ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Astro Tips: ಮಹಿಳೆಯರು ಶನಿವಾರ ಹನುಮಂತನ ಪೂಜೆ ಮಾಡಬಹುದೇ? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಹೇಳೋದೇನು?

ಶನಿವಾರ ಆಂಜನೇಯ ಸ್ವಾಮಿ ಪೂಜೆಯ ಜೊತೆಗೆ ಅವರ ಮಂತ್ರಗಳನ್ನು ಪಠಿಸುವುದು ಅತ್ಯಂತ ಶುಭಕರವೆಂದು ನಂಬಲಾಗಿದೆ. ಈ ದಿನ ಮಂತ್ರ ಜಪ ಮಾಡಿದರೆ ಶನಿದೋಷ ಶಮನ, ಭಯ ನಿವಾರಣೆ, ಮನೋಬಲ ವೃದ್ಧಿ ಹಾಗೂ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎನ್ನುವ ಭಕ್ತಿಪರ ನಂಬಿಕೆ ಇದೆ.

ಶನಿವಾರ ಹನುಮಂತ ದೇವರ ಪೂಜೆ ಮಾಡಲು ಸೂಕ್ತ ಸಮಯ ಯಾವುದು?

ಆಂಜನೇಯ -

Profile
Sushmitha Jain Feb 21, 2026 8:00 AM

ಬೆಂಗಳೂರು: ಯಾವ ಮನೆಯಲ್ಲಿ ಆಂಜನೇಯ ಸ್ವಾಮಿ ಆರಾಧನೆ ನಡೆಯುತ್ತದೆಯೋ ಆ ಮನೆಯಲ್ಲಿ ಧೈರ್ಯ, ಶಾಂತಿ ಮತ್ತು ಐಶ್ವರ್ಯ ನೆಲೆಸುತ್ತದೆ ಎಂಬ ಭಕ್ತರ ನಂಬಿಕೆಯಿದೆ. ದುಷ್ಟಶಕ್ತಿಗಳು, ನಕಾರಾತ್ಮಕ ಸ್ಪಂದನೆಗಳು ದೂರವಾಗಲು ಹನುಮಂತನ ಸ್ಮರಣೆ ಶಕ್ತಿದಾಯಕವೆಂದು ಪರಿಗಣಿಸಲಾಗಿದೆ. ಕೆಲವರು ಮಂಗಳವಾರ, ಇನ್ನೂ ಕೆಲವರು ಶನಿವಾರ ವಿಶೇಷವಾಗಿ ಪೂಜೆ ಸಲ್ಲಿಸುತ್ತಾರೆ. ಹನುಮಂತನ ಭಕ್ತಿಯಿಂದ ಮನಸ್ಸಿನ ಭಯ, ಆತಂಕಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ.

ಶನಿವಾರದಂದು ಆಂಜನೇಯ ಸ್ವಾಮಿ ಆರಾಧನೆ ಮಾಡುವಾಗ, ಕೆಲ ಮಂತ್ರಗಳನ್ನು ಜಪಿಸುವುದು ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ. ಕೇವಲ ಪೂಜೆ ಮಾಡುವುದಷ್ಟೇ ಅಲ್ಲ, ಭಕ್ತಿಯಿಂದ ಮಂತ್ರೋಚ್ಚಾರಣೆ ಮಾಡಿದರೆ ಅದರ ಫಲ ಬಹುಪಟ್ಟು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಶನಿವಾರ ಹನುಮಂತನ ದಿನವಾಗಿರುವುದರಿಂದ, ಆ ದಿನ ಮಂತ್ರ ಜಪ ಮಾಡಿದರೆ ಮನಸ್ಸಿಗೆ ಶಾಂತಿ, ಧೈರ್ಯ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಹಾಗಾದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ (Astro Tips) ಉಲ್ಲೇಖ ಆಗಿರುವ ಆ ಪವಿತ್ರ ಮಂತ್ರಗಳು ಯಾವುವು..? ಅದರಿಂದಾಗುವ ಪ್ರಯೋಜನಗಳು ಏನು..? ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಶನಿವಾರದ ಮಹತ್ವ ಏನು?

ಶನಿವಾರವನ್ನು ಶನಿದೇವನ ದಿನವೆಂದು ಪರಿಗಣಿಸಲಾಗುತ್ತದೆ. ಪುರಾಣಗಳ ಪ್ರಕಾರ ಹನುಮಂತನ ಭಕ್ತಿಯಿಂದ ಶನಿದೋಷ ಶಮನವಾಗುತ್ತದೆ ಎನ್ನುವ ನಂಬಿಕೆ ಇದೆ. ಆದ್ದರಿಂದ ಶನಿವಾರ ಹನುಮಂತನ ಪೂಜೆ ಮಾಡುವುದರಿಂದ ಶನಿಗ್ರಹದ ಅನಿಷ್ಠ ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ಭಕ್ತರು ನಂಬುತ್ತಾರೆ. ವಿಶೇಷವಾಗಿ ಸಾಡೆಸಾತಿ ಅಥವಾ ಅಷ್ಟಮ ಶನಿ ಅನುಭವಿಸುವವರು ಹನುಮಂತನ ಆರಾಧನೆ ಮಾಡುತ್ತಾರೆ.

