚನೆ; ಏನಿದು ವಿವಾದ?
Tamil Nadu BJP Chief Apologises: ನಟಿ ತ್ರಿಶಾ ಕುರಿತ ಅವಹೇಳನಕಾರಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಕ್ಷಮೆಯಾಚಿಸಿದ್ದಾರೆ. ನಟ-ರಾಜಕಾರಣಿ ವಿಜಯ್ ವಿರುದ್ಧ ಟೀಕೆ ಮಾಡುವ ಸಂದರ್ಭದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನೈನಾರ್ ನಾಗೇಂದ್ರನ್ ಮತ್ತು ತ್ರಿಶಾ (ಸಂಗ್ರಹ ಚಿತ್ರ) -
ಚೆನ್ನೈ, ಫೆ. 16: ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ (Tamil Nadu BJP chief Nainar Nagendran) ನಟ-ರಾಜಕಾರಣಿ ವಿಜಯ್ ಅವರನ್ನು ಟೀಕಿಸುವ ಭರದಲ್ಲಿ ನಟಿ ತ್ರಿಶಾ ಕೃಷ್ಣನ್ ಅವರ ಹೆಸರನ್ನು ಅವಹೇಳನಕಾರಿ ರೀತಿಯಲ್ಲಿ ಉಲ್ಲೇಖಿಸಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿದರು. ತ್ರಿಶಾ (Actress Trisha) ಅವರನ್ನು ಅವಹೇಳನ ಮಾಡಿದ ಕಾರಣಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 65 ವರ್ಷದ ನಾಗೇಂದ್ರನ್ ಈ ಹೇಳಿಕೆ ತಪ್ಪಾಗಿ ಹೊರಬಂದಿದೆ ಎಂದು ಹೇಳಿದರು.
ʼʼಬಾಯ್ತಪ್ಪಿನಿಂದ ಈ ಹೇಳಿಕೆ ಹೊರಬಂದಿದೆ. ನಮ್ಮ ಅಖಿಲ ಭಾರತ ಮಹಿಳಾ ವಿಭಾಗದ ಮುಖ್ಯಸ್ಥೆ ವನತಿ ಶ್ರೀನಿವಾಸನ್ ಹಾಗೂ ಕೆ. ಅಣ್ಣಾಮಲೈ ಈ ವಿಷಯವಾಗಿ ನನ್ನೊಂದಿಗೆ ಮಾತನಾಡಿದ್ದಾರೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ವಿಷಾದ ವ್ಯಕ್ತಪಡಿಸುತ್ತೇನೆʼʼ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷರು ತಿಳಿಸಿದರು.
ಏನಿದು ವಿವಾದ?
ʼʼವಿಜಯ್ ಅನುಭವ ಪಡೆಯಲು ಮತ್ತು ರಾಜಕೀಯದಲ್ಲಿ ಯಶಸ್ವಿಯಾಗಲು ತ್ರಿಶಾ ಮನೆಯಿಂದ ಹೊರಬರಬೇಕು" ಎಂದು ಹೇಳುವ ಮೂಲಕ ನಾಗೇಂದ್ರನ್ ರಾಜಕೀಯ ವಿವಾದವನ್ನು ಹುಟ್ಟುಹಾಕಿದದ್ದರು. ಈ ಹೇಳಿಯ ನೀಡಿದ ಒಂದು ದಿನದ ನಂತರ ಇದೀಗ ಕ್ಷಮೆಯಾಚಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಪ್ರಮುಖ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಲಿದೆ ಎಂಬ ವಿಜಯ್ ಅವರ ಹೇಳಿಕೆಗೆ ಪ್ರತಿಕ್ರಿಯಿಸುವಾಗ ಈ ಹೇಳಿಕೆ ನೀಡಿದ್ದಾರೆ.
ಸ್ಯಾಂಡಲ್‌ವುಡ್ ನಿರ್ಮಾಪಕರಿಗೆ ಎದುರಾಗಿರುವ ಸಂಕಷ್ಟಕ್ಕೆ ಮರುಗಿದ ನಟ ʻದಳಪತಿʼ ವಿಜಯ್!
ವಿಜಯ್ ರಾಜಕೀಯದಲ್ಲಿ ಯಶಸ್ಸು ಸಾಧಿಸಲು ತ್ರಿಶಾ ಅವರ ಮನೆಯಿಂದ ಹೊರಬರಬೇಕು ಎಂದು ನಾಗೇಂದ್ರನ್ ಹೇಳಿದ್ದು, ಭಾರಿ ವಿವಾದಕ್ಕೆ ಕಾರಣವಾಗಿತ್ತು. ವಿಜಯ್ ಅವರ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ನಾಗೇಂದ್ರನ್ ಅಪಹಾಸ್ಯ ಮಾಡಿದ್ದರು. ಮಾಳಿಗೆಯ ಮೇಲೆ ಹತ್ತಲೂ ಸಾಧ್ಯವಾಗದ ನಟ ಸ್ವರ್ಗಕ್ಕೆ ಏರುವ ಕನಸು ಕಾಣುತ್ತಿದ್ದಾನೆ ಎಂದು ಹೇಳಿದ್ದರು. ವಿಜಯ್ ಸಂಪೂರ್ಣವಾಗಿ ಅನನುಭವಿ. ಮೊದಲು, ಅವರು ತನ್ನ ಮನೆಯಿಂದ ಹೊರಬರಬೇಕು. ತ್ರಿಶಾ ಮನೆಯಿಂದ ಹೊರಗೆ ಬಾ, ನಂತರ ಏನಾದರೂ ಆಗಬಹುದು ಎಂದು ಅಪಹಾಸ್ಯ ಮಾಡಿದ್ದರು.
ಕಾನೂನು ಸಲಹೆಗಾರರ ಮೂಲಕ ಈ ಹೇಳಿಕೆಯನ್ನು ತ್ರಿಶಾ ಖಂಡಿಸಿದ್ದರು. ರಾಜಕೀಯದಲ್ಲಿ ತಾನು ತಟಸ್ಥರಾಗಿರುವುದರ ಬಗ್ಗೆ ಪ್ರತಿಪಾದಿಸಿದ್ದರು. ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಹೊಂದಿರುವ ವ್ಯಕ್ತಿಯೊಬ್ಬರು ಇಂತಹ ಅಸಹ್ಯಕರ ಮತ್ತು ಅನುಚಿತ ಹೇಳಿಕೆ ನೀಡುತ್ತಾರೆಂದು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದರು. ಅವರಿಗೆ ಸಂಬಂಧವಿಲ್ಲದ ವಿಷಯಗಳಲ್ಲಿ ಹೆಸರನ್ನು ಎಳೆದು ತರಬಾರದು ಎಂದು ಹೇಳಿದ್ದರು.
ಈ ಹೇಳಿಕೆಗೆ ಹಲವಾರು ರಾಜಕೀಯ ನಾಯಕರು ತೀಕ್ಷ್ಣ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದು, ಬಿಜೆಪಿ ವೈಯಕ್ತಿಕ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಆಡಳಿತಾರೂಢ ಡಿಎಂಕೆ ನಾಯಕರು ಬಿಜೆಪಿ ವಿರುದ್ಧ ಮುಗಿಬಿದ್ದು, ಇಂತಹ ಹೇಳಿಕೆಗಳು ಮಹಿಳೆಯರಿಗೆ ಗೌರವ ಕೊಡುವುದಿಲ್ಲ ಎಂಬುದನ್ನು ಪ್ರತಿಬಿಂಬಿಸುತ್ತವೆ ಎಂದು ದೂರಿದ್ದಾರೆ. ಕಾಂಗ್ರೆಸ್ ಕೂಡ ನಟಿಯ ಹೆಸರನ್ನು ರಾಜಕೀಯ ಚರ್ಚೆಯಲ್ಲಿ ಏಕೆ ತರಲಾಗುತ್ತಿದೆ ಎಂದು ಪ್ರಶ್ನಿಸಿದೆ.