Attendance Management: ಸರ್ಕಾರಿ ಶಾಲೆ ಶಿಕ್ಷಕರು, ಉಪನ್ಯಾಸಕರಿಗೆ ಕರ್ತವ್ಯ KAAMS ಹಾಜರಾತಿ ಆ್ಯಪ್ ಕಡ್ಡಾಯ
ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳ ಶಿಕ್ಷಕರು, ಮುಖ್ಯ ಶಿಕ್ಷಕರು, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು, ಪ್ರಾಂಶುಪಾಲರು ಸೇರಿ ಇತರ ಸಿಬ್ಬಂದಿ, ಅಧಿಕಾರಿಗಳ ಹಾಜರಾತಿಯನ್ನು ಕರ್ತವ್ಯದ ಸ್ಥಳದಲ್ಲಿ ಕಡ್ಡಾಯವಾಗಿ ಗುರುತಿಸಲು ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ -ಕರ್ತವ್ಯ ಮೊಬೈಲ್ ಅಪ್ಲಿಕೇಷನ್ ಅನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಸೂಚಿಸಿದೆ.
ಕರ್ತವ್ಯ ಆ್ಯಪ್ (ಸಂಗ್ರಹ ಚಿತ್ರ) -
ಬೆಂಗಳೂರು: ಶಿಕ್ಷಣ ಇಲಾಖೆಯ ಎಲ್ಲಾ ಕಾಯಂ ಸಿಬ್ಬಂದಿ, ನೌಕರರಿಗೆ ಹಾಜರಾತಿ ದತ್ತಾಂಶದ ಏಕರೂಪತೆ, ಪಾರದರ್ಶಕತೆ ಮತ್ತು ಪರಿಶೀಲನೀಯತೆಯನ್ನು ಖಾತ್ರಿಪಡಿಸುವ ಸಂಬಂಧ ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ -ಕರ್ತವ್ಯ (Kartavya - KAAMS) ಮೊಬೈಲ್ ಅಪ್ಲಿಕೇಷನ್ ಅನ್ನು ತಕ್ಷಣದಿಂದ ಕಡ್ಡಾಯವಾಗಿ ಜಾರಿಗೊಳಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿದೆ.
ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳ ಶಿಕ್ಷಕರು, ಮುಖ್ಯ ಶಿಕ್ಷಕರು, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು, ಪ್ರಾಂಶುಪಾಲರು, ತತ್ಸಮಾನ ವೃಂದದ ಸಿಬ್ಬಂದಿ, ಅಧಿಕಾರಿಗಳು ಮತ್ತು ಎಲ್ಲಾ ಕಚೇರಿಗಳಲ್ಲಿನ ಕಾಯಂ ಬೋಧಕೇತರ ಸಿಬ್ಬಂದಿ, ಅಧಿಕಾರಿಗಳ ಹಾಜರಾತಿಯನ್ನು ಕರ್ತವ್ಯದ ಸ್ಥಳದಲ್ಲಿ ಪ್ರತಿದಿನ, ತರಬೇತಿ ಕಾರ್ಯಕ್ರಮದ ಅವಧಿಯಲ್ಲಿ ಮತ್ತು ಎಲ್ಲಾ ಪರೀಕ್ಷೆಗಳ ಮೌಲ್ಯಮಾಪನ ಕೇಂದ್ರಗಳಲ್ಲಿ ಕಡ್ಡಾಯವಾಗಿ ಗುರುತಿಸಲು ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ -ಕರ್ತವ್ಯ( Kartavya - KAMS) ಮೊಬೈಲ್ ಅಪ್ಲಿಕೇಷನ್ ಅನ್ನು ಜಾರಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇಲಾಖಾ ಮುಖ್ಯಸ್ಥರು ಪಾಲಿಸಬೇಕಾದ ಷರತ್ತುಗಳು:
- ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಕರ್ತವ್ಯ (Kartavya) ಮೊಬೈಲ್ ಅಪ್ಲಿಕೇಷನ್ ಮೂಲಕ ಎಲ್ಲಾ ಕಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ / ಅಧಿಕಾರಿಗಳ ಹಾಜರಾತಿ ದಾಖಲಿಸುವ ಪ್ರಕ್ರಿಯೆಯನ್ನು ತಕ್ಷಣದಿಂದಲೇ ಜಾರಿಗೊಳಿಸತಕ್ಕದ್ದು ಹಾಗೂ ಸಂಬಂಧಿಸಿದ ಇಲಾಖಾ ಮುಖ್ಯಸ್ಥರುಗಳು ಸದರಿ ಕಾರ್ಯಕ್ರಮದ ಅನುಷ್ಠಾನಾಧಿಕಾರಿಗಳಾಗಿ ಕಾರ್ಯನಿರ್ವಹಿಸತಕ್ಕದ್ದು.