Astro tips: ತುಳಸಿ ಗಿಡ ಪದೇ ಪದೆ ಒಣಗುತ್ತಿದೆಯೇ? ಇದು ಮುಂಬರುವ ತೊಂದರೆಯ ಸೂಚನೆಯೇ? ಜ್ಯೋತಿಷ್ಯ ಶಾಸ್ತ್ರ ಹೇಳೋದೇನು?

ಮಹಿಳೆಯರು ಶನಿವಾರ ಹನುಮಂತನ ಪೂಜೆ ಮಾಡಬಹುದೇ?

ಈ ಪ್ರಶ್ನೆ ಅನೇಕ ಭಕ್ತರ ಮನಸ್ಸಿನಲ್ಲಿ ಮೂಡುತ್ತದೆ. ಮಹಿಳೆಯರು ಹನುಮಂತನನ್ನು ಭಕ್ತಿಯಿಂದ ಪೂಜಿಸಬಹುದು. ಆದರೆ ಕೆಲವು ಆಚರಣೆಗಳ ಪ್ರಕಾರ ವಿಗ್ರಹವನ್ನು ಸ್ಪರ್ಶಿಸದೇ, ದೂರದಿಂದಲೇ ನಮಸ್ಕರಿಸಿ ಮಂತ್ರ–ಸ್ತೋತ್ರಗಳನ್ನು ಪಠಿಸುವುದು ಶ್ರೇಯಸ್ಕರವೆಂದು ಹೇಳಲಾಗುತ್ತದೆ. ಹನುಮಂತನ ಸನ್ನಿಧಿಯಲ್ಲಿ ಕುಳಿತು ಭಜನೆ, ರಾಮನಾಮ ಜಪ ಮಾಡುವುದು ಅತ್ಯಂತ ಶುಭಕರ.

ಪೂಜೆ ಮಾಡಲು ಸೂಕ್ತ ಸಮಯ ಯಾವುದು?

ಹನುಮಂತನ ಆರಾಧನೆಗೆ ಕಟ್ಟುನಿಟ್ಟಾದ ಸಮಯ ನಿಯಮವಿಲ್ಲ. ಆದರೆ ಶನಿವಾರದಂದು ಬ್ರಹ್ಮ ಮುಹೂರ್ತದಲ್ಲಿ ಅಥವಾ ಸೂರ್ಯಾಸ್ತದ ನಂತರ ಪೂಜೆ ಸಲ್ಲಿಸುವುದು ಮಂಗಳಕರವೆಂದು ನಂಬಿಕೆ. ಮಂಗಳವಾರವೂ ಸಹ ಹನುಮಂತನಿಗೆ ಪ್ರಿಯವಾದ ದಿನವಾಗಿದೆ.

ಹನುಮಂತನ ಅನುಗ್ರಹಕ್ಕಾಗಿ ವಿಶೇಷ ಕ್ರಮ

ಶನಿವಾರ 108 ವೀಳ್ಯದೆಲೆಗಳನ್ನು ತೆಗೆದು ಪ್ರತಿಯೊಂದರ ಮೇಲೂ “ರಾಮ” ಎಂಬ ನಾಮ ಬರೆಯಬೇಕು. ನಂತರ ಆ ಎಲೆಗಳನ್ನು ಹಾರವಾಗಿ ಸಿದ್ಧಮಾಡಿ “ಓಂ ಹಂ ಹನುಮತೇ ನಮಃ” ಮಂತ್ರವನ್ನು 108 ಬಾರಿ ಜಪಿಸಿ ಅರ್ಪಿಸಬೇಕು. ಈ ವಿಧಾನ ಭಕ್ತರ ಇಚ್ಛೆಗಳು ಈಡೇರಲು ಸಹಾಯಕವೆಂದು ಪರಿಗಣಿಸಲಾಗಿದೆ.

ಶನಿವಾರ ಪಠಿಸಬೇಕಾದ ಚಾಲೀಸಾ

ಶನಿವಾರ ಮತ್ತು ಮಂಗಳವಾರದಂದು ಹನುಮಾನ್ ಚಾಲೀಸಾ ಪಠಿಸುವುದು ವಿಶೇಷ ಫಲಪ್ರದ. ಚಾಲೀಸಾ ಪಠಿಸುವ ಮೊದಲು ರಾಮನಾಮ ಜಪ ಮಾಡುವುದು ಶ್ರೇಷ್ಠ. ಮಲ್ಲಿಗೆ ಎಣ್ಣೆಯಲ್ಲಿ ಸಿಂಧೂರ ಬೆರೆಸಿ ಹನುಮಂತನಿಗೆ ಅರ್ಪಿಸುವುದೂ ಭಕ್ತಿಪೂರ್ವಕ ಆಚರಣೆಗಳಲ್ಲಿ ಒಂದು.
ಈ ರೀತಿಯಾಗಿ ಶನಿವಾರದಂದು ಮಂತ್ರ ಜಪ, ಚಾಲೀಸಾ ಪಠಣ ಮತ್ತು ಪ್ರಿಯ ವಸ್ತುಗಳ ಅರ್ಪಣೆಯಿಂದ ಹನುಮಂತನು ಭಕ್ತರ ಮೇಲೆ ಕೃಪೆ ತೋರಿ, ಅವರು ಬೇಡುವ ವರಗಳನ್ನು ಅನುಗ್ರಹಿಸುತ್ತಾನೆ ಎಂಬುದು ಭಕ್ತರ ದೃಢ ನಂಬಿಕೆ.