- Centre for e-Governance, KAMS , ಕಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ/ಅಧಿಕಾರಿಗಳ ಕರ್ತವ್ಯ (Kartavya-KAAMS) ಹಾಜರಾತಿಯನ್ನು HRMS ತಂತ್ರಾಂಶದೊಂದಿಗೆ ಸಂಯೋಜಿಸಲು ಅಗತ್ಯ ಕ್ರಮವಹಿಸತಕ್ಕದ್ದು.
- ಕಡ್ಡಾಯವಾಗಿ ಪ್ರತಿ ದಿನ 2 ಬಾರಿ (In Time Out Time) ಹಾಜರಾತಿಯನ್ನು ಕಡ್ಡಾಯವಾಗಿ ಕರ್ತವ್ಯ (Kartavya) ಮೊಬೈಲ್ ಅಪ್ಲಿಕೇಷನ್ ಮೂಲಕ ದಾಖಲಿಸಲು ಅನುಷ್ಠಾನಾಧಿಕಾರಿಗಳು ನಿರ್ದೇಶನ ನೀಡತಕ್ಕದ್ದು,
- ಕರ್ತವ್ಯ Kartavya ಮೊಬೈಲ್ ಅಪ್ಲಿಕೇಷನ್ ಮೂಲಕ ಹಾಜರಾತಿಯನ್ನು ದಾಖಲಿಸುವ ಸಂಬಂಧ ತರಬೇತಿ ಕಾರ್ಯಕ್ರಮಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ Centre for e Governance ಮೂಲಕ ಕೂಡಲೇ ಆನ್‌ಲೈನ್ ತರಬೇತಿಯನ್ನು ಆಯೋಜಿಸಲು ಅನುಷ್ಠಾನಾಧಿಕಾರಿಗಳು ಅಗತ್ಯ ಕ್ರಮವಹಿಸತಕ್ಕದ್ದು.
- ಶಾಲೆಗಳು ಹಾಗೂ ಕಾಲೇಜುಗಳಲ್ಲಿ ದಿನನಿತ್ಯ ದಾಖಲಿಸಲಾಗುವ KAAMS ಹಾಜರಾತಿ ವಿವರಗಳು SATS ತಂತ್ರಾಂಶದ ಮೂಲಕ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗತಕ್ಕದ್ದು ಹಾಗೂ ಕಚೇರಿಗಳ ಹಾಜರಾತಿ ವಿವರಗಳು ಸಂಬಂಧಿತ ಇಲಾಖೆಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿ, ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳುವುದು ಸೇರಿ ವಿವಿಧ ಷರತ್ತುಗಳನ್ನು ವಿಧಿಸಲಾಗಿದೆ.
ವಿಕಸಿತ ಭಾರತದತ್ತ ದೇಶದ ಪಯಣಕ್ಕೆ ಶಕ್ತಿ ತುಂಬುವ ವಿದ್ಯಾರ್ಥಿವೇತನ
2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ʼಕೃತಕ ಬುದ್ಧಿಮತ್ತೆ (ಎಐ) ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಹಾಗೂ ಮುಖ ಚಹರೆ ಗುರುತಿಸುವ ಅಪ್ಲಿಕೇಶನ್‌ಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಎಲ್ಲಾ ಇಲಾಖೆಗಳಲ್ಲಿ ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸ್ ಮ್ಯಾನೇಜೆಂಟ್ ಸಿಸ್ಟಮ್ (ಕರ್ತವ್ಯ ಕೆ.ಎ.ಎ.ಎಂ.ಎಸ್) ಅನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಅದರಂತೆ ಡಿಜಿಟಲ್ ಆಡಳಿತ, ಪಾರದರ್ಶಕತೆ ಮತ್ತು ಆಡಳಿತಾತ್ಮಕ ದಕ್ಷತೆಯ ಉದ್ದೇಶಗಳಿಗೆ ಅನುಗುಣವಾಗಿ ನೌಕರರ ಹಾಜರಾತಿ ಗುರುತಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕರ್ತವ್ಯ ಮೊಬೈಲ್ ಆಪ್ ಬಳಕೆಯನ್ನು ಕಡ್ಡಾಯವಾಗಿ ಜಾರಿ ಮಾಡಲು ಇದೀಗ ಆದೇಶ ಹೊರಡಿಸಿದೆ